ಟೋಕಿಯೊ_ಓಲಂಪಿಕ್ – 2020

ಟೋಕಿಯೊ_ಓಲಂಪಿಕ್ – 2020

ಪುರುಷರ ಹೈಜಂಪ್ ಫೈನಲ್ಲಿನಲ್ಲಿ ಇಟಲಿಯ ಜಿಯಾನ್ ಮಾರ್ಕೊ ತಂಬರಿ ಸ್ಪರ್ಧೆಯು ಕತಾರ್ ದೇಶದ ಮುತಾಜ್ ಈಸಾ ಬಾರ್ಶಿಮ್ ಜೊತೆಗಿತ್ತು. ಇಬ್ಬರು ಸ್ಪರ್ಧಿಗಳೂ 2.37 ಮೀಟರ್ ಎತ್ತರ ಹಾರಿದ್ದರಿಂದ ರಿಸಲ್ಟ್ ಸಮ ಬಂದಿತು. ನಂತರದಲ್ಲಿ ಓಲಂಪಿಕ್ ಅಧಿಕಾರಿಗಳು ಇಬ್ಬರೂ ಸ್ಪರ್ಧಿಗಳಿಗೆ ತಲಾ ಮೂರು ಅವಕಾಶಗಳನ್ನು ನೀಡಿದರು. ಮೂರು ಬಾರಿಯೂ ಇವರಿಬ್ಬರು 2.37 ಮೀ.ಗಿಂತ ಹೆಚ್ಚಿನ ಎತ್ತರ ಹಾರಲಿಲ್ಲ. ಹಾಗಾಗಿ ಇಬ್ಬರಿಗೂ ಮತ್ತೊಂದು ಅವಕಾಶವನ್ನು ನೀಡಲಾಯಿತು. ಆದರೆ ಇಟಲಿಯ ಸ್ಪರ್ಧಿ ತಂಬರಿಯ ಕಾಲಿಗೆ ಗಂಭೀರ ಪೆಟ್ಟಾದ್ದರಿಂದ ಆತನು ದುಃಖದಿಂದ ಕೊನೆಯ ಅವಕಾಶವನ್ನು ಉಪಯೋಗಿಸಿಕೊಳ್ಳದೇ ಹಿಂದೆ ಸರಿದನು.

ಈ ಕ್ಷಣದಲ್ಲಿ ಕತಾರ್ ನ ಬಾರ್ಶಿಮ್ ಎದುರಿಗೆ ಯಾವ ಸ್ಪರ್ಧಿಯು ಇಲ್ಲದಂತಾಗಿ,ಆತನು ಸುಲಭವಾಗಿ ಚಿನ್ನದ ಪದಕ ಧರಿಸಲು ಕೊರಳು ಒಡ್ಡಬಹುದಿತ್ತು. ಆದರೆ ಬಾರ್ಶಿಮ್ ತಲೆಯಲ್ಲಿ ನಡೆಯುತ್ತಿದ್ದ ವಿಚಾರವೇ ಬೇರೆ ಇತ್ತು. ಆತನು ನಿಧಾನವಾಗಿ ಯೋಚಿಸಿ ಅಲ್ಲಿದ್ದ ಓಲಂಪಿಕ್ ಅಧಿಕಾರಿಗಳನ್ನು “ನಾನು ಕೂಡ ಈ ಅಂತಿಮ ಅವಕಾಶವನ್ನು ಬಳಸಿಕೊಳ್ಳದಿದ್ದರೆ ಬಂಗಾರದ ಪದಕವನ್ನ ಇಬ್ಬರಿಗೂ ಹಂಚುತ್ತೀರಲ್ಲವೇ?” ಅಂತ ಪ್ರಶ್ನಿಸಿದ. ಅಧಿಕಾರಿಗಳು ತಮ್ಮಲ್ಲಿ ಪರಾಮರ್ಶೆ ಮಾಡಿ ‘ಹೌದು ಹಾಗಾದಲ್ಲಿ ನಿಮ್ಮಿಬ್ಬರನ್ನೂ ಜಂಟಿಯಾಗಿ ವಿಜೇತರೆಂದು ಘೋಷಿಸಲಾಗುತ್ತದೆ.’ ಎಂದರು. ಆಗ ಬಾರ್ಶಿಮ್ ಹೆಚ್ಚು ಸಮಯ ತೆಗೆದುಕೊಳ್ಳದೇ ತಕ್ಷಣವೇ ತಾನು ಕೂಡ ಕೊನೆಯ ಅವಕಾಶದಿಂದ ಹಿಂದೆ ಸರಿದಿದ್ದಾಗಿ ತಿಳಿಸಿದ.

ಹಾಗಾಗಿ ಅಧಿಕಾರಿಗಳು ಇಬ್ಬರೂ ಸ್ಪರ್ಧಿಗಳನ್ನು ಜಂಟಿಯಾಗಿ ಬಂಗಾರದ ಪದಕ ವಿಜೇತರೆಂದು ಘೋಷಿಸಿದರು.

ಇದನ್ನು ತಿಳಿದ ಇಟಲಿಯ ಪ್ರತಿಸ್ಪರ್ಧಿ ಜಿಯಾನ್ ಮಾರ್ಕೊ ತಂಬರಿ ಅತಿ ಸಂತಸೋದ್ವೇಗದಿಂದ ಹಾರಿ ಬಾರ್ಶಿಮನನ್ನು ಅಪ್ಪಿಕೊಂಡ. ಇಬ್ಬರೂ ಸ್ಪರ್ಧಿಗಳು ಭಾವುಕರಾಗಿ ಕಣ್ಣೀರು ಹರಿಸಿದರು. ಇದನ್ನು ನೋಡಿದ ಜನರೆಲ್ಲರೂ ಕೂಡ ಭಾವೋದ್ರೇಕಕ್ಕೊಳಗಾಗಿದ್ದರು.ಅಲ್ಲದೇ ಸ್ಪರ್ಧಿಗಳ ಅದರಲ್ಲೂ ಕತಾರ್ ದೇಶದ ಮುತಾಜ್ ಈಸಾ ಬಾರ್ಶಿಮರ ಕ್ರೀಡಾ ಮನೋಭಾವಕ್ಕೆ ಮನಸೋತಿದ್ದರು.

ಕ್ರೀಡೆಗೆ ಭಾಷೆ,ದೇಶ,ಮತ,ಧರ್ಮಗಳ ಗಡಿ ಇರುವುದಿಲ್ಲ ಎಂಬುದನ್ನ ಈ ಘಟನೆಯು ನಿರೂಪಿಸಿತು. ಸಣ್ಣ ಸಣ್ಣ ವಸ್ತುವನ್ನು ಹಂಚಿಕೊಳ್ಳುವ ವಿಷಯಕ್ಕೂ ಮನುಷ್ಯ ಸ್ವಾರ್ಥಿಯಾಗುತ್ತಿರುವ ಇಂದಿನ ದಿನಮಾನದಲ್ಲಿ ಅನಾಯಾಸವಾಗಿ ತನ್ನದಾಗುತ್ತಿದ್ದ ಬಂಗಾರ ಪದಕವನ್ನು ಪ್ರತಿಸ್ಪರ್ಧಿಯೊಂದಿಗೆ ಹಂಚಿಕೊಳ್ಳಲು ತಾನಾಗಿಯೇ ಮುಂದಾದ ಕತಾರನ ಮುತಾಜ್ ಈಸಾ ಬಾರ್ಶಿಮ್ ಗೆ ಹೃತ್ಪೂರ್ವಕ ಅಭಿನಂದನೆಗಳು.
ಸುಮಿತ್ ಮೇತ್ರಿ

Don`t copy text!