ಗಜಲ್
ಮನಸು ಮೋಡವಿರದ ಬಾನಾಗಿತ್ತು ನೀನು ಬಳಿ ಇದ್ದಾಗ
ಇರುಳಲಿ ನೂರು ಹುಣ್ಣಿಮೆ ಬೆಳಕಿತ್ತು ನೀನು ಬಳಿ ಇದ್ದಾಗ
ಬೆಳ್ಳಕ್ಕಿ ಸಾಲಿನಂತೆ ದಣಿವಿಲ್ಲದೆ ಹಾರುವ ಉತ್ಸಾಹವಿತ್ತು
ಉರಿವ ನಂದಾದೀಪದ ತಂಬೆಳಗಿತ್ತು ನೀನು ಬಳಿ ಇದ್ದಾಗ
ಬಾಡದ ಮೊಗ ನನ್ನೊಳಗೆ ನೂರು ನವಿಲುಗಳ ಕುಣಿಸಿತ್ತು
ನಳನಳಿಸುವ ವನಸಿರಿಯ ಹಸಿರಿತ್ತು ನೀನು ಬಳಿ ಇದ್ದಾಗ
ಬದುಕ ವಿಮುಖತೆಯ ದಿಕ್ಕನ್ನೆ ಬದಲಿಸಿದ ಸಂಗತಿಯಿತ್ತು
ಪ್ರಕೃತಿ ಸಹಜ ಪುಷ್ಪಗಳ ನಗುವಿತ್ತು ನೀನು ಬಳಿ ಇದ್ದಾಗ
ನಿದಿರೆ ಮರೆತ ಹಗಲು ರಾತ್ರಿಗಳ ಲೆಕ್ಕವಿಡದಂತಿತ್ತು
‘ಗಿರಿ’ ಕಣ್ಣಲಿ ನಾಕವೆ ತುಂಬಿತ್ತು ನೀನು ಬಳಿ ಇದ್ದಾಗ
– ಮಂಡಲಗಿರಿ ಪ್ರಸನ್ನ