ಹಸಿವು
(ಕತೆ)
ದೊಡ್ಡ ಗೇಟಿನ ಎದುರಿಗೆ ನಿಂತು ಎದುರಿಗಿನ ಎತ್ತರದ ಕಟ್ಟಡವನ್ನು ಬೆರಗಿನಿಂದ ನೊಡಿದಳು ಪಾರ್ವತಿ. ಯಾವುದೊ ಒಂದು ಹೊಸ ಜಗತ್ತಿಗೆ ಪ್ರವೇಶ ಮಾಡುತ್ತಿರುವ ಅನುಭವದ ಜೊತೆಗೆ ಕರೆದುತಂದ ದೂರದ ಸಂಬಂಧಿ ರತ್ನಕ್ಕ ವಾಚಮನ್‌ನಿಗೆ ಇವಳನ್ನು ಪರಿಚಯಿಸುತ್ತ ನಾಳೆಯಿಂದ ಕೆಲಸಕ್ಕೆ ನನ್ನ ಬದಲಾಗಿ ಇವಳು ಬರ‍್ತಾಳೆ. ಹೆಸರು ಬರೆದುಕೊ ಎಂದು ಹೇಳುತ್ತಾ ಇದ್ದಳು. ಪಾರ್ವತಿಯ ಮನಸ್ಸು ಯೋಚಿಸುತ್ತಾ ಇತ್ತು ‘ರತ್ನಾಕ್ಕ ಹೇಳಿದ ಹಾಗೆ ಕೆಲಸದ ಮನೆಯಲ್ಲಿ ಇವತ್ತು ಊಟಕ್ಕೆ ಎನಾದರೂ ಕೊಡಬಹುದೇ !’
ಅದೊಂದು ಕರಾಳ ಸಂಜೆ ನೀಲಿ ಸಮವಸ್ತ್್ರ ತೊಟ್ಟು ಶಾಲೆಗೆ ಹೊಗುತ್ತಿದ್ದ ಪಾರ್ವತಿಯ ಪುಟ್ಟ ಪ್ರಪಂಚ ಬುಡಮೇಲಾಗಿತ್ತು. ಅಲ್ಯುಮಿನಿಯಂ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿ ಸೈಕಲ್ ಮೇಲೆ ಮನೆಗೆ ಬರುತ್ತಿದ್ದ ವಿರೇಶನ ಮೇಲೆ ಯಮ ದೂತನಂತೆ ಬಂದ ಲಾರಿ ಭರದಿಂದ ಅಪ್ಪಳಿಸಿ ಸೈಕಲ್ ಜೊತೆ ಅವನನ್ನು ನಲವತ್ತು ಅಡಿಗಳಷ್ಟು ಎಳೆದೊಯ್ಯಿದಿತ್ತು. ಯಾರೊ ಕೆಳಗೆ ಬಿದ್ದ ಮೊಬೈಲ ಎತ್ತಿ ಪೊನ ಮಾಡಿದ್ದರು. ವಿಷಯ ತಿಳಿದ ಶಾಂತಾ ಅಳುತ್ತಾ ಓಡಿದಾಗ ಎನಾಗಿದೆ ಎಂದು ತಿಳಿಯದೇ ಪಾರ್ವತಿ ಕೂಡ ಓಡಿದ್ದಳು. ವಿರೇಶನ ದೇಹ ರಸ್ತೆಯ ಮಧ್ಯದಲ್ಲಿ ರಕ್ತದ ಮಡುವಿನಲ್ಲಿ ನಿಶ್ಚಲವಾಗಿ ಬಿದ್ದಿತ್ತು. ಅಮ್ಮನ ಹಿಂದೆ ಓಡಿ ಬಂದ ಹನ್ನೆರಡು ವರ್ಷದ ಪಾರ್ವತಿ ರಕ್ತ ನೋಡಿ ತಮ್ಮನ ಕೈ ಹಿಡಿದು ಎಳೆಯುತ್ತ ಗಾಬರಿಯಿಂದ ಎರಡು ಹೆಜ್ಜೆ ಹಿಂದೆ ಸರಿದಿದ್ದಳು. ೧೦೮ ವ್ಯಾನಲ್ಲಿ ಹೋದ ವಿರೇಶನ ದೇಹ ಕೆಲವೇ ಗಂಟೆಗಳಲ್ಲಿ ಬಟ್ಟೆಯಲ್ಲಿ ಸುತ್ತಿಕೊಂಡು ಶವವಾಗಿ ಮನೆಗೆ ಬಂದಿತ್ತು.
ಅದೆಲ್ಲದರ ಪರಿಣಾಮ ಪಾರ್ವತಿಗೆ ಅರಿವಾಗಿದ್ದು ತಿಂಗಳ ನಂತರ. ಸಹಾಯ ಹಸ್ತಗಳೆಲ್ಲ ಬರಿದಾಗಿದ್ದವು. ಸಂಬಂಧಿಗಳೆಲ್ಲ ದೂರ ಸರೆದಿದ್ದರು. ಕೂಡಿಟ್ಟ ಅಲ್ಪಸ್ವಲ್ಪ ದುಡ್ಡು ಕರಗಿ ಹೋಗಿತ್ತು.
ಹಳ್ಳಿ ಶಾಲೆಯಲ್ಲಿ ನಾಲ್ಕನೆಯತ್ತೆ ಕಲಿತ ಶಾಂತಾ ಬೇರೆ ದಾರಿ ಇಲ್ಲದೇ ಹತ್ತಿರದಲ್ಲಿಯೇ ಇದ್ದ ಚಿಕ್ಕ ಹೊಟೇಲಿನಲ್ಲಿ ರೊಟ್ಟಿ ತಟ್ಟಿ ಬಂದ ದುಡ್ಡು ಮನೆ ಬಾಡಿಗೆ ಕೊಟ್ಟು ಮೂರು ಹೊಟ್ಟೆಗಳಿಗೆ ಸಾಕಾಗುತ್ತಿರಲಿಲ್ಲ. ಮಕ್ಕಳಿಗೆ ಶಾಲೆಯ ಮಧ್ಯಾನ್ನದ ಬಿಸಿಯೂಟವೇ ಆಧಾರ. ಜೀವನ ಬರಿದಾಗಿ ಹೊಗಿತ್ತು. ರಜೆಯಲ್ಲಿ ಬಿಸಿಯೂಟವಿಲ್ಲದೇ ಮಕ್ಕಳು ಹಸಿವಿನ ಕರಾಳ ರೂಪವನ್ನು ಮೊದಲ ಬಾರಿಗೆ ನೋಡಿದರು. ಹಿಡಿ ಅನ್ನವನ್ನು ಇಬ್ಬರು ಮಕ್ಕಳಿಗೆ ನೀಡಿ ಅವರ ಕಣ್ಣುಗಳಲ್ಲಿಯ ಬೇಡಿಕೆಯನ್ನು ಎದುರಿಸಲಾಗದೇ ಶಾಂತಾ ಮುಖ ತಿರುವಿ ಕಣ್ಣಂಚಿನ ನೀರನ್ನು ಅಲ್ಲೆ ತಡೆದು ತಡೆದು ನೀರು ಇಂಗಿ ಹೋಗಿತ್ತು. ಆಗ ಬಂದಿತ್ತು ರತ್ನಳ ಸಲಹೆ.
ರತ್ನಕ್ಕ ಶಾಂತಾಳ ದೊರದ ಸಂಬಂಧಿ. ಚಿಕ್ಕಂದಿನಲ್ಲಿ ಪತಿಯನ್ನು ಕಳೆದುಕೊಂಡು ಮನೆಕೆಲಸ ಮಾಡುತ್ತ ಆಕೆ ಇದ್ದ ಒಬ್ಬ ಮಗನನ್ನು ಓದಿಸಿದ್ದಳು. ಈಗ ಮಗನಿಗೆ ನೌಕರಿ ಸಿಕ್ಕು ಆತ ಬೇರೆ ಊರಿಗೆ ಹೋಗುವ ಸಂದರ್ಭ ಬಂದಿದ್ದರಿಂದ ತಾನು ಕೆಲಸ ಮಾಡುವ ಮನೆಯಲ್ಲಿ ಪಾರ್ವತಿಯನ್ನು ಕಳುಹಿಸಲು ಸಲಹೆ ನೀಡಿದಳು. ಮೊದಲು ಇಷ್ಟು ಚಿಕ್ಕ ಹುಡುಗಿಯನ್ನು ಕೆಲಸಕ್ಕೆ ಕಳುಹಿಸಲು ಶಾಂತಳ ಮನ ಹಿಂಜರಿದರೂ ಮಧ್ಯಾನ್ಹದ ಊಟ, ವರ್ಷಕ್ಕೆ ಎರಡು ಜೊತೆ ಬಟ್ಟೆ, ಕೈತುಂಬ ಸಂಬಳ ಅದೂ ಅಲ್ಲದೇ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ಇದ್ದ ಮನೆ, ಕೆಲಸ ಜಾಸ್ತಿ ಇರುವುದಿಲ್ಲ ಎಂದು ತಿಳಿದಾಗ ಮನಸ್ಸು ಬದಲಾಯಿಸಿದ್ದಳು. ಪದೇ ಪದೇ ಕೆಡುತ್ತಿದ್ದ ತನ್ನ ಆರೋಗ್ಯ ಅವಳನ್ನು ಮಾನಸಿಕವಾಗಿ ಹಣ್ಣಾಗಿಸಿತ್ತು. ಹೇಗೊ ಹೆಣ್ಣು ಮಗು ಮದುವೆಯಾದ ಮೇಲೆ ಕೆಲಸ ಮಾಡಲೇ ಬೇಕು. ಗಂಡು ಮಗನನ್ನಾದರೂ ಶಾಲೆಗೆ ಕಳುಹಿಸಬಹುದು ಎನ್ನುವ ಚಿಕ್ಕ ಸ್ವಾರ್ಥ ಮನದ ಮೂಲೆಯಲ್ಲಿ ಇಣುಕಿತ್ತು. ಮಗಳ ಮಧ್ಯಾನ್ಹದ ಹಸಿವು ಪರಿಹಾರ ಆಗುತ್ತದೆ ಎಂದಿತ್ತು ತಾಯಿಯ ಮನಸ್ಸು. ಅದರ ಪರಿಣಾಮವೇ ಪಾರ್ವತಿಯ ನೀಲಿ ಸಮವಸ್ತç ಪೆಟ್ಟಿಗೆ ಸೇರಿತ್ತು. ಸ್ವಲ್ಪ ದೊಡ್ಡವಳಾಗಿ ಕಾಣಲು ರತ್ನಕ್ಕನ ಸಲಹೆಯಂತೆ ಸಡಿಲಾದ ಸೇಲ್ವಾರ್ ಕಮೀಸ್ ತೊಟ್ಟು ಪಾರ್ವತಿ ಆಕೆಯೊಡನೆ ಹೊರಟಿದ್ದಳು.
ರತ್ನಳ ಧ್ವನಿ ಕೇಳಿಸುತ್ತಾ ಇತ್ತು. “ಪ್ಲಾಟ್ ನಂ. ೨೦ ಸರಿಯಾಗಿ ನೆನಪಿಟ್ಟುಕೊ. ನಿನಗೆ ಹೆದರಿಕೆಯಾದರೆ ಲಿಪ್ಟನಲ್ಲಿ ಹೋಗ ಬೇಡಾ. ಮೆಟ್ಟಿಲು ಎರಿಹೋಗು.”
“ಸರಿ ಅಕ್ಕ” ಎನ್ನುತ್ತ ತಲೆಯಾಡಿಸಿದಳು. ‘ಊಟ ಯಾವಾಗ ಕೊಡತಾರೆ?’ ಪ್ರಶ್ನೆ ಗಂಟಲಲ್ಲಿಯೇ ಸಿಕ್ಕಕೊಂಡಿತ್ತು.
ರತ್ನ ಮನೆಯೊಡತಿಗೆ ಪಾರ್ವತಿಯನ್ನು ಪರಿಚಯಿಸಿ ತನ್ನ ಅಕ್ಕನ ಮಗಳೆಂದು ಒತ್ತಿ ಒತ್ತಿ ಹೇಳುತ್ತ, ಎಲ್ಲ ಕೆಲಸ ಮಾಡುತ್ತಾಳೆ, ರೂಡಿಯಾಗುವ ತನಕ ಸ್ವಲ್ಪ ದಿನ ಸಂಬಾಳಿಸಿಕೊಳ್ಳಿರಿ ಎಂದು ಹೇಳಿದ್ದನ್ನು ಕೆಳಿಸಿಕೊಂಡು ಒಡತಿಯ ಮುಖ ನೋಡಿದಳು. ಮೃದುವಾದ ಮಂದಹಾಸದಿAದ ತನ್ನನ್ನೇ ನೋಡುತ್ತಿದ್ದ ಆಕೆ ಪಾರ್ವತಿಗೆ ಅಮ್ಮನಂತೆ ಕಂಡಿದ್ದಳು. ಪಾರ್ವತಿಯ ಬಗ್ಗೆ ಮೊದಲೇ ಗೊತ್ತಿದ್ದ ಆಕೆ “ಪರವಾಗಿಲ್ಲ, ಇವಳಿಗೆ ಇವತ್ತು ಎಲ್ಲ ಕೆಲಸ ಸರಿಯಾಗಿ ತೋರಿಸಿ ಹೋಗು” ಎಂದು ರತ್ನನಿಗೆ ಆದೇಶ ನೀಡಿ ಒಳಗೆ ನಡೆದರು.
ಶುರುವಾಗಿತ್ತು ಪಾರ್ವತಿಯ ಹೊಸ ಜೀವನ. ಚುರುಕಾಗಿದ್ದ ಪಾರ್ವತಿ ಬೇಗನೇ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಲು ಕಲಿತಿದ್ದಳು. ಮನೆಯಲ್ಲಿ ಇದ್ದದ್ದು ಗಂಡ ಹೆಂಡತಿ ಇಬ್ಬರೇ. ಕಾಕಾ ಕಾಕೂ ಎನ್ನುತ್ತ ಕೆಲವೇ ದಿನಗಳಲ್ಲಿ ಅವರ ಮೆಚ್ಚುಗೆಯನ್ನು ಗಳಿಸಿ ಮನೆಯ ಒಬ್ಬ ಸದಸ್ಯೆಯಂತಾಗಿ ಬಿಟ್ಟಳು. ದಿನಾಲು ಹತ್ತು ಗಂಟೆಗೆ ಬರುವುದು, ಮನೆಯನ್ನು ಗುಡಿಸಿ ಒರೆಸಿ ಸ್ವಚ್ಚಗೊಳಿಸುವುದು, ನಂತರ ಕಾಕೂಳಿಗೆ ಅಡುಗೆಯಲ್ಲಿ ಸಹಾಯ ಮಾಡುವುದು, ಇಬ್ಬರದ್ದೂ ಊಟವಾದ ನಂತರ ತಾನೂ ಊಟ ಮಾಡಿ ಅಡಿಗೆ ಮನೆ ಸ್ವಚ್ಚಗೊಳಿಸಿ ಉಳಿದ ಚಿಕ್ಕ ಪುಟ್ಟ ಕೆಲಸದಲ್ಲಿ ತೊಡಗುವುದು, ೬ ಗಂಟೆಗೆ ಕಾಕಾ ಕಛೇರಿಯಿಂದ ಬಂದ ನಂತರ ಅವರಿಗೆ ಚಹಾ ಮಾಡಿಕೊಟ್ಟು ತಾನೂ ಕುಡಿದು ಮನೆಗೆ ಮರಳುವುದು. ಹೀಗೆ ಸಾಗಿತ್ತು ದಿನಚರಿ. ಕಾಕೂನ ಗೆಳತಿಯರಿಗೂ ಬಂದಾಗ ಚಹಾ ಮಾಡಿಕೊಟ್ಟು ಪರಿಚಿತಳಾಗಿದ್ದಳು.
ವರ್ಷಕ್ಕೊಮ್ಮೆ ರಜೆಗೆ ಬರುವ ಕಾಕೂನ ಮಗ ರವಿ ಮಾತ್ರ ಇನ್ನೂ ಅಪರಿಚಿತನಾಗಿಯೇ ಉಳಿದಿದ್ದ. ವರುಷಗಳು ಬೇಗ ಬೇಗನೇ ಉರುಳಿದವು. ಹಸಿವೆಯ ಹೊಡೆತ ತಾಳಲಾರದೇ ಹಿಂಜರಿಯುತ್ತ ಬಂದ ಪುಟ್ಟ ಹುಡುಗಿ ಪ್ರಭುದ್ಧ ಯುವತಿಯಾಗಿ ಬೆಳೆಯುತ್ತಿದ್ದಳು. ಅವಳ ಮಾತು ಉಡಿಗೆ ತೊಡಿಗೆಗಳ ಮೇಲೆ ಕಾಕೂ ಹಾಗೂ ಆ ಪರಿಸರದ ಪ್ರಭಾವ ಎದ್ದು ಕಾಣುತ್ತಿತ್ತು. ಅಮ್ಮನ ಮನೆಗಿಂತ ಕಾಕೂ ಕಾಕಾ ಮನೆ ತನ್ನದಾಗಿ ಬಿಟ್ಟಿತ್ತು. ಮನೆಯ ಕೆಲಸ, ಕಾಕೂ ಜೊತೆ ಮಾರ್ಕೆಟ ಹೋಗುವುದು ಹಾಗೆಯೇ ಕೆಲವು ಸಲ ಜೊತೆಗೆ ಯಾರೂ ಸಿಗದಿದ್ದಾಗ ಕಾಕೂಗೆ ಸಿನಿಮಾ ನೋಡಲು ಕಂಪನಿ ಕೊಡುವುದು… ಅದೊಂದು ಹೊಸ ಜಗತ್ತು ಆಕೆಯ ಎದರು ತೆರೆದುಕೊಂಡಿತ್ತು. ಜೀವನ ಸುಂದರವಾಗಿತ್ತು.
ಆ ದಿನ ಹತ್ತು ಗಂಟೆಗೆ ಮನೆಗೆ ಹೋದಾಗ ಕಾಕೂ ಬಹಳ ಸಂಭ್ರಮದಿಂದ “ನಿಮ್ಮ ರವಿ ಅಣ್ಣನಿಗೆ ಇದೇ ಊರಲ್ಲಿ ಕೆಲಸ ಸಿಕ್ಕಿದೆ. ಇನ್ನು ಇಲ್ಲೆ ಇರುತ್ತಾನೆ. ಐದು ವರ್ಷದ ವನವಾಸ ಮುಗಿತು ನೋಡು” ಎಂದು ಸಂಭ್ರಮಿಸಿದರು. ತಾವು ಜೊತೆಗೆ ನಿಂತು ಆತನ ಕೊಣೆಯನ್ನು ಸ್ವಚ್ಚ ಮಾಡಿಸುತ್ತಿದ್ದಾಗ ಅವರ ಜೊತೆ ಅವರ ಸಂಭ್ರಮದಲ್ಲಿ ತಾನೂ ಭಾಗಿಯಾಗುತ್ತ, ಆತನ ಬೇಕು ಬೇಡಗಳ ಬಗ್ಗೆ ವಿಚಾರಿಸುತ್ತ ದಿನ ಮುಗಿದಿದ್ದು ಗೊತ್ತಾಗಲೇ ಇಲ್ಲ. ಆದರೆ ರವಿ ಅವರ ತಂದೆ ತಾಯಿಯಂತೆ ಮುಕ್ತ ಸ್ವಭಾವದವನಾಗಿರಲಿಲ್ಲ. ಆತ ಬಂದ ನಂತರವೂ ಪಾರ್ವತಿಯ ದಿನಚರಿಯಲ್ಲಿ ಎನೂ ಬದಲಾವಣೆಯಾಗಲಿಲ್ಲ. ಆತನ ಮುಖದರ್ಶನವಾಗುತ್ತಿದ್ದುದು ಕೂಡ ಬರಿ ಭಾನುವಾರ ಮಾತ್ರ. ತಿಂಗಳುಗಳು ಉರುಳಿದರೂ ಆತನ ಧ್ವನಿ ಕೇಳಿದ್ದು ೨-೩ ಸಲ ಮಾತ್ರ.
ಆವತ್ತು ಭಾನುವಾರ ಎಂದಿನಂತೆ ಪಾರ್ವತಿ ಬಂದಾಗಿ ಕಾಕಾ ಕಾಕೂ ಇಬ್ಬರೂ ತಮ್ಮ ಭಾನುವಾರದ ಪ್ರಾರ್ಥನಾ ಸಭೆಗೆ ಹೊರಡಲು ತಯಾರಾಗಿದ್ದರು. ಕಾಕೂ ಅವಳಿಗೆ ಅಡಿಗೆಯ ಬಗ್ಗೆ ಸೂಚನೆಗಳನ್ನು ನೀಡುತ್ತಲೇ ಹೊರ ನಡೆದಿದ್ದರು. ಪಾರ್ವತಿ ಎಂದಿನಂತೆ ತನ್ನ ಗುಡಿಸುವ ಒರೆಸುವ ಕೆಲಸ ಶುರು ಮಾಡಿದ್ದಳು. ರವಿಯ ಕೊಣೆಗೆ ಬಂದಾಗ ಆತ ತನ್ನ ಲ್ಯಾಪಟಾಪ ತೆಗೆದು ಹಾಸಿಗೆಯ ಮೇಲೆ ಕುಳಿತಿದ್ದ. ಪಾರ್ವತಿ ಮಂಚದ ಕೆಳಗೆ ಒರೆಸಿ ಮೇಲೆ ಎಳುವದಕ್ಕೂ ಆತ ಕೆಳಗಿಳಿಯುವದಕ್ಕೂ ಸರಿಯಾಗಿ, ಎನಾಗಿದೆ ಎಂದು ತಿಳಿಯವುದರಲ್ಲಿ ಪಾರ್ವತಿ ಜಾರಿ ಹಿಂದೆ ಒರಗಿದ್ದಳು. ಆತ ಸಾರಿ, ಸಾರಿ, ಎನ್ನುತ್ತ ಆಕೆಯ ಕೈ ಹಿಡಿದು ಮೇಲೆತ್ತುವಾಗ ಮೊದಲನೇಯ ಸಲ ಆತನ ಜೇನು ಬಣ್ಣದ ಕಣ್ಣುಗಳನ್ನು ನೋಡಿದ್ದಳು. ಆತನೂ ದುಂಡು ಮುಖದ ಅರಳಿದ ಕಣ್ಣಿನ ಈ ಹುಡುಗಿಯನ್ನು ಸ್ಪಷ್ಟವಾಗಿ ನೋಡಿದ್ದು ಆವತ್ತೆ ಇರಬಹುದು. ದೃಷ್ಟಿ ಆ ಮುಖದಲ್ಲಿ ಸಿಕ್ಕಿಕೊಂಡ ಹಾಗಿತ್ತು. ನಂತರ ಸಾವರಿಸಿಕೊಂಡು
“ಸಾರಿ, ನಾ ನೋಡಲಿಲ್ಲ ಪೆಟ್ಟಾಯಿತಾ” ಎಂದ.
“ಇಲ್ಲ ಎನೂ ಆಗಿಲ್ಲ” ಎನ್ನುತ್ತ ಪಾರ್ವತಿ ತನ್ನ ಕೆಲಸ ಮುಂದುವರಿಸಿದಳು. ಆಕೆ ಕೊಣೆಯಲ್ಲಿ ಇರುವ ತನಕ ಆ ಜೇನು ಕಣ್ಣುಗಳು ಅವಳನ್ನು ಹಿಂಬಾಲಿಸುತ್ತಿದ್ದುದು ಆಕೆಯ ಗಮನಕ್ಕೆ ಬಂದಿತ್ತು. ನಂತರ ಕೆಲಸದಲ್ಲಿ ಆ ಘಟನೆ ಮರೆತು ಹೋಯಿತು. ಮತ್ತೆ ಭಾನುವಾರ ಯಥಾಸ್ಥಿತಿ ಕಾಕಾ ಕಾಕೂ ಪ್ರಾರ್ಥನಾ ಸಭೆಗೆ ಹೊರಟಿದ್ದರು. ಬಾಗಿಲು ಮುಚ್ಚ್ಟಿದ ಕ್ಷಣ ರವಿ ಕೊಣೆಯಿಂದ ಹೊರಬಂದಿದ್ದ
ಪಾರ್ವತಿಯನ್ನು ನೋಡಿ ‘ಕಾಫಿ ಬೇಕಾಗಿತ್ತು” ಎಂದ.
ಕಾಫಿ ಮಾಡಲು ಅಡುಗೆ ಕೊಣೆಗೆ ಹೋದಾಗ ಹಿಂದೆಯೇ ಬಂದು ಪಕ್ಕದಲ್ಲಿ ನಿಂತು ಮಾತು ಶುರು ಮಾಡಿದ್ದ. ಪಾರ್ವತಿಗೆ ಹೊಸ ಅನುಭವ. ಮನೆಯ ರಾಜಕುಮಾರ ತನ್ನನ್ನು ಮಾತನಾಡಿಸುತ್ತಿದ್ದಾನೆಂದು ಮನ ಮುದಗೊಂಡಿತ್ತು. ಆಕೆ ತನಗೆ ಕೊಟ್ಟ ಕಪ್ಪನಲ್ಲಿದ್ದ ಕಾಪಿಯನ್ನುು ಅರ್ಧ ಇನ್ನೊಂದು ಕಪ್ಪಿಗೆ ಹಾಕಿ “ನೀನು ಕುಡಿ” ಎಂದಾಗ ಸಂತೋಷದಿಂದ ಉಬ್ಬಿ ಹೋಗಿದ್ದಳು. ಅದರ ಮುಂದಿನ ವಾರ ಚಾಕಲೆಟ್ ನೀಡಿದ್ದ, ನಂತರ ಮೊಬೈಲ್‌ನಲ್ಲಿ ಅವಳ ಫೊಟೊ ತೆಗೆದು ಅವಳ ಅಂದ ಚಂದ ಹೊಗಳುವಾಗ ಪಾರ್ವತಿಯ ಎದುರು ಕಾಮನ ಬಿಲ್ಲು ಮೂಡಿತ್ತು. ಮನಸ್ಸು ಹುಚ್ಚೆದ್ದು ಕುಣಿದಿತ್ತು. ಭಾನುವಾರಗಳು ಹಬ್ಬದ ದಿನಗಳಾಗ ತೊಡಗಿದ್ದವು. ಕಾಫಿಯನ್ನು ಹಂಚಿಕೊಳ್ಳುವುದರಿಂದ ಪ್ರಾರಂಭವಾದ ಸಲಿಗೆ ದೇಹ ಸುಖದ ಹಂಚಿಕೆಯವರೆಗೆ ಬೆಳೆಯಲು ಸಮಯ ಬೇಕಾಗಲಿಲ್ಲ. ಚಿಕ್ಕಂದಿನಲ್ಲಿ ಕೇಳಿದ ಸಿಂಡ್ರೆಲ್ಲಾ ಕತೆ ಅವಳ ಪಾಲಿಗೆ ನಿಜವಾದ ಹಾಗೆ ಭಾಸವಾಗತೊಡಗಿತ್ತು. ರವಿ ತನ್ನನ್ನು ಹಿಡಿದೆತ್ತಲೂ ಬಂದ ರಾಜಕುಮಾರನಾಗಿ ಕಾಣಿಸಲು ಪ್ರಾರಂಭಿಸಿದ್ದ. ಭಾನುವಾರದ ಆ ಒಂದುವರೆ ಗಂಟೆ ಅವಳ ಪಾಲಿಗೆ ಆತ ಸ್ವರ್ಗವನ್ನೆ ಸೃಷ್ಟಿಸುತ್ತಿದ್ದ. ಆ ಮನೆಗೆ ತಾನೆ ರಾಣಿಯಾಗಿ ಬಿಡುತ್ತಿದ್ದಳು. ಮುಗ್ದ ಮನಸ್ಸು ಸಂಪೂರ್ಣವಾಗಿ ತನ್ನನ್ನು ಆತನಿಗೆ ಒಪ್ಪಿಸಿಕೊಂಡು ಬಿಟ್ಟಿತ್ತು. ತಿಂಗಳುಗಳು ಕ್ಷಣಗಳಂತೆ ಜಾರಿ ಹೋಗುತ್ತಿದ್ದವು.
ಆ ಭಾನುವಾರ ಬೆಳಿಗ್ಗೆಯಿಂದಲೇ ಮನೆಯಲ್ಲಿ ಎನೋ ಸಂಭ್ರಮ. ಸೋಫಾ ಮೇಲಿನ ಹೊದಿಕೆಗಳು ಬದಲಾಗಿದ್ದವು. ಯಾರೋ ಬರುವ ನಿರೀಕ್ಷೆ ಎದ್ದು ಕಾಣುತ್ತಾ ಇತ್ತು. ಮಧ್ಯಾನ್ಹ ಕಾಕೂ “ಸಾಯಂಕಾಲ ಹೋಗಲು ತಡವಾಗಬಹುದು, ಮನೆಗೆ ಪೊನ್ ಮಾಡಿ ತಿಳಿಸು ಗೆಸ್ಟ ಬರುವವರಿದ್ದಾರೆ” ಎಂದು ಹೇಳುತ್ತ ಸಾಯಂಕಾಲದ ತಿಂಡಿಯ ತಯಾರಿಯಲ್ಲಿ ತೊಡಗಿದ್ದರು. ವಾಡಿಕೆಯಂತೆ ತನ್ನೆಲ್ಲ ಕೆಲಸ ಮುಗಿಸುವಷ್ಟರಲ್ಲಿಯೇ ಅತಿಥಿಗಳು ಆಗಮಿಸಿದ್ದರು. ಅಡಿಗೆ ಮನೆಯನ್ನು ಪಾರ್ವತಿಗೆ ವಹಿಸಿ ಕಾಕೂ ಹೊರಗೆ ನಡೆದಿದ್ದರು. ಕುತೂಹಲದಿಂದ ಇಣುಕಿ ನೋಡಿದಾಗ ಕಂಡಿದ್ದು ಮಧ್ಯ ವಯಸ್ಸಿನ ದಂಪತಿಗಳು ಹಾಗೂ ಒಬ್ಬ ಯುವತಿ. ಉಭಯ ಕುಶಲೋಪರಿಯ ನಂತರ ಕಾಕೂ ತಿಂಡಿಗಾಗಿ ಅಡುಗೆ ಮನೆಗೆ ಬಂದು ಸೂಚನೆಗಳನ್ನು ನೀಡಿ ಮತ್ತೆ ಅತಿಥಿಗಳ ಜೊತೆಗೆ ಮಾತಿಗೆ ಕುಳಿತಿದ್ದರು. ಯುವತಿ ರವಿಯ ಜೊತೆ ಮಾತನಾಡುತ್ತ ಮನೆಯನ್ನೆಲ್ಲ ಸುತ್ತಾಡಿ ಆತನ ಕೊಣೆಯನ್ನು ಸೇರಿದ್ದಳು. ಎಲ್ಲವನ್ನು ಗಮನಿಸುತ್ತಿದ್ದ ಪಾರ್ವತಿ ಎಲ್ಲರಿಗೂ ತಿಂಡಿ ಚಹಾ ನೀಡಿ ಅಡಿಗೆ ಮನೆಯ ಬಾಗಲಿಗೆ ಒರಗಿ ನಿಂತಳು. ಪ್ರತಿ ಸಲ ಬರುವ ಅತಿಥಿಗಳಿಗಿಂತ ಭಿನ್ನವಾದ ಈ ಅತಿಥಿಗಳು ಅವಳಲ್ಲಿ ಕುತೂಹಲ ಮೂಡಿಸಿದ್ದರು. ಅವರೆಲ್ಲ ಹೊರಟು ನಿಂತಾಗ ಅಂದುಕೊಂಡಿದ್ದಕ್ಕಿಂತ ಹೆಚ್ಚು ತಡವಾಗಿತ್ತು. ಅವಸರದಲ್ಲಿ ಪ್ಲೇಟ ಲೊಟಗಳನ್ನೆಲ್ಲ ತೊಳೆದು ಒರೆಸಿ ಪಾರ್ವತಿ ಹೊರಟುನಿಂತಿದ್ದಳು. ಅಡುಗೆ ಮನೆಗೆ ಬಂದ ಕಾಕೂ “ಪಾರ್ವತಿ, ಬಂದಿದ್ದ ಹುಡುಗಿಯನ್ನು ನೋಡಿದಿಯಲ್ಲ, ಅವಳೇ ನಿಮ್ಮ ರವಿ ಅಣ್ಣ ಮದುವೆ ಮಾಡಿಕೊಳ್ಳುವ ಹುಡುಗಿ. ಅವನ ಜೊತೆ ಅವನ ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ದಾಳೆ. ಅಲ್ಲೆ ಒಬ್ಬರಿಗೊಬ್ಬರು ಮೆಚ್ಚಿಕೊಂಡು ನಮಗೆ ತಿಳಿಸಿದ್ರು. ಇವತ್ತು ಅವರ ತಂದೆ ತಾಯಿ ಅದೇ ವಿಷಯ ಮಾತಾಡಲಿಕ್ಕೆ ಬಂದಿದ್ರು. ನಮಗಂತೂ ಎಲ್ಲಾ ರೀತಿ ಒಪ್ಪಿಗೆ ಆಗಿದೆ. ಮುಂದಿನ ತಿಂಗಳು ಮದುವೆ ……………” ಕಾಕೂನ ಮುಂದಿನ ಮಾತುಗಳು ಬರಿ ಧ್ವನಿಯಾಗಿ ಪಾರ್ವತಿಯ ಕಿವಿಯ ಪರದೆಯ ಮೇಲೆ ಅಪ್ಪಳಿಸುತ್ತಿದ್ದವು. ಕಿವಿ ತನ್ನ ಸಂವೇದನೆಯನ್ನು ಕಳೆದುಕೊಂಡಿತ್ತು. ಹೃದಯದ ಬಡಿತ ಜೋರಾಗಿ ಕಣ್ಣ ಮುಂದೆ ಕತ್ತಲೆ ಆವರಿಸಿತ್ತು. ಕಾಲುಗಳು ಬಲಹೀನವಾಗಿ ಆಸರೆಗಾಗಿ ಬಾಗಿಲಿಗೆ ಒರಗಿದ್ದಳು. ಸ್ವಲ್ಪ ಸಾವರಿಸಿಕೊಂಡಾಗ ಕಾಕೂ ಧ್ವನಿ ಮತ್ತೆ ಕೇಳಿಸಿತ್ತು. “ನನಗಂತೂ ಬಹಳ ಸಂತೋಷವಾಗಿದೆ. ತಗೊ ಈ ಸಿಹಿತಿಂಡಿ ಮನೆಗೆ ತೆಗೆದುಕೊಂಡು ಹೋಗು. ನಾಳೆಯಿಂದ ಮದುವೆ ತಯಾರಿ ಸುರು ಆಗಬೇಕು.” ಎನ್ನುತ್ತ ತಿಂಡಿಯ ಪೊಟ್ಟಣವನ್ನು ಕೊಟ್ಟಾಗ ಯಾಂತ್ರಿಕವಾಗಿ ಅದನ್ನು ಹಿಡಿದುಕೊಂಡು ಹೊರಗೆ ಬಂದು ಚಪ್ಪಲಿ ಮೆಟ್ಟಿ ಲಿಫ್ಟ ಬಟನ್ ಒತ್ತಿದಳು. ನೀರಿನಿಂದ ಮಂಜಾದ ಕಣ್ಣುಗಳಾಚೆ ಲಿಫ್ಟ ಒಳಗಿನ ಕನ್ನಡಿಯಲ್ಲಿ ಕಂಡ ಯುವತಿ ಮಾಂಸದ ಮುದ್ದೆಯಂತೆ ಕಾಣಿಸಿದಳು. ಹಸಿವೆಯನ್ನು ಹಿಂಗಿಸಿಕೊಳ್ಳಲು ಬಂದ ಪಾರ್ವತಿಗೆ ತಾನೇ ಪುರುಷನ ಹಸಿವು ಹಿಂಗಿಸುವ ಆಹಾರವಾಗಿದ್ದು ಅರ್ಥವಾದಾಗ ಬಹಳ ತಡವಾಗಿತ್ತು.
-ಪ್ರೊ. ರಾಜನಂದಾ ಘರ‍್ಗಿ
ಬೆಳಗಾವಿ