ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ
e-ಸುದ್ದಿ, ಬೈಲಹೊಂಗಲ
ಬೈಲಹೊಂಗಲ, ಕಿತ್ತೂರು ,ಸವದತ್ತಿ ರಾಮದುರ್ಗ ಸೇರಿದಂತೆ ಬೆಳಗಾವಿ ಜಿಲ್ಲಾದಂತ ನಾನಾ ಮದ್ಯದಂಗಡಿಗಳಲ್ಲಿ ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ನಡೆಯುತ್ತಿದೆ. ಬಾರ್, ರೆಸ್ಟೋರೆಂಟ್ ಮಾಲೀಕರು ಸ್ವಯಂಕೃತ ದರ ಘೋಷಣೆ ಮಾಡಿಕೊಂಡು ಮದ್ಯ ಮಾರಾಟ ಮಾಡುತ್ತಿರುವುದು ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.
ಸಿಎಲ್2, ಸಿಎಲ್ 7 ,ಸಿಎಲ್ 9,ಸೇರಿದಂತೆ ನಾನಾ ಸನ್ನದುದಾರರ ಅಂಗಡಿಗಳಲ್ಲಿ ಹೆಚ್ಚುವರಿ ಬೆಲೆಗೆ ಮದ್ಯದ ಬಾಟಲಿಗಳನ್ನು ಮಾರಾಟ ಮಾಡಲಾಗುತ್ತಿದೆ. ಎಂಆರ್‌ಪಿ ಬೆಲೆಗಿಂತ ಹೆಚ್ಚು ಹಣ ಯಾಕೆ ಎಂದು ಪ್ರಶ್ನೆ ಮಾಡಿದರೆ ನಾನಾ ಕಾರಣ ಹೇಳಿ ಹಾರಿಕೆ ಉತ್ತರ ಕೂಡುತ್ತಾರೆ. 180 ಎಂಎಲ್ ಬಾಟಲಿ ಅಥವಾ ಪೌಂಚ್ ಒಂದಕ್ಕೆ 20 ರಿಂದ 30 ರೂ. ಹೆಚ್ಚುವರಿ ಹಣ ಪಡೆಯಲಾಗುತ್ತಿದೆ. ಬೆರಳೆಣಿಕೆಯಷ್ಟು ಅಂಗಡಿಗಳಲ್ಲಿ ನಿಗದಿ ಪಡಿಸಿದ ದರಕ್ಕೆ ಮಾರಾಟ ಮಾಡುತ್ತಿದ್ದರೆ ಶೇ. 90 ರಷ್ಟು ವೈನ್ ಶಾಪ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಹೆಚ್ಚುವರಿ ಬೆಲೆಗೆ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಸರ್ಕಾರದ ಖಂಜಾನೆ ಕಿಂತ್ ಮದ್ಯದಂಗಡಿ ಮಾಲಿಕರ ಗಲ್ಲೆ ತುಂಬುತ್ತದೆ.
ದಂಧೆ ಲಾಬಿ: ಹೆಚ್ಚುವರಿ ಬೆಲೆಗೆ ಮದ್ಯ ಮಾರಾಟದ ಕುರಿತು ದೊಡ್ಡ ಮಟ್ಟದ ಲಾಬಿ ನಡೆದಿದೆ. ಬಾರ್ ಆ್ಯಂಡ್ ರೆಸ್ಟೋರೆಂಟ್ ಹೊಂದಿದವರ ಪೈಕಿ ಬಹುತೇಕರು ಉದ್ಯಮಿ, ರಾಜಕಾರಣಿಗಳಿದ್ದಾರೆ. ಜಿಲ್ಲೆಯ ನಾನಾ ಅಂಗಡಿ ಮಾಲೀಕರು ಒಬ್ಬರಿಗಿಂತ ಒಬ್ಬರು ಹೆಚ್ಚುವರಿ ಬೆಲೆಗೆ ಮದ್ಯ ಮರಾಟ ಮಾಡುತ್ತಿದ್ದಾರೆ. ಇದರ ನಿಯಂತ್ರಣ ಮಾಡಬೇಕಾದ ಅಬಕಾರಿ ಇಲಾಖೆಯಲ್ಲಿ ಲಾಬಿ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಕೆಲ ಸನ್ನದುದಾರರು ಅಬಕಾರಿ ನಿಯಮ ಬಾಹಿರವಾಗಿ ಅಂಗಡಿ ನಡೆಸುತ್ತಿದ್ದಾರೆ. ಸಾವಿರ ರೂಪಾಯಿ ಮದ್ಯ ಖರೀದಿಸಿದರೆ 200 ರೂ. ಹೆಚ್ಚುವರಿ ಹಣ ನೀಡಬೇಕಾಗಿದೆ.
ಬಿಲ್ ಇಲ್ಲ:ಖರೀದಿ ಮಾಡುವ ಮದ್ಯಕ್ಕೆ ಬಿಲ್ ಕೇಳಿದರೆ ಯಾವುದೇ ಅಂಗಡಿ ಮಾಲೀಕರು ಬಿಲ್‌ಗಳನ್ನು ನೀಡುವುದಿಲ್ಲ. ಬಿಲ್ ಕೇಳಿದ ಗ್ರಾಹಕರಿಗೆ ಹಾರಿಕೆ ಉತ್ತರ ನೀಡಿ ಕಳುಹಿಸುತ್ತಾರೆ. ಸರಕಾರ ನಿಗದಿ ಮಾಡಿದ ಬೆಲೆಗಿಂತ ಹೆಚ್ಚುವರಿಯಾಗಿ ಮಾರಾಟ ಮಾಡುತ್ತಿರುವ ತಪ್ಪುಗಳನ್ನು ಮುಚ್ಚಿಕೊಳ್ಳಲು ಅಂಗಡಿದಾರರು ಜಿ.ಎಸ್. ಟಿ ಅಥವಾ ತೆರಿಗೆ ಮದ್ಯದ ಬೆಲೆ ಹೆಚ್ಚಳವಾಗಿರುವ ಕಾರಣ ನೀಡುತ್ತಿದ್ದಾರೆ.
ಆದರೆ ಯಾವುದೇ ಉತ್ಪನ್ನಕ್ಕೆ ಎಮ್ ಆರ್ ಪಿ (ಗರಿಷ್ಟ ಚಿಲ್ಲರೆ ದರ)ಯೇ ಅಂತಿಮ ದರವಾಗಿದ್ದು ,ಗ್ರಾಹಕರು ಅದಕ್ಕಿಂತ ಹೆಚ್ಚು ಪಾತಿಸಬೇಕಾಗಿಲ್ಲ.ಸರಕು ಮತ್ತು ಸೇವಾ ತೆರಿಗೆ (ಜಿ ಎಸ್ ಟಿ)ಯು ಎಮ್ ಆರ್ ಪಿ ಯಲ್ಲಿ ಅಡಕವಾಗಿರುತ್ತದೆ.
ಅಕ್ರಮ ಮದ್ಯ ಮಾರಾಟ: ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ನಡೆಯುತ್ತಿದೆ. ಡಬ್ಬಾ ಅಂಗಡಿ, ಪಾನ್‌ಶಾಪ್, ಕಿರಾಣಿ ಅಂಗಡಿಗಳಲ್ಲಿ ಪರವಾನಗಿ ಇಲ್ಲದೇ ಮದ್ಯ ಮಾರಾಟ ಮಾಡಲಾಗುತ್ತಿದೆ. ಒತ್ತಡ, ದೂರುಗಳು ಕೇಳಿ ಬಂದರೆ ಮಾತ್ರ ಸ್ಥಳೀಯ ಪೊಲೀಸರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ಬಾಕಿ ಸಮಯದಲ್ಲಿ ಮೌನ ವಹಿಸುತ್ತಾರೆ ಎಂಬ ಆರೋಪ ವಿದೆ.
ಅಬಕಾರಿಗೆ ಗುರಿ ಸಾಧನೆ ಚಿಂತೆ ; ಮದ್ಯಮಾರಾಟದ ಕುರಿತು ಅಬಕಾರಿ ಇಲಾಖೆಗೆ ನೀಡಿರುವ ವಾರ್ಷಿಕ ಗುರಿ ಸಾಧನೆಯ ಚಿಂತೆ ಹೆಚ್ಚಾಗಿದೆ. ತಾಲೂಕು, ವಿಭಾಗ ವ್ಯಾಪ್ತಿಯಲ್ಲಿ ಮದ್ಯ ಮರಾಟದ ಗುರಿ ನೀಡಲಾಗಿರುತ್ತದೆ. ಇದರಿಂದ ಅಕ್ರಮ ಮದ್ಯ, ಹೆಚ್ಚುವರಿ ಬೆಲೆ ಸೇರಿದಂತೆ ಡಬ್ಬಾ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದರೂ ಅಬಕಾರಿ ಇಲಾಖೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತದೆ. ಇದರಿಂದ ಲಿಕ್ಕರ್ ದಂಧೆಕೋರರು ಅಕ್ರಮದ ಹಾದಿ ಮತ್ತು ಎಂಆರ್‌ಪಿಗಿಂತ ಹೆಚ್ಚುವರಿ ಬೆಲೆಗೆ ಮದ್ಯ ಮರಾಟಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಅಬಕಾರಿ ಅಧಿಕಾರಿಗಳು ತಲೆ ಕೆಡಸಿಕೊಳ್ಳದೇ ಪರೋಕ್ಷವಾಗಿ ನಿಯಮ ಉಲ್ಲಂಘನೆಗೆ ಸಹಕಾರ ನೀಡುತ್ತಿದ್ದಾರೆ.
ಮದ್ಯದ ಅಂಗಡಿಗಳ ಮಾಲೀಕರು ಅಬಕಾರಿ ಇಲಾಖೆ ನಿಯಮ ಗಾಳಿಗೆ ತೂರಿ ಮಾರಾಟದಲ್ಲಿ ತೊಡಗಿದ್ದಾರೆ. ಅಕ್ರಮ ಮತ್ತು ಹೆಚ್ಚಿನ ಬೆಲೆಗೆ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಆದರೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಬಕಾರಿ ಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ಜಾಣ ಮೌನ ವಹಿಸಿದ್ದಾರೆ.
•ಹೆಸರು ಹೇಳಲು ಇಚ್ಛಿಸದ ಮದ್ಯ ಪ್ರೀಯ ಗ್ರಾಯಕ.
ವರದಿ- ಉಮೇಶ ಗೌರಿ (ಯರಡಾಲ)