ಸಾರ್ಥಕತೆ
(ಕತೆ)
‘ರವಿವರ್ಮನಾ ಕುಂಚದಾ ಕಲೆಯೇ ಬಲೆ ಸಾಕಾರವೊ…..’ ಕನ್ನಡದ ಹಳೆಯ ಹಾಡೊಂದು ರೇಡಿಯೊದಲ್ಲಿ ಹರಿದು ಬರುತ್ತಿತ್ತು. ಆನಂದನ ಮನಸ್ಸಿನಲ್ಲಿ ಹಿಂದಿನ ದಿನದ ಘಟನೆಗಳು ಮರುಕಳಿಸಿದವು. ಸ್ನೇಹಿತನ ಮದುವೆಗೆಂದು ಬೆಂಗಳೂರಿಗೆ ಬಂದ ಆನಂದ ಮದುವೆಯ ಮಂಟಪವನ್ನು ತಲುಪಿದಾಗ ಎದುರುಗೊಂಡಿದ್ದು ಅಪ್ಸರೆಯಂತೆ ಅಲಂಕರಿಸಿಕೊಂಡಿದ್ದ ಯುವತಿ.
ಎಲ್ಲರಿಗೂ ಸ್ವಾಗತವನ್ನು ಕೊರುತ್ತ ಮಂಟಪದ ಬಾಗಿಲಲ್ಲಿ ನಿಂತು ಮುಗುಳನಗೆ ಬೀರುತ್ತಿದ್ದವಳು ಆನಂದನ ಕಣ್ಣುಗಳ ಮೂಲಕ ಹೃದಯವನ್ನು ಪ್ರವೇಶಿಸಿದ್ದಳು. ನಂತರ ತಿಳಿದಿದ್ದು ಅವಳು ಮದುಮಗಳ ತಂಗಿ ಎಂದು. ಸ್ನೇಹಿತನ ಮೂಲಕ ಪರಿಚಯ ಮಾಡಿಕೊಂಡು ಮಾತನಾಡಿದ್ದಾಯಿತು. ಆನಂದ ಚಿತ್ರಕಾರನೆಂದು ತಿಳಿದಾಗ ಆಕೆಯ ಕಣ್ಣುಗಳಲ್ಲಿ ಮಿಂಚಿದ ಮಿಂಚು ಆನಂದನ ಹೃದಯದಲ್ಲಿ ಅಲೆಗಳನ್ನು ಎಬ್ಬಿಸಿದ್ದವು. ಈಗ ಈ ಹಾಡನ್ನು ಕೇಳುತ್ತಿದ್ದಾಗ ಆತನಿಗೆ ನೆನಪಾಗುತ್ತಿದ್ದುದು ಆಕೆಯ ಕಣ್ಣಲ್ಲಿ ಕಂಡ ಆ ಮಿಂಚು. ಪದೆ ಪದೆ ಅವಳ ಮುಖ ಕಣ್ಣೆದುರು ಮೂಡಿ ಆ ಮುಖವನ್ನು ಕ್ಯಾನವಾಸ್ ಮೇಲೆ ಹಿಡಿದಿಡುವ ಆಸೆ ಮನದಲ್ಲಿ ಮೊಳೆಯತೊಡಗಿತ್ತು. ಕಲಾವಿದರೇ ಹಾಗೆ ! ಸೌಂದರ್ಯಾರಾಧಕರು ! ಅವರಲ್ಲಿ ಸೌಂದರ್ಯವನ್ನು ಅನುಭವಿಸುವುದಕ್ಕಿಂತ ಅದನ್ನು ಆರಾಧಿಸಿ, ಅದಕ್ಕೆ ಮೂರ್ತ ರೂಪ ನೀಡಿ ಅದನ್ನು ಶಾಶ್ವತಗೊಳಿಸುವ ಪ್ರವರ್ತಿಉಳ್ಳವರು.
ಆನಂದನ ಆ ತಹತಹಿಕೆ ಹೆಚ್ಚಾದಾಗ ಆತ ತನ್ನ ಸ್ನೇಹಿತನ ಮೊರೆ ಹೋಗಿದ್ದ. ತಕ್ಷಣ ಕರೆಮಾಡಿ “ನಿನ್ನ ನಾದಿನಿಯ ಚಿತ್ರವನ್ನು ಬಿಡಿಸುತ್ತೇನೆ ಸಹಕರಿಸುತ್ತಿಯಾ?” ಎಂದು ಕೇಳಿದಾU,À ಆತ ಆಕೆಯ ಮೊಬೈಲ ನಂಬರ ಕೊಟ್ಟು ಅವಳನ್ನೇ ಕೇಳಿ ನೋಡು ಎಂದಿದ್ದ. ನಂತರದ ಬೆಳವಣಿಗೆಗಳು ಸಿನಿಮಯವಾಗಿದ್ದವು.ಕಲಾವಿದ ಎಂದು ಕೇಳಿದ ತಕ್ಷಣ ಬಹಳ ಸಂತೋಷದಿಂದ ಆನಂದನನ್ನು ಭೇಟಿಯಾಗಲು ಬಂದ ಭಾಮಿನಿ ಯಾವ ರೀತಿಯ ಚಿತ್ರಬಿಡಿಸುವಿರಿ ಎಂದು ಕೇಳಿದಾಗ ಆನಂದ ಆಕೆಯ ಎದುರಿಗೆ ತನ್ನ ಕಲ್ಪನಾ ರೂಪದ ಸುಂದರಿಯ ರೂಪವನ್ನು ತೆರೆದಿಟ್ಟಿದ್ದ. ಇಬ್ಬರ ಭೇಟಿಗಳು ಪ್ರಾರಂಭವಾಗಿದ್ದವು. ಚಿತ್ರಕಲೆ ನೆಪದಲ್ಲಿ ಹೊಸ ಕತೆ ಪ್ರಾರಂಭವಾಗಿತ್ತು. ಇಬ್ಬರ ಹೃದಯಗಳು ಹಾಡತೋಡಗಿದ್ದವು. ನಿತ್ಯ ಭೇಟಿ, ಚಿತ್ರಕಲೆ ಬಗ್ಗೆ ಚರ್ಚೆ, ವೇಷ, ಭೂಷ, ಅಲಂಕಾರ, ರೂಪರೇಷಗಳ ಚರ್ಚೆ ಮುಂದುವರೆದಿತ್ತು.
ನಿರ್ಧಾರಿತ ದಿನ ಆನಂದನ ಕನಸಿನ ಕನ್ಯೆ ತಯಾರಾಗಿ ಕಣ್ಣೆದುರು ನಿಂತಿದ್ದಳು. ತನ್ನ ಕಲ್ಪನೆಯ ಕನ್ನೆಗೆ ಸೂಕ್ತವಾದ ಭಾವ ಭಂಗಿಯನ್ನು ಸೂಚಿಸಿದಾಗ ಕಣ್ಣೆದರು ನಿಂತಿದ್ದಳು ರವಿವರ್ಮನ ಅಪ್ಸರೆ. ಈಗ ಅವಳು ಆನಂದನ ಅಪ್ಸರೆ. ಆನಂದನ ಕುಂಚ ಕ್ಯಾನವಾಸ್ ಮೇಲೆ ಓಡಿತ್ತು. ಗಂಟೆಗಳು ಉರುಳಿದ್ದವು. ಕಲಾವಿದನಿಗೂ ಬಳಲಿಕೆಯಿಲ್ಲ ಅವನ ಕುಂಚಕ್ಕೂ ಬ್ರೆಕ್ ಇಲ್ಲ. ರೂಪದರ್ಶಿ ಭಾಮಿನಿ ದಣಿದರೂ ಮುಖದ ಭಾವ ಬದಲಾಗಲಿಲ್ಲ. ಸಮಯ ನಿಂತು ಹೋಗಿತ್ತು. ಸೌಂದರ್ಯ ಮೂರ್ತರೂಪ ಪಡೆದಿತ್ತು. ಚಿತ್ರಕ್ಕೆ ಕೊನೆಯದಾಗಿ ಕುಂಚದ ಸ್ಪರ್ಷ ನೀಡಿದ ಆನಂದ ತನ್ನ ಕಲಾ ಸಮಾಧಿಯಿಂದ ಹೊರಬಂದು ಸ್ವಲ್ಪ ದೂರ ನಿಂತು ತನ್ನ ರಚನೆಯನ್ನು ಅವಲೋಕಿಸಿದ.
ಮನದಲ್ಲಿ ಸಾರ್ಥಕತೆಯ ಭಾವ ತುಂಬಿತ್ತು. ನಿಧಾನವಾಗಿ ಭಾಮಿನಿಯ ಹತ್ತಿರ ಹೋಗಿ ಅವಳನ್ನು ಭಂಗಿಯಿಂದ ಬಿಡುಗಡೆಗೊಳಿಸಿದ. ತನ್ನ ಕಲೆಗೆ ಸಾರ್ಥಕತೆಯನ್ನು ನೀಡಿದ ಸುಂದರಿಯ ಹಣೆಯನ್ನು ನಿಧಾನವಾಗಿ ಚುಂಬಿಸಿ ‘ಥ್ಯಾಂಕ್ಸ್’ ಎಂದವನ ಧ್ವನಿ ಹಾಗೂ ಕಣ್ಣು ಎರಡರಲ್ಲೂ ಕೃತಜ್ಞತೆ ಹೊರಸೂಸುತ್ತಿತ್ತು.
ಭಾಮಿನಿ ನಿಧಾನವಾಗಿ ತಾನು ನಿಂತಿದ್ದ ಜಾಗದಿಂದ ಸರಿದು ಕ್ಯಾನವಾಸ್ ಎದುರಿಗೆ ನಿಂತಳು. ಅವಳ ಕಣ್ಣುಗಳು ಅರಳಿದವು. ನಂಬಲು ಅಸಾಧ್ಯವಾದ ರಚನೆ ಎದುರಿಗೆ ಕಾಣಿಸಿತು. ಸ್ವರ್ಗದ ಅಪ್ಸರೆ ಭೂಮಿಗೆ ಇಳಿದಿದ್ದಳು. ಆನಂದನ ಕುಂಚ ಸಾಧಾರಣ ಮಾನವಳಾದ ಭಾಮಿನಿಯನ್ನು ಅಪ್ಸರೆಯಾಗಿ ಬದಲಾಯಿಸಿತ್ತು. ಬಹುಶಃ ಅದರಲ್ಲಿ ಆತನ ಕಲಾಚಾತುರ್ಯದ ಜೊತೆಗೆ ಆತನ ಹೃದಯದ ಭಾವನೆಗಳು ಸೇರಿ ಅಪ್ಸರೆಯ ರೂಪ ಸಾಕಾರಗೊಂಡಿತ್ತು. ಭಾಮಿನಿಯ ಹೃದಯ ತುಂಬಿ ಆನಂದನಲ್ಲಿ ತಾನು ಹುಡುಕುತ್ತಿದ್ದ ತನ್ನ ಆರಾಧPನ ರೂಪದÀ ತನ್ನ ಜೀವನ ಸಂಗಾತಿಯನ್ನು ಅರಿಸಿತ್ತು.
ಪ್ರೋ.ರಾಜನಂದ ಗಾರ್ಘಿ, ಬೆಳಗಾವಿ