ಗಜ಼ಲ್

ಗಜ಼ಲ್

ಇಂದೇಕೋ ಅಪಸ್ವರದ ಶೃತಿಯು ಮೀಟುತಿದೆ ಹೃದಯ ತಂತಿಗಳಲಿ ಇನಿಯಾ
ಅದೇನೋ ತಳಮಳವು ಮನ ಕಾಸಾರದ ಭಾವದಲೆಗಳಲಿ ಇನಿಯಾ

ರಂಗುದುಟಿಗಳು ಬಿರಿದು ಒಣಗಿ ಕಂಪಿಸುತಿರುವುದೇಕೇ
ಮುಸುಕಿದೆ ಕಳವಳದ ಕಾವಳ ಮಂಜು ಕಂಗಳಲಿ ಇನಿಯಾ

ನಿಸ್ತೇಜಗೊಳುತಿಹುದು ಮೊಗದ ಹೊನ್ನ ಕಾಂತಿಯು ಬಿಳುಪೇರಿ
ಉಸಿರು ನಿಡಿದಾಗುತಿಹುದು *ಕ್ಷಣ ಕ್ಷಣಗಳಲಿ* ಇನಿಯಾ

ಕಾತರಿಸಿ ಕಾಯುತಿವೆ ಮುಂಗುರುಳ ಸುರುಳಿ ನಿನ್ನ ಕೆನ್ನೆಗಳ ಸ್ಪರ್ಶಕೆ
ತವಕಿಸುತಿವೆ ಬೆರೆಯಲು ಕೆಂದುಟಿಗಳು ಚುಂಬಿಸುವ ನಿನ್ನಧರಗಳಲಿ ಇನಿಯಾ

ಹಾತೊರೆಯುತಿದೆ ನನ್ನೀ ಬಳುಕುವ ತನು ನಿನ್ನಯ ಬಿಸಿ ಅಪ್ಪುಗೆಗೆ
ನಸುಕು ಹರಿಯುವ ಮುನ್ನ ಬಳಿಸಾರು ಬೇಗಂಳನಳಿದೋಳ್ಗಳಲಿ ಇನಿಯಾ.

ರಚನೆ : ಹಮೀದಾಬೇಗಂ ದೇಸಾಯಿ ಸಂಕೇಶ್ವರ 

Don`t copy text!