ಮನೆ
(ಕತೆ)
ಆಗಿನ್ನೂ ಸೂರ್ಯ ಉದಯಿಸುತ್ತಿದ್ದ. ಸೂರ್ಯನ ಸುವರ್ಣ ಕಿರಣಗಳು, ಪಕ್ಷಿಗಳ ಕಲರವ, ತಂಪಾದ ಗಾಳಿ, ಕೋಳಿಯು ಬೆಳಗಾಗಿದೆ ಏಳಿ ಎಂದು ಏಳಿಸುವ ಕೂಗು, ಸುಪ್ರಭಾತ ಇವೆಲ್ಲಾ ಸೂರ್ಯದೇವ ಉದಯಿಸುತ್ತಿದ್ದಾನೆ ಎಂಬುದಕ್ಕೆ ಸಂಕೇತವಾಗಿತ್ತು.
ಯಾಕೋ ಹಾಸಿಗೆ ಬಿಟ್ಟು ಹೇಳಲು ಮನಸ್ಸೇ ಬಾರದ ರಾಮಯ್ಯ ಹಾಗೆ ಗೋಡೆ ಕಡೆ ತಿರುಗಿ, ತಿಳಿ ಬಿಳಿ ಬಣ್ಣದ ಸುಣ್ಣದ ಗೋಡೆಯನ್ನೇ ಕಣ್ಣು ಮಿಟುಕಿಸದೆ ಹಾಗೆ ನೋಡುತ್ತಾ ತನ್ನ ಮನದಲ್ಲೇ ಚಿಂತಿಸ ತೊಡಗಿದ, ಸುಮಾರು 120 ವರ್ಷದಷ್ಟು ಹಳೆಯ ಮನೆ. ನಮ್ ಅಪ್ಪ, ನಾನು, ಅಕ್ಕ ಹಾಗೂ ನನ್ನ ಮಗ ಬೆಳೆದದ್ದು ಇಲ್ಲೇ. ನಮಗಿದ್ದ ಕಡು ಬಡತನದಲ್ಲಿ ನನಗೆ ಶಾಲೆಗೆ ಇರಲಿ, ಒಂದೊತ್ತು ಹೊಟ್ಟೆ ತುಂಬಾ ಊಟ ಸಿಕ್ಕಿದ್ದರೇ ಅದೇ ಹೆಚ್ಚಾಗಿತ್ತು. ಅಪ್ಪ ಅಮ್ಮ ಊರಿನ ಜಮೀನ್ದಾರರ ಹೊಲದಲ್ಲಿ ಕೆಲಸ ಮಾಡ್ತಾ ಇದ್ರೂ. ಬೆಳೆಯೋ ಬೆಳೆಯಲ್ಲಿ ನಮಗೂ ಸ್ವಲ್ಪ ಸಿಕ್ತಾ ಇತ್ತು, ಈ ಬಡತನ ಹಾಗೂ ಸಾಲದ ಮಧ್ಯದಲ್ಲೇ ಅಕ್ಕನ ಮದುವೆ ಮಾಡಿದ್ದರು, ಸಾಲದ ಬಾಕಿ ಇನ್ನು ಇದ್ದ ಕಾರಣ ಜಮೀನ್ದಾರರು ನನ್ನನ್ನು ಅವರ ಮನೆಯಲ್ಲಿ ಜೀತಕ್ಕೆ ಇಟ್ಟುಕೊಂಡಿದ್ದರು. ಹಾಗೂ ಹೀಗೂ ಒಂದು ಹಂತ ತಲುಪಿದ ಮೇಲೆಯೇ ಅದೇ ಹಳ್ಳಿಯಲ್ಲಿ ನನಗೆ ಒಂದು ಹೆಣ್ಣು ನೋಡಿ ಮದುವೆ ಮಾಡಿ ಅಪ್ಪ ಅಮ್ಮ ಶಿವನ ಪಾದ ಸೇರಿದ್ದರು. ನಾನು ನನ್ನ ಹೆಂಡತಿ ಸಾಕಮ್ಮ ಜಮೀನ್ದಾರರ ಹೊಲ ಹಾಗೂ ಮನೆಯಲ್ಲಿ ಕೆಲಸ ಮಾಡಿ ಬಂದ ಅಲ್ಪ ಸ್ವಲ್ಪ ದುಡ್ಡಲ್ಲಿ ಒಂದು ಸಣ್ಣ ಹೊಲ ಮಾಡಿಕೊಂಡಿದ್ದೋ. ತಾಯಿ ಚೌಡವ್ವನ್ನ ಕೃಪೆಯಿಂದ ನಮಗೆ ಒಬ್ಬ ಗಂಡು ಮಗ ಹುಟ್ಟಿದ್ದ, ಅವನಿಗೆ ಜಮೀನ್ದಾರರೇ ಸಿದ್ದಾಂತ್ ಅಂತ ಹೆಸರಿಟ್ಟು, ಈ ಜೀತ ಮಾಡುವುದು ನಿನ್ನ ತಲೆಮಾರಿಗೆ ಕೊನೆಯಾಗಲಿ ನಿನ್ನ ಮಗನ್ನಾದರೂ ಶಾಲೆಗೆ ಕಳಿಸು, ಒಂದಕ್ಷರ ಅಂತ ಕಲುತ್ರೆ, ನನ್ ಮಗ ವಿನಯ್ ಪೇಟೆಲಿ ಅದ್ಯಾವ್ದೋ ಒಂದು ವಿದೇಶಿ ಕಂಪನಿ ಅಲ್ಲಿ ಕೆಲ್ಸುಕ್ ಹೋಗ್ತಾನೆ ನಿನ್ ಮಗುಂಗೂ ಅಂತದ್ದೇ ಒಂದ್ ನೌಕ್ರಿ ಗಿಟ್ಟಿಸಿ ಕೊಡ್ತಾನೆ ಅಂತ ಹೇಳಿದ್ರು. ನನ್ ಮನಸಲ್ಲೂ ಅದೇ ಇರದು ಯಜ್ಮಾನ್ರೆ ನೀವ್ ಮಾಡಿರೋ ಉಪಕಾರದ ಋಣ ನನ್ ಮೇಲಿದೆ ಅಂತ ಹೇಳಿ ಅವರ ಕಾಲಿಗೆ ಬಿದ್ದು ಮನೆಗೆ ಬಂದೆ.
ಎಲ್ಲರಾಸೆಯಂತೆ ಸಿದ್ದಾಂತ್ ಚೆನ್ನಾಗಿ ಓದಿ ಒಳ್ಳೆ ಕೆಲಸಾನೂ ತಗೊಂಡೂ, ಅಲ್ಲೇ ಪೇಟೆಲಿ ಎರಡು ಮೂರು ಕೋಣೆ ಇರುವ ಒಂದು ಮನೆ ಮಾಡ್ಕೊಂಡು ಇದ್ದ. ಅದ್ನ ಏನೋ ಹೇಳ್ತ ಇದ್ದ ನಂಗೆ ಗೊತ್ತಾಗ್ಲಿಲ್ಲ. ಹೀಗೆ ಗೋಡೇ ನೋಡುತ್ತಾ ಯಾವುದೋ ಲೋಕದಲ್ಲಿ ಮಲಗಿದ್ದ ನನ್ನನ್ನು ಎಚ್ಚರಿಸಿದ್ದು ಸಾಕಿ. ಬಂದು, ಕರುನಾ ಹಾಲ್ಕುಡಿಯೋಕೆ ಬಿಡೋಗಿ ಹೊತ್ತಾಯ್ತು, ಹಾಲು ಕರೆದು, ನಿಮಗೆ ಅಡುಗೆ ಮಾಡಿ, ನಾನು ಹೊಲದ ಕಡೆ ಹೋಗ್ತೀನಿ ಅಂದ್ಲು. ಮದುವೆ ಆದಾಗಿಂದ ಇಲ್ಲಿ ತನಕ ಅವಳು ಯಾವತ್ತೂ ನನಗೆ ಅದು ಬೇಕು ಇದು ಬೇಕು ಎಂದು ಕೇಳಿಲ್ಲ, ಬಡತನ ಅಂತ ದೊರಿಲ್ಲ, ಕಷ್ಟ ಅಂತ ಹಿಂದೆ ಸರಿದವಳಲ್ಲ, ನೋವು ನಲಿವು ಎಲ್ಲದರಲ್ಲೂ ನನ್ನೊಟ್ಟಿಗೆ ಇದ್ದವಳು. ಮಗ ಚೆನ್ನಾಗಿ ಓದಬೇಕು, ನಮ್ ಹಾಗೆ ಕೂಲಿ ಮಾಡ್ಬಾರ್ದು, ಈ ಕಷ್ಟ ನಮಗೆ ಕೊನೆ ಆಗ್ಬೇಕ್ ಅಂತ ಹಗಲು ರಾತ್ರಿ ಕಷ್ಟ ಪಟ್ಟು ದುಡಿದು ಅವನನ್ನ ನನಗಿಂತ ಹೆಚ್ಚಾಗಿ ಅವಳೇ ಓದಿಸಿದ್ದು ಅಂದರೆ ತಪ್ಪಾಗಲ್ಲ. ಮಗ ಮನೆಯಲ್ಲಿ ಇರದನ್ನು ನೆನೆದು ಒಬ್ಬಳೇ ಎಷ್ಟೋ ಭಾರಿ ಅತ್ತಿದ್ದಾಳೆ. ಎಷ್ಟೇ ಆದರೂ ಹೆತ್ತ ಕರುಳು.
ಹಾಸಿಗೆ ಇಂದ ಎದ್ದು, ಹಾಲು ಕರೆಯಲು ಕರು ಬಿಟ್ಟು, ಆ ಕರುವನ್ನೇ ನೋಡುತ್ತಾ ಒಂದು ಮೂಲೆಯಲ್ಲಿ ನಿಂತ್ತಿದ್ದೆ. ಯಾವುದೋ ಗಾಡಿ ಬಂದ ಹಾಗೆ ಸದ್ದಾಯಿತು, ಸ್ವಲ್ಪ ಮುಂದೆ ಬಂದು ದಾರಿ ಕಡೆ ನೋಡಿದೆ. ಸೂಟುಧಾರಿಯೊಬ್ಬ ಕಾರ್ ಇಂದ ದಬಕ್ ಎಂದು ಬಾಗಿಲು ತೆರೆದ. ಸಣ್ಣಗೆ ಮಳೆ ಬರುತ್ತಿತ್ತು. ಮಳೆಯನ್ನು ಶಪಿಸುತ್ತಾ ಕಾರ್ ಇಳಿದ. ಹಳ್ಳಿ ರಸ್ತೆಯಾದರಿಂದ ಮಳೆ ಬಂದಾಗಲೆಲ್ಲ ಕೆಸರು ಗುಂಡಿಯಂತಾಗಿ ಬಿಡುತ್ತದೆ, ನಾವು ಬರಿಗಾಲಲ್ಲಿ ನಡೆಯುವುದು ಅಭ್ಯಾಸವಾದರಿಂದ ನಮಗೇನು ಅನ್ನಿಸುವುದಿಲ್ಲ. ಸ್ವಲ್ಪ ಹಾಗೆ ಮುಂದೆ ಹೋದೆ, ಓಹ್ ಸಿದ್ದಾಂತ್. ಬಾ ಮಗ ಎನ್ನುವಂತೆ ಕೈ ಮುಂದೆ ಮಾಡಿದ ನನ್ನ ನೋಡಿಯೂ ನೋಡದೆ, ಥೂ ಹಾಳು ಮಳೆ. ಶೂಸ್ ಎಲ್ಲಾ ಹಾಳಾಗೋಯ್ತು ಎನ್ನುತ್ತಾ ಮುಂದೆ ನಡೆದ. ಚಾಚಿದ ಕೈಯನ್ನು ಹಾಗೆ ನಿಧಾನವಾಗಿ ಕೆಳಗಿಳಿಸಿ ಹಾಗೆ ಮನೆ ಒಳಗೆ ನಡೆದೆ.
ಸಾಕು..ಸಾಕು.. ಮಗ ಬಂದ ನೋಡು ಕಾಪಿ ಗೀಪಿ, ಊಟಕ್ಕೆ ಅಣಿ ಮಾಡು ಎನ್ನುತ್ತಾ ಕರು ಕಟ್ಟಿ ಹಾಕಿ ಹಾಲು ಕರ್ಕೊಂಡು ಮನೆಗೆ ಹೋದೆ. ಎಷ್ಟೋ ದಿನಗಳ ನಂತರ ಮನೆಗೆ ಬಂದ ಸಿದ್ದಾಂತ್ನ ಕಂಡು ತುಂಬ ಖುಷಿಯಾಗಿತ್ತು. ನನ್ನ ಮತ್ತು ಸಾಕಿಗೆ ಆದ ಖುಷಿಗೆ ಗೆ ಏನು ಮಾಡಬೇಕೆಂದೇ ತೋಚದಂತಾಗಿತ್ತು.
ಮಗನೊಂದಿಗೆ ಮನಬಿಚ್ಚಿ ಮಾತನಾಡಲು ಸಹ ಯಾಕೋ ಒಳಗೊಳಗೇ ಸಂಕೋಚ. ತನ್ನಾಸೆಯಂತೆ ಚೆನ್ನಾಗಿ ಓದಿ ಒಳ್ಳೆ ಕೆಲಸದಲ್ಲಿ ಇದ್ದರೂ ಸಹ ಏನೋ ಒಂಥರಾ ಮುಜುಗರ. ಈಗ ಇರುವ ಚಿಕ್ಕ ತೋಟದ ಪಕ್ಕದಲ್ಲೇ ಇನ್ನೊಂದು ತೋಟ ಮಾಡುವ ಒತ್ತಾಸೆ ನನಗೆ. ಎಷ್ಟೋ ಭಾರಿ ಮಗನ ಮುಂದೆ ಹೇಳಬೇಕು ಎಂದು ಮನಸ್ಸು ಮಾಡಿದರು ಸಹ ಯಾಕೋ ಹೇಳಲು ಆಗಲೇ ಇಲ್ಲ. ಹೇಗಿದ್ದರೂ ಈಗ ಬಂದಿದ್ದಾನೆ, ಹೇಳಿ ನೋಡನ, ನಮ್ಮ ಮಗ ಅಲ್ವಾ, ನಮ್ಮ ಮೇಲೆ ಪ್ರೀತಿ, ಗೌರವ, ಕಾಳಜಿ ಇಲ್ದೆ ಇರುತ್ತಾ. ಹೊಲ ತಗೋಳನ ಅಂದ್ರೆ ಏನು ಬೇಡ ಅಂತಾನಾ. ಇಲ್ಲ ಅವ್ನು ಅಷ್ಟು ಕಠೋರ ಹೃದಯದವನಂತು ಅಲ್ಲ. ಇಷ್ಟು ವರ್ಷ ಕಷ್ಟ ಪಟ್ಟಿದ್ದು ನೋಡಿದ್ದಾನಲ್ಲ ಎನ್ನುತ್ತಾ, ಮಗನ ಬಳಿ ಬಂದೆ, ಕುರ್ಚಿಯ ಮೇಲೆ ಕುಳಿತ್ತಿದ್ದ ಮಗನ ಎದುರಲ್ಲೇ ನೆಲದ ಮೇಲೆ ನಿಧಾನವಾಗಿ ಮಂಡಿಯೂರಿ ಕುಳಿತುಕೊಳ್ಳುವ ಮೊದಲೇ, ಮಗ ಮಾತು ಶುರು ಮಾಡಿದ. ಅಪ್ಪಾ ಇನ್ನು ಎಷ್ಟು ದಿನ ಅಂತ ಈ ಹಳ್ಳಿಯಲ್ಲೇ ಹೊಲ ಗದ್ದೆ ಅಂತ ಇರ್ತೀರ. ಇದ್ರಲ್ಲಿ ಆದಾಯ ಏನು ಇಲ್ಲ. ಸುಮ್ನೆ ಇದ್ನೇಲ್ಲ ಮಾಡ್ಕೊಂಡ್ ಟೈಮ್ ವೇಸ್ಟ್ ಮಾಡೋದ್ ಸರಿ ಇಲ್ಲ. ಈಗ್ಲೊ-ಆಗ್ಲೋ ಬೀಳೋ ಆಗಿದೆ ಈ ಮನೆ. ಮಳೆಗಾಲ ಬಂದ್ರೆ ಮಳೆ ಮನೆ ಹೊರಗೆ ಸೂರಿಯೊದಕ್ಕಿಂತ ಒಳಗೆ ಸೂರಿಯೋದೆ ಜಾಸ್ತಿ. ರಜೆ ಹಾಕಿ ಬಂದ್ರು ಸಹ ಎರಡು ದಿನ ಇರೋಕೆ ಆಗಲ್ಲ, ಸರಿಯಾಗಿ ನೆಟ್ವರ್ಕ್ ಇರಲ್ಲ, ಅಡಿಗೆ ಮಾಡೋಕೆ ಅಂತ ಹೋದ್ರೆ ಮನೆ ತುಂಬಾ ಹೊಗೆನೇ ತುಂಬಿರುತ್ತೆ ಥೂ ಎನ್ನುತ್ತಾ ಮಾತು ಮುಂದುವರೆಸಿದ. ಒಬ್ರುಗೆ ಹೇಳಿದ್ದೀನಿ, ಅವ್ರು ಈ ಮನೆ ಹಾಗೂ ತೋಟ ತಗೋಳೋಕೆ ರೆಡಿ ಇದ್ದಾರೆ. ಒಳ್ಳೆ ದುಡ್ಡು ಸಿಗುತ್ತೆ. ನಾಳೆ ಸಂಜೆ ಒಳಗೆ ರೆಡಿ ಆಗಿರಿ. ಈ ಊರು ಬಿಟ್ಟು ಬೆಂಗಳೂರಿಗೆ ಹೋಗೋಕೆ ರೆಡಿ ಇರಿ. ಸಿಕ್ಕಿದೆಲ್ಲ ಪ್ಯಾಕ್ ಮಾಡ್ಬೇಡಿ, ಏನ್ ಬೇಕೋ ಅದು ಮಾತ್ರ ತಗೊಂಡು ಹರುಕ್ಲು- ಮುರುಕ್ಲು ಎಲ್ಲಾ ಇಲ್ಲೇ ತಿಪ್ಪೆಗೆ ಹಾಕಿ ಎನ್ನುವಾಗಲೇ ಅವನ ಫೋನ್ ರಿಂಗ್ ಆಗ ತೊಡಗಿತು ಹಾಗೆ ಎದ್ದು ಹೊರಗೆ ನಡೆದ.
ಇದೆಲ್ಲಾ ಮಾತಾಡಿದ್ದು ನನ್ನ ಮಗನೇನಾ, ಅಂಗೈ ಅಲ್ಲಿ ಇಡ್ಕೊಂಡು ಬೆಳ್ಸಿದ್ದೋ, ಎದೆ ಎತ್ತರ ಬೆಳೆದ ಮಗ ಹೀಗೆಲ್ಲಾ ಮಾತಾಡಿದ್ನ ಅಥವಾ ನಾವೇ ಅವ್ನ ಹೆಚ್ಚಾಗಿ ನಂಬುದ್ವಾ. ಏನೊಂದು ತಿಳಿಯದಂತೆ ಆಕಾಶನೇ ತಲೆ ಮೇಲೆ ಬಿದ್ದಂತೆ ಕುಳಿತ್ತಿದ್ದೆ. ಒಲೆ ಮುಂದೆ ಕುಳಿತ್ತಿದ್ದ ಸಾಕಮ್ಮನ ಕಣ್ಣು ಒದ್ದೆಯಾಗಿತ್ತು ಒಲೆಯಿಂದ ಬಂದ ಹೊಗೆಗಿಂತ ಮನದಲ್ಲಿ ಉರಿಯುತ್ತಿದ್ದ ಬೆಂಕಿನೇ ಹೆಚ್ಚಾಗಿತ್ತು. ಒಂಬತ್ತು ತಿಂಗಳು ಹೊತ್ತು ಹೆತ್ತು ಬೆಳೆಸಿದ ಮಗನೆ ಈಗ ಎದೆಗೆ ಒದ್ದನಾ, ಕಣ್ಣಿಂದಾ ಜಾರುತ್ತಿದ್ದ ಕಣ್ಣೆರನ್ನ ಹಾಗೆ ಸೆರಗಿನಲ್ಲಿ ಒತ್ತಿ ಒರೆಸಿಕೊಂಡಳು. ಎಂದು ತನ್ನ ದುಃಖ್ಖನ ತನ್ನೆದುರು ಹೇಳಿ ಕೊಂಡವಳಲ್ಲ, ತನ್ನೆಲ್ಲಾ ನೋವನ್ನು ಒಬ್ಬಳೇ ನುಂಗಿ ಹೊರಗೆ ಸದಾ ನಗುತ್ತಾ ಇರುತ್ತಿದ್ದಳು.
ರಾಮಯ್ಯ ಹಾಗೆ ಗೋಡೆಗೆ ತಲೆಯೊರಗಿಸಿಕೊಂಡು ಚಿಂತಿಸತೊಡಗಿದ, ಈ ಮನೆ ಬರಿ ಮಣ್ಣಿಂದ ಕಟ್ಟಿರಲಿಲ್ಲ, ಈ ಮನೆಯಲ್ಲಿ ನನ್ನ ಮುತ್ತಜ್ಜ, ಅಜ್ಜ, ಅಪ್ಪನ ತಲೆಮಾರನ್ನು ಕಂಡಿದ್ದೀನಿ. ಎಲ್ಲರ ನೆನಪಿನಿಂದ ಕಟ್ಟಿದ್ದ ಮನೆ. ಮನೆ ಮಂದಿಯೆಲ್ಲಾ ಒಟ್ಟೊಟ್ಟಿಗೆ ಕೂತು ಹರಟೆ ಹೊಡೆಯುತ್ತಿದ್ದೋ, ನಮ್ಮ ನಡುವೆ ಯಾವುದೇ ಬಿನ್ನಾಬಿಪ್ರಾಯಗಳಿರಲಿಲ್ಲ, ದಿನದ ಮನಸ್ತಾಪವನ್ನು ನನ್ನಮ್ಮನ ಕೈ ತುತ್ತು ಮರೆಸಿ ಎಲ್ಲರ ಮನಸ್ಸನ್ನು ತಿಳಿಯಾಗಿಸುತ್ತಿತ್ತು. ನೋವು-ನಲಿವುಗಳಲ್ಲಿ ಸದಾ ಜೊತೆಗಿದ್ದ ಮನೆ, ನನ್ನ ಮಗನ ಮೊದಲ ನಗು ಹಾಗೂ ಅಳುವನ್ನು ಪ್ರತಿಧ್ವನಿಸಿದ್ದ ಮನೆ, ಅವನ ನಗುವಿನ ಕೇಕೆ ಈಡಿ ಮನೆಯನ್ನೇ ಪಸರಿಸಿತ್ತು, ಪುಟ್ಟ ಪುಟ್ಟ ಹೆಜ್ಜೆಗಳಿಂದ ಈಡಿ ಮನೆಯನ್ನೇ ಓಡಾಡುವಾಗ ಅವನ ಗೆಜ್ಜೆ ಶಬ್ದ ನಮ್ಮ ದಿನದ ಆಯಾಸವನ್ನೇ ಮರೆಸುತಿತ್ತು. ಎಷ್ಟೊಂದು ಭಾವನೆಗಳು ಈ ಮನೆಯೊಟ್ಟಿಗೆ, ಹೇಳಿಕೊಳ್ಳಲಾಗದಷ್ಟು ಅನುಭವಗಳು, ನೊಂದ ಮನಸ್ಸಿಗೆ ಸಾಂತ್ವನ ಕೊಟ್ಟ ಕ್ಷಣಗಳು, ಈ ಮನೆಯ ಪ್ರತಿಯೊಂದು ಗೋಡೆ, ಕಿಟಕಿ ಹಾಗೂ ಬಾಗಿಲುಗಳಲ್ಲಿ ನನ್ನ ಒಡನಾಟವಿತ್ತು. ಅವುಗಳಿಗೆ ಕಣ್ಣು-ಕಿವಿ ಇಲ್ಲದಿದ್ದರೂ ಎಷ್ಟೋ ಭಾರಿ ನನಗೆ ಪ್ರತಿಕ್ರಿಯಿಸಿದಂತ್ತಿತ್ತು. ಕೇವಲ ದುಡ್ಡಿನಾಸೆಗೋ ಅಥವಾ ಪೇಟೆಗೆ ಹೋಗೋ ಆಸೆಗೋ ಈ ಮನೆಯೊಟ್ಟಿಗಿನ ಅನುಬಂಧ ಕಳೆದುಕೊಳ್ಳೋ ಮನಸ್ಸಿರಲಿಲ್ಲ, ಒಮ್ಮೆ ಹಾಗೆ ಎದ್ದು ಹಿತ್ತಲಿನ ಕಡೆ ನಡೆದೆ. ಅಲ್ಲಿದ್ದ ಗಿಡ ಮರಗಳು ನನ್ನ ಕಂಡು ನಗುತ್ತಿದ್ದವೋ ಅಥವಾ ಸಂತೈಸುತ್ತಿದ್ದವೋ ಒಂದು ತಿಳಿಯಲಿಲ್ಲ. ನಮ್ಮ ನಿಮ್ಮ ನಂಟು ಇಷ್ಟೇನಾ ಎನ್ನುವಂತೆ ಕತ್ತು ಎತ್ತಿ ಸುತ್ತಲಿನ ಪರಿಸರ ನೋಡ ತೊಡಗಿದೆ. ಯಾಕೋ ಯಾವ ಪ್ರತಿಕ್ರಿಯೆ ಬಂದಂತ್ತಿರಲಿಲ್ಲ ಬಂದಿದ್ದರೂ ನನಗೆ ತಲುಪಿರಲಿಲ್ಲ.
ಹೀಗೆ ಗಿಡ ಮರಗಳನ್ನೇ ದಿಟ್ಟಿಸಿ ನೋಡುತ್ತಿದ್ದ ನನ್ನ, ಸಾಕಮ್ಮ ಹಿತ್ತಲ ಬಾಗಿಲ ಬಳಿಯೇ ಗೋಡೆಗೊರಗಿ ನಿಂತು ನನ್ನ ದಿಟ್ಟಿಸಿ ನೋಡಿ, ಒತ್ತಿ ಬರುತ್ತಿದ್ದ ಕಂಬನಿಯನ್ನು ತನ್ನ ಅಂಗೈ ಅಲ್ಲಿ ಒರೆಸುತ್ತಾ, ತನಗೇನು ಅನ್ನಿಸಿಯೇ ಇಲ್ಲಾ ಎನ್ನುವಂತೆ ನನ್ನ ಬಳಿ ಬಂದು, ರೀ ಯಾಕ್ ಹಿಂಗ್ ಮಂಕಾಗಿ ಕೂತಿದ್ದೀರಾ, ಏನ್ ಆಯ್ತು ಎಂದು ಕೇಳಿದ ಸಾಕಮ್ಮನ ಮುಖ ನೋಡಿ ನಿಂಗೇನು ಗೊತ್ತೇ ಇಲ್ವಾ ಎಂದೇ. ಮಗನ ಸಂತೋಷನೇ ನಮ್ ಸಂತೋಷ ಅಲ್ವೇನ್ರಿ, ಅವ್ನು ಹುಟ್ಟಿ ಬೆಳೆದ ಮನೆ ಅವನಿಗೆ ಸಾಕಾಗಿದೆ, ನಾವ್ ತಾನೇ ಇನ್ನೆಷ್ಟ್ ದಿನ ಬದ್ಕಿರ್ತಿವಿ, ಮಗ ಆದ್ರೂ ಚೆನ್ನಾಗಿರ್ಲಿ, ಈ ಮನೆ ತೋಟ ಎಲ್ಲಾ ಮಾರ್ಬಿಡ್ರಿ ಎಂದು ಹೇಳಿ ಹೊರನಡೆದವಳ ಮುಖದಲ್ಲಿ ನೋವು ಎದ್ದು ಕಾಣುತ್ತಿತ್ತು. ಈ ಮನೆಗೆ ಅವಳು ಮಹಾಲಕ್ಷ್ಮಿ ಆಗಿದ್ದಳು. ಎಂಥ ಕಷ್ಟದಲ್ಲೂ ಕಣ್ಣೀರಾಕಿದ್ಧಿಲ್ಲ ಆಕೆ. ಆದರೆ ಇಂದು ಮನೆ-ಮನದಲ್ಲೆಲ್ಲಾ ಬರಿ ಸೂತಕದ ಛಾಯೆ ಆವರಿಸಿತ್ತು.
ಹೊರಗಿನಿಂದ ಬಂದ ಸಿದ್ದಾಂತ್, ನನಗೆ ಊಟ ಬೇಡ ಹಸಿವಿಲ್ಲ ಎಂದು ಹೇಳಿ ಮಲಗೋಕೆ ಚಾಪೆ ಹಾಸಿ, ಕೈ ಅಲ್ಲಿ ಇದ್ದ ಫೋನ್ ಅಲ್ಲಿ ಏನೋ ಮಾಡಿ, ತನ್ನ ಪಕ್ಕದಲ್ಲೇ ಇಟ್ಟು, ಅಂಗಾತ ಮಲಗಿ ಒಮ್ಮೆ ನಿಟ್ಟುಸಿರು ಬಿಟ್ಟು ಹಾಗೆ ಕಣ್ಣು ಮುಚ್ಚಿ ನಿದ್ದೆ ಮಾಡಲು ಪ್ರಯತ್ನಿಸುತ್ತಿದ್ದ, ಎಲ್ಲೋ ತುಂಬಾ ಸೆಕೆ, ಸೊಳ್ಳೆ ಇರೋದ್ರಿಂದ ಮಗಿಗೆ ನಿದ್ದೆ ಬರುತ್ತಿಲ್ಲ ಎಂದು ಮನದಲ್ಲೇ ಸಾಕಮ್ಮ ಅಂದು ಕೊಳ್ಳುತ್ತಿದ್ದಳು. ಮಗ ಹೇಳಿದ ಮಾತು ಕೇಳಿ, ಮೊದಲೇ ಬೇಸತ್ತಿದ್ದವರಿಗೆ ಊಟ ತಾನೇ ಹೇಗೆ ಸೇರುತ್ತದೆ? ನಿದ್ದೆ ಸಹ ಮಾಡದೆ ಹಾಗೆ ಇಬ್ಬರು ಮನೆಯ ಹೊರಗಡೆ ಇದ್ದ ಜಗಲಿ ಮೇಲೆ ಕಪ್ಪನೆ ಆಕಾಶದಲ್ಲಿ, ಒಂಟಿಯಾಗಿ ಹೊಳೆಯುತ್ತಿದ್ದ ಚಂದಿರನನ್ನೇ ನೋಡಿಕೊಂಡು ಹೇಗಪ್ಪಾ ಮುಂದಿನ ಜೀವನ ಎಂದು ಚಿಂತಿಸುತ್ತಿದ್ದರು.
ನಿದ್ದೆ ಮಾಡಲೆಂದು ಮಲಗಿದ್ದ ಸಿದ್ದಾಂತ್ ಗೆ ಯಾಕೋ ಇನ್ನು ನಿದ್ದೆ ಬಂದಿರಲಿಲ್ಲ, ಹಾಗೆ ಆ ಕಡೆ ಈ ಕಡೆ ಹೊರಳಾಡುತ್ತಿದ್ದ, ಏನೋ ಸಂಕಟ ಆದಂತೆ ತನ್ನೊಳಗೆ. ಹಾಗೆ ಕಣ್ಣು ಮುಚ್ಚಿ, ತನಗೆ ನೆನಪ್ಪಿದ್ದ ಬಾಲ್ಯದ ದಿನಗಳನ್ನು ನೆನೆಯ ತೊಡಗಿದ. ಅಷ್ಟೇನೂ ನೆನಪಿಲ್ಲ, ಮನೆಯಲ್ಲಿ ಹಾಸಿ ಹೊದ್ದುಕೊಳ್ಳುವಷ್ಟು ಬಡತನವಿತ್ತು, ಜೀತ ಬೇಡ ವಿದ್ಯೆ ಬೇಕು ಅಂತ ಅಪ್ಪ ಅಮ್ಮ ನನ್ನ ಸ್ಕೂಲ್ ಗೆ ಸೇರಿಸಿದ್ದರು. ಒಂದೆರಡು ಅಕ್ಷರ ಕಲಿತ್ತಿದ್ದೆ, ನನ್ನಪ್ಪ ನನ್ನಮ್ಮ ನನ್ನ ಮುಂದೆ ಸದಾ ಅಸಹಾಯಕರಂತೆ ನಿಲ್ಲುತ್ತಿದ್ದರು, ಇದು ಅವರ ಮುಗ್ದತೆನಾ? ಆದರೆ ನನಗೇಕೆ ಇದು ಅವಾಗೆಲ್ಲ ಒಂತರ ಕಿರಿಕಿರಿ ಆಗುತ್ತಿತ್ತು. ಥೂ ಎನ್ನುವಂತೆ ಮುಖ ಮಾಡುತ್ತಿದ್ದೆ. ನನ್ನಮ್ಮನ ಮುಖ ನೋಡಿದಾಗಲೆಲ್ಲ ಬನದ ಕರಡಿಯಂತೆ ಕಾಣುತ್ತಿದ್ದಳು, ನನಗೀಗ ಅನ್ನಿಸುತ್ತಿದ್ದೆ ನನ್ನ ಆರೈಕೆ, ಸುಖ-ಸಂತೋಷದ ನಡುವೆ ಅವಳು ತನ್ನನ್ನೇ ಮರೆತ್ತಿದ್ದಾಳಾ ಎಂದು. ನನ್ನಪ್ಪನ ಅರಿದ ಅಂಗಿ ಇಂದು ನನ್ನ ಮೇಲೆ blazer ಆಗಿದ್ಯಾ? ಅವರ ಸವೆದ ಚಪ್ಪಲಿ ಇವತ್ತು ನಾನು ಥೂ ಕೆಸರಾಗಿದೆ ಎಂದು ಹೊರಗಡೆ ಬಿಟ್ಟ ಶೂಸ್ ಹಾ? ಯಾವುದೊಂದು ಹಬ್ಬದ ಸಂಭ್ರಮ ಕಾಣದವರು, ಹಬ್ಬದೂಟ ಮಾಡಿ ಸವೆಯದವರು, ಹೊಸ ಬಟ್ಟೆ ತೊಟ್ಟು ಕುಣಿಯಲಿಲ್ಲ ಆದರೆ ಇಂದು ನನಗೆ ಬೆಲೆಯೇ ಕಟ್ಟಲಾಗದಷ್ಟು ಜೀವನ ಕೊಟ್ಟವರು. ಬಡವರಾಗಿ ಹುಟ್ಟೋದು ತಪ್ಪಲ್ಲ, ಆದರೆ ಬಡವನಾಗೆ ಸತ್ತರೆ ನೀನೇನು ಸಾಧಿಸಿಯೇ ಇಲ್ಲ ಎಂದು indirect ಆಗಿ ನನಗೆ ಕಲಿಸಿಕೊಟ್ಟವರು. ಎಲ್ಲರೆದುರು ನನ್ನ ಮಗ ಸಿದ್ದಾಂತ್, ಪೇಟೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಎದೆ ತಟ್ಟಿ ಹೇಳುತ್ತಿದ್ದ ನನ್ನ ತಂದೆಯ ಪರಿಚಯ ನಾ ಯಾರಿಗೂ ಮಾಡಿಸಲೇ ಇಲ್ಲ. ನನ್ನಮ್ಮ ಎಂದು ಎಲ್ಲೂ ನಾನು ಹೇಳಲೇ ಇಲ್ಲ. ಯಾಕಷ್ಟು ತಾತ್ಸಾರದ ಭಾವ ನನ್ನಲ್ಲಿತ್ತೋ ಗೊತ್ತಿಲ್ಲ. ಯಾರೂ ಮಾಡ್ದೆ ಇರೋದ್ ಮಾಡಿದ್ದಾರಾ ಅನ್ನೋ ಕೀಳರಿಮೆನಾ? ಒಂದು ಗೊತ್ತಿಲ್ಲ. ನನಗಾಗಿ ತಮ್ಮ ಈಡಿ ಜೀವನವನ್ನೇ ಮುಡಿಪಾಗಿಟ್ಟವರಿಗೆ ಇವತ್ತು ನಾನ್ ಏನ್ ಮಾಡಿದ್ದೀನಿ? ಆಗ ಬಡತನವಿತ್ತು ಆದರೆ ನೆಮ್ಮದಿ ಇಂದ ಇದ್ದರು, ಈಗ ನನ್ನ ಬಳಿ ಎಲ್ಲಾ ಇದೆ ಅನ್ಸುತ್ತೆ ಆದರೆ ನನ್ನ ಎತ್ತವರ ಮುಖದಲ್ಲಿ ಒಂದು ಸಣ್ಣ ನಗು ಸಹ ನಾ ತರಿಸಲಿಲ್ಲ. ನನ್ನಪ್ಪನ ಹೆಗಲ ಮೇಲೆ ಕೂತು ಕಾಣುತ್ತಿದ್ದ ಪ್ರಪಂಚ ಎಷ್ಟು ಸುಂದರವಾಗಿತ್ತು ಆದರೆ ಆ ಪ್ರಪಂಚ ಯಾಕೆ ಈಗ ನನಗೆ ಯಾವ ಕಾರ್ ಅಲ್ಲಿ ತಿರ್ಗುದ್ರು ಸಿಕ್ತ ಇಲ್ಲ. ಬದಲಾಗಿರೋದು ಸಮಯನಾ ಅಥವಾ ನನ್ನ ಮನಸ್ಥಿತಿನಾ? ಇವರಿಗಾಗಿ ನಾನು ಏನು ತಾನೇ ಮಾಡಲು ಸಾಧ್ಯ, ಏನು ತಾನೇ ನೀಡಬಲ್ಲೆ ಎಂದು ಚಿಂತಿಸುತ್ತಿದ್ದ ಸಿದ್ದಾಂತ್ ಯಾವಾಗ ನಿದ್ದೆಗೆ ಜಾರಿದ್ದನೋ ತಿಳಿಯಲಿಲ್ಲ. ಹೊರಗಡೆ ಜಗಲಿ ಮೇಲೆ ಕೂತಿದ್ದ ಸಾಕಮ್ಮ ಮತ್ತು ರಾಮಯ್ಯ ಅಲ್ಲೇ ನಿದ್ದೆಗೆ ಜಾರಿದ್ದರು.
ಪದೇ ಪದೇ ಒಂದೇ ಸಮನೆ ಸದ್ದು ಮಾಡುತ್ತಾ ಇದ್ದ ಅಲಾರ್ಮ್ ಅನ್ನು ಸಿದ್ದಾಂತ್ ಆಫ್ ಮಾಡಿ, ಹೊರಗಡೆ ಜಗಲಿ ಮೇಲೆ ಕೂತಿದ್ದ ಸಾಕಮ್ಮ ಮತ್ತು ರಾಮಯ್ಯನನ್ನೂ ನೋಡಿ ನಂಗೆ ಅರ್ಜೆಂಟ್ ಕೆಲಸ ಬಂದಿದೆ ಹೊರಡ್ಬೇಕು, ನಾನು ಶ್ಯಾಮಣ್ಣ ಅತ್ರ ಎಲ್ಲಾ ಮಾತಾಡಿದ್ದೀನಿ ಎಂದು ಗಡಿಬಿಡಿಯಲ್ಲಿ ಕಾರ್ ಸ್ಟಾರ್ಟ್ ಮಾಡಿಕೊಂಡು ಹೊರಟು ಹೋದ. ಕಾರ್ ಸದ್ದಿಗೆ ಎದ್ದ ರಾಮಯ್ಯ ಅಯ್ಯಯ್ಯೋ ತುಂಬಾ ತಡ ಆಗೋಗಿದೆ, ಸಾಕಮ್ಮ ಎದ್ದೇಳು ಹೊತ್ತಾಗಿದೆ, ಮಗ ಗಾಡಿ ಕರ್ಕೊಂಡ್ ಬರೋಕೆ ಹೋಗಿದ್ದಾನೆ. ನಾವು ಬೇಗ ಎಲ್ಲ ಸಾಮಾನ್ ಕಟ್ಕೊಳ್ಬೇಕು ತಡ ಆಗುತ್ತೆ ಇಲ್ಲ ಅಂದ್ರೆ ಎನ್ನುತ್ತಾ ಇಬ್ಬರು ಎದ್ದು ಒಳಗಡೆ ಹೋದರು.
ಕೊನೆಯ ದಿನ ಎನ್ನುವಂತೆ ರಾಮಯ್ಯ ಹಸುವಿನ ಮೈ ತೊಳೆಯುತ್ತಿದ್ದ, ಸಾಕಮ್ಮ ಅಳುತ್ತಾ ಕೊಟ್ಟಿಗೆಯಲ್ಲಿ ಕಸ ಗುಡಿಸುತ್ತಿದ್ದಳು. ಯಾಕೋ ಮನೆ ಹಳೆಯದಾದಷ್ಟು ಬಂಧ ಗಟ್ಟಿಯಾಗಿತ್ತು, ಆದರೆ ಇಂದು ಇದಕ್ಕೆಲ್ಲ ವಿದಾಯ ಹೇಳಲೇಬೇಕಾ ಎನ್ನುತ್ತಾ ಸಗಣಿಯನ್ನು ತಿಪ್ಪೆಗೆ ಹಾಕಲು ಹೋದಳು. ಯಾವುದೋ ಗಾಡಿ ಜೋರಾಗಿ ಸದ್ದು ಮಾಡುತ್ತಾ ಗರಕ್ ಎಂದು ಮನೆ ಮುಂದೆ ಬಂದು ನಿಂತ್ತಿತ್ತು. ಸಾಕಮ್ಮ ಮತ್ತು ರಾಮಯ್ಯ ಅಯ್ಯೋ ಇಷ್ಟು ಬೇಗ ಗಾಡಿ ಬಂತ ಎಂದು ಬೇಸರದಿಂದ ಬಂದು ನೋಡಿದರು, ಹೌದು ಮನೆ ತೋಟ ಕೊಳ್ಳುವ ಶ್ಯಾಮಣ್ಣ ಏನ್ ರಾಮಯ್ಯ ಆರಾಮಿದ್ಯಾ ಎನ್ನುತ್ತಾ ನಗುತ್ತಾ ಮನೆ ಒಳಗೆ ಬಂದು ಹೇಳುವ ಮೊದಲೇ ನೆಲದ ಮೇಲೆ ಮಂಡಿಯೂರುತ್ತ ಕೂತ. ಮನೆ ಕೊಳ್ಳುವ ಭರದಲ್ಲಿ ಇದ್ದಾನೆ ಅವನು ಸಂತೋಷ ಪಡುವುದರಲ್ಲಿ ತಪ್ಪಿಲ್ಲ ಎಂದು ರಾಮಯ್ಯ ಮನದಲ್ಲೇ ಅಂದುಕೊಂಡ. ಶ್ಯಾಮಣ್ಣ, ಮಗ ಇಲ್ಲೇ ಎಲ್ಲೋ ಹೋಗಿದ್ದಾನೆ ಬಂದುಬಿಡುತ್ತಾನೆ ಎನ್ನುವಾಗಲೇ ಶ್ಯಾಮಣ್ಣ ಎದ್ದು ಅಯ್ಯೋ ಏನ್ ಪರವಾಗಿಲ್ಲ ನಿಧಾನವಾಗೇ ಬರಲಿ, ನನಗೆ ಒಸಿ ಕೆಲಸ ಇದೆ ಹೊರಡ್ಬೇಕು, ಈ ಕಾಗದ ಪತ್ರ ಎಲ್ಲಾ ತಗೋಳಿ. ನಾನ್ ಇನ್ನ ಹೊರಡ್ತಿನಿ ಅಂದ. ಏನೊಂದು ಅರಿಯದಂತೆ ಸಾಕಮ್ಮ ಮತ್ತು ರಾಮಯ್ಯ ಮುಖ-ಮುಖ ನೋಡಿಕೊಳ್ಳುತ್ತಿದ್ದರು. ಲೋ ರಾಮಯ್ಯ ಸಿದ್ದಾಂತ್ ಅಂತ ಮಗ ಸಿಗೋಕು ಪುಣ್ಯ ಮಾಡಿರ್ಬೇಕು. ತಗೋ ಈ ಕಾಗದ ಪತ್ರ ಇದು ಹೊಲದ ಪತ್ರ, ನೋಡು ನಿನ್ ಮಗ ನಿಂಗೆ ಅಂತ 5 ಎಕ್ರೆ ಜಮೀನ್ ತಗೊಂಡವನೇ, ನೀನು ಇನ್ನು ಅಲ್ಲೇ ವ್ಯವಸಾಯ ಮಾಡ್ಕೊಂಡ್ ದಿಲ್ದಾರ್ ಆಗಿ ಇರಬಹುದು ಹ ಹಾಗೆ ನಿನ್ ಮಗ ಹೇಳ್ದ ಮನೆ ಗೋಡೆ ಸ್ವಲ್ಪ ದುರಸ್ಥಿ ಅಲ್ಲಿದೆ ಅಂತ, ಸರಿ ಮಾಡ್ಸಿ ಕೊಡಿ ಅಂತ ಹೇಳಿದ್ದಿನಿ. ಲಕ್ಕಣ್ಣ ಬಂದು ಮಾಡಿ ಕೊಡ್ತಾನೆ. ನೋಡು ಎಂತ ಮಗನ್ನ ಪಡೆದ್ದಿದ್ದೀಯ. ನನ್ ಮಗನು ಅವ್ನೆ ಹಳ್ಳಿ ಬಿಟ್ಟು ದಿಲ್ಲಿ ಸೇರನಾ ಅಂತಾನೆ, ಮುಂಡೇದ್ಕೆ ಹಳ್ಳಿ ಹಾಡು-ಪಾಡು ಏನ್ ಗೊತ್ತು ಎನ್ನುತ್ತಾ ಒಂದೇ ಸಮನೆ ತನ್ನ ಮಗನನ್ನು ಶಪಿಸುತ್ತಾ ಎದ್ದು ಹೋರಟ. ಸಾಕಮ್ಮ ಮತ್ತು ರಾಮಯ್ಯನಿಗೆ ನಂಬಲು ಆಸಾದ್ಯ ಎನಿಸ್ಸಿತ್ತು. ಕಣ್ಣುಗಳಲ್ಲಿ ಆನಂದಬಾಷ್ಪ ತುಂಬಿತ್ತು. ಮನದಲ್ಲೇ ಇಬ್ಬರು ಮಗನನ್ನು ಕೊಂಡಾಡುತ್ತಿದ್ದರು. ಏನೊಂದು ಹೇಳಲು ತೋಚದೆ ಅವಕ್ಕಾಗಿ ನಿಂತರು. ಹೇಳೋಕೆ ಆಗದಷ್ಟು ಖುಷಿ ಸಾಕಮ್ಮ ಮತ್ತು ರಾಮಯ್ಯನಿಗೆ. ಆಗುತ್ತಿದ್ದ ತಪ್ಪನ್ನು ಸರಿ ಪಡಿಸಿದ ಸಮಾಧಾನ ಹಾಗೂ ನೀರಳ ಮೌನ ಸಿದ್ಧಾಂತ್ ಮನದಲ್ಲಿ. ಒಮ್ಮೆ ಇಬ್ಬರು ನಿಟ್ಟುಸಿರು ಬಿಟ್ಟು ಮನದಲ್ಲೇ ತಾಯಿ ಚೌಡವ್ವನಿಗೆ ನಮಸ್ಕರಿಸಿದರು.
ಬೆಂಗ್ಳೂರಿಗೆ ಹೊರಟ ಸಿದ್ಧಾಂತ್ ಅಲ್ಲೇ ಕಾರ್ ನಿಲ್ಲಿಸಿ ಮನೆ ಬಳಿ ಇದ್ದ ಮರದ ಮರೆಯಲ್ಲಿ ನಿಂತು
ಮೊದಲ ಭಾರಿ ಹೆತ್ತವರ ಮುಖದಲ್ಲಿ ನಗು ತರಿಸಿದ್ದನ್ನು ಕಂಡು, ತನ್ನೆಲ್ಲಾ ತಪ್ಪನ್ನು ನನ್ನವ್ವ ಅಪ್ಪ ಕ್ಷಮಿಸಿದಂತೆ ಭಾಸವಾಗಿ, ನಿಟ್ಟುಸಿರು ಬಿಡುತ್ತಾ ಮಂದಹಾಸ ಬೀರುತ್ತಾ ಕಾರ್ ಸ್ಟಾರ್ಟ್ ಮಾಡಿ ಹೊರಟವನ ಮುಖದಲ್ಲಿ ನಗು ಮಾಸಲೆ ಇಲ್ಲ.
–ಅನಘ aka ಸೌಮ್ಯ ರಾಮಕೃಷ್ಣ