ನಾನು ಯಾರು? ನೀನು ಯಾರು?
ಇಂದಿನ ಪ್ರಪಂಚದಲ್ಲಿ ಪ್ರತಿಯೊಬ್ಬರು ತಾನೇ ಸತ್ಯ, ತಾನೇ ನಿತ್ಯ. ತನ್ನದೇ ಸರಿಯೆಂದು ವಾದಿಸುವ ಮನೋವೃತ್ತಿಯನ್ನು ರಕ್ತಗತವಾಗಿ ಮಾಡಿಕೊಂಡಿದ್ದಾರೆ. ನಾನು ಹಾಗೆ ಹೀಗೆ ಏನೇನೋ ಮಾಡಿದೆ, ಎಲ್ಲವೂ ನನ್ನಿಂದಲೇ ಎಂದು ಒಣ ಜಂಭವನ್ನು ಕೊಚ್ಚಿಕೊಳ್ಳುತ್ತಾರೆ, ಅಥವಾ
ಕೊಚ್ಚಿಕೊಳ್ಳುತ್ತೇವೆ.ಆದರೆ ಆತ್ಮ ವಿಮರ್ಶೆ ಮಾಡಿಕೊಂಡಾಗ ಆತ್ಮ ಎಂದಿಗೂ ಸುಳ್ಳು ಹೇಳುವುದಿಲ್ಲ.ಆತ್ಮಪ್ರಜ್ಞೆಯು ಅಪರಾಧ ಪ್ರಜ್ಞೆಗೆ ಬಡದೆಚ್ಚರಿಸಿದರೂ ನಾನು ಯಾರು? ನೀನು ಯಾರು? ನನ್ನಿಂದ ನಿನಗೇನಾಗಿದೆ? ಮೊದಲು ಪ್ರಶ್ನಿಸಿಕೊಳ್ಳಬೇಕಾಗಿದೆ.ತದನಂತರ ನಿನ್ನಿಂದ ನನಗೇನಾಗಿದೆ? ಎಂಬುದನ್ನು ಅರಿಯಬೇಕು. ಈ ಉಭಯಗಳನ್ನು ಅರಿತು ನಡೆದರೆ ಮಾನವ. ಮರೆತು ನಡೆದರೆ ದಾನವ.
ಎಲ್ಲ ಎಲ್ಲವನರಿದು ಫಲವೇನಯ್ಯ, ತನ್ನ ತಾನರಿಯಬೇಕಲ್ಲವೇ? ತನ್ನಲ್ಲಿ ಅರಿವು ಸ್ವಯವಾಗಿರಲು, ಅನ್ಯರ ಕೇಳಲುಂಟೇ? ಚೆನ್ನಮಲ್ಲಿಕಾರ್ಜುನ, ನೀ ಅರಿವಾಗಿ ಮುಂದುದೋರಿದ ಕಾರಣ ನಿಮ್ಮಿಂದಲರಿದೆನಯ್ಯಾ ಪ್ರಭುವೇ.
ಅರಿವೇ ಗುರು ಎನ್ನುತ್ತೇವೆ. ಬಹಳ ಓದಿದವರು ಪ್ರಜ್ಞಾವಂತರೇ? ಬುದ್ಧಿವಂತರೇ? ಏನೆಲ್ಲ ಓದಿದರೂ ಸಾಮಾನ್ಯ ಜ್ಞಾನ ಇರದೇ ಇದ್ದರೆ ಅಲ್ಲಿ ಅಹಂಭಾವ ಒಡಮೂಡುತ್ತದೆ. ನಾನು ಹೇಳಿದ್ದೇ ವೇದವಾಕ್ಯ, ನಾನೇ ಬಲವಂತ, ಬುದ್ಧಿವಂತ, ವಿಜ್ಞಾನಿ, ಮಹಾಜ್ಞಾನಿ, ತತ್ವಜ್ಞಾನಿ ಎಂದು ಪರಿಭಾವಿಸುವ ಮೂರ್ಖರಿಗೆ ಅಕ್ಕಮಹಾದೇವಿಯ ವಚನ ಅತ್ಯಂತ ಸೂಕ್ತವಾಗಿದೆ. ತನ್ನ ತಾನರಿದೊಡೆ ತಾನೇ ದೇವ ನಾವು ನಮ್ಮ ಬುದ್ಧಿಶಕ್ತಿಯನ್ನು ವಿನಾಶಕ್ಕೆ ಬಳಸದೆ ಸಮಾಜದ ಹಿತಕ್ಕೆ ಬಳಸಬೇಕು. ನಾವು ಎಷ್ಟೇ ಪ್ರಾಮಾಣಿಕರಾಗಿದ್ದರೂ ನಮ್ಮಿಂದ ಕೆಲವೊಂದು ಅಚಾತುರ್ಯ ನಡೆದಿರುತ್ತದೆ. ಅದನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುವುದು ಮೂರ್ಖತನದ ಪರಮಾವಧಿ.
ಒಮ್ಮೆ ಸರ್ ಐಸಾಕ್ ನ್ಯೂಟನ್ ಎಂಬ ಮಹಾ ವಿಜ್ಞಾನಿ. ಮನೆಯಲ್ಲಿರುವ ಓದುವ ಕೋಣೆಯ ಬಾಗಿಲಿಗೆ ಚಿಕ್ಕ-ಚಿಕ್ಕ ನಾಲ್ಕು ರಂಧ್ರಗಳನ್ನು ಕೊರೆಯುತ್ತಿದ್ದನು. ಇದನ್ನು ಕಂಡ ಮನೆಯ ಕೆಲಸದವನು ಈಗಾಗಲೇ ಬಾಗಿಲದಲ್ಲಿ ದೊಡ್ಡ ರಂಧ್ರವನ್ನು ಕೊರೆದು, ಈಗ ಚಿಕ್ಕ-ಚಿಕ್ಕ ರಂಧ್ರಗಳನ್ನು ಕೊರೆಯಲು ಕಾರಣವೇನೆಂದು ಕೇಳುತ್ತಾನೆ. ವಿಜ್ಞಾನಿ ಅಷ್ಟೇ ಅಲ್ಲದೆ, ಮಾನವಿಯತೆಯ ಮಾನವತಾವಾದಿಯಾಗಿದ್ದ ನ್ಯೂಟನ್ನರು ಕೆಲಸದವನಿಗೆ ಹೀಗೆ ಹೇಳುತ್ತಾರೆ. ನಾನು ಪ್ರತಿನಿತ್ಯ ಮನೆಯಲ್ಲಿದ್ದಾಗ ನಾನು ಸಾಕಿದ ಬೆಕ್ಕು ತನ್ನಷ್ಟಕ್ಕೆ ತಾನು ಹೊರಗೆ ಹೋಗಿಬರಲು ದೊಡ್ಡ ರಂಧ್ರವನ್ನು ಕೊರೆದಿದ್ದೆ. ಆದರೆ ಈಗ ಅದು ನಾಲ್ಕು ಮರಿಗಳನ್ನು ಹಾಕಿದೆ, ಪಾಪ ಅವೂ ಕೂಡ ತಮ್ಮ ತಮ್ಮ ರಂಧ್ರಗಳ ಮೂಲಕ ಹೋಗಲೆಂದು ಈ ಚಿಕ್ಕ-ಚಿಕ್ಕ 4 ರಂದ್ರಗಳನ್ನು ಕೊರೆಯುತ್ತಿದ್ದೇನೆ ಎಂದು ಹೇಳಿದರಂತೆ. ಕೆಲಸದವನು ಅಂತಹ ದೊಡ್ಡ ರಂಧ್ರದ ಮುಖಾಂತರ ತಾಯಿ ಬೆಕ್ಕು ಹೋಗುತ್ತದೆಯಾದರೆ ಈ ಚಿಕ್ಕ ಮರಿಗಳು ಕೂಡ ಅದರಲ್ಲಿ ಹೋಗುವುದಿಲ್ಲವೇ? ಎಂದು ಪ್ರಶ್ನಿಸುತ್ತಾನೆ. ಆಗ ನ್ಯೂಟನ್ ತನ್ನ ಮೂರ್ಖತನವನ್ನು ಕೆಲಸದಾಳಿನ ಮುಂದೆ ಒಪ್ಪಿಕೊಳ್ಳುತ್ತಾನೆ ಇದರ ತಾತ್ಪರ್ಯ ಎಷ್ಟೇ ದೊಡ್ಡವರಾಗಿದ್ದರು ತಪ್ಪು ನಡೆಯುವುದು ಸಹಜ. ತಪ್ಪನ್ನು ಒಪ್ಪಿಕೊಳ್ಳುವುದು ಮಾನವನ ದೊಡ್ಡ ಗುಣ .
ಅರಿವು ಅರಿವೆನ್ನುತ್ತಿಪ್ಪಿರಿ ಅರಿವು ಸಾಮಾನ್ಯವೇ? ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ, ನಿಂದ ಹೆಜ್ಜೆಯನರಿಯಬಾರದು. ಮುಂದಣ ಹೆಜ್ಜೆಯಳಿಯಲ್ಲದೆ ಒಂದು ಪಾದ ನೆಲೆಗೊಳ್ಳದು. ನೆಲನ ಬಿಟ್ಟು ಆಕಾಶದಲ್ಲಿ ನಿಂದು, ಮುಗಿಲೊಳಗೆ ಮಿಂಚಿದಲ್ಲದೆ ತಾನಾಗಬಾರದು ಗುಹೇಶ್ವರನೆಂಬುದು ಬರಿದೆ ಬಹುದೆ ಹೇಳಿರೆ?
ಅರಿವು ಆಚಾರದ ಬಗೆಗೆ ಮಾತನಾಡುವ ಮಹಾನುಭಾವರ ಬಗೆಗೆ ಅಲ್ಲಮ ಪ್ರಭುಗಳು ಬೆಂಡೆತ್ತಿದ್ದಾರೆ. ಮನುಷ್ಯ ತಾನು ನಡೆದು ಬಂದ ದಾರಿಯ ಹೆಜ್ಜೆ ಗುರುತುಗಳನ್ನು ಆಗಾಗ ನೋಡುತ್ತಿರಬೇಕು.ಅದನ್ನು ಬಿಟ್ಟು ಈಗ ನಿಂತ ಹೆಜ್ಜೆ ಮೇಲೆ ಅಟ್ಟಹಾಸ ಮೆರೆಯಬಾರದು.ಅಧಿಕಾರ, ಅಂತಸ್ತು ಶಾಶ್ವತವಲ್ಲ.
ಅಯ್ಯಾ,ತನ್ನ ತಾನರಿದು,ತನ್ನ ಅಜ್ಞಾನ ಆಶಾಪಾಶ ಅನಾಚಾರ ಅಸತ್ಯ ನಡೆ ನುಡಿಗಳ ತಾನರಿದು,ತನ್ನ ದುರ್ಗುಣಗಳ ನೀಗಿ ನಿಜದಲ್ಲಿ ನಿಂದಡೆ,ತಾನೇ ಮಾಯಾತೀತ,ಗುಣಾತೀತ,ತಾನೇ ಸುಗುಣ ನಿರ್ಗುಣಕ್ಕಾದರ ಮೂರ್ತಿ,ತಾನೇ ಸಾಕಾರ ನಿರಾಕಾರಕ್ಕೆ ಚೈತನ್ಯಮೂರ್ತಿ ನಿಜವಸ್ತು ನೋಡಾ ಅಪ್ರಮಾಣ ಕೂಡಲಸಂಗಮದೇವಾ
ಪ್ರಸ್ತುತ ಮೇಲಿನ ವಚನದಲ್ಲಿ ನಾವು ಮತ್ತೊಬ್ಬರ ಮೇಲೆ ಅಪವಾದ ಹೇರುವ ಮೊದಲು ನಾನ್ಯಾರು, ನನ್ನಲ್ಲಿರುವ ದುರ್ಗುಣಗಳ ಬಗೆಗೆ ಪರಾಮರ್ಶಿಸಿಬೇಕು. ಇದೇ ನಿಜವಾದ ಶ್ರೇಷ್ಟಮಟ್ಟದ ವ್ಯಕ್ತಿಯ ಬದುಕು ಬಾಳಿನ ದಿವ್ಯ ಸಂದೇಶ.
ಅರಿದೆವರಿದೆಂವಿರಿ! ಅರಿದ ಪರಿಯೆಂತು ಹೇಳಿರಿ? ಅರಿದರರಿದೆವೆಂಬರೇ? ಅರಿಯಬಾರದ ಘನವನರಿದವರು ಅರಿಯದಂತಿಪ್ಪರು ಗುಹೇಶ್ವರಾ
ಎಲ್ಲಾ ಬಲ್ಲವರಂತೆ ಸೋಗು ಹಾಕಿರುವ ಸೋಗಲಾಡಿಗಳಿದ್ದಾರೆ.ಆದರೆ *ತುಂಬಿದ ಕೊಡ ತುಳುಕುವುದಿಲ್ಲ* ಎನ್ನುವಂತೆ ನಾವು ಬದುಕಬೇಕು. ಎಲ್ಲವನ್ನು ಅರಿತವರು ಇಲ್ಲದ ಆಡಂಬರವಿಲ್ಲದೆ ಇದ್ದು ಇಲ್ಲದಂತೆ ಇರುವರು.
ಎಲವೋ ಎಲವೋ, ಪಾಪಕರ್ಮವ ಮಾಡಿದವನೇ, ಎಲವೊ ಎಲವೋ ಬ್ರಹ್ಮ ಹತ್ಯವ ಮಾಡಿದವನೇ, ಒಮ್ಮೆ ಶರಣೆನ್ನೆಲ್ಲವೋ! ಒಮ್ಮೆ ಶರಣೆಂದರೆ ಪಾಪಕರ್ಮ ಓಡುವವು.ಸರ್ವ ಪ್ರಾಯಶ್ಚಿತಕ್ಕೆ ಹೊನ್ನ ಪರ್ವತಂಗಳೈದವು ಒರ್ವಂಗೆ ಶೆರಣೆನ್ನು ನಮ್ಮ ಕೂಡಲಸಂಗಮದೇವಂಗೆ!
ನಾವು ಈಗಾಗಲೇ ಹಲವಾರು ತಪ್ಪು ಮಾಡಿದ್ದೇವೆ.ಅವುಗಳ ಪ್ರಾಯಶ್ಚಿತ್ತಕ್ಕಾಗಿ ಶರಣೆನ್ನು ಇಲ್ಲದಿದ್ದರೆ ವಿನಾಶ ಕಾಲೇ ವಿಪರೀತ ಬುದ್ಧಿ ಎನ್ನುವಂತಾಗುವುದು.
-ರವೀಂದ್ರ ರುದ್ರಪ್ಪ ಪಟ್ಟಣ
ಮುಳಗುಂದ—–ರಾಮದುರ್ಗ
9481931842.