ಬಸವೇಶ್ವರರ ವಚನ “ಇವನಾರವ ಇವನಾರವ”
ಇವನಾರವ ಇವನಾರವ | ಇವನಾರವನೆಂದೆನಿಸದಿರಯ್ಯಾ
ಇವ ನಮ್ಮವ ಇವ ನಮ್ಮವ | ಇವ ನಮ್ಮವನೆಂದನಿಸಯ್ಯಾ
ಕೂಡಲಸಂಗಮದೇವಾ | ನಿಮ್ಮ ಮನೆಯ ಮಗನೆಂದೆನಿಸಯ್ಯಾ
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-16 / ವಚನ ಸಂಖ್ಯೆ-62)
ಇವರು ನಮ್ಮೋರೆ, ಯೇ ಹಮಾರಾ ಆದ್ಮಿ ಹೈ, ಮಾಝಾ ಮಾಣುಷ ಆಹೆ, ಈ ಪೈಯ್ಯಾ ನಮ್ಮದಾಂ ಆಳ್, ನಾ ಮಾವೋಳ್ಳು. ಮಾ ಮಾಣುಷ್, ಯೇ ಹಮಾರೂ ಛೇ ಈ ಶಬ್ದಗಳು ಸಾಮಾನ್ಯವಾಗಿ ಭಾರತದ ಉದ್ದಗಲಕ್ಕೂ ಕೇಳಿ ಬರುವಂಥವು. ಅಂದರೆ ಇವರು ನಮ್ಮ ಜಾತಿಯವರು, ನಮ್ಮವರು, ನಮಗೆ ಬೇಕಾದವರು, ನಮಗೆ ಹತ್ತಿರದವರು ಅನ್ನೋ ಒಳ ಅರ್ಥ. ಏನೇ ಅಂದರೂ ಈ ಆತ್ಮೀಯತೆಯ ಬಂಧನ ಜಾತೀಯತೆಯನ್ನು ಹೊಂದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಜಿಡ್ಡುಗಟ್ಟಿದ್ದ ಶ್ರೇಣೀಕೃತ ಸಮಾಜಕ್ಕೆ ವೈಚಾರಿಕತೆಯ ಸ್ಪರ್ಷ ನೀಡಿ ಹೊಸ ಸಮ ಸಮಾಜವನ್ನು ನಿರ್ಮಿಸುವಲ್ಲಿ ಶ್ರಮವಹಿಸಿದ ಬಸವಾದಿ ಶರಣರ ಜೀವಿತದ 12 ನೇ ಶತಮಾನದ ಕಾಲಾವಧಿ ಕರ್ನಾಟಕದ ಇತಿಹಾಸದಲ್ಲಿ ವಿಶಿಷ್ಠವಾದ ಕಾಲಘಟ್ಟ.
ಸರ್ವ ಸಮಾನತೆಯ ಹರಿಕಾರರಾದ ಬಸವೇಶ್ವರರು ಇಂಥ ಶ್ರೇಣೀಕೃತ ಸಮಾಜದ ಸಂಕೋಲೆಗಳನ್ನು ಕಿತ್ತೊಗೆದು ಎಲ್ಲರನ್ನು ಅಪ್ಪಿಕೊಂಡು ಒಪ್ಪಿಕೊಂಡು ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತಿದವರು. ಸಮಾನತೆಯ ಬೀಜ ಬಿತ್ತಿ, ಶೋಷಣೆ ಮತ್ತು ಮೂಢನಂಬಿಕೆಗಳ ವಿರುದ್ಧ ಕ್ರಾಂತಿಯನ್ನು ಮಾಡಿದವರು ಬಸವೇಶ್ವರರು. ಆಚಾರಕ್ಕೆ ಮತ್ತು ವಿಚಾರಕ್ಕೆ ಬಸವೇಶ್ವರರು ಪ್ರಾಮುಖ್ಯತೆಯನ್ನು ನೀಡಿದರು. ಮನುಷ್ಯನ ಯೋಗ್ಯತೆಯನ್ನು ಅಳೆಯುವುದು ಅವರ ಜನ್ಮ ಅಥವಾ ಜಾತಿಯಿಂದಲ್ಲ. ಅವನ ಆಚಾರ ವಿಚಾರಗಳಿಂದ, ಗುಣ ಧರ್ಮಗಳಿಂದ ಎಂದು ಹೇಳಿದ್ದಲ್ಲದೇ ನುಡಿದಂತೆ ನಡೆದವರು ಬಸವೇಶ್ವರರು.
ಆವ ಕುಲವಾದಡೇನು? | ಶಿವಲಿಂಗವಿದ್ದವನೆ ಕುಲಜನು
ಕುಲವನರಸುವರೆ ಶರಣರಲ್ಲಿ | ಜಾತಿ ಸಂಕರನಾದ ಬಳಿಕ?
ಶಿವಧರ್ಮ ಕುಲೇ ಜಾತಃ | ಪುನರ್ಜನ್ಮ ವಿವರ್ಜಿತಃ
ಉಮಾ ಮಾತಾ ಪಿತ ರುದ್ರಃ | ಐಶ್ವರ್ಯಂ ಕುಲಮೇವಚ ಎಂದುದಾಗಿ
ಒಕ್ಕುದ ಕೊಂಬೆನವರಲ್ಲಿ | ಕೂಸ ಕೊಡುವೆ
ಕೂಡಲಸಂಗಮದೇವಾ | ನಂಬುವೆ ನಿಮ್ಮ ಶರಣನು
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-66 / ವಚನ ಸಂಖ್ಯೆ-718)
ಕುಲವನರಸುವರೆ ಶರಣರಲ್ಲಿ ಜಾತಿ ಸಂಕರನಾದ ಬಳಿಕ? ಎಂದ ಬಸವೇಶ್ವರರು ಕಾಯಕ ಯೋಗಿಗಳನ್ನು ಒಟ್ಟುಗೂಡಿಸಿ ಅವರ ಕಾಯಕವನ್ನು ದೈವತ್ವಕ್ಕೆ ಹೋಲಿಸುತ್ತಾರೆ. ಎಲ್ಲ ಕುಶಲಕರ್ಮಿಗಳನ್ನು “ಆಯಗಾರರು” ಎಂಬ ವಿಶಿಷ್ಠ ಹೆಸರನ್ನು ಬಳಸಿದ ಬಸವೇಶ್ವರರು ಭಕ್ತಿ ಚಳುವಳಿಯ ಮೂಲಕ ತಂದ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ಕ್ರಾಂತಿ ಇಡೀ ವಿಶ್ವದಲ್ಲಿಯೇ ಅತ್ಯದ್ಭುತ. ಎಲ್ಲರನ್ನೂ ಜಗತ್ತಿನ ಮೊದಲನೇ ಆಧ್ಯಾತ್ಮಿಕ ಪಾರ್ಲಿಮೆಂಟ್ ಎಂದು ಕರೆಯಿಸಿಕೊಂಡ ಅನುಭವ ಮಂಟಪಕ್ಕೆ ಕರೆ ತಂದರು.
ಬಸವೇಶ್ವರರ “ಇವನಾರವ ಇವನಾರವ” ಎನ್ನುವ ಈ ವಚನದಲ್ಲಿ ಅಲಂಕಾರಗಳನ್ನು ಕಾಣಬಹುದು. ಹಾಗಾಗಿ ಬಸವೇಶ್ವರರ ಈ ವಚನ ವಿಶ್ಲೇಷಣೆಗೆ ಮೊದಲು ಕನ್ನಡ ಭಾಷೆಯ ವ್ಯಾಕರಣದಲ್ಲಿ “ಅಲಂಕಾರ” ಗಳನ್ನು ನೋಡಿಕೊಂಡು ಮುಂದೆ ಹೋಗೋಣ.
ಚಂದವಾಗಿ ಅಂದವಾಗಿ ಕಾಣಲು ಉಡುಗೆ, ತೊಡುಗೆಗಳಿಂದ ಭೂಷಿತನಾಗುವಂತೆ ಕಾವ್ಯವು ಆಕರ್ಷಕವಾಗಲು ಅರ್ಥವನ್ನು ಹೆಚ್ಚಿಸಲು ಮಾಡುವ ಶಬ್ದಗಳ ಪ್ರಯೋಗವೇ ಅಲಂಕಾರ. ಅರ್ಥಗರ್ಭಿತ ಶಬ್ದಗಳಿಂದ ಕೂಡಿದರೆ ಅದು “ಅರ್ಥಾಲಂಕಾರ” ಮತ್ತು ಶಬ್ದ ಅಥವಾ ವರ್ಣಗಳಿಂದ ಕಾವ್ಯದ ಸೊಬಗನ್ನು ಹಚ್ಚಿಸಿದರೆ ಅದು “ಶಬ್ದಾಲಂಕಾರ” ಎಂದು ಸ್ಥೂಲವಾಗಿ ಹೇಳಬಹುದು.
ಶಬ್ದಾಲಂಕಾರದಲ್ಲಿ ಪ್ರಮುಖವಾಗಿ ಮೂರು ವಿಧ.
ಅನುಪ್ರಾಸ:
o ವೃತ್ತಾನುಪ್ರಾಸ: ಒಂದೇ ಪದ ಪುನರಾವರ್ತನೆಯಾಗುತ್ತದೆ.
o ಛೇಕಾನುಪ್ರಾಸ: ಒಂದೇ ಪದ ಎರಡು ಬಾರಿ ಪುನರಾವರ್ತನೆಯಾಗುತ್ತದೆ.
ಯಮಕ: ಒಂದೇ ಪದ ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಪುನರಾವರ್ತನೆಯಾಗುವುದು.
ಚಿತ್ರ ಕವಿತ್ವ: ಅಕ್ಷರಗಳನ್ನು ಕುಶಲತೆಯಿಂದ ಪ್ರಯೋಗ ಮಾಡುವುದು.
ಕಾವ್ಯದ ಆಂತರಿಕ ಸೌಂದರ್ಯವನ್ನು ಹೆಚ್ಚಿಸಲು ಮಾಡುವ ಶಬ್ದ ಪ್ರಯೋಗವು ಕಾವ್ಯದ ಸೊಬಗನ್ನು ಹೆಚ್ಚಿಸುವುದು ಅರ್ಥಾಲಂಕಾರದ ವಿಶೇಷತೆ. ಅರ್ಥಾಲಂಕಾರ ಕಾವ್ಯಗಳಲ್ಲಿ ಪ್ರಮುಖವಾಗಿ ಆರು ವಿಧ.
ಉಪಮಾಲಂಕಾರ:
o ಪೂರ್ಣೋಪಮಾಲಂಕಾರ: ಉಪಮಾನ, ಉಪಮೇಯ, ಉಪಮಾವಾಚಕ ಮತ್ತು ಉಭಯವಾಚಕ ಅಂಶಗಳನ್ನು ಒಳಗೊಂಡಿರುತ್ತದೆ.
o ಲುಪ್ತೋಪಮೆ ಅಲಂಕಾರ: ಪೂರ್ಣೋಪಮಾಲಂಕಾರದ ನಾಲ್ಕು ಅಂಶಗಳಲ್ಲಿ ಒಂದು ಅಲಂಕಾರ ಇಲ್ಲದಿರುವುದು.
ರೂಪಕ ಅಲಂಕಾರ: ಉಪಮಾನ (ಹೋಲಿಸಿಕೊಳ್ಳುವ) ಮತ್ತು ಉಪಮೆ (ಹೋಲಿಕೆ) ಎರಡೂ ಒಂದೇ ಎಂದು ಬಿಂಬಿಸಲಾಗುವ ಅಲಂಕಾರ.
ದೃಷ್ಟಾಂತ ಅಲಂಕಾರ: ಎರಡು ವಾಕ್ಯಗಳು ಒಂದರ ಪ್ರತಿಬಿಂಬದಂತೆ ಕಾಣುವುದು. “ಮಾತು ಬಲ್ಲವನಿಗೆ ಜಗಳವಿಲ್ಲ. ಊಟ ಬಲ್ಲವನಿಗೆ ರೋಗವಿಲ್ಲ.
ಶ್ಲೇಷಾಲಂಕಾರ: ಒಂದೇ ಪದಕ್ಕೆ ಅನೇಕ ಅರ್ಥವನ್ನುಂಟು ಮಾಡುವುದು.
ಚಿತ್ರ ಕವಿತ್ವ: ಅಕ್ಷರಗಳನ್ನು ಕುಶಲತೆಯಿಂದ ಪ್ರಯೋಗ ಮಾಡುವುದು.
ದೀಪಕ ಅಲಂಕಾರ: ಪ್ರಸ್ತುತ ಮತ್ತು ಅಪ್ರಸ್ತುತ ವಸ್ತು, ಪ್ರಾಣಿ ಪಕ್ಷಿ ಅಥವಾ ವ್ಯಕ್ತಿಗಳನ್ನು ಒಂದೇ ಎಂದು ವರ್ಣಿಸುವುದು.
ಉತ್ಪ್ರೇಕ್ಷಾಲಂಕಾರ: ಕವಿಯ ಕಲ್ಪನೆಯ ಉಪಮಾನ ಮತ್ತು ಉಪಮೇಯ.
ಭಾಷಣಕಾರರು ಸಾಮಾನ್ಯವಾಗಿ ಭಾಷಣಗಳ ಪ್ರಾರಂಭದಲ್ಲಿ ವಚನ ವಾಚನ, ಸಂಸ್ಕೃತ ಶೋಕಗಳನ್ನು ಹೇಳಿ ಪ್ರವಚನ ಅಥವಾ ಉಪನ್ಯಾಸದ ಆರಂಭವನ್ನು ಮಾಡುವುದು ವಾಡಿಕೆ. ಭಾಷಣಗಳಲ್ಲಿ ಪ್ರಖ್ಯಾತ ಮಹನೀಯರ ಶಬ್ದಪುಂಜಗಳನ್ನು, ಶರಣರ ಸೂಳ್ನುಡಿಗಳನ್ನು, ದಾಸರ ಕೀರ್ತನೆಗಳನ್ನು, ಉಪನಿಷತ್ತು ಮತ್ತು ಭಗವದ್ಗೀತೆಗಳ ಶ್ಲೋಕಗಳನ್ನು ಉಲ್ಲೇಖಿಸುವದನ್ನು ನೋಡಬಹುದು ಅಥವಾ ಕೇಳಬಹುದು. ಉಪನ್ಯಾಸದ ಮೂಲ ಅರ್ಥಕ್ಕೆ ಹೊಂದಿಕೊಳ್ಳುವಂತೆ ವಚನಗಳ ಕೆಲವು ಸಾಲುಗಳನ್ನು ಅಥವಾ ಪೂರ್ತಿ ವಚನಗಳನ್ನು ಬಳಸಿಕೊಂಡು ಉಪನ್ಯಾಸವನ್ನು ಸಭಿಕರಿಗೆ ಮನ ಮುಟ್ಟುವಂತೆ ಮತ್ತು ಉಪನ್ಯಾಸಕ್ಕೆ ಮಹತ್ವ ನೀಡುವಂತೆ ಮಾಡುವುದು ಮೊದಲಿನಿಂದಲೂ ಬಂದ ಪರಂಪರೆ ಅಥವಾ ವಿಧಾನ.
ಆದರೆ ವಚನಗಳ ಅಂತರಂಗವನ್ನು ಗ್ರಹಿಸದೇ ಹಲವಾರು ಸಾರಿ ತಿರುಚಿ ಹೇಳಿ ಅಪಹಾಸ್ಯಕ್ಕೆ ಗುರಿಯಾಗುವ ಸನ್ನಿವೇಷಗಳು ಹಲವಾರು ನಮ್ಮ ಕಣ್ಣ ಮುಂದಿದೆ. ಬಸವೇಶ್ವರರ “ಇವನಾರವ ಇವನಾರವ” ಎನ್ನುವ ಒಂದು ವಚನ ಇಂಥ ಒಂದು ಅವಜ್ಞೆಗೆ ಬಹಳಷ್ಟು ಸಾರಿ ಗುರಿಯಾಗಿದೆ. ಮೊದಲಿನ ಎರಡು ಸಾಲುಗಳನ್ನು ಮಾತ್ರ ಉಲ್ಲೇಖಿಸುವುದನ್ನು ಕೇಳಿದ್ದೇವೆ. ಕೊನೇಯ ಸಾಲುಗಳ ಮಹತ್ವವನ್ನು ಬಿಡಿಸಿ ಹೇಳಲು ಅಥವಾ ವ್ಯಾಖ್ಯಾನಿಸಲು ಮರೆತು ಬಿಡುತ್ತಾರೆ.
ಇವನಾರವ ಮತ್ತು ಇವ ನಮ್ಮವ ಎಂದು ಮೂರು ಸಾರಿ ಈ ವಚನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಇವನಾರವ ಮತ್ತು ಇವ ನಮ್ಮವನೆನ್ನುವ ಒಂದೇ ಪದವನ್ನು ಒತ್ತಿ ಒತ್ತಿ ಹೇಳುವುದರಿಂದ ಭಾವ ತೀವ್ರತೆಯನ್ನು ಹೆಚ್ಚಿಸುತ್ತದೆ. ಅನೇಕ ಬಾರಿ ಹೇಳಿದಂತೆಲ್ಲಾ ಇವನಾರವ ಎನ್ನುವ ಸಂಬಂಧದ ಎಳೆ ದೂರ ಸರಿಯುತ್ತಾ ಮತ್ತು ಇವ ನಮ್ಮವ ಎನ್ನುವ ಭಾವನಾತ್ಮಕ ಸಂಬಂಧದ ಎಳೆಯನ್ನು ಅಂತರಂಗದತ್ತ ಸೆಳೆಯುತ್ತದೆ. ಶಬ್ದದ ಪುನರುಕ್ತಿ ಮತ್ತು ಭಾವಾನುಸಂಧಾನದ ನೆಲೆಯಲ್ಲಿ ವೈಯಕ್ತಿಕ ಒಳ ತುಡಿತಗಳೊಂದಿಗೆ ಸಾಮಾಜಿಕ ಆಯಾಮವನ್ನು ಪಡೆದುಕೊಳ್ಳುತ್ತದೆ.
ಸ್ವತಃ ಪ್ರಧಾನಿಯಾಗಿದ್ದ ಬಸವೇಶ್ವರರು ಬಡವ, ಮಧ್ಯಮ ಮತ್ತು ಶ್ರೀಮಂತ ಎನ್ನುವ ಭೇದಗಳನ್ನು ತೊಡೆದು ಹಾಕುವಲ್ಲಿ ತಮ್ಮೆಲ್ಲ ತತ್ವಗಳನ್ನು ಒಟ್ಟುಗೂಡಿಸುವ ನಿಟ್ಟನಲ್ಲಿ ಕಾರ್ಯನಿರತರಾಗಿದ್ದರು.
ಚೆನ್ನಯ್ಯನ ಮನೆಯ | ದಾಸನ ಮಗನು ||
ಕಕ್ಕಯ್ಯನ ಮನೆಯ | ದಾಸಿಯ ಮಗಳು ||
ಇವರಿಬ್ಬರು ಹೊಲದಲು | ಬೆರಣಿಗೆ ಹೋಗಿ
ಸಂಗವ ಮಾಡಿದರು | ಇವರಿಬ್ಬರಿಗೆ ಹುಟ್ಟಿದ ಮಗ ನಾನು
ಕೂಡಲಸಂಗಮದೇವ | ಸಾಕ್ಷಿಯಾಗಿ
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-36 / ವಚನ ಸಂಖ್ಯೆ-346)
ಶ್ರೇಣೀಕೃತ ಸಮಾಜದಲ್ಲಿ ಅತ್ಯಂತ ನಿಕೃಷ್ಠ ಸ್ಥಾನದಲ್ಲಿದ್ದವರು ಮಾದಾರ ಚೆನ್ನಯ್ಯ ಮತ್ತು ಡೋಹರ ಕಕ್ಕಯ್ಯ. ಇವರ ಮನೆಯಲ್ಲಿ ಆಳಾಗಿದ್ದವರ ಮಕ್ಕಳು ಮದುವೆಯಾಗದೇನೆ ಅವರಿಗೆ ಹುಟ್ಟಿದ ಮಗ ನಾನು ಎಂದು ಹೇಳಿಕೊಳ್ಳಲು ಎಂಥ ಧೈರ್ಯ ಮತ್ತು ಎದೆಗಾರಿಕೆ ಬೇಕು. ಕೆಳವರ್ಗದಲ್ಲಿದ್ದಂಥಾ ಜನಸಾಮಾನ್ಯರಿಗೆ ಮಾನಸಿಕ ಧೈರ್ಯವನ್ನು ತುಂಬುವಂಥಾ ಕೆಲಸ ಮಾಡಿ ಯಶಸ್ವಿಯಾಗತಾರೆ ಬಸವೇಶ್ವರರು.
ಪುರುಷ ಪ್ರಧಾನ ಸಮಾಜದಲ್ಲಿ ಶೋಷಿತಳಾಗಿ ಉಳಿದರೆ ಶರಣರ ದೃಷ್ಟಿಯಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನವನ್ನು ಕಲ್ಪಿಸಿದ್ದರು.
ಮೊಲೆ ಮುಡಿ ಬಂದಡೆ | ಹೆಣ್ಣೆಂಬರು
ಗಡ್ಡ ಮೀಸೆ ಬಂದಡೆ | ಗಂಡೆಂಬರು
ನಡುವೆ ಸುಳಿವ | ಆತ್ಮನು
ಹೆಣ್ಣೂ ಅಲ್ಲ | ಗಂಡೂ ಅಲ್ಲ
ಕಾಣಾ | ರಾಮನಾಥಾ
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1284 / ವಚನ ಸಂಖ್ಯೆ-845)
ಆಧುನಿಕ ಸಮಾಜದಲ್ಲಿಯೂ ಸವಾಲಾಗಿರುವ ಸ್ತ್ರೀ-ಪುರುಷ ಸಮಾನತೆಯನ್ನು ಸಾಧಿಸಿ ತೋರಿಸಿದವರು 12 ನೇ ಶತಮಾನದ ಬಸವಾದಿ ಶರಣರು. ದೈಹಿಕ ವ್ಯತ್ಯಾಸಗಳನ್ನೇ ಹಿರಿದು ಮಾಡಿ ಭೇದ ಮಾಡುವುದು ಅರ್ಥಹೀನವೆಂಬುದನ್ನು ಶರಣ ಜೇಡರ ದಾಸಿಮಯ್ಯನವರು ಈ ವಚನದಲ್ಲಿ ಮಾಡಿದ್ದಾರೆ.
“ಇವನಾರವ ಇವನಾರವ” ವಚನವನ್ನು ಓದಿದ ತಕ್ಷಣಕ್ಕೆ ಗ್ರಹಿಕೆಯಾಗುವುದು ಯಾವ ಜಾತಿಯವನು ಎಂದು ಜಾತಿ ದೃಷ್ಟಿಯಿಂದ ನೋಡದೇ ಇವ ನಮ್ಮವ ಅಂದರೆ ಇವನೂ ನಮ್ಮವನು ಎಂದು ಎಲ್ಲರನ್ನೂ ನಮ್ಮವರು ಎಂಬ ಸಮಷ್ಠಿ ಭಾವದಿಂದ ನೋಡುವ ಮಾನವೀಯತೆಯ ಕನ್ನಡಿಯಿಂದ ಬಸವೇಶ್ವರರು ಹೇಳಿದ್ದಾರೆ ಎನ್ನುವುದು ಸಾಮಾನ್ಯವಾದ ತಿಳುವಳಿಕೆ.
ಆದರೆ ಜಾತಿ ಅಥವಾ ವರ್ಣ ಸಂಕರದ ಬಗ್ಗೆ ಬರೆದ ವಚನ ಇದಲ್ಲ. ತಮಗೆ ತಾವೇ ವಿಮರ್ಷಿಸಿಕೊಂಡು ಬರೆದಂಥ ವಚನವಿದು. ಬಹಳ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ ಎನ್ನದಿರಯ್ಯಾ ಎಂದು ಹೇಳದೆ ಎನಿಸದಿರಯ್ಯಾ ಎನ್ನುವ ಪದಬಳಕೆ. ಎನ್ನದಿರಯ್ಯಾ ಎಂದರೆ ಇನ್ನೊಬ್ಬರಿಗೆ ವಿನಂತಿ ಮಾಡಿಕೊಳ್ಳುವಲ್ಲಿ ಬಳಸುವ ಪದ. ಎನಿಸದಿರಯ್ಯಾ ಎಂದು ತಮಗೆ ತಾವೇ ಹೇಳಿಕೊಂಡಂಥಾ ಶಬ್ದ ಪ್ರಯೋಗ. ಕೊನೇಯ ಸಾಲುಗಳಲ್ಲಿ ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯ ಎಂದು ಹೇಳುವ ಮೂಲಕ ಸಮಷ್ಠಿಯ ಜೊತೆಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವದನ್ನು ನಿರೂಪಿಸಿದ್ದಾರೆ. ಮುಟ್ಟಿಸಿಕೊಳ್ಳದ ಮೇಲ್ವರ್ಗದವರೂ ಸಹ ಒಂದರ್ಥದಲ್ಲಿ ಅಸ್ಪೃಷ್ಯರು ಎನ್ನುವ ಗೂಢಾರ್ಥ ಈ ವಚನ ಒಳಗೊಂಡಿದೆ. ಶ್ರೇಣೀಕೃತ ಸಮಾಜದಲ್ಲಿ ತುಳಿತಕ್ಕೊಳಗಾದವರೊಂದಿಗೆ ತಮ್ಮನ್ನು ತಾವು ಸಮೀಕರಿಸಿಕೊಳ್ಳುವ ಬಯಕೆಯಿಂದ ಈ ವಚನ ರಚನೆಯಾಗಿದೆ. ನಿಮ್ಮ ಮನೆಯ ಮಗನೆಂದೆನಿಸಯ್ಯಾ ಎಂದು ಕೂಡಲಸಂಗನದೇವರನ್ನು ಉಲ್ಲೇಖಿಸಿ ಹೇಳುವುದರ ಮೂಲಕ ಈ ಸಂದೇಶವನ್ನು ನೀಡಿದ್ದಾರೆ. ಇದೇ ಸೂಚನೆಯನ್ನು ಈ ವಚನವೂ ಸಹ ನೀಡುತ್ತದೆ.
ಅಪ್ಪನು ನಮ್ಮ | ಮಾದಾರ ಚೆನ್ನಯ್ಯ
ಬೊಪ್ಪನು ನಮ್ಮ | ಡೋಹಾರ ಕಕ್ಕಯ್ಯ
ಚಿಕ್ಕಯ್ಯನೆಮ್ಮಯ್ಯ | ಕಾಣಯ್ಯ
ಅಣ್ಣನು ನಮ್ಮ | ಕಿನ್ನರ ಬೊಮ್ಮಯ್ಯ
ಎನ್ನನೇತಕ್ಕರಿಯರಿ? | ಕೂಡಲಸಂಗಯ್ಯ
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-36 / ವಚನ ಸಂಖ್ಯೆ-349)
ಸಮಾಜದಲ್ಲಿ ತುಳಿತಕ್ಕೊಳಗಾದವರಾದ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ ಚಿಕ್ಕಯ್ಯ ಕಿನ್ನರಿ ಬೊಮ್ಮಯ್ಯನಂಥವರ ಕುಟುಂಬದವನೆಂದು ಯಾಕೆ ನಿಮ್ಮ ಗಮನಕ್ಕೆ ಬರತಾ ಇಲ್ಲ ಎನ್ನುವದನ್ನೂ ಕೂಡ ಬಸವೇಶ್ವರರು ವ್ಯಪಡಿಸುತ್ತಾರೆ. ಇಂಥ ಸಂದೇಶಗಳಿಂದ ಮೇಲುಸ್ಥರದವರು ಮತ್ತು ಕೀಳುಸ್ಥರದವರು ಎನ್ನುವ ಕಂದಕವನ್ನು ಮುಚ್ಚುವಲ್ಲಿ ಬಸವೇಶ್ವರರು ಯಶಸ್ವಿಯಾಗುತ್ತಾರೆ.
ಒಟ್ಟಾರೆ ಇವನಾರವ ಇವನಾರವ ಎನ್ನುವ ವಚನದ ಮೂಲಕ ಬಸವೇಶ್ವರರು ಸಾಮಾಜಿಕ ಸಮಾನತೆಯನ್ನು ಭಾವನಾತ್ಮಕವಾಗಿ ಬೆಸೆಯುವಲ್ಲಿ ಅಗಾಧ ಸಂದೇಶ ನೀಡುತ್ತದೆ. ಜಾತಿಯ ಆಧಾರದ ಮೇಲೆ ನಿರೂಪಿತವಾಗದೆ ಪ್ರೀತಿ ಮತ್ತು ಅಂತಃಕರಣದ ಭಾವವನ್ನು ಈ ವಚನ ವ್ಯಕ್ತ ಪಡಿಸುತ್ತದೆ. ಎಲ್ಲಿ ಪ್ರೀತಿ, ವಿಶ್ವಾಸ ಮತ್ತು ಅಂತಃಕರಣಗಳ ತ್ರಿವೇಣಿ ಸಂಗಮವಾಗುತ್ತದೆಯೋ ಅಲ್ಲಿ ಅಸಮಾನತೆಯ ಪ್ರಶ್ನೆಯೇ ಬರುವುದಿಲ್ಲ. ಇದೇ ಅರ್ಥದಲ್ಲಿ ಕೊನೆಯ “ಸಾಲು ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ” ಎನ್ನುವದು ಪ್ರತಿಪಾದಿತವಾಗಿದೆ.
ಬಸವೇಶ್ವರರು ಅನುಭವ ಮಂಟಪವನ್ನು ಸ್ಥಾಪಿಸಿ ಸಮಾಜದ ಎಲ್ಲಾ ವರ್ಗದವರನ್ನೂ ಸಮಾನವಾಗಿ ಕಂಡು ಅಲ್ಲಿ ಎಲ್ಲರಿಗೂ ಮುಕ್ತ ಅವಕಾಶ ನೀಡಿ ತಮ್ಮ ತಮ್ಮ ಅನುಭವ ಮತ್ತು ಅನುಭಾವಗಳನ್ನು ಹೇಳಿಕೊಳ್ಳಲು ಅವಕಾಶ ನೀಡಿದ್ದರು. 12 ನೇ ಶತಮಾನದಲ್ಲಿ ಈ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಕ್ರಾಂತಿ ಮಾಡಿ ಸಾಮಾಜಿಕ ಅವಜ್ಞೆಗಳ ವಿರುದ್ಧ ಹೋರಾಡಿದ ಬಸವೇಶ್ವರರ ಸಾಮಾಜಿಕ ಕಳಕಳಿಯ ಒಂದು ಅದ್ಭುತ ವಚನ. ಇಡೀ ವಿಶ್ವವನ್ನೇ ಒಂದು ಎಂದು ಭಾವಿಸಿದ್ದರು ಎಂಬುದಕ್ಕೆ ಈ ವಚನ ಸಾಕ್ಷಿ.
ವಚನಗಳು ಸಾಹಿತ್ಯದ ದೃಷ್ಟಿಯಿಂದಲೂ ಮೌಲಿಕವಾಗಿವೆ. ವಚನಗಳು ವಿಭಿನ್ನ ನೆಲೆಯ ಅಧ್ಯಯನಕ್ಕೆ ಆಹ್ವಾನಿಸುತ್ತವೆ. ಶತ ಶತಮಾನಗಳಿಂದ ಅವರವರು ತಮಗೆ ಬೇಕಾದ ನೆಲೆಯ ಅಧ್ಯಯನಕ್ಕೆ ಅವನ್ನು ಒಳಪಡಿಸುತ್ತಾ ಬಂದಿದ್ದಾರೆ. ಆದರೆ ವಚನದ ಆಶಯಕ್ಕೆ ಧಕ್ಕೆ ಬಾರದಂತೆ ಎಚ್ಚರ ವಹಿಸುವುದು ಬಹಳ ಮುಖ್ಯ. ಅದು ವ್ಯಾಪಕ ಅಧ್ಯಯನದಿಂದ ಮಾತ್ರ ಸಾಧ್ಯ ಎಂದು ಹೇಳತಾ ಈ ಲೇಖನಕ್ಕೆ ಅಲ್ಪ ವಿರಾಮ ಹೇಳುತ್ತೇನೆ. ಯಾಕಂದರ ಇಂತ ಚಿಂತನೆಗಳಿಗೆ, ವಿಮರ್ಷೆಗಳಿಗೆ ಪೂರ್ಣ ವಿರಾಮ ಎಂದೂ ಇರೋದಿಲ್ಲ ಮತ್ತು ಇವು ನಿತ್ಯ ನೂತನ ನಿರಂತರ.
ಲೇಖನ : ವಿಜಯಕುಮಾರ ಕಮ್ಮಾರ
ತುಮಕೂರು
ಮೋಬೈಲ್ ನಂ : 97413 57132 / 97418 89684
ಈ-ಮೇಲ್ : vijikammar@gmail.com