ಹೆಸರಿಗೆ ಮಾತ್ರ ಕಲ್ಯಾಣ

ಹೆಸರಿಗೆ ಮಾತ್ರ ಕಲ್ಯಾಣ

ಐದಾರು ಮಂದಿ ಸಂಸದರು. ಎಮ್ಮೆಲ್ಸಿಗಳು ಸೇರಿದಂತೆ ಅಜಮಾಸು ಎಪ್ಪತ್ತು ಮಂದಿ ಶಾಸಕರು. ಲೆಕ್ಕವಿಲ್ಲದಷ್ಟು ಮಂದಿ ಗ್ರಾಮ ಪಂಚಾಯತಿ, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಸದಸ್ಯರು. ಅಭಿವೃದ್ಧಿ ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಸದಸ್ಯರು… ಹೀಗೆ ಜನಪ್ರತಿನಿಧಿಗಳಿಂದ ಕಲ್ಯಾಣ ಕರ್ನಾಟಕ ತುಂಬಿ ತುಳುಕುತ್ತಿದೆ. ಹೆಸರಿಗೆ ಕಲ್ಯಾಣ ಕರ್ನಾಟಕ ಆಗಿ ಎರಡು ವರ್ಷಗಳು ಕಳೆದು ಹೋದವು. ಜನರ ಉಸಿರಲ್ಲಿ ಮಾತ್ರ ಮತ್ತದೇ ಹಳೆಯ ಹೈದರಾಬಾದ್ ಕರ್ನಾಟಕದ ನಿಟ್ಟುಸಿರುಗಳು. ದೇಶ ಎಪ್ಪತ್ತೈದು ವರ್ಷಗಳ ಅಮೃತ ಮಹೋತ್ಸವ ಆಚರಿಸುವ ಸಂದರ್ಭದಲ್ಲೂ ಕಲ್ಯಾಣ ನೆಲದ ನೋವುಗಳಿಗೆ ವಿಮೋಚನೆಯಿಲ್ಲ.

ಮೂರುಬಾರಿ ಮುಖ್ಯಮಂತ್ರಿ ಅವಕಾಶ, ಹತ್ತಾರು ಬಾರಿ ಕೇಂದ್ರದ ಸಚಿವಸ್ಥಾನ. ಲೆಕ್ಕವಿಲ್ಲದಷ್ಟು ಬಾರಿ ರಾಜ್ಯದ ಮಂತ್ರಿ, ನಿಗಮ, ಮಂಡಳಿಗಳ ಅಧಿಕಾರ ಸಿಕ್ಕಿವೆ. ಸಾಲದ್ದಕ್ಕೆ 371 ಜೆ. ಸೌಲಭ್ಯ. ನೋಡುವವರ ಕಣ್ಣಿಗೆ ಇನ್ನೇನು ಬೇಕು ಎನ್ನುವಷ್ಟು ಅವಕಾಶಗಳ ತೋರಿಕೆಗಳು. ತುಂಬಿಹರಿವ ಕೃಷ್ಣೆ, ಭೀಮೆ, ತುಂಗಭದ್ರೆ, ಇತರೆ ಸಣ್ಣಪುಟ್ಟ ಉಪನದಿಗಳು. ಎರಡು ಬೃಹತ್ ಪ್ರಮಾಣದ ಅಣೆಕಟ್ಟುಗಳು. ವಿಮಾನಗಳು ಹಾರಾಡುವ ಒಂದೆರಡು ವಿಮಾನ ನಿಲ್ದಾಣಗಳು. ಕನ್ನಡ ವಿ. ವಿ. ಮತ್ತು ಕೇಂದ್ರೀಯ ವಿ. ವಿ. ಸೇರಿದಂತೆ ಐದಾರು ವಿಶ್ವವಿದ್ಯಾಲಯಗಳು. ಕುಳುಬಾನ ಒಟ್ಟಿದಂತೆ ಪುಸ್ತಕಗಳನ್ನು ಪ್ರಕಟಿಸುವ ತಿಂಗಳಿಗೆ ಲಕ್ಷ, ಲಕ್ಷಗಟ್ಟಲೇ ಪಗಾರ ಪಡೆಯುವ ನೂರಾರು ಮಂದಿ ವಿ. ವಿ. ಪ್ರಾಧ್ಯಾಪಕರು… ಹೀಗೆ ಕಣ್ಣಿಗೆ ನೆದರಾಗುವಷ್ಟು ಅವಕಾಶಗಳ ಪಟ್ಟಿಗಳು.

ಇಷ್ಟೆಲ್ಲಾ ಇದ್ದೂ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಕಟ್ಟಕಡೆಯ ಸ್ಥಾನ. ಶಿಕ್ಷಣ, ಆರೋಗ್ಯ, ಕೈಗಾರಿಕೆ, ಸಾಮಾಜಿಕ ಸ್ಥಾನಮಾನ ಎಲ್ಲದರಲ್ಲೂ ಕೊನೆಯ ಸ್ಥಾನಮಾನ. ಯಾಕಿರಬಹುದು.? ನಾವು ಹಿಂದುಳಿದಿದ್ದೇವೆಯೇ.? ಅಥವಾ ಹಿಂದುಳಿಸಲ್ಪಟ್ಟಿದ್ದೇವೆಯೇ. ?

ಈ ಭಾಗದ ರಾಜಕಾರಣಿಗಳು ತಮಗೆ ರಾಜಕೀಯವಾಗಿ ಸಿಗಬಹುದಾದ ಅಗತ್ಯ ಅವಕಾಶಗಳನ್ನು ಸಾಧ್ಯಂತವಾಗಿ ಪಡೆದುಕೊಂಡಿದ್ದಾರೆ. ಹೈ. ಕ. ಎಂಬ ಹಿಂದುಳಿದ ಪ್ರದೇಶದ ಹೆಸರಲ್ಲಿ ಭರ್ಜರಿಯಾಗಿ ಎಲ್ಲ ಹೊಡಕೊಂಡಿದ್ದಾರೆ. ಹೀಗೆ ಪಡಕೊಂಡು ಮತ್ತು ಹೊಡಕೊಂಡು ಎಪ್ಪತ್ತೈದು ವರ್ಷಗಳು ಕಳೆದು ಹೋಗುತ್ತಿರುವಾಗ ಎಲ್ಲ ಪಕ್ಷಗಳ ರಾಜಕಾರಣಿಗಳು ಯಾವತ್ತಾದರೂ ತಮ್ಮ ‘ಆತ್ಮವಂಚನೆ’ ಕುರಿತು ಆತ್ಮಾವಲೋಕನ ಮಾಡಿಕೊಂಡಿದ್ದಾರೆಯೇ.?

ಉತ್ತರ ಖಂಡಿತಾ ಇಲ್ಲವೆನಿಸುತ್ತದೆ. ಹೌದಾಗಿದ್ರೇ ಅಲ್ಲಿಯವನೇ ಆದ ನನ್ನ ಗಮನಕ್ಕಂತೂ ಬಂದಿಲ್ಲ. ಹೈದರಾಬಾದ್ ಕರ್ನಾಟಕದ ಹೆಸರಿನಲ್ಲಿ, ಕ್ಷಮಿಸಿ ಕಲ್ಯಾಣ ಕರ್ನಾಟಕದ ಹೆಸರಿನಲ್ಲಿ ತಮಗೆ ದಕ್ಕಬೇಕಾದ ರಾಜಕೀಯ ಅವಕಾಶಗಳಲ್ಲಿ ಯಾವ ವ್ಯತ್ಯಯಗಳು ಅವರಿಗೆ ಯಾವತ್ತೂ ಆಗಿಲ್ಲ.‌ ಅವರ ಮೋಜು, ಮಸ್ತಿ, ಮೇಜವಾನಿಗೆ ಸರಕಾರದ ಎಲ್ಲ ಸೌಲಭ್ಯಗಳನ್ನು ಯಾವುದೇ ದರಕಾರ ಇಲ್ಲದೇ ದಕ್ಕಿಸಿ ಕೊಂಡಿದ್ದಾರೆ.

ಹೀಗಾಗಿ ಅವರು ಜನರ ಕುರಿತು ಧೇನಿಸುವ ಹರಕತ್ತು ಅವರಿಗಿರುವುದಿಲ್ಲ. ರಾಜಕೀಯ ಅಧಿಕಾರದ ಅವರ ಎಲ್ಲ ಅಗತ್ಯಗಳು ಹಿಂದುಳಿದ ಹೈದರಾಬಾದ್ ಕರ್ನಾಟಕದ ಹೆಸರಿನಲ್ಲಿ ಸದಾಕಾಲ ಈಡೇರುತ್ತಲೇ ಬಂದಿವೆ. ರಾಜಕಾರಣಿಗಳ ಕುರ್ಚಿಗಳಿಗೆ ಧಕ್ಕೆ ಬಂದಿಲ್ಲ. ಹೀಗಾಗಿ ಜನರು ಮಾತ್ರ ತಮ್ಮ ಬವಣೆಗಳ ಕುರಿತು ತಾವೇ ಯೋಚಿಸಬೇಕಾದ ದುಃಸ್ಥಿತಿ ಇಂದಿಗೂ ಮುಂದುವರೆದಿದೆ.

ಅಷ್ಟಕ್ಕೂ ರಾಜಕಾರಣಿಗಳು ಮತ್ತು ರಾಜಕೀಯ ಅಧಿಕಾರದಿಂದಲೇ ಒಂದು ಪ್ರದೇಶದ ಸಂಪೂರ್ಣ ಅಭಿವೃದ್ಧಿ ಸಾಧ್ಯವೇ.? ಇಂತಹ ಹತ್ತು ಹಲವು ಪ್ರಶ್ನೆಗಳು ನನ್ನನ್ನು ಮತ್ತೆ ಮತ್ತೆ ಕಾಡುತ್ತಲೇ ಇವೆ. ಹೀಗಿರುವಾಗ ವರ್ಷದಲ್ಲಿ ನಮಗೆ ಎರಡೆರಡು ಸ್ವಾತಂತ್ರ್ಯ ಉತ್ಸವ ಆಚರಿಸುವ ಅವಕಾಶಗಳು. ಒಂದುಮಾತು ಮಾತ್ರ ಖರೇ. ಅದೇನೆಂದರೆ ಕಲ್ಯಾಣ ಕರ್ನಾಟಕಕ್ಕೆ ದೊರಕಿರುವ ಸರಕಾರಿ ಸೌಲಭ್ಯಗಳಿಂದ ರಾಜಕಾರಣಿಗಳು ಮತ್ತು ಬಹುಪಾಲು ಸರಕಾರಿ ಅಧಿಕಾರಿಗಳು ಮಾತ್ರ ಸಂಪಾಗಿದ್ದಾರೆ. ಅವರು ಸಂತೃಪ್ತಿ ಸಾಗರದಲ್ಲಿ ಈಜಾಡಿ, ಈಜಾಡಿ ಹೊಟ್ಟೆ ಬಿರಿಯುವಂತೆ ತಿಂದು ತೇಗಿ ನೆಮಲು ಹಾಕುತ್ತಾ ಮಲಗಿರುವ ಭಂಡತನ ಅಕ್ಷರಶಃ ಅಕ್ಷಮ್ಯವೇ ಹೌದು.

ಇಂತಿಪ್ಪ ಕಲ್ಯಾಣ ಕರ್ನಾಟಕದ ಸಂಕಟಗಳ ಕುರಿತು ಆಗೀಗ ತಡವಿಕೊಳ್ಳುವುದು ನನ್ನಂಥ ಕೆಲವು ಯಡವಟ್ಟರ ಕೆಲಸ ಎನ್ನುವಂತಾಗಿದೆ.

ನಮ್ಮಭಾಗದ ಶಾಸಕ ಮಹಾಶಯರು ತಮಗೆ ಸರಕಾರ ನೀಡುವ ಅನುದಾನವನ್ನು ನೆಟ್ಟಗೆ ಉಪಯೋಗಿಸುವ ಗೋಜಿಗೂ ಹೋಗದ ಮುಗ್ಗಲಗೇಡಿಗಳು. ಎಲ್ಲದಕ್ಕೂ ‘ಜಾಂದೇ ಚೋಡೋ’ ಎನ್ನುವ ವಾಡಿಕೆ. ಈ ಬಾರಿ ಕಲಬುರ್ಗಿ ಜಿಲ್ಲೆಯ ಶಾಸಕ ಮಹಾನುಭಾವರು ತಮ್ಮ ಅನುದಾನದಲ್ಲಿ ಕೇವಲ ಶೇಕಡಾ 7.5 ರಷ್ಟು ಮಾತ್ರ ಬಳಕೆ ಮಾಡಿಕೊಂಡಿದ್ದಾರೆ. ಇದರಿಂದ ಇವರಿಗೆ ಜನಪರ ಕಳಕಳಿ ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ತೋರಿಸುತ್ತದೆ.

ಇದು ಬರೀ ಕಲಬುರ್ಗಿಯ ಕತೆ ಮಾತ್ರವಲ್ಲ, ಕೊಪ್ಪಳ ಮತ್ತು ಇತರೆ ಜಿಲ್ಲೆಗಳು ಇದಕ್ಕೆ ಹೊರತಾಗಿಲ್ಲ. ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ತಮ್ಮ ಕೈಯಲ್ಲಿರುವ ಎರಡು ಕೋಟಿ ಹಣ ಖರ್ಚುಮಾಡುವ ಅವಕಾಶಗಳನ್ನೇ ಶಾಸಕರು ಸರಿಯಾದ ಸಮಯದಲ್ಲಿ ಸದುಪಯೋಗ ಮಾಡಿಕೊಳ್ಳದ ಜೋಬದ್ರಗೇಡಿಗಳು. ಇಂತಹ ಖಬರಗೇಡಿಗಳಿಂದ ಹೊಸ ಯೋಜನೆಗಳು, ಹೊಸ ಯೋಚನೆಗಳನ್ನು ನಾವು ನಿರೀಕ್ಷಿಸಲು ಸಾಧ್ಯವೇ.?

ಇಂತಹ ನಮ್ಮ ಜನಪ್ರತಿನಿಧಿಗಳನ್ನು ನಮ್ಮ ಮೊಗಲಾಯಿ ಮಂದಿ ಕ್ಷಮಿಸುತ್ತಾರಲ್ಲ ಅವರನ್ನು ನಾವು ಕ್ಷಮಿಸಬಾರದಲ್ಲವೇ.? ಇಂತಹದ್ದೊಂದು ಪ್ರಶ್ನೆ ನನಗೆ ನಾನೇ ಅನೇಕ ಬಾರಿ ಹಾಕಿಕೊಂಡಿದ್ದೇನೆ. ಹಾಗೇನೇ ಅಂತಹ ಪ್ರಶ್ನೆಗೆ ನನಗೆ ನಾನೇ ಉತ್ತರ ಕಂಡುಕೊಂಡಿದ್ದೇನೆ. ಉತ್ತರ ಏನು ಗೊತ್ತೆ.?

ಹೆಚ್ಚೆಂದರೆ ಚುನಾವಣೆಯಲ್ಲಿ ಇವರನ್ನು ಸೋಲಿಸಬಹುದು. ಸೋತ ಶಾಸಕನ ಬದಲಿಗೆ ಆರಿಸಿ ಬರುವ ಮತ್ತೊಬ್ಬ ತೀಸ್ಮರ್ಕ ಇವನಪ್ಪನಂತಹ ಅಡನಾಡಿಯೇ ಆಗಿರುತ್ತಾನೆ. ಇದು ಪಕ್ಷಾತೀತವಾಗಿ ಕಲ್ಯಾಣ ಕರ್ನಾಟಕದ ನಮಗೆಲ್ಲರಿಗೂ ಆಗಿರುವ ಅನುಭವವೇದ್ಯ ಸಂಗತಿ. ಹಾಗಂತ ಪರ್ಯಾಯ ಪರಿಹಾರವೇ ಇಲ್ಲವೆಂದೇನಿಲ್ಲ. ಖಂಡಿತಾ ಇದೆ. ಅದನ್ನು ಪ್ರಯೋಗ ಮಾಡಿ ನೋಡಬೇಕಾಗಿದೆ.

ಕೇವಲ ಚುನಾವಣೆಗಳ ಸೋಲು ಗೆಲುವುಗಳೇ ಜನಪ್ರತಿನಿಧಿಯನ್ನು ಹದ್ದುಬಸ್ತಿನಲ್ಲಿಡುವ ಮತ್ತು ಪ್ರದೇಶ ಅಭಿವೃದ್ಧಿಯ ಮಾನದಂಡಗಳಲ್ಲ. ಜನಪ್ರತಿನಿಧಿಗಳು ಗೆಲುವು ಸಾಧಿಸಿದ ಮೇಲೆ ಅವರು ಹೆಚ್ಚು ಹತ್ತಿರವಾಗುವುದು ಬೆಂಗಳೂರಿಗೆ. ಅದರ ಜತೆಗೆ ಪ್ರಭುತ್ವದ ಕುರ್ಚಿಗೆ ಹೆಚ್ಚು ಹತಂಡಿ ಆಗಿರುತ್ತಾರೆ. ಅಬ್ಬಬ್ಬಾ ಅಂದರೆ ತಾವೇ ಸಾಕಿಕೊಂಡ ತಮ್ಮ ಸುತ್ತಮುತ್ತಲಿನ ಭಟ್ಟಂಗಿಗಳಿಗೆ ತುಸು ಹತ್ತಿರವಾಗಿರಬಲ್ಲರು.

ಅವರು ಇನ್ನೂ ಇಂತಹ ಹತ್ತು ಹಲವು ಅಪಸವ್ಯಗಳ ಆಗರವೇ ಆಗಿರುತ್ತಾರೆ. ಈ ಬಗೆಯ ಅನಾಹುತಗಳಿಂದ ಜನಪ್ರತಿನಿಧಿಗಳನ್ನು ಹದ್ದುಬಸ್ತಿನಲ್ಲಿಡುವ ಪ್ರಮುಖ ಹೊಣೆಗಾರಿಕೆ ಆರಿಸಿ ಕಳಿಸಿದ ಇಲ್ಲಿನ ಮತದಾರರ ಮೇಲಿರಬೇಕು. ಜನಪ್ರತಿನಿಧಿಗಳು ಗ್ರಾಮ ಪಂಚಾಯತಿಯಿಂದ ಹಿಡಿದು ಲೋಕಸಭೆ ಸದಸ್ಯನವರೆಗೂ ಯಾರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ ಅವರು ಜನರಿಗೆ ಹೆಚ್ಚು ಹತ್ತಿರವಾಗಿರುವಂತೆ, ಜನರ ಸ್ಥಳೀಯ ಸಮಸ್ಯೆಗಳಿಗೆ ಕರಾರುವಾಕ್ಕಾಗಿ ಸ್ಪಂದಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಆಯಾ ಕ್ಷೇತ್ರದ ಮತದಾರರ ಸಾರ್ವತ್ರಿಕ ಹೊಣೆ.

ಸಾಧ್ಯವಾದರೆ ನಮ್ಮ ಮಹಿಳೆಯರ ಕೈಯಲ್ಲಿ ಲಟ್ಟಣಿಗೆಗಳಿರಲಿ. ಅವು ಆಯಕಟ್ಟಾದ ಜಾಗಗಳಿಗೆ ಪೆಟ್ಟು ಕೊಡಬಲ್ಲವೆಂಬ ಕಟ್ಟೆಚ್ಚರಿಕೆ ಆಯಾ ಕ್ಷೇತ್ರದ ಜನ ಪ್ರತಿನಿಧಿಗಳಿಗಿರುವಂತಹ ವಾತಾವರಣ ಸೃಷ್ಟಿಯಾಗಲಿ. ಮಹಿಳೆಯರು ಸಂದರ್ಭೋಚಿತವಾಗಿ ಲಟ್ಟಣಿಗೆ ಬಳಸುವಲ್ಲಿ ಕಂಜೂಷ್ ಆಗಬೇಕಿಲ್ಲ. ಅಂತಹ ಜವಾಬ್ದಾರಿಗಳನ್ನು ಮಹಿಳೆಯರು ಈಡೇರಿಸುವಾಗ ಕ್ಷೇತ್ರದಲ್ಲಿನ ಪ್ರತಿಯೊಬ್ಬ ಪ್ರಜ್ಞಾವಂತರು ಈ ಮಹಿಳೆಯರ ಪರ ನಿಲ್ಲಬೇಕು. ಹಾಗಿದ್ದಾಗ ಕೆಲಮಟ್ಟಿಗೆ ಪ್ರಜಾಪ್ರಭುತ್ವ ಪ್ರಾಯೋಗಿಕವಾಗಿ ಸಾರ್ಥಕವಾಗಬಲ್ಲದು.

ಇದು ಪಕ್ಷಾತೀತ ರಾಜಕೀಯ ಪ್ರಜ್ಞೆಯಾಗಿ ಅಭಿವೃದ್ಧಿಗೊಳ್ಳಬೇಕು. ವಿಪರ್ಯಾಸವೆಂದರೆ ತಾವಿರುವ ಪಕ್ಷಗಳ ಕಾರ್ಯಕರ್ತರಂತೆ ಮಾತಾಡುವುದನ್ನೇ ರಾಜಕೀಯ ಪ್ರಜ್ಞೆ ಎಂದು ಬಹುತೇಕರು ತಪ್ಪಾಗಿ ತಿಳಿದುಕೊಂಡಿದ್ದಾರೆ. ದುರಂತವೆಂದರೆ ಇದನ್ನು ತಿಳಿಸಿ ಹೇಳುವವರ ಕೊರತೆ. ಹೇಳಿದರೂ ಸಮಾಧಾನದಿಂದ ಕೇಳುವವರ ಕೊರತೆ. ಕಡೆಯಪಕ್ಷ ನಾವು ಇರುವ ವಾಸ್ತವ ಒಪ್ಪಿಕೊಳ್ಳುವುದನ್ನು ಕಲಿಯಬೇಕಿದೆ. ಅದಕ್ಕೆ ಬದಲು ಕೊಂಬು ಕಿತ್ತಿದ ಕಳಗಿಯಂತೆ ವರಾ.. ವರಾ… ಒದರುವುದನ್ನು ಕಲಿತಿದ್ದೇವೆ. ಅದನ್ನಾದರೂ ಬಿಡಬೇಕಿದೆ. ಕ್ಷಮಿಸಿ ಇದೆಲ್ಲ ಉಪದೇಶವಲ್ಲ. ನಿತ್ಯ ಅನುಭವದ ಕಹಿಸತ್ಯ.

(ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಬರಹ)

ಮಲ್ಲಿಕಾರ್ಜುನ ಕಡಕೋಳ
9341010712

Don`t copy text!