ಬದಲಾಗಬೇಕಿರುವದು ಹೆಸರಲ್ಲ ನಮ್ಮ ಬದುಕುಗಳು..
ಹೈದ್ರಾಬಾದ್ ಎಂಬುದೀಗ ‘ಕಲ್ಯಾಣ ಕರ್ನಾಟಕ’ ಎಂದಾಗಿದೆ.
ಕೇಳಲು ತುಂಬಾ ಹಿತವಾಗಿದೆ.
ಆದರೆ ನಮ್ಮ ಬದುಕುಗಳಿನ್ನೂ ಬಿಸಿಲಿಗೆ ಮೈತೆರೆದುಕೊಂಡು ನಿಂತ ಜಾಲಿಮರಗಳೇ!
ಬೆಳೆದ ಬೆಳೆಗಳಿಗೆ ರೈತ ನಗುವಷ್ಟು ಬೆಲೆಯಿಲ್ಲ, ಊರಿಂದೂರಿಗೆ ಸರಿಯಾದ ರಸ್ತೆಗಳಿಲ್ಲ,
ಓದಿ ಕುಳಿತ ಮಕ್ಕಳಿಗೆ ಸರಿಯಾದ ಉದ್ಯೋಗಗಳಿಲ್ಲ,
ಕೊನೆಯ ಭಾಗದ ಬಾಯ್ತೆರೆದುಕೊಂಡು ನಿಂತ ಹೊಲಗಳಿಗೆ ಕಾಲುವೆ ನೀರಿನ್ನೂ ತಲುಪಿಯೇ ಇಲ್ಲ!
ಹಾರ-ತುರಾಯಿ ಹಾಕಿಸಿಕೊಂಡು ಹಿಗ್ಗಿದ ಏತ ನೀರಾವರಿಯ ಕಾಲುವೆ ಒಡಲಿನ್ನೂ ಹಸಿಯಾಗಿಲ್ಲ!
ದಿನ ಸಂಜೆಯಾದರೆ ಸಾಕು ಬಿಸಿಲ ನಾಡಿನ ಊರುಗಳಿಂದ ಜೋಳ-ಸಜ್ಜೆಯ ಗಂಟುಗಳನ್ನು ತಲೆಯ ಮೇಲೆ ಹೊತ್ತುಕೊಂಡು ಕೈಗೂಸುಗಳನ್ನ ಕಂಕುಳಲ್ಲಿ ಬಡಿದುಕೊಂಡು ರಾಜಧಾನಿಯ ಬಸ್ಸೇರುವ ವಲಸೆಯಿನ್ನೂ ನಿಂತೇಯಿಲ್ಲ.
ಊರ ಹೊರಗಿನ ಬೇನಿಗಿಡಕ್ಕೆ ನೇತಾಡಿ ಜೀವ ಬಿಟ್ಟವರ ಮನೆಯ ಕಣ್ಣೀರು ಇನ್ನೂ ಬತ್ತಿಲ್ಲ ಆದರೆ ಹೆಸರುಗಳು ಮಾತ್ರ ಬದಲಾಗುತ್ತಿವೆ.
ದಿನಗಳು ಬಹುಬೇಗ ಕಳೆಯುತ್ತವೆ!
ಆಳುವ ಅರಸರು ಕಾಲ-ಕಾಲಕ್ಕೆ ಬದಲಾಗುತ್ತಾರೆ ಮತ್ಯಾವದೋ ಅರಸ ಪಟ್ಟಕ್ಕೆ ಬಂದರೆ ಮತ್ಯಾವದೋ ಹೆಸರು.
ಈ ಮಣ್ಣಿನ ಮಕ್ಕಳಾದ ನಾವು ಉಡಿಯೊಡ್ಡಿ ಬೇಡುವುದಿಷ್ಟೆ ನಮ್ಮ ಬದುಕುಗಳು ಹಸನಾಗಲೂ ಏನಾದರೂ ಮಾಡಿ.
ಊರುಗಳ ಬೆಸೆಯುವ ರೋಡುಗಳು ಒಂದು ವರುಷವಾದರೂ ಬಾಳಲಿ.
ಮೂಗಿಗೆ ತುಪ್ಪ ಸವರಿದ 371j ನಿಜಕ್ಕೂ ಆಳವಾಗಿ ಅಪ್ಯಾಯಮಾನವಾಗಿ ಜಾರಿಯಾಗಿ ಬದುಕುಗಳನ್ನ ಬೆಳಗಲಿ.
ಉದ್ಯೋಗ ಸೃಷ್ಠಿಯೆಂಬುದು ಬರೀ ಕಾಗದದಲ್ಲಷ್ಟೇ ಉಳಿಯದೆ ಸಿಮೆಂಟು ಹೊತ್ತು ಕಾಂಕ್ರೀಟು ಕಾಡಿನ ಮದ್ಯೆ ಹೆಣವಾಗುತ್ತಿರುವ ನನ್ನ ಜನಗಳು ಊರಲ್ಲೆ ಇದ್ದುಂಡು ದುಡಿದು ಚಂದಗೆ ಜಾತ್ರೆ-ಉರುಸು ಮಾಡಿ ಬದುಕುವಂತಾಗಲಿ.
ಶುಲ್ಕದ ನೆಪದಲ್ಲಿ ಹೆಣ ಎತ್ತುವ ಖಾಸಗೀ ಶಿಕ್ಷಣ ಸಂಸ್ಥೆಗಳಿಗೂ ಮಿಗಿಲಾಗಿ ಸರಕಾರಿ ಶಿಕ್ಷಣ ಸಂಸ್ಥೆಗಳು ಬಡ ಮಕ್ಕಳ ಪಾಲಿಗೆ ಅಕ್ಷಯ ಪಾತ್ರಗಳಾಗಲಿ.
ಇದ್ದವರ ಹಿತ್ತಲಿಗೆ ಹರಿಯುವ ಕೃಷ್ಣ, ತುಂಗಾಭದ್ರ ನದಿಗಳೆಂಬ ತಾಯಂದಿರು ಬಿರುಕುಬಿಟ್ಟ ಕೊನೆಯ ಭಾಗದ ರೈತರ ಹೊಲಗಳ ಹೊಟ್ಟೆಯನ್ನ ತಂಪು ಮಾಡಲಿ.
ಆಗ ನೀವು ಯಾವ ಹೆಸರನ್ನಾದರೂ ಕರೆಯಿರಿ ನಮ್ಮ ತಗಾದೆ ಇರುವದಿಲ್ಲ.
–ಶರಣಬಸವ ಕೆ.ಗುಡದಿನ್ನಿ.