ಗಜಲ್
ಸುಮ ಒಂದು ಬಿಕ್ಕುತಿದೆ ರಮಿಸುವವರು ಯಾರೂ ಇಲ್ಲ
ಹಸಿ ಗಾಯಕೆ ಮುಲಾಮ ಹಚ್ಚುವವರು ಯಾರೂ ಇಲ್ಲ
ಕಿಚ್ಚಿಲ್ಲದ ಆವಿಗೆಯಲಿ ಹೃದಯ ಒಂದು ಬೇಯುತಿದೆ
ಒಲವಿಂದ ತಂಗಾಳಿ ಬೀಸುವವರು ಯಾರೂ ಇಲ್ಲ
ಕಾಲಚಕ್ರದ ಅಡಿ ಸಿಲುಕಿ ನರಳುತಿದೆ ಜೀವ ಒಂದು
ಗೆಳೆತನದಲಿ ಶಾಂತ ಪಡಿಸುವವರು ಯಾರೂ ಇಲ್ಲ
ಲೋಕದ ಮನಸುಗಳು ದ್ವೇಷ ದಲಿ ಉರಿಯುತಿವೆ ಇಂದು
ಅನುರಾಗದ ಜಲವನು ಸುರಿಸುವವರು ಯಾರೂ ಇಲ್ಲ
ಸುತ್ತು ಮುತ್ತು ಮುಖವಾಡ ಧರಿಸಿ ಕುಣಿಯುತಿವೆ ಉಸಿರು
ಅಸಲಿ ಮುಖವ ಜಗಕೆ ತೋರಿಸುವವರು ಯಾರೂ ಇಲ್ಲ
ಕರಾಳತೆಯಲಿ ಹರಡಲಿ ಮಾನವೀಯತೆಯ ” ಪ್ರಭೆ ”
ಪ್ರೀತಿಯ ನಿಜ ಸುಖವನು ಬರೆಯುವವರು ಯಾರೂ ಇಲ್ಲ
–ಪ್ರಭಾವತಿ ಎಸ್ ದೇಸಾಯಿ
ವಿಜಯಪುರ