ಮಸ್ಕಿ: ಹಲವು ವರ್ಷಗಳಿಂದ ಜನಸಂಖ್ಯೆ ಆಧಾರಿತ ಮೀಸಲಾತಿ ಹೋರಾಟ ಮಾಡುತ್ತಿರುವ ಪರಶಿಷ್ಟ ಪಂಗಡದ ಜನರಿಗೆ ಅವರ ಬೇಡಿಕೆಯಂತೆ ಸರ್ಕಾರ ಶೇ.7.5 ಕ್ಕೆ ಮೀಸಲಾತಿಯನ್ನು ಹೆಚ್ಚಿಸಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಪ್ಪಾಜಿಗೌಡ ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದ ಮುಂಭಾಗದಲ್ಲಿ ವಾಲ್ಮೀಕಿ ನಾಯಕ ಸಮಾಜದವರು ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರುವಾಗ ಪರಿಶಿಷ್ಟ ಪಂಗಡದವರಿಗೆ ಮಾತು ಕೊಟ್ಟಂತೆ ಜನಸಂಖ್ಯೆಗೆ ಅನುಗುಣವಾಗಿ ಅವರ ಬೇಡಿಕೆಯನ್ನು ಪರಿಗಣಿಸಿ ಮೀಸಲಾತಿಯನ್ನು ಹೆಚ್ಚಿಸುವ ಮೂಲಕ ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ವಾಲ್ಮೀಕಿ ಸಮಾಜದ ಹಿರಿಯ ಮುಖಂಡ ಮಹಾದೇವಪ್ಪಗೌಡ ಪಾಟೀಲ ಮಾತನಾಡಿ ಬಹುದಿನಗಳಿಂದ ನಮ್ಮ ಸಮಾಜದ ಬಂಧುಗಳು ಮಾಡುತ್ತಿರುವ ಹೋರಾಟದ ಕಿಚ್ಚು ಈಗ ಹೆಚ್ಚಿದ್ದು ಸರ್ಕಾರ ಕೂಡಲೇ ಸಮಾಜದ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿದರು.
ವಾಲ್ಮೀಕಿ ಸಮಾಜದ ಯುವ ಮುಖಂಡ ಬಸನಗೌಡ ಪಾಟೀಲ ಮಾತನಾಡಿ ರಾಜ್ಯದಲ್ಲಿ ಪರಿಶಿಷ್ಟ ಪಂಗಡದವರಿಗೆ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿ ಬರಬೇಕಾಗಿತ್ತು. ಈ ನಿಟ್ಟಿನಲ್ಲಿ ವಾಲ್ಮೀಕಿ ಸಮಾಜದ ಗುರುಗಳಾದ ಪ್ರಸನ್ನಾನಂದ ಸ್ವಾಮೀಜಿಗಳ ಹೋರಾಟದ ಫಲವಾಗಿ ಸರ್ಕಾರ ನ್ಯಾ.ನಾಗಮೋಹನದಾಸ ಅವರ ಅಧ್ಯಕ್ಷತೆಯಲ್ಲಿ ಏಕ ಆಯೋಗ ರಚಿಸಿತ್ತು. ಪ್ರಸುತ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಸರ್ಕಾರ ಕೂಡಲೇ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಸಮಾಜವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಮಾಜಿಕವಾಗಿ ಅಭಿವೃದ್ದಿ ಮಾಡಬೆಕಾಗಿದೆ ಎಂದರು.
ತಹಸೀಲ್ದಾರ ಬಲರಾಂ ಕಟ್ಟಿಮನಿ ಅವರಿಗೆ ವಾಲ್ಮೀಕಿ ಸಮಾಜದ ಮುಖಂಡರು ಮನವಿ ಪತ್ರ ಸಲ್ಲಿಸಿದರು.
ಶೇಖರಗೌಡ ಕಾಟಗಲ್, ದೇವಣ್ಣ ನಾಯಕ, ಸಿದ್ದಾರ್ಥ ಹಲಾಪುರ, ಆರ್.ಕೆ.ನಾಯಕ, ಯಮನೂರು ಹಾಗೂ ಇತರರು ಭಾಗವಹಿಸಿದ್ದರು.