ಎಳೆಹೂಟಿ ಮಾಡಿದರು
ಹರಳ ಮಧುವರಸ
ನೆಂಟರಾದರು ಶರಣ ಸಮ್ಮತದಿ
ಲಾವಣ್ಯ ಶೀಲವಂತ ಮದು ಮಕ್ಕಳು .
ಹಾರವರ ಓಣಿಯಲಿ ಕೆಂಡದಾ ಮಳೆ
ಭುಗಿಲೆದ್ದ ವಿಷಕೂಟ ಕಲ್ಯಾಣವು..
ವಿಪ್ರರ ಹಾರಾಟ ಜಗಳ ಒಡ್ಡೋಲಗಕೆ .
ಬಸವ ಪ್ರೇಮಿ ರಾಜ ಬಿಜ್ಜಳಗೆ ಪೀಕಲಾಟ .
ವಿಷ್ಣುಕ್ರಮಿತ ನಾರಾಯಣ ಭಟ್ಟರ ಕುತಂತ್ರ
ಬಸವಣ್ಣಗೆ ಕೊಟ್ಟರು ಗಡಿಪಾರು ಶಿಕ್ಷೆ.
ಚೌಡಯ್ಯ ಮಾಚಯ್ಯ ವಚನ ಶ್ರೀ ರಕ್ಷೆ .
ವರ್ಣ ಸಂಕರಕೆ ಎಳೆಹೂಟಿ ಆಜ್ಞೆ .
ಕಟ್ಟಿ ಆನೆ ಕಾಲಿಗೆ ಹರಳ ಮಧುವರಸರ
ಎಳೆಯಹತ್ತಿದರು ಅವರ ಕಣ್ಣು ಕಿತ್ತು .
ವಚನ ಭಂಡಾರಕೆ ಬೆಂಕಿ .
ಮಹಾಮನೆಗೆ ಮುತ್ತಿಗೆ
ಹಾಳುಗೆಡುವಿದರು ಅರುಹಿನ ಮನೆಗಳ .
ಬಿಜ್ಜಳನ ಗೃಹ ಬಂಧ ಸೋವಿದೆವನ ಆಟ .
ಶರಣರ ರುಂಡ ಚೆಂಡಾಡ ಹತ್ತಿದರು.
ರಕ್ತದ ಕೋಡಿ ಕೆಂಪಾಯಿತು ನೆಲ .
ನಾಗಮ್ಮ ಚೆನ್ನಬಸವರು ಕೂಡಿ
ಉಳವಿ ಮಾರ್ಗವ ತೋರಿ
ಹೊತ್ತೊಯ್ದರು ವಚನಗಳ ಕಾದಾಟದಿ.
ಹಿಂದೆ ಸೈನಿಕರು ಮುಂದೆ ದಟ್ಟಡವಿ
ಮರಣವೆ ಮಹಾನವಮಿ ಶರಣರ ಕೂಗು.
ಅಳುಕಲಿಲ್ಲ ಬೆದರಲಿಲ್ಲ ಭವಣೆ ಎದುರಿಸಿ
ಮುರಗೋಡ ಕಾದ್ರೋಳಿ ಉಳವಿಯ ಧಿಕ್ಕಿಗೆ
ಜೀವ ತ್ಯಾಗವ ಮಾಡಿ ವಚನ ಉಳಿಸಿದರು.
ಕಲ್ಯಾಣ ಪ್ರಣತೆಯು ಓಡಿದು ಹೋಯಿತು ನೋಡಿ .
ಹಾರವರ ಅಭಿಮಾನ ಕೆಟ್ಟಿತ್ತು ಕೋಡಿ .
ಅಗ್ರಜನ ಮಗಳು ಅಂತ್ಯಜನ ಕೈಗೆ
ಸಾಧಿಸಿತ್ತು ಮಹಾಮಾನವತೆಯ ಸಿದ್ಧಿ .
ಸಮತೆ ಶಾಂತಿ ಪ್ರೀತಿಗೆ ಮೇರು .
ಮನುಕುಲದ ಏಳ್ಗೆಗೆ ಶರಣರು ಬೇರು.
-ಡಾ ಶಶಿಕಾಂತ ಪಟ್ಟಣ -ಪೂನಾ.
ಇಂದು ಮಹಾನವಮಿ ಕಲ್ಯಾಣಕ್ರಾಂತಿಯ ದಿನ ಶರಣರು ತಮ್ಮ ಜೀವ ಬಲಿದಾನ ಮಾಡಿದ ಹುತಾತ್ಮರ ದಿನ .ಇಂದು ಶರಣರು ತಮ್ಮ ಜೀವ ತೊರೆದು ಹೋರಾಡದಿದ್ದರೆ ನಮಗೆ ವಚನಗಳೆಂಬ ಅನುಭವದ ಕೈವಲ್ಯ ದೊರೆಯುವದು ಅಸಾಧ್ಯವಾಗುತ್ತಿತ್ತು .ಶರಣಾರ್ತಿ .ಮರಣವೇ ಮಹಾನವಮಿ