ಬಾಪೂಜೀ ಬಂದು ಬಿಡಿರಿ….
ಬಾಪೂಜೀ,
ಬಂದು ಬಿಡಿರಿ ಬೇಗ ಮತ್ತೊಮ್ಮೆ..
ನಿಮ್ಮ ರಾಮರಾಜ್ಯದ ಕನಸು,
ಸ್ವಾವಲಂಬನೆಯ ತಂತ್ರ
ಅಹಿಂಸೆ, ಶಾಂತಿಯ ಮಂತ್ರ
ಮರೆಯಾಗಿ ಹೋಗಿಹವು ಎಲ್ಲ
ತಿರುಗಿ ಬಾರದ ನಿಮ್ಮ ಹೆಜ್ಜೆಗಳೊಂದಿಗೆ…
ಸ್ವಾರ್ಥ ರಾಜಕಾರಣದ
ಮೋಸ ಕುತಂತ್ರದ
ಮತಾಂಧ ಭೂತಗಳ
ಬಲೆಯೊಳಗೆ ಸಿಲುಕಿ
ಮರುಗಿಹವು ಮೌಲ್ಯಗಳೆಲ್ಲ ಮರಮರನೆ..
ಅಂತಸ್ತು ಅಧಿಕಾರಗಳ
ಮದವೇರಿದ ಗದ್ದುಗೆಗಳಲಿ
ಗಹಗಹಿಸಿ ನಗುತಿವೆ
ಅನ್ಯಾಯ ಅತ್ಯಾಚಾರದ ಬೇರುಗಳು…
ಸತ್ಯದ ಕೊಂಬೆಗಳು
ಬೆಂದು ಹೋಗಿಹವು
ಭ್ರಷ್ಟಾಚಾರದ ಬೆಂಕಿಯಲಿ..
ನಿಮ್ಮ ಜನುಮ ದಿನದ ನೆಪದಲಿ
ನಿಮ್ಮ ಹೆಸರಿನ ಜೈ ಜೈಕಾರ
ಸಂಭ್ರಮಾಚರಣೆ ಸಡಗರ
ಬಡವರ ತುತ್ತು ಕಸಿದು
ಗಳಿಸಿದ ಕಾಳ ಧನದಲಿ….
ಸರಳ ನಿಷ್ಕಲ್ಮಷ ಹೃದಯವಂತ
ಗೇಣು ಬಟ್ಟೆ ಧರಿಸಿದ ಸಂತ
ನೀವಾದಿರಿ ಜಗತ್ತಿಗೇ ಮಹಾತ್ಮ!
ಸಮಾನತೆಯ ಹರಿಕಾರ
ಅವಿರಳ ಘನತೆವೆತ್ತ ಗೌರವಾನ್ವಿತ
ಬಂಧುತ್ವ ಪ್ರೇಮದ ಸಮನ್ವಿತ
ಬುದ್ಧ ಬಸವ ತತ್ವಾದರ್ಶಗಳ ಪ್ರೇರಿತ
ಭಾರತೀಯರ ಪ್ರಿಯ ಗಾಂಧಿ ತಾತ
ಬಂದು ಬಿಡಿರಿ ಬೇಗ…
ಹದಗೆಟ್ಟ ದೇಶ ಮತಿಗೆಟ್ಟ ಜನರ ತಿದ್ದಿ ಬದಲಿಸಲು
ನಿಮ್ಮ ಕೈ ಕೋಲಿನ *ಲಾಠಿ ಚಾರ್ಜ* ಮಾಡಲು
ಮತ್ತೊಮ್ಮೆ ಬಂದು ಬಿಡಿರಿ ಬೇಗ ಮತ್ತೊಮ್ಮೆ..
ಬಾಪೂಜೀ ಬಂದು ಬಿಡಿರಿ ಬೇಗ ಮತ್ತೊಮ್ಮೆ…:
–ಹಮೀದಾಬೇಗಂ ದೇಸಾಯಿ ಸಂಕೇಶ್ವರ