ಜನಪದ ರಂಗಭೂಮಿಯ ಪ್ರಾಚಾರ್ಯ
ಪ್ರೊ. ಬಿ ಅರ್ ಪೋಲೀಸ್‌ಪಾಟೀಲ
ವ್ಯಕ್ತಿತ್ವ ಎನ್ನುವುದು ಅನೇಕ ಶಕ್ತಿಗಳ ಸಂಗಮ. ಆದರ್ಶ, ಸದಾಚಾರ, ಶ್ರದ್ಧೆ, ನಿಷ್ಠೆ, ದಕ್ಷತೆ, ವಿವಿಧ ಸನ್ನಿವೇಶಗಳೊಂದಿಗೆ ಹೊಂದಿಕೊಳ್ಳುವ ಸಾಮರ್ಥ್ಯ, ವೃತ್ತಿಪ್ರಿಯತೆ, ಪರೋಪಕಾರ ಬುದ್ಧಿ, ಪ್ರಾಮಾಣಿಕತೆ ಮುಂತಾದವುಗಳು ಹೀಗೆ ವ್ಯಕ್ತಿತ್ವ ಎನ್ನುವುದು ಅನೇಕ ಗುಣಗಳ ಸಂಗಮ. ಅಂದರೆ ಹೂವಿಗೆ ಪರಿಮಳವಿದ್ದಂತೆ ಮಾನವರಿಗೆ ಬಹುಮುಖ ವ್ಯಕ್ತಿತ್ವವೂ ಅಷ್ಟೇ ಮುಖ್ಯ. ಹಾಗಾಗಿ ನಮಗೆ ವ್ಯಕ್ತಿ ಮುಖ್ಯವಲ್ಲ ವ್ಯಕ್ತಿತ್ವ ಮುಖ್ಯ ಎಂಬುದು ಅರ್ಥವಾಗುತ್ತದೆ.
ಇಂಥ ವೈಶಿಷ್ಠ್ಯಪೂರ್ಣ ವ್ಯಕ್ತಿತ್ವ ಜನನದಿಂದ ಮರಣದವರೆಗೂ ತನ್ನ ತನವನ್ನು ಬೆಳೆಸಿಕೊಳ್ಳುತ್ತಾ ರೂಪಾಂತರಗೊಳ್ಳುತ್ತಾ ಹೋಗುತ್ತದೆ. ಅಂದರೆ Personality begins as early as our childhood and continues to change in meaningful ways throughout the lifespan. ಉದಾಹರಣೆಗೆ, ಯಾವುದೇ ಮಗು ಮನೆಯನ್ನು ಪ್ರವೇಶಿಸಿದಾಗ ಎಲ್ಲರ ಚಿತ್ತ ಅದರತ್ತ ಹೊರಳುತ್ತದೆ. ಮಗುವಿನ ಯಾವುದೇ ಪ್ರಯತ್ನವಿಲ್ಲದೆ ಎಲ್ಲರನ್ನೂ ಅದು ಆಕರ್ಷಿಸುತ್ತದೆ. ಅತ್ಯಂತ ಸಹಜವಾಗಿ ಮತ್ತು ಸರಳವಾಗಿ ನಡೆಯುವಂಥಾ ಪ್ರಕ್ರಿಯೆ. ಮಾತಿಗಿಂತ ಹೆಚ್ಚಾಗಿ ಮಗುವಿನ ಮುಗ್ಧತೆ, ಉಲ್ಲಾಸ, ಸ್ನೇಹಭಾವ, ಚಲನಶೀಲತೆ ನಮ್ಮೆಲ್ಲರ ಗಮನವನ್ನು ಸೆಳೆಯುವದು ಮಗುವಿನ ಸಹಜ ಗುಣ ಮತ್ತು ಮಗುವಿನ ಇರುವಿಕೆಯಲ್ಲಿರುವ ಮೋಹಕತೆ ನಮ್ಮನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತದೆ.
ಇಂಥ ಒಂದು ಮನೋ ವೈಜ್ಞಾನಿಕ ಪೀಠಿಕೆ ಏಕೆಂದರೆ ಈ ಲೇಖನದ ಕೇಂದ್ರಬಿಂದು ಬಹುಮುಖ ವ್ಯಕ್ತಿತ್ವದ, ಮಗುವಿನ ಮುಗ್ಧ ಮನಸ್ಸನ್ನು ಹೊಂದಿದ ಸದಾ ಕ್ರಿಯಾಶೀಲರೂ ಆದ ಪ್ರೊ. ಬಾಪೂಗೌಡ ರೇವಣಶಿದ್ಧಪ್ಪಗೌಡ ಪೋಲೀಸ್‌ಪಾಟೀಲ ಅವರು. ಜನಪದ ರಂಗಭೂಮಿಯ ಬಗ್ಗೆ ಅಪಾರ ಕಾಳಜಿ ಇರುವ, ಸಾಹಿತ್ಯ, ಸಂಗೀತ, ಅಭಿನಯ, ನಿರ್ದೇಶನ, ಗಾಯನ, ಜಾನಪದ ಸಾಹಿತ್ಯ ಸಂಗ್ರಹ, ಲಾವಣಿ ಪದಗಳ ರಚನೆ, ರಂಗಭೂಮಿಯ ಚಿಂತನೆ ಹೀಗೆ ನೂರಾರು ಸಾಹಿತ್ಯ ಪ್ರಾಕಾರಗಳಲ್ಲಿ ಪ್ರೊ. ಬಿ ಆರ್ ಪೋಲೀಸ್‌ಪಾಟೀಲ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಪ್ರಸ್ತುತ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿ ವಾಸವಾಗಿರುವ ಪ್ರೊ. ಬಾಪೂಗೌಡ ಆರ್ ಪೋಲೀಸ್‌ಪಾಟೀಲ ಅವರು ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕೊಣ್ಣೂರು ಗ್ರಾಮದವರು. ದಿನಾಂಕ 01.06.1950 ರಂದು ತಾಯಿ ಲಕ್ಷ್ಮೀಬಾಯಿಯವರ ತವರೂರಾದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಿರೂರು ಗ್ರಾಮದಲ್ಲಿ ಜನಿಸಿದರು. ತಂದೆ ಶ್ರೀ ರೇವಣಶಿದ್ಧಪ್ಪಗೌಡ ಭೀಮನಗೌಡ ಪೋಲೀಸ್‌ಪಾಟೀಲ ಅವರು. ಕೊಣ್ಣೂರು ಗ್ರಾಮದಲ್ಲಿಯೇ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಬಿಜಾಪುರ ಹಾಗು ತಾಳಿಕೋಟೆಯಲ್ಲಿ ಪೂರೈಸಿದ ಪ್ರೊ. ಬಿ ಆರ್ ಪೋಲೀಸ್‌ಪಾಟೀಲ ಅವರು 1973 ರಲ್ಲಿ ಇಂಗ್ಲೀಷಿನಲ್ಲಿ ಸ್ನಾತಕೋತ್ತರ ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪಡೆದರು.
“ದೇವರಾಗಬೇಕನ್ನಾವರು ಮಾಸ್ತರ ಆಗಬೇಕಂತ” ಎನ್ನುವ ಹಾಗೆ ಶಿಕ್ಷಕ ವೃತ್ತಿಯನ್ನು ಅತೀವವಾಗಿ ಪ್ರೀತಿಸುತ್ತಿದ್ದ ಪ್ರೊ. ಬಿ ಆರ್ ಪೋಲೀಸ್‌ಪಾಟೀಲ ಅವರು ಬಾಗಲಕೋಟೆ ಜಿಲ್ಲೆ ಬನಹಟ್ಟಿಯ ಎಸ್ ಆರ್ ಏ ಪದವಿ ಪೂರ್ವ ಕಾಲೇಜಿನಲ್ಲಿ 1974 ರಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಉಪನ್ಯಾಸಕರಾಗಿ ಮತ್ತು 2004 ರಿಂದ ಕಾಲೇಜಿನ ಪ್ರಾಚಾರ್ಯರಾಗಿ ಸುಮಾರು 35 ವರ್ಷ ಸೇವೆ ಸಲ್ಲಿಸಿ 2008 ರಲ್ಲಿ ನಿವೃತಿಯನ್ನು ಹೊಂದಿದರು. ಶ್ರೀಮತಿ ಶಕುಂತಲಾ ಅವರು ಪ್ರೊ. ಬಿ ಆರ್ ಪೋಲೀಸ್‌ಪಾಟೀಲ ಅವರ ಧರ್ಮಪತ್ನಿ. ಇವರಿಗೆ ಇಬ್ಬರು ಪುತ್ರರು ಅರವಿಂದ ಮತ್ತು ಆನಂದ, ಓರ್ವ ಪುತ್ರಿ ಅಶ್ವಿನಿ.
ಇಷ್ಟೇ ಆಗಿದ್ದರೆ ಈ ಲೇಖನ ಬರೆಯುವ ಅಗತ್ಯ ಇರಲಿಲ್ಲ. ಕಾಲೇಜಿನ ಉಪನ್ಯಾಸದ ವೃತ್ತಿಯ ಜೊತೆ ಜೊತೆಗೆ ಜನಪದ ರಂಗಭೂಮಿಯ ನಂಟನ್ನು ಬೆಳೆಸಿಕೊಂಡು ರಂಗ ಕಾಯಕ ಮಾಡುತ್ತಾ ಕಳೆದ 45/50 ವರ್ಷಗಳಿಂದ ನಿರಂತರವಾಗಿ ಕ್ರಿಯಾಶೀಲರಾಗಿದ್ದು ಸಾಹಿತ್ಯ, ಜನಪದ ಸಂಗೀತ ದಾಸೋಹ ಮಾಡುತ್ತಿದ್ದಾರೆ.
ಪ್ರೊ. ಬಿ ಆರ್ ಪೋಲೀಸ್‌ಪಾಟೀಲ ಅವರ ಕುಟುಂಬದವರು ಯಾರೂ ರಂಗಭೂಮಿಯ ಸೇವೆಯನ್ನು ಮಾಡಿದವರಲ್ಲ. ಇವರಿಗೆ ಜನಪದ ರಂಗಭೂಮಿಯ ಹುಚ್ಚನ್ನು ಹಚ್ಚಿಸಿದವರು ಗಿರಿಮಲ್ಲ ಎನ್ನುವ ಅಪ್ಪಟ ಗ್ರಾಮೀಣ ಜಾನಪದ ಪ್ರತಿಭೆ. ಇವರು ಆಡುವ ದೊಡ್ಡಾಟ, ಸಣ್ಣಾಟ ಮತ್ತು ಶ್ರೀ ಕೃಷ್ಣ ಪಾರಿಜಾತಗಳನ್ನು ನೋಡುತ್ತ ನೋಡುತ್ತ ಪ್ರೊ. ಬಿ ಆರ್ ಪೋಲೀಸ್‌ಪಾಟೀಲ ಅವರ ರಂಗಭೂಮಿಯ ಪಯಣ ಬಾಲ್ಯದಿಂದಲೇ ಪ್ರಾರಂಭವಾಗುತ್ತದೆ. ಇವರಿಗೆ ಜನಪದ ರಂಗಭೂಮಿಯ ಪ್ರಭಾವ ಎಷ್ಟು ದಟ್ಟವಾಗಿತ್ತು ಎಂದರೆ 11 ನೇ ವಯಸ್ಸಿನಲ್ಲಿಯೇ “ದ್ರೌಪದಿ ವಸ್ತ್ರಾಪಹರಣ” ಎನ್ನುವ ದೊಡ್ಡಾಟ ಮತ್ತು “ಪೌರ್ಣಮಿ ಚಂದ್ರ” ಎನ್ನುವ ನಾಟಕವನ್ನು ಬರೆದರು. ಸುಮಾರು 120 ಕೃತಿಗಳನ್ನು ರಚನೆ ಮಾಡಿದ್ದಾರೆ.
ವೃತ್ತಿ ಮತ್ತು ಪ್ರವೃತ್ತಿಯನ್ನು ಯಾವತ್ತೂ ಮಿಕ್ಸ್ ಮಾಡದ ಪ್ರೊ. ಬಿ ಆರ್ ಪೋಲೀಸ್‌ಪಾಟೀಲ ಅವರು ಪ್ರವೃತ್ತಿಯ ಓದು ಮತ್ತು ಬರಹ ಮಾಡಿದ್ದು ಎಲ್ಲಾನೂ ಎಲ್ಲಾ ರಾತ್ರೀನೆ. ಅದರಲ್ಲಿ ಅತಿ ಹೆಚ್ಚು ಬರದಿರೋದು ಬೆಳಗಿನ ಜಾವ ಸುಮಾರು ಎರಡು ಘಂಟೆಯ ನಂತರವೇ. ಅಷ್ಟೊಂದು ವೃತ್ತಿಗೆ ಗೌರವವನ್ನು ನೀಡಿದವರು ಹಾಗೂ ಪ್ರವೃತ್ತಿಯನ್ನು ಪ್ರೀತಿಸಿದ ಅಧ್ಯಯನಶೀಲರು ಪ್ರೊ. ಬಿ ಆರ್ ಪೋಲೀಸ್‌ಪಾಟೀಲ ಅವರು. ಕಥೆ, ಕಾದಂಬರಿ, ನಾಟಕ, ವಚನ ಸಾಹಿತ್ಯ, ವಿಮರ್ಶೆ, ಅಂಕಣ ಬರಹ, ಪ್ರಬಂಧ, ಮಕ್ಕಳ ಸಾಹಿತ್ಯ, ಸೃಜನಶೀಲ ಸಾಹಿತ್ಯ, ಸಂಗೀತ, ಅಭಿನಯ, ನಿರ್ದೇಶನ, ಜಾನಪದ ಸಂಗ್ರಹ, ಸಮಾಜಸೇವೆ, ಲಾವಣಿ ಗಾಯನ ಇತ್ಯಾದಿಗಳತ್ತ ತಮ್ಮ ಗಮನವನ್ನು ಕೇಂದ್ರೀಕರಿಸಿ ಕೃಷಿಯನ್ನು ಮಾಡಿದ ದೈತ್ಯ ಪ್ರತಿಭೆ.
ಮೊದಲು ಅವರ ಪ್ರಕಟಿತ ಕೃತಿಗಳನ್ನು ದಾಖಲಿಸಿ ಮುಂದೆ ಹೋಗೋಣ.
1. ಕಾವ್ಯಗಳು :
ಕೆಂಡ ಉಗುಳುವವರು
ಆತಲ್ಲೊಮ್ಮನಸ ಗಿರಿಗಿರಿ
ಹೂಗಳಿವೆ ನಿಧಾನ (ಕವಿತೆಗಳು)
ಸತ್ಯದ ಗುಡಿಯ ಸುತ್ತ (ಇಂಗ್ಲೀಷ್ ಕವಿತೆಗಳ ಅನುವಾದ)
ಹೆಂತಾ ಚೆಂದಿತ್ತ ಹಿಂದುಸ್ತಾನ (ಲಾವಣಿಗಳು)
ಗಂಗವ್ವ ಮಳಿ ಹೋದವೊ (ಜನಗೀತೆಗಳು)
ಆಯ್ದ ಸ್ವತಂತ್ರ ಲಾವಣಿಗಳು
Get A Rank Darling (Tenses in Rhymes)
We Are Eight Parts of Speech
2. ಕಥೆಗಳು :
ಎಲ್ಲಿ ಆ ಕಣ್ಣುಗಳು
ಊರು ಮತ್ತು ದಾರಿ
ಬೂದಿ ಮತ್ತು ಕೆಂಡ
ಎಂಥ ಲೋಕವಯ್ಯ
3. ಇತರೆ :
ಕೊಳ್ಳುವವರೆ ಎಚ್ಚರ
ಎನ್. ಬಸವರಾಜ ಗುಡಗೇರಿ ಜೀವನ ಚರಿತ್ರೆ
ತುಲಾಭಾರ – ನ. ಮ. ವಡಗೇರಿ ವೃತಿ ಜೀವನ ಚರಿತ್ರೆ.
ನುಡಿ ವಚನ – ಸ್ವರಚಿತ ವಚನ ಸಂಕಲನ
ಮಾಯಾ ಚಿಗರಿ (ಚಿಂತನ / ಅಂಕಣ ಬರಹಗಳು)
ಸಂಬೋಳಿ-ಸಂಬೋಳಿ (ಬಸವಣ್ಣನ ಜೀವನ ದರ್ಶನ – ವಿಮರ್ಶಾ ಲೇಖನಗಳ ಸಂಕಲನ)
ಅನುಭೂತಿ (ಜೀವನ ಚರಿತ್ರೆ)
ಹಳಿಂಗಳಿ ಶ್ರೀ ಶರಣಬಸವ ವಿಜಯ
ಪರಿಕರ
ಸಂಕಥನ ಸಿರಿ
ಸಾತ್ವಿಕ
ಮಾಸ್ತರ ದೇವರು
4. ಸಂಪಾದನೆ :
ಪುನಶ್ಚೇತನ (ಪುನಶ್ಚೇತನ ಶಿಬಿರಗಳ ಸಚೇತನ ಗ್ರಂಥ)
ಸಾಮಾನ್ಯ ಜ್ಞಾನ ಭಂಡಾರ (ರಸಪ್ರಶ್ನೆಗಳ ಸಂಗ್ರಹ)
ದೇವನ ಮನೆ (ಬ.ಗಿ. ಯಲ್ಲಟ್ಟಿ ಅಭಿನಂದನಾ ಗ್ರಂಥ)
ಕಡೆಗೋಲು (64 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಧೋಳ ಆಕರ ಗ್ರಂಥ)
ಬಾಗಲಕೋಟೆ – ಕಾವ್ಯ (ಪ್ರಧಾನ ಸಂಪಾದಕ)
ಬಾಗಲಕೋಟೆ – ಕಥೆ (ಪ್ರಧಾನ ಸಂಪಾದಕ)
ಬಾಗಲಕೋಟೆ – ನಾಟಕ ಕಥೆಗಳು (ಪ್ರಧಾನ ಸಂಪಾದಕ)
ಬಾಗಲಕೋಟೆ – ಚುಟುಕು (ಪ್ರಧಾನ ಸಂಪಾದಕ)
ಬಾಗಲಕೋಟೆ – ಮಕ್ಕಳ ಕಥೆಗಳು (ಪ್ರಧಾನ ಸಂಪಾದಕ)
ದಕ್ಷಿಣಾಪಥೇಶ್ವರ – ಚಾಲುಕ್ಯ ಉತ್ಸವ ಸ್ಮರಣ ಸಂಪುಟ
ಉದಯರವಿ – ಕುವೆಂಪು ಸ್ಮರಣ ಸಂಪುಟ
ವಿಕ್ರಾಂತ – ಎಂ ಸಿ ಗೊಂದಿ ಅಭಿನಂದನ ಗ್ರಂಥ
ನೆನಹು ಘನ
ಸಿದ್ಧಾರ್ಥ
ಎಸ್ ಆರ್ ಮನಹಳ್ಳಿ ಅಭಿನಂದನ ಗ್ರಂಥ
ಸಮದರ್ಶಿ (ಶ್ರೀ ವಾಸಣ್ಣ ದೇಸಾಯಿ ಸಂಸ್ಮರಣ ಗ್ರಂಥ)
5. ಕಾದಂಬರಿಗಳು :
ಮಹಾವೃಕ್ಷ
ಪರಕಾಯದಲ್ಲಿ ನಾಲ್ಕು ದಿನ
ದೊರೆಯಿಲ್ಲದೂರಿಗೆ
6. ನಾಟಕಗಳು :
ಕೊನೆ ನಮಸ್ಕಾರ
ಬಯಕೆ
ತತ್ವಾಂತರ ಪರ್ವ
ಬೇಲಿ ದಾಟೋಣ
ಕಿಟ್ಟು ಪಾಪು
ಬೇತಾಳದ ಬೆನ್ನು ಹತ್ತಿ
ದ್ಯೂತಾವತಾರ
ಮೈಲಾರ ಮಹಾದೇವ
ನಾನಾನೆಂಬುದು ನಾನಲ್ಲ
ತುಂಬಿ ಹರಿದಾವ ಹೊಳಿಹಳ್ಳ
ರಾಯ ನವಮ್ಯಾಲ ಸಿಟ್ಟೇನ
ತತ್ವಾಂತರ ಪರ್ವ
ಹಾವು
ಎನ್ನ ಬೆಂದೊಡಲಿಗೆ
ಬರಸಿಡಿಲು
ಎಲ್ಲಿ ಹೋದನು ಕಂದ ಎಲ್ಲಿ ಹೋದನೊ
ಸಿರಿಮೊಗ್ಗು
ವೈಶಾಖದ ಹುಣ್ಣಿಮೆ
ಇದು ಬರಿ ಕನಸಲ್ಲ
ಬೊಲೊ ಭಾರತಮಾತಾ ಕಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ವಾಸನಾ ನಿನಗೆ ನಮೋ ನಮೋ
ಕೋನಗಳು
ಗಂಟು
ರುದ್ರಪ್ಪನ ಖಡ್ಗ
ನಾಮಕರಣ
ಅವ್ವ
ಭೀಮಸೇನ ಪಟ್ಟಭಿಷೇಕ
ಜ್ಯೋತಿ ಕಿರಿದೆನ್ನಬಹುದೆ
ಮಹಾಮಹಿಮ ಎಡೆಯೂರು ಸಿದ್ಧಲಿಂಗ ಶಿವಯೋಗಿ
ದೊಡ್ಡಾಟ
ಡ್ರಾಮಾಯಣ
ಗಾಳಿ ಗುದ್ದುವುದು
ಎಪ್ರಿಲ್ ಫೂಲ್
ಸಂಗನ ಗುಡ್ಡದಲ್ಲಿ
ಹಾಡು ಮೌನವೆ ಹಾಡು
ಗೂಡು ಒಂದುಗೂಡು
ಸುಜಲಾಂ-ಸುಫಲಾಂ
ಕ್ಷಮಿಸಿ ಬಿಡ್ರಿ ನನ್ನ
ಕಲ್ಲಣ್ಣ ಮಾಸ್ತರರ ಕ್ಯಾನ್ಸರ್ ಪ್ರಸಂಗ
ಹೇಳುವೆ ಮಜಕೂರ
ಕೆಂಡ ಸಂಪಿಗೆ
ಅಪ್ಪಾ ನೀ ಬೇಗ ಬಾ (ಮಕ್ಕಳ ನಾಟಕ)
ಚಿಕ್ಕಿ ಮಾತಡತಾವ
ಮದುವೆ ಬೆಳ್ಳಿ ಹಬ್ಬದ ರಾತ್ರಿ
ಬಾಗಲ ಹಾಕ್ರಪೋ ಬಾಗಲಾ
ಸಂಗೊಳ್ಳಿ ರಾಯಣ್ಣ
ಉತ್ತರನ ಪೌರುಷ
ಸಬ್ ಕೋ ಸನ್ಮತಿ ದೇ ಭಗವಾನ್
ಉರುಳುತಿದೆ ಚಕ್ರ
ಬಹುರೂಪಿ
ಸುಯೋಧನ ವಧೆ
ತುಲಾಭಾರ
ಗಿರಿಮಲ್ಲನ ಮದುವೆ
ಸ್ವರ್ಗ-ನರಕದ ನಡುವೆ
ಕಾಶಿ ಕೈಲಾಸ
ನಾ-ನೀ ನಾಟಕ
ಎಚ್ಚಮನಾಯಕ
ಟಿಪ್ಪು ಸುಲ್ತಾನ್
ಪಣತಿ (ಮಕ್ಕಳ ನಾಟಕ)
7. ಬೀದಿ ನಾಟಕಗಳು :
ಬೇಲಿ ದಾಟೋಣ
ಹುಡುಗಾಟ – ಹುಡುಕಾಟ
ಅಪರಾಧಿ ನಾನಲ್ಲ
ಬೇತಾಳದ ಬೆನ್ನುಹತ್ತಿ
ಹುಶಾರಿ ಹೇಳತೀವ
ನಿರ್ಮಲ ಗ್ರಾಮ
ನೌಕರಿ ನೌಕರಿ
ರಣದೇವ
ಉಧೋ ಉಧೋ
ಆಸೆಯೆಂಬುದು ಅರಸಿಂಗಲ್ಲದೆ
ಜ್ಯೋತಿ ಬೆಳಗುತಿದೆ
ನಾವಿರೋದ ಹಿಂಗ
8. ಮಕ್ಕಳ ಸಾಹಿತ್ಯ
ಬಿದಿಗೆ ಚಂದ್ರ ಮಕ್ಕಳ ಕವಿತೆಗಳು
ಚಿನ್ನದ ಮುಂಗುಸಿ ಮತ್ತು ಇತರ ಮಕ್ಕಳ ಕಥೆಗಳು
ಅಪ್ಪ ನೀ ಬೇಗ ಬಾ ಮಕ್ಕಳ ನಾಟಕ
ಪ್ರೊ. ಬಿ ಆರ್ ಪೋಲೀಸ್‌ಪಾಟೀಲ ಅವರು ತಮ್ಮ ಪ್ರೀತಿಯ ಪ್ರವೃತ್ತಿಯ ಕಲಾ ಮಾಧ್ಯಮವಾದ ಲಾವಣಿ, ತತ್ವಪದ, ಬಯಲಾಟಗಳನ್ನು ಬರೆದು ತಂಡವನ್ನು ಕಟ್ಟಿಕೊಂಡು ಕಳೆದ 4/5 ದಶಕಗಳಿಂದಲೂ ಪ್ರಯೋಗಿಸುತ್ತಾ ಬಂದಿದ್ದಾರೆ. ಇವರು ಒಬ್ಬ ಗಾಯನ ಗಾರುಡಿಗ ಅಂದರೂ ತಪ್ಪಾಗಲಾರದು. ಇವರ ಹಾಡಿನ ಮೋಡಿಗೆ ತಲೆಬಾಗದವರು ಇಲ್ಲ. ಕರ್ನಾಟಕದ ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಧಾರ್ಮಿಕ ಕ್ಷೇತ್ರಗಳನ್ನು ತಮ್ಮ ದಣಿವಿಲ್ಲದ ಕಾಯಕದಿಂದ ಶ್ರೀಮಂತಗೊಳಿಸಿದ್ದಾರೆ.
ವಿದ್ಯಾರ್ಥಿಗಳ ಪ್ರೀತಿಯ ಉಪನ್ಯಾಸಕರಾಗಿದ್ದ ಪ್ರೊ. ಬಿ ಆರ್ ಪೋಲೀಸ್‌ಪಾಟೀಲ ಅವರು ನಿವೃತಿಯಾದ ಮೇಲೆ ಅನೇಕ ಕ್ರಿಯಾಶೀಲ ಬದುಕಿಗೆ ತೊಡಗಿಸಿಕೊಂಡರು. ನಡೆ-ನುಡಿ ಒಂದಾದ ಬದುಕಿನ ನಿಜವಾದ ಕಾಯಕಯೋಗಿಗಳು. “ವಾತ್ಸಲ್ಯ ವಿಚಾರ ವೇದಿಕೆ” ಯನ್ನು ಹುಟ್ಟುಹಾಕಿ ಜನಪದ ವಿಚಾರಗಳು ಮತ್ತು ಲಾವಣಿ ಪದ ಹಾಗೂ ಜನಪದ ಸೊಗಡನ್ನು ಪ್ರಸಾರ ಮಾಡುವಲ್ಲಿ ನಿರತರಾಗಿದ್ದಾರೆ.
ಅವರ ಸಾಧನೆಗಳ ಪಟ್ಟಿಯನ್ನು ಒಮ್ಮೆ ನೋಡಿದರೆ ಎಂಥವರನ್ನೂ ಮೂಕವಿಸ್ಮಿತರನ್ನಾಗಿ ಮಾಡುತ್ತದೆ.
1972 ರಿಂದ : ಆಕಾಶವಾಣಿ ಧಾರವಾಡ-ನಾಟಕ ವಿಭಾಗದ ಖಾಯಂ ಕಲಾವಿದ.
1978 ರಿಂದ : 40 ಕ್ಕಿಂತ ಹೆಚ್ಚು ಬಾನುಲಿ ನಾಟಕಗಳ ಪ್ರಸಾರ.
1977 : ಹೊಸ ದೆಹಲಿಯಲ್ಲಿ ನಡೆದ ಅಖಿಲ ಭಾರತ ರೇಡಿಯೋ ನಾಟಕಕಾರರ
ಸಮಾವೇಶದಲ್ಲಿ ಭಾಗವಹಿಸಿದ್ದು.
1988 : ಕೇರಳ ರಾಜ್ಯದ ಕಾಸರಗೋಡಿನಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಏರ್ಪಡಿಸಿದ
ನಾಟಕ ಶಿಲ್ಪ ಶಿಬಿರದಲ್ಲಿ ಭಾಗವಹಿಸಿದ್ದು.
1988 : ದೆಹಲಿ ದೂರದರ್ಶನದಲ್ಲಿ ಸಂದರ್ಶನ ಪ್ರಸಾರ.
1991 : ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ
ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದು.
1992 : ಮಂಡ್ಯದಲ್ಲಿ ನಡೆದ 63 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ
ಸಂವಾದ ಗೋಷ್ಠಿಯಲ್ಲಿ ಭಾಗವಹಿಸಿದ್ದು.
1995 : ಆಂಗ್ಲ ಉಪನ್ಯಾಸಕರ ಪುನರ್ಮನನ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿ.
1996 : ರಾಜ್ಯ ಬೀದಿ ನಾಟಕ ನಿರ್ದೇಶಕರ ಸಮಾವೇಶ ಮೈಸೂರು ಇದರಲ್ಲಿ ಭಾಗಿ.
1996 : ದ್ವಿತೀಯ ಪಿ.ಯೂ.ಸಿ ಇಂಗ್ಲೀಷ್ ಪಠ್ಯಪುಸ್ತಕ ಸಮಿತಿ ಸದಸ್ಯ.
1997 : ಲೋಕಶಿಕ್ಷಣ ನಿರ್ದೇಶನಾಲಯ ಬೆಂಗಳೂರು – ಸಂಪನ್ಮೂಲ ವ್ಯಕ್ತಿಯೆಂಬ
ಮನ್ನಣೆ.
1997 : ಅಂತರಾಷ್ಟ್ರೀಯ ಸಾಕ್ಷರತಾ ಸಮಾವೇಶ (ಬೆಂಗಳೂರು) ದಲ್ಲಿ ಬಾಗಲಕೋಟೆ-
ವಿಜಯಪುರ ಜಿಲ್ಲೆಗಳ ನಾಯಕರಾಗಿ ಭಾಗವಹಿಸಿದ್ದು.
1998-2001 : ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷ.
1999 : ಬೆಂಗಳೂರು ವಿಶ್ವ ವಿದ್ಯಾಲಯ (ಜ್ಞಾನ ಭಾರತಿ) ಏರ್ಪಡಿಸಿದ ಪದವಿ ಕಾಲೇಜು
ಕನ್ನಡ ಉಪನ್ಯಾಸಕರ ಪುನಶ್ಚೇತನ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದು.
2000 : ಬಾಗಲಕೋಟೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ
ಕಾರ್ಯದರ್ಶಿಯಾಗಿ ಯಶಸ್ವಿ ಸಂಘಟನೆ.
2000 : ಬೆಂಗಳೂರು ವಿಶ್ವವಿದ್ಯಾಲಯ ಏರ್ಪಡಿಸಿದ್ದ ರಾಜ್ಯ ಕವಿಗೋಷ್ಠಿಯಲ್ಲಿ ಭಾಗಿ.
2001 : ಬೆಂಗಳೂರು ವಿಶ್ವವಿದ್ಯಾಲಯ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ
ಸಂಸ್ಕೃತಿ ಉತ್ಸವದಲ್ಲಿ ಭಾಗಿ.
2001-2004 : ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಗೆ
ನೇಮಕಗೊಂಡಿದ್ದು (ಕರ್ನಾಟಕ ಸಂಘ-ಸಂಸ್ಥೆಗಳ ಪ್ರತಿನಿಧಿಯಾಗಿ).
2001 : ಕುವೆಂಪು ವಿಶ್ವ ವಿದ್ಯಾಲಯ ಏರ್ಪಡಿಸಿದ್ದ ಪದವಿ ಕಾಳೇಜಿನ ಹಿಂದಿ ಉಪನ್ಯಾಸಕರ
ಪುನಶ್ಚೇತನ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದು.
2002 : ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದು.
2002 : ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದು.
2003 : ದೂರದರ್ಶನದಲ್ಲಿ “ಕೊನೆ ನಮಸ್ಕಾರ” ನಾಟಕ ಪ್ರಸಾರ.
2003 : ಚಂದನ ವಾಹಿನಿಯ “ಬೆಳಗು” ಕಾರ್ಯಕ್ರಮದಲ್ಲಿ ಸಂದರ್ಶನ ನೇರ ಪ್ರಸಾರ.
2003-04 : ಪ್ರಥಮ ಪಿ.ಯೂ.ಸಿ ಇಂಗ್ಲೀಷ್ ಪಠ್ಯಪುಸ್ತಕ ಸಮಿತಿ ಸದಸ್ಯ.
2004 : DSERT ನಿರ್ಮಿಸಿದ “ಕೇಳಿಕಲಿ-ಬಾಳುಕಲಿ” ಸಾಕ್ಷ್ಯ ಚಿತ್ರಕ್ಕೆ ಚಿತ್ರಕಥೆ ಬರೆದು
ಪ್ರಮುಖ ಪಾತ್ರಾಭಿನಯ.
2004-2005 : ಮೂಡಲಮನೆ ಧಾರಾವಾಹಿಗೆ ಸಂಭಾಷಣೆ ಬರೆದಿದ್ದು.
2007 : ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ The Treasure and Message of
Indian Folklore ಕುರಿತು ಪ್ರಬಂಧ ಮಂಡನೆ.
2009 : ಐಕ್ಯಭಾರತಿ ಪುಣೆ ಮತ್ತು ಪುಣೆ ವಿಶ್ವವಿದ್ಯಾಲಯ ಏರ್ಪಡಿಸಿದ ರಾಷ್ಟ್ರೀಯ ವಿಚಾರ
ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ The Role of Zansi Laxmibai in India’s Struggle for Independence ಕುರಿತು ಪ್ರಬಂಧ ಮಂಡನೆ.
2010 : ಐಕ್ಯಭಾರತಿ ಪುಣೆ ಮತ್ತು ಪುಣೆ ವಿಶ್ವವಿದ್ಯಾಲಯ ಏರ್ಪಡಿಸಿದ ರಾಷ್ಟ್ರೀಯ ವಿಚಾರ
ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ Dalit Poetry in Kannada Past Present and Future ಕುರಿತು ಪ್ರಬಂಧ ಮಂಡನೆ.
2011 : ಪುಣೆಯಲ್ಲಿ ನಡೆದ ಅಂತರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡನೆ.
2018 : ಜಮಖಂಡಿ ತಾಲೂಕಾ ಜಾನಪದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ.
2019 : ವಿಜಯಪುರ ಜಿಲ್ಲಾ 16 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ.
2019 : ಹೊಸಪೇಟೆಯಲ್ಲಿ (ಮಾರ್ಚ 15,16,17) ನಡೆದ ಅಖಿಲ ಭಾರತ ಯಕ್ಷಗಾನ
ಬಯಲಾಟ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ.
ತಲೆಗೊಂದು ರುಮಾಲು ಸುತ್ತಿಕೊಂಡು ತಂಡ ಕಟ್ಟಿಕೊಂಡು ಹಳ್ಳಿ-ಹಳ್ಳಿಗೆ ತಿರುಗಾಡಿ ಕುಣಿದು-ಕುಣಿದು ಲಾವಣಿ ಪದಗಳನ್ನು ಹಾಡುತ್ತಾ ಹಾಡಿಸುತ್ತಾ ನಮ್ಮ ಮೂಲ ಸಂಸ್ಕೃತಿಯನ್ನು ಬೆಳೆಸಿ ಉಳಿಸುವಲ್ಲಿ ನಿರತರಾಗಿದ್ದಾರೆ. ಆಕಾಶವಾಣಿ ಧಾರವಾಡದ ನಾಟಕ ವಿಭಾಗದ ಕಲಾವಿದರಾಗಿರುವ ಪ್ರೊ. ಬಿ ಆರ್ ಪೋಲೀಸ್‌ಪಾಟೀಲ ಅವರು ಪ್ರಾದೇಶಿಕ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಬಾನುಲಿ ನಾಟಕಗಳು ಮತ್ತು ಪ್ರಬಂಧಗಳ ಪ್ರಸ್ತುತಿಯನ್ನೂ ಮಾಡಿದ್ದಾರೆ. ಪದವೀ ಪೂರ್ವ ಮತ್ತು ಪದವಿ ಪಠ್ಯ ಪುಸ್ತಕ ಸಮಿತಿ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.
ಇಂಥ ಛಲಬಿಡದ ತ್ರಿವಿಕ್ರಮ ಮತ್ತು ಜನಪದ ರಂಗಭೂಮಿಯ ದೈತ್ಯ ಪ್ರತಿಭೆ ಪ್ರೊ. ಬಿ ಆರ್ ಪೋಲೀಸ್‌ಪಾಟೀಲ ಅವರ ಸಾಧನೆಗೆ ಸಂದ ಪ್ರಶಸ್ತಿ ಪುರಸ್ಕಾರಗಳ ಪಟ್ಟಿ ಬಹಳ ದೊಡ್ಡದಿದೆ. ಅವುಗಳಲ್ಲಿ ಕೆಲವೊಂದನ್ನು ಇಲ್ಲಿ ಉಲ್ಲೇಖಿಸಲೇಬೇಕು.
1978 : ಕೊನೆ ನಮಸ್ಕಾರ ನಾಟಕಕ್ಕೆ “ಪ್ರಥಮ ಬಹುಮಾನ”.
1980 : ವೈಶಾಖ ಹುಣ್ಣಿಮೆ ನಾಟಕಕ್ಕೆ ಅಖಿಲ ಭಾರತ ನಾಟಕ ರಚನಾ ಸ್ಪರ್ಧೆಯಲ್ಲಿ
“ತೀರ್ಪುಗಾರರ ಮೆಚ್ಚುಗೆ”.
1985 : ರಾಯ ನನಮ್ಯಾಲ ಸಿಟ್ಟೇನ ಪುಸ್ತಕಕ್ಕೆ ಕರ್ನಾಟಕ ನಾಟಕ ಅಕಾಡೆಮಿ “ನಾಟಕ
ರಚನಾ ಸ್ಪರ್ಧೆಯಲ್ಲಿ ಬಹುಮಾನ”.
1986 : ಮೇಟಿ ನಾಟಕಕ್ಕೆ ಕರ್ನಾಟಕ ನಾಟಕ ಅಕಾಡೆಮಿ “ನಾಟಕ ರಚನಾ ಸ್ಪರ್ಧೆಯಲ್ಲಿ
ಬಹುಮಾನ”.
1987 : ತುಂಬಿ ಹರಿದಾ ಹಳ್ಳ ನಾಟಕಕ್ಕೆ “ಅಖಿಲ ಭಾರತ ಆಕಾಶವಾಣಿ ರಾಷ್ಟ್ರೀಯ ನಾಟಕ
ರಚನಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ”.
1989 : ಹಾವು ನಾಟಕಕ್ಕೆ ಅಖಿಲ ಭಾರತ ರಾಷ್ಟ್ರೀಯ ಬಾನುಲಿ ರಚನಾ ಸ್ಪರ್ಧೆಯಲ್ಲಿ
“ತೀರ್ಪುಗಾರರ ಮೆಚ್ಚುಗೆ”.
1993 : ರಂಗಭೂಮಿಗೆ ಸಲ್ಲಿಸಿದ ಸೇವೆಗೆ ಕರ್ನಾಟಕ ನಾಟಕ ಅಕಾಡೆಮಿಯಿಂದ “ವಿಶೇಷ
ಪುರಸ್ಕಾರ”.
1997 : ಶಿಕ್ಷಣ-ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ International Biography
Association “Cambridge-International Man of the year ಪ್ರಶಸ್ತಿ”.
1997 : ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ನಾಟಕಕ್ಕೆ “ಅಖಿಲ ಭಾರತ ಬಾನುಲಿ ನಾಟಕ
ರಚನಾ ಸ್ಪರ್ಧೆಯಲ್ಲಿ ತೃತೀಯ ಬಹುಮಾನ”.
1997 : ಹೆಂತಾ ಚೆಂದಿತ್ತ ಹಿಂದುಸ್ತಾನ ಲಾವಣಿ ಸಂಕಲನ ಪುಸ್ತಕಕ್ಕೆ “ಗೊರೂರು ಪ್ರತಿಷ್ಠಾನ
ಪ್ರಶಸ್ತಿ”.
1998 : ಶಿಕ್ಷಣ-ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ “ಸಿಂಪಿ ಲಿಂಗಣ್ಣ ಪ್ರಶಸ್ತಿ”.
1998 : ಸತ್ಯದ ಗುಡಿಯ ಸುತ್ತ ಕವನ ಸಂಕಲನಕ್ಕೆ “ತಮ್ಮಣ್ಣಪ್ಪ ಚಿಕ್ಕೋಡಿ ಸಾಹಿತ್ಯ ಪ್ರಶಸ್ತಿ”.
1999 : ಬೀದಿ ನಾಟಕ ಕ್ಷೇತ್ರದ ಸೇವೆಗಾಗಿ ಮಂಗಳೂರಿನ ಚೇತನ ಸಂಸ್ಥೆಯಿಂದ “ಕಲಾಶ್ರೀ
ಪ್ರಶಸ್ತಿ”.
2000 : ಬೂದಿ ಮತ್ತು ಕೆಂಡ ಕಥೆಗೆ “ತುಷಾರ ಎಚ್ ಎಮ್ ಟಿ ಪ್ರಶಸ್ತಿ”.
2001 : ವಚನ ಸಾಹಿತ್ಯ ಕ್ಷೇತ್ರದಲ್ಲ ಮಾಡಿದ ಕೃಷಿಗೆ “ಬಸವಕೇಂದ್ರ ಬೃಹನ್ಮಠ ಚಿತ್ರದುರ್ಗ
ಪುರಸ್ಕಾರ”.
2002 : ಹಿಗ್ಗು ಲಲಿತ ಪ್ರಬಂಧಕ್ಕೆ “ಹೊಸತು ಎಚ್ ಎಮ್ ಟಿ ಪ್ರಶಸ್ತಿ”.
2004 : ಲಾವಣಿ-ತತ್ವ ಪದಗಳ ರಚನೆ ಮತ್ತು ಗಾಯನಕ್ಕೆ “ಕಲಾರತ್ನ ಪ್ರಶಸ್ತಿ”.
2005 : ಶಿಕ್ಷಣ-ಸಾಹಿತ್ಯ ಸೇವೆಗೆ “ಸ್ವಾತಿ ಕಲಾರತ್ನ ಪ್ರಶಸ್ತಿ”.
2005 : ತುಲಾಭಾರ ನಾಟಕಕ್ಕೆ ಆಕಾಶವಾಣಿ ನಾಟಕ ರಚನಾ ಸ್ಪರ್ಧೆಯಲ್ಲಿ “ಪ್ರಥಮ
ಪುರಸ್ಕಾರ”.
2005 : ಸಾಹಿತ್ಯಿಕ-ಧಾರ್ಮಿಕ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗೆ “ನಿಯಾಜಿ ಪುರಸ್ಕಾರ”.
2009 : ಸಾಹಿತ್ಯ, ಶಿಕ್ಷಣ ಮತ್ತು ಲಾವಣಿ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗೆ “ನಾಡ ಚೇತನ ಪ್ರಶಸ್ತಿ”.
2010 : ಜಾನಪದ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗೆ “ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ”.
2011 : ಸಾಕ್ಷರತಾ ಆಂದೋಲನ-ಜನಪದ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗೆ ಕರ್ನಾಟಕ ಸಂಘ
ಮಂಡ್ಯದವರು ನೀಡುವ “ಪಿ. ಎನ್. ಜವರೇಗೌಡ ಸಮಾಜಮುಖಿ ಪ್ರಶಸ್ತಿ”.
2011 : ರಂಗಭೂಮಿಗೆ ಸಲ್ಲಿಸಿದ ಸೇವೆಗೆ ಬೆಂಗಳೂರಿನ “ರಂಗ ಸಂಸ್ಥಾನ ಪ್ರಶಸ್ತಿ”.
2012 : ನಬಿ ಮಾಸ್ತರರ ತುಲಾಭಾರ ಪ್ರಸಂಗ – ಜೀವನ ಚರಿತ್ರೆಗೆ “ಗಂಗಾಧರ ಕೋರಳ್ಳಿ
ಪ್ರತಿಷ್ಠಾನ, ವಿಜಯಪುರ ಪ್ರಶಸ್ತಿ”.
2013 : ರಂಗಭೂಮಿಗೆ ಸಲ್ಲಿಸಿದ ಸೇವೆಗೆ ಬೆಂಗಳೂರಿನ ದಯಾನಂದ ಸಾಗರ
ಪ್ರತಿಷ್ಠಾನದಿಂದ “ರಂಗಶ್ರೀ ಪ್ರಶಸ್ತಿ”.
2014 : ಮಾಯಾ ಚಿಗರಿ ಲಲಿತ ಪ್ರಬಂಧ ಸಂಕಲನಕ್ಕೆ ಅಜೂರ ಪುಸ್ತಕ ಪ್ರತಿಷ್ಠಾನದಿಂದ
“ರಾಜ್ಯ ಪ್ರಶಸ್ತಿ”
2014 : ಸಮಾಜಮುಖಿ ಸಾಹಿತ್ಯ ಸೇವೆಗೆ “ಡಾ. ದ ರಾ ಬೇಂದ್ರೆ ಪುರಸ್ಕಾರ”.
2015 : ಬಹುರೂಪಿ ನಾಟಕಕ್ಕೆ “ಬಸವ ಗುರು ಕಾರುಣ್ಯ ಪ್ರಶಸ್ತಿ”.
2015 : ಬಹುರೂಪಿ ನಾಟಕಕ್ಕೆ “ಕೋ ಚನ್ನಬಸಪ್ಪ ದತ್ತಿ ಪ್ರಶಸ್ತಿ”.
2016 : ಕಲೆ-ಸಂಸ್ಕೃತಿ ಕ್ಷೇತ್ರದಲ್ಲಿ ಮಾಡಿದ ಕೃಷಿಗೆ ಶಾಂತಲಾ ಛಾರಿಟೇಬಲ್ ಟ್ರಸ್ಟ್ ಕೃ
ದೊಡ್ಡಿ, ರಾಮನಗರ ನೀಡುವ “ಶಾಂತಲಾ ಕಲಾ ಬೆಳಕು ಪ್ರಶಸ್ತಿ”.
2016 : ಮಾತೃಭೂಮಿ ಸೇವೆಗಾಗಿ ವಂದೇ ಮಾತರಂ ಸೇವಾ ಟ್ರಸ್ಟ್, ಚನ್ನರಾಯಪಟ್ಟಣ
ನೀಡುವ “ಮಾತೃಭೂಮಿ ಸೇವಾ ಪ್ರಶಸ್ತಿ”.
2017 : ರಂಗಭೂಮಿ-ರಂಗ ಶಿಕ್ಷಣ ಕ್ಷೇತ್ರದ ಸೇವೆಗಾಗಿ ರಂಗ ಜಂಗಮ ಸಂಸ್ಥೆ ಡಿ ಕಗ್ಗಲ್,
ಬಳ್ಳಾರಿಯವರು ನೀಡುವ “ರಂಗ ಜಂಗಮ ಪ್ರಶಸ್ತಿ”
2017 : ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸೇವೆಗಾಗಿ ಕೊಣ್ಣೂರು ನುಡಿ ಸಡಗರದ “ಅಕ್ಷರ
ಪ್ರಶಸ್ತಿ”.
2017 : ಜಾನಪದ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಶ್ರೀ ಸಿದ್ಧರಾಮೇಶ್ವರ ಜನಕಲ್ಯಾಣ
ಪ್ರತಿಷ್ಠಾನ, ಹಿಪ್ಪರಗಿಯವರು ನೀಡುವ “ಸಿದ್ಧರಾಮಶ್ರೀ ಜಾನಪದ ಪ್ರಶಸ್ತಿ”
2018: ಜಾನಪದ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಬಸವಜ್ಞಾನ ಗುರುಕುಲ ಹುನ್ನೂರ ಅವರು
ನೀಡುವ “ಲಾವಣಿ ಲಾವಣ್ಯ ಪ್ರಶಸ್ತಿ”.
2018 : ಸಾಹಿತ್ಯ ಕ್ಷೇತ್ರಕ್ಕೆ ಮಾಡಿದ ಸೇವೆಗಾಗಿ ಅಲ್ಲಮಪ್ರಭು ದೇವಸ್ಥಾನ ಹಳಿಂಗಳಿಯವರು
ನೀಡುವ “ಪ್ರಭುಶ್ರೀ ರಾಜ್ಯ ಪ್ರಶಸ್ತಿ”.
2018 : ನಾಟಕ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಹುಲಿಕುಂಟೆರಾಯ ತೊಗಲು ಗೊಂಬೆಮೇಳ
ಬಳ್ಳಾರಿಯವರು ನೀಡುವ “ಹುಲಿಕುಂಟೆ ಜಾನಪದ ಪ್ರಶಸ್ತಿ”.
2019 : ಬೂದಿ ಮತ್ತು ಕೆಂಡ ಕಥಾ ಸಂಕಲನಕ್ಕೆ ಸಾಧನಾ ರಾಷ್ಟ್ರೀಯ ಪ್ರತಿಷ್ಠಾನ
ಮಂಗಳೂರು ಅವರು ನೀಡುವ “ಕಥಾಯಜ್ಞ ರಾಷ್ಟ್ರೀಯ ಪುರಸ್ಕಾರ”.
2019 : ಸಾಹಿತ್ಯ-ಸಂಸ್ಕೃತಿ ಕ್ಷೇತ್ರಕ್ಕೆ ಮಾಡಿದ ಸೇವೆಗೆ ಝೇಂಕಾರ ಭಾರತಿ, ಬೆಂಗಳೂರು
ನೀಡುವ “ಝೇಂಕಾರ ಸಾಹಿತ್ಯ ವಾರಿಧಿ ಪ್ರಶಸ್ತಿ”.
2019 : ನಾನೆಂಬುದು ನಾನಲ್ಲ ನಾಟಕಕ್ಕೆ ಮೈಸೂರು ಅಸೋಶಿಯೇಷನ್ ಮುಂಬೈನವರು
ನೀಡುವ “ನೇಸರ ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆಯಲ್ಲಿ ಪ್ರೊತ್ಸಾಹ
ಬಹುಮಾನ”
2019 : ಸಾಹಿತ್ಯ-ಸಂಸ್ಕೃತಿ ಸೇವೆಗಾಗಿ ಶ್ರೀಮಠ ಸರಡೂರ ಬಳ್ಳಾರಿ ಅವರು ನೀಡುವ
“ಬಸವ ಬೆಳಗು ಪ್ರಶಸ್ತಿ”.
2020 : ಪರಮಪೂಜ್ಯ ನಾಗನೂರು ಶ್ರೀ ಶಿವಬಸವ ಸ್ವಾಮಿಗಳ ಸಮಗ್ರ ಜೀವನ ಕುರಿತ
“ಮಹಾವೃಕ್ಷ” ಕೃತಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನೀಡುವ
“ಗೊ.ರು.ಚ ಶರಣ ಸಾಹಿತ್ಯ ಗ್ರಂಥ ದತ್ತಿ ಪ್ರಶಸ್ತಿ”.
ಆದರ್ಶ ಉಪನ್ಯಾಸಕರಾಗಿ, ಸಾಹಿತ್ಯ ಸೇವೆ, ವಚನ ಸಾಹಿತ್ಯ ಸೇವೆಗಳೊಂದಿಗೆ ಸದಾ ಕ್ರಿಯಾಶೀಲರಾಗಿ ವಿನಮ್ರ ಹಸನ್ಮುಖದೊಂದಿಗೆ ಅಪರೂಪದ ಸಾಹಿತ್ಯ, ನಾಟಕಕಾರರ ಸಾಲಿಗೆ ಸೇರುವ ಪ್ರೊ. ಬಿ ಆರ್ ಪೋಲೀಸ್‌ಪಾಟೀಲ ಅವರು ಜನಪದ ರಂಗಭೂಮಿಯ ಒಳದನಿಯನ್ನು ಚೆನ್ನಾಗಿ ಅರಿತವರು. ಜನಪದ ಸಂಪತ್ತಿನಲ್ಲಿ ಹೇರಳವಾಗಿ ಹುದುಗಿರುವ ಮನೋಸಂಘರ್ಷ, ತುಮುಲ, ಭಾವಾತೀರೇಕ, ವಾತ್ಸಲ್ಯ, ಪ್ರೀತಿ, ಕಾಮ, ಸಮನ್ವಯತೆಗಳ ಕಾವ್ಯ ಸಂಪತ್ತನ್ನು ಹೆಕ್ಕಿ ಅವುಗಳನ್ನು ಪುಸ್ತಕಗಳ ರೂಪಕ್ಕೆ ಇಳಿಸಿದ್ದಾರೆ.
ಬದುಕು ಮತ್ತು ಬರಹ ಬೇರೆ ಬೇರೆ ಎಂದು ಯಾವತ್ತೂ ಭಾವಿಸದೆ ಪ್ರೊ. ಬಿ ಆರ್ ಪೋಲೀಸ್‌ಪಾಟೀಲ ಅವರು ಬದುಕು ಹಾಗೂ ಬರಹಗಳನ್ನು ಸತ್ವಪೂರ್ಣವಾಗಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಇಂಥಹ ಪವಿತ್ರ ಸಾಹಿತ್ಯ ಚೇತನಕ್ಕೆ, ಶಿವಚಿಂತನಕ್ಕೆ ಹೃದಯ ಪೂರ್ವಕ ಅಭಿನಂದನೆಗಳು. ಇಂಥ ಸಾಧನೆಯ ಗೌರೀಶಂಕರವಾಗಿರುವ ಪ್ರೊ. ಬಿ ಆರ್ ಪೋಲೀಸ್‌ಪಾಟೀಲ ಅವರು ಅವರು ನಮ್ಮ ನಡುವೆ ಇರುವ ಸಾಹಸಿ ಪ್ರವೃತ್ತಿಯ ಸಾಧಕರು. ಇವರನ್ನು ಇಲ್ಲಿ ಪರಿಚಯಿಸುತ್ತಿರುವುದು ನಮಗೆಲ್ಲ ಸ್ಪೂರ್ತಿದಾಯಕವಾಗಲಿ ಮತ್ತು ಅವರಿಂದ ಇನ್ನೂ ಹೆಚ್ಚು ಸಾಧನೆಯಾಗಿ ಸಮಾಜಕ್ಕೆ ಉಪಯೋಗವಾಗಲಿ ಎಂಬುದೇ ನಮ್ಮಲ್ಲರ ಆಶಯ.
ಹೊತ್ತಾರೆ ಎದ್ದು | ಅಗ್ಘವಣೆ ಪತ್ರೆಯ ತಂದು ||
ಹೊತ್ತು ಹೋಗದ ಮುನ್ನ | ಪೂಜಿಸು ಲಿಂಗವ ||
ಹೊತ್ತು ಹೋದ ಬಳಿಕ | ನಿನ್ನನಾರು ಬಲ್ಲರು? ||
ಹೊತ್ತು ಹೋಗದ ಮುನ್ನ | ಮೃತ್ಯುವೊಯ್ಯದ ಮುನ್ನ ||
ತೊತ್ತುಗೆಲಸವ ಮಾಡು | ಕೂಡಲಸಂಗಮದೇವಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-24 / ವಚನ ಸಂಖ್ಯೆ-172)
“ಜಾತಸ್ಯ ಮರಣಂ ಧೃವಂ” ಎನ್ನುವ ನಾಣ್ಣುಡಿಯಂತೆ ನಾವೆಲ್ಲರೂ ಒಂದು ದಿನ ನಿರ್ಗಮಿಸುವವರೆ. ಆದರೆ ಹೋಗುವ ಮುನ್ನ ಸಮಾಜಕ್ಕೆ ಮತ್ತು ಸಮಷ್ಠಿಯಲ್ಲಿ ನಾವು ಬದುಕಿದ್ದೆವು ಎನ್ನುವುದಕ್ಕೆ ಏನಾದರೂ ಸಾಧನೆಯನ್ನು ಅಥವಾ ಸಮಾಜಕ್ಕೆ ಕೊಡುಗೆಯನ್ನು ನೀಡಿ ಹೋಗಬೇಕೆಂಬುದು ಈ ವಚನದ ಸದಾಶಯ. ಅದು ವ್ಯಾಪಕ ಅಧ್ಯಯನದಿಂದ ಮಾತ್ರ ಸಾಧ್ಯ ಎಂದು ಹೇಳತಾ ಈ ಲೇಖನಕ್ಕೆ ಅಲ್ಪ ವಿರಾಮ ಹೇಳುತ್ತೇನೆ. ಯಾಕಂದರ ಇಂತಹ ಚಿಂತನೆಗಳಿಗೆ, ವಿಮರ್ಷೆಗಳಿಗೆ ಪೂರ್ಣ ವಿರಾಮ ಎಂದೂ ಇರೋದಿಲ್ಲ ಮತ್ತು ಇವು ನಿತ್ಯ ನೂತನ ನಿರಂತರ.
ಶರಣು ಶರಣಾರ್ಥಿಗಳು.
ಸಂಗ್ರಹ ಮತ್ತು ಲೇಖನ:
ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಸ್ಕೂಲ್ ಹತ್ತಿರ
ಕ್ಯಾತ್ಸಂದ್ರ, ತುಮಕೂರು – 572 104
ಮೋಬೈಲ್ ನಂ : 97413 57132 / 97418 89684
ಈ-ಮೇಲ್ : vijikammar@gmail.com