ಆಪತ್ತಿನಲ್ಲಿ ಆರೋಗ್ಯ ಸಹಾಯಕರು ಮತ್ತು ಆರೋಗ್ಯ ಸೇವೆಗಳು

 

ಆಪತ್ತಿನಲ್ಲಿ ಆರೋಗ್ಯ ಸಹಾಯಕರು
ಮತ್ತು ಆರೋಗ್ಯ ಸೇವೆಗಳು

ಸರಕಾರ ಇತ್ತೀಚೆಗೆ ಆರೋಗ್ಯ ಉಪಕೇಂದ್ರಗಳ ಉನ್ನತೀಕರಣದ ಬಗ್ಗೆ ಕೆಲವು ಮಹತ್ವದ ನಿರ್ಧಾರ ಕೈಗೊಂಡಿತು. 2859 ಆರೋಗ್ಯ ಉಪಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಅವುಗಳನ್ನು ಆರೋಗ್ಯದ ಕ್ಷೇಮಕೇಂದ್ರಗಳನ್ನಾಗಿಸುವ ಸದಿಚ್ಛೆ ಸರಕಾರದ್ದು. ಅದಕ್ಕಾಗಿ 478.91 ಕೋಟಿ ರುಪಾಯಿಗಳನ್ನು ಮೀಸಲಿಟ್ಟಿದೆ. ಹಾಗೆಯೇ 750 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ‘ಅಮೃತ ಆರೋಗ್ಯ ಮೂಲಸೌಕರ್ಯ’ ಉತ್ತಮೀಕರಿಸುವ ಯೋಜನೆ. ಅದಕ್ಕಾಗಿ 170 ಕೋಟಿ ರುಪಾಯಿ ವೆಚ್ಚ ಮಾಡಲು ನಿರ್ಣಯಿಸಿದೆ. ಇದೊಂದು ರೀತಿಯಲ್ಲಿ ಸ್ವಾಗತಾರ್ಹ ನಿರ್ಧಾರ.

ಆದರೆ ಆರೋಗ್ಯ ಉಪಕೇಂದ್ರಗಳನ್ನು MLHP ( Middle level health provider) ಗಳೆಂಬ ಅನನುಭವಿ ಹೊರಗುತ್ತಿಗೆ ಕೆಲಸಗಾರರ ಹಿಡಿತಕ್ಕೆ ಒಪ್ಪಿಸುತ್ತಿರುವ ಉಪಕ್ರಮ ಅಕ್ಷರಶಃ ಸಾಧುವಲ್ಲ. ಪ್ರಾಯಶಃ ಇದು ಗುತ್ತಿಗೆದಾರಿಕೆಯ ಒಳಹುನ್ನಾರ.

ನಮ್ಮ ಹಳ್ಳಿಗಳ ಸರಕಾರಿ ಸ್ವಾಮ್ಯದ ಆರೋಗ್ಯ ಉಪಕೇಂದ್ರಗಳಿಗೆ ಗ್ರಾಮ್ಯಜನ್ಯ ಸ್ವಾಸ್ಥ್ಯ ಪರಂಪರೆ ಇದೆ. ಅದೊಂದು ಗ್ರಾಮೀಣ ಆರೋಗ್ಯ ಸಂಸ್ಕೃತಿಯಾಗಿ ತಾಯ್ತನದ ಪ್ರೀತಿ ಬೆಳೆದು ಬಂದಿದೆ. ಏಕೆಂದರೆ ಹಳ್ಳಿಯ ಮಹಿಳೆಯರ ಬಸುರಿ ಬಾಣಂತನದ ತವರುಮನೆ ಅದು. ಉಪಕೇಂದ್ರಗಳು ಸ್ಥಾಪನೆಗೊಂಡ ಕಾಲದಿಂದಲೂ ಮಹಿಳಾ ಆರೋಗ್ಯ ಸಹಾಯಕಿಯರು ಅವುಗಳಲ್ಲೇ ವಾಸವಾಗಿದ್ದು ಸಮುದಾಯ ಆರೋಗ್ಯದ ಅವಿಚ್ಛಿನ ಭಾಗವಾಗಿ ಸಾರ್ವಜನಿಕರಿಗೆ ಆರೋಗ್ಯ ಸೇವೆಗಳನ್ನು ನೀಡುತ್ತಾ ಬಂದವರು. ಗ್ರಾಮೀಣ ಆರೋಗ್ಯ ಸೇವೆಗಳ ಸುಮಧುರ ಬಂಧುತ್ವದ ಸೇತುವೆ ನಿರ್ಮಿಸಿದವರು ನಮ್ಮ ಆರೋಗ್ಯ ಸಹಾಯಕಿಯರು. ಹಿಂದಿನ ANM ಹೆಸರಿನ ಇಂದಿನ ಮಹಿಳಾ ಆರೋಗ್ಯ ಸಹಾಯಕಿಯರು ಸರಕಾರಿ ಉದ್ಯೋಗಿಗಳು. ANM ಮತ್ತು LHV ಹಾಗೂ CPHN ಹೀಗೆ ಮೂರು ಮಹತ್ವದ ನಾಲ್ಕು ವರ್ಷಗಳ ತರಬೇತಿ ಪಡೆದವರು.

IPHS ಅಂದರೆ Indian Public Health Standard ಗುಣಾತ್ಮಕ ನೀತಿಗನುಗುಣವಾಗಿ ಆರೋಗ್ಯ ಉಪಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಂರಚನೆಗೊಂಡಿವೆ. ಐದುಸಾವಿರ ಜನಸಂಖ್ಯೆಗೊಂದು ಆರೋಗ್ಯ ಉಪಕೇಂದ್ರ. ಇಲ್ಲಿ ಓರ್ವ ಮಹಿಳಾ ಮತ್ತು ಓರ್ವ ಪುರುಷ ಆರೋಗ್ಯ ಸಹಾಯಕರು IPHS ನಾರ್ಮ್ಸ್ ಬದ್ಧತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಹಾಗೆಯೇ ಮೂವತ್ತು ಸಾವಿರ ಜನಸಂಖ್ಯೆಗೊಂದು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ನಿಗದಿತ ಸಿಬ್ಬಂದಿ. ರಾಜಕೀಯ ಪ್ರಭಾವದಿಂದ ಕೆಲವು ಕಡೆ ಏರುಪೇರಾಗಿದೆ.

ಕರ್ನಾಟಕದ ಒಟ್ಟು ಜನಸಂಖ್ಯೆಗೆ ಅನುಗುಣವಾಗಿ ಇಪ್ಪತ್ತು ಸಾವಿರ ಆರೋಗ್ಯ ಉಪಕೇಂದ್ರಗಳು ಮತ್ತು ನಲವತ್ತು ಸಾವಿರಕ್ಕೂ ಅಧಿಕ ಆರೋಗ್ಯ ಸಹಾಯಕರ ಅಗತ್ಯವಿದೆ. ಆದರೆ ಪ್ರಸ್ತುತ ಹತ್ತು ಸಾವಿರ ಮಹಿಳೆಯರು ಮತ್ತು ನಾಲ್ಕು ಸಾವಿರ ಪುರುಷ ಆರೋಗ್ಯ ಸಹಾಯಕರು ಕರ್ತವ್ಯನಿರತರು. ಅವರ ಮೂಲಕ ಅಂದರೆ ಕಾಲುಭಾಗದಷ್ಟು ಸಿಬ್ಬಂದಿ ಮೂಲಕ ಸರಕಾರ ನಲವತ್ತಕ್ಕೂ ಅಧಿಕ ಪ್ರಮಾಣದ ಎಲ್ಲಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ನಿರುಕಿಸುತ್ತಿದೆ.

ಆರೋಗ್ಯ ಸಹಾಯಕರ ಶತಮಾನದ ಸ್ವಾಸ್ಥ್ಯ ಸೇವಾ ಕೈಂಕರ್ಯಗಳ ಅವಕಾಶಗಳನ್ನು ಇದೀಗ ಹಿಮ್ಮೆಟ್ಟಿಸುವ ಕೆಲಸಕ್ಕೆ ಸರಕಾರ ಕೈ ಹಾಕಿದಂತಿದೆ. ಹತ್ತು ಜಿಲ್ಲೆಗಳಲ್ಲಿ MLHP ಗಳ ಮೂಲಕ ಆರೋಗ್ಯ ಉಪಕೇಂದ್ರಗಳಲ್ಲಿ ಪ್ರಯೋಗ ಮಾಡುತ್ತಿದೆ. ಅಸಾಂಕ್ರಾಮಿಕ ರೋಗಗಳ ಪ್ರಾಥಮಿಕ ಚಿಕಿತ್ಸೆಯ ಈ ಪ್ರಾಯೋಗಿಕ ಕಾರ್ಯಕ್ರಮದಲ್ಲಿ (Pilot programme) ಯಾವುದೇ ಹೊಸತನಗಳಿಲ್ಲ. ಈ ಮೊದಲಿಂದಲೂ ಆರೋಗ್ಯ ಸಹಾಯಕರು ಉಪಕೇಂದ್ರಗಳಲ್ಲಿ ಮತ್ತು ಮನೆ ಮನೆ ಭೇಟಿಗಳಲ್ಲಿ ಅಚ್ಚುಕಟ್ಟಾಗಿ ಮಾಡುತ್ತಿರುವ ಕೆಲಸಗಳನ್ನೇ ಕ್ಲಿನಿಕ್ಕುಗಳಲ್ಲಿ ನಡೆಸುವುದರ ಔಚಿತ್ಯವೇನು.?

*ಕೇಂದ್ರ ಸರಕಾರದ MLHP ಕಾರ್ಯಕ್ರಮ ಜನರಿಗೆ ಆರೋಗ್ಯ ಸೇವೆ ಒದಗಿಸುವಲ್ಲಿ ನಿರೀಕ್ಷೆ ಮೀರಿದ ಯಶಸ್ಸೇನು ಗಳಿಸಿಲ್ಲ.* ಅಷ್ಟಕ್ಕೂ ಇದುವರೆಗೆ ಆರೋಗ್ಯ ಸಹಾಯಕರು ಮಾಡದಿರುವ ಯಾವ ಕೆಲಸವು ಅಲ್ಲಿಲ್ಲ. ಪ್ರಯೋಗಾಲಯದ ಬಲಿಪಶುವಿನಂತೆ ಕೇವಲ ಹಣ ಖರ್ಚು ಮಾಡಲು ಉಪಕೇಂದ್ರಗಳ ಉನ್ನತೀಕರಣದ ಹೆಸರಿನ ಯೋಜನೆಯನ್ನು ಇತರೆ ಜಿಲ್ಲೆಗಳಿಗೂ ವಿಸ್ತರಿಸಿ ಕೋಟಿ ಕೋಟಿ ಹಣದ ದುಂದುವೆಚ್ಚ ಮಾಡುತ್ತಿದೆ. ಅದಕ್ಕೆ ಬದಲು ಈಗಿರುವ ಉಪಕೇಂದ್ರಗಳು ಮತ್ತು ಆರೋಗ್ಯ ಸಹಾಯಕರ ಹುದ್ದೆಗಳನ್ನು ಸಬಲೀಕರಣಗೊಳಿಸಬೇಕಿದೆ.

ಎಂ.ಬಿ.ಬಿ.ಎಸ್. ಪದವೀಧರ ವೈದ್ಯರು ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೇಮಕಗೊಂಡಾಗ ಅಲ್ಲಿನ ಅನುಭವಿ ಆರೋಗ್ಯ ಸಹಾಯಕರ ಸಹಕಾರ, ಸಲಹೆ, ಮಾರ್ಗದರ್ಶನ, ಅಗತ್ಯ ನೆರವು ಪಡೆದು ಸಮುದಾಯದಲ್ಲಿ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅನುವು ಮಾಡಿಕೊಳ್ಳುತ್ತಿದ್ದೆವು. ಹಾಗೆಂದು ಹೆಸರು ಹೇಳಲು ಇಚ್ಛಿಸದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮವೊಂದರ ಹಿರಿಯ ಜಿಲ್ಲಾ ವೈದ್ಯಾಧಿಕಾರಿಯೊಬ್ಬರು ಹೇಳಿದ ಅನುಭವದ ಮಾತಿದು.

ಕಳೆದ ಒಂದೂವರೆ ವರ್ಷದ ಕೊರೊನಾ ಎಂಬ ದುರಿತ ಕಾಲದಲ್ಲಿ ಜನಾರೋಗ್ಯ (Public health) ಸೇವೆಗಳ ಬಲವರ್ಧನೆ ಕುರಿತು ಹತ್ತು ಹಲವು ಚರ್ಚೆಗಳು ಜರುಗುತ್ತಲಿವೆ. ಕೊವಿಡ್ ಎರಡೂ ಅಲೆಗಳ ಸಂದರ್ಭದಲ್ಲಿ ಸರ್ಕಾರಿ ಆರೋಗ್ಯ ವಲಯದಲ್ಲಿ ಮೂಲಸೌಕರ್ಯಗಳ ಕೊರತೆ ಯಥೇಚ್ಛವಾಗಿತ್ತು. ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳೂರಿನಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಮೇಲೆ ಇಂತಹದ್ದೊಂದು ಕಾರಣಕ್ಕಾಗಿ ‘ಗರಂ’ ಆಗಿ ಅಧಿಕಾರಿಗಳ ಬೆವರಿಳಿಸಿದ್ದು ಮಾಧ್ಯಮಗಳಲ್ಲಿ ಭರ್ಜರಿಯಾಗಿ ಕಂಡುಬಂತು.

ಕೇರಳದ ಬಾರ್ಡರ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮನೆ ಮನೆ ತಿರುಗಿ ಕೊರೊನಾ ರಣರಂಗದ ಪ್ರತ್ಯಕ್ಷ ಸೇನಾನಿಗಳಾಗಿ ಕೆಲಸ ಮಾಡುತ್ತಿರುವ ಆರೋಗ್ಯ ಸಹಾಯಕರಿಗೆ ಗಂಡಾಂತರ ಭತ್ಯ, ಪಿಪಿಇ ಕಿಟ್ ಒದಗಿಸುವ ಮಾತು ಒತ್ತಟ್ಟಿಗಿರಲಿ, ಮಾಸ್ಕ್ ಸೇರಿದಂತೆ ಯಾವೊಂದು ಅಗತ್ಯ ಸೌಲಭ್ಯ ನೀಡುವಲ್ಲಿ ಸ್ಥಳೀಯ ಜಿಲ್ಲಾ ಆರೋಗ್ಯ ಇಲಾಖೆ ನಿಷ್ಕ್ರಿಯವಾಗಿತ್ತು. ಇದು ದ.ಕ. ಜಿಲ್ಲೆಯ ಕತೆ ಮಾತ್ರವಲ್ಲ, ಕರ್ನಾಟಕದ ಬಹುತೇಕ ಜಿಲ್ಲೆಗಳ ದುಃಸ್ಥಿತಿ. ಆದರೆ ಆರೋಗ್ಯ ಸಹಾಯಕರು ಮಾತ್ರ ಜೀವದ ಹಂಗು ತೊರೆದು ಹಗಲು ರಾತ್ರಿ, ಬಿಸಿಲು, ಮಳೆ, ಗಾಳಿ, ಹಳ್ಳಕೊಳ್ಳಗಳೆನ್ನದೇ ಕೊವಿಡ್ ಕರ್ತವ್ಯ ನಿರ್ವಹಣೆಯ ಮುಂಚೂಣಿ ಸೇನಾನಿಗಳಾಗಿದ್ದಾರೆ. ಮೊನ್ನೆಯಷ್ಟೇ ಹುಬ್ಬಳ್ಳಿ ಸೇರಿದಂತೆ ಹಲವುಕಡೆ ಹಲ್ಲೆಗೀಡಾಗಿದ್ದಾರೆ. ಕೆಲಸದ ಒತ್ತಡ ಮತ್ತು ಮೇಲಧಿಕಾರಿಗಳ ಹಿಂಸೆ ತಾಳಲಾರದೇ ಆತ್ಮಹತ್ಯೆ ಯತ್ನಗಳು ಜರುಗಿವೆ.

ಕೊರೊನಾ ಕರ್ತವ್ಯ ನಿರ್ವಹಿಸುತ್ತಲೇ ಕೆಲವರು ಕೊವಿಡ್ಡಿಗೆ ಬಲಿಯಾಗಿದ್ದಾರೆ. ಮಾಧ್ಯಮಗಳ ಕಣ್ಣಿಗೆ ವೈದ್ಯರು, ನರ್ಸಸ್, ಕಾಣಿಸುತ್ತಾರೆ. Prevention is better than cure ಎಂಬಂತೆ ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ತರಬೇತಿ ಹೊಂದಿದ ಪರಿಣಿತ ಆರೋಗ್ಯ ಸಹಾಯಕರು ಕಾಣಿಸುವುದಿಲ್ಲ. ಆರೋಗ್ಯ ಸಹಾಯಕರನ್ನು ಗುರುತಿಸುವ ಕಣ್ಣುಗಳಿಲ್ಲ. ಆರೋಗ್ಯ ಸಹಾಯಕರನ್ನು ಅಜ್ಞಾತಕ್ಕೆ ಸರಿಸಲಾಗಿದೆ. ಮಾಧ್ಯಮಗಳಿಗೆ, ಮಂತ್ರಿ ಮಹೋದಯರಿಗೆ ಆರೋಗ್ಯ ಇಲಾಖೆಯೆಂದರೆ ಡಾಕ್ಟರ್ಸ್ ಮತ್ತು ನರ್ಸಸ್ ಮಾತ್ರ, ಆರೋಗ್ಯವೆಂದರೆ ರೋಗಗಳ ಸ್ಥಿತಿಗತಿ ಎಂಬ ಭ್ರಮೆ.

ಇವತ್ತು ನಗರ, ಪಟ್ಟಣ, ಹಳ್ಳಿ, ಹಾಡಿ, ಹಟ್ಟಿಗಳಲ್ಲಿ ರಜಾದಿನಗಳ ನೆನಪಿಲ್ಲದೇ ಆರೋಗ್ಯ ಸಹಾಯಕರು ಲಸಿಕಾಯಜ್ಞದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಶೇಕಡಾ ಎಪ್ಪತ್ತರಷ್ಟು ಜನರಿಗೆ ಲಸಿಕೆ ನೀಡಿ ಕೊರೊನಾ ಮೂರನೇ ಅಲೆ ಬಾರದಂತೆ ತಡೆಯೊಡ್ಡುತ್ತಿದ್ದಾರೆ. ಒಬ್ಬೊಬ್ಬ ಮಹಿಳಾ ಆರೋಗ್ಯ ಸಹಾಯಕಿ ದಿನವೊಂದಕ್ಕೆ ಏನಿಲ್ಲವೆಂದರೂ ಮುನ್ನೂರು, ನಾಲ್ಕುನೂರು ಮಂದಿಗೆ ಕೊವಿಡ್ ಲಸಿಕೆ ನೀಡುತ್ತಾರೆ.

ಕೊವಿಡ್ ಮಾತ್ರವಲ್ಲದೇ ಕಾಲರಾ, ಮಲೇರಿಯಾ, ಕ್ಷಯ, ಏಡ್ಸ್, ಕ್ಯಾನ್ಸರ್, ತಾಯಿ ಮಕ್ಕಳ ಆರೋಗ್ಯ ಹೀಗೆ ಅಜಮಾಸು ನಲವತ್ತಕ್ಕೂ ಹೆಚ್ಚು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಲ್ಲಿ ನಿರಂತರ ತೊಡಗಿಸಿಕೊಂಡು ಇಲಾಖೆಯ ಸಾಧನೆಗೆ ಕಾರಣರಾಗಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಬಿಡುಗಡೆ ಮಾಡುವ ಅಭಿವೃದ್ಧಿಯ ಅಂಕಿ ಅಂಶಗಳೆಲ್ಲ ಆರೋಗ್ಯ ಉಪಕೇಂದ್ರಗಳ ಕರ್ತವ್ಯನಿರತ ಆರೋಗ್ಯ ಸಹಾಯಕರು ನೀಡುವ ಅಂಕಿ ಅಂಶಗಳು.

ಇವತ್ತು ನಮಗೆಲ್ಲರಿಗೂ ಸಿಡುಬಿನ ಕಲೆಗಳಿಲ್ಲದ ಸುಂದರ ಮುಖಗಳಿವೆ. ಅಂತಹ ಸಿಡುಬು ನಿರ್ಮೂಲನೆ ಮಾಡಿದ ಶ್ರೇಯಸ್ಸು ಆರೋಗ್ಯ ಸಹಾಯಕರಿಗೆ ಸಲ್ಲುತ್ತದೆ. ಸಿಡುಬು ಮಾತ್ರವಲ್ಲ, ಕುಷ್ಠರೋಗ, ನಾರುಹುಣ್ಣು, ಪೋಲಿಯೋದಂತಹ ಸಾಮಾಜಿಕ ಪಿಡುಗಿನ ಭಯಾನಕ ರೋಗಗಳಿಲ್ಲ. ಅವುಗಳ ನಿವಾರಣೆಯಲ್ಲಿ ಆರೋಗ್ಯ ಸಹಾಯಕರ ಪಾತ್ರ ಮಹತ್ತರವಾದುದು. ಸರ್ಕಾರ, ಆರೋಗ್ಯ ಇಲಾಖೆ ಮತ್ತು ಸಮುದಾಯದ ಬಂಧುರ ಸೇತುವೆಯಾಗಿ ಆರೋಗ್ಯ ಸಹಾಯಕರು ಕೆಲಸ ಮಾಡುತ್ತಿದ್ದಾರೆ. ಇಂತಹ ಮಹತ್ವದ ಜನಾರೋಗ್ಯ ಸಿಬ್ಬಂದಿಯನ್ನು ಸರಕಾರ ಗುರುತಿಸಿ ಗೌರವಿಸಬೇಕಿತ್ತು. ಅವರನ್ನು ಕೇವಲ ಅಂಕಿ ಅಂಶಗಳನ್ನು ನೀಡುವ ಸಂಗ್ರಾಹಕರಂತೆ ನೋಡಲಾಗುತ್ತಿದೆ.

ಈ ನಡುವೆ ಸರಕಾರಕ್ಕೆ ಇಲಾಖೆ ನೌಕರರಿಗೆ ‘ಅಧಿಕಾರಿ’ ಎಂಬ ಪದನಾಮಕರಣ ಮಾಡುವ ರೋಗ ತಗುಲಿದೆ. ಸಧ್ಯಕ್ಕೆ ಆರೋಗ್ಯ ಇಲಾಖೆಯಲ್ಲಿ ‘ಡಿ’ ದರ್ಜೆಯ ನೌಕರರನ್ನು ಹೊರತು ಪಡಿಸಿ ಸರಕಾರ ಎಲ್ಲ ‘ಸಿ’ ದರ್ಜೆಯ ನೌಕರರಿಗೆ ಆಫಿಸರ್ ಎನ್ನುವ ಅಧಿಕಾರಿ ಪಟ್ಟ ಕಟ್ಟಿಕೊಟ್ಟಿದೆ. ಆರೋಗ್ಯ ಇಲಾಖೆಯಂಥ ಅಪ್ಪಟ ಸೇವಾ ಪ್ರಕಾರವನ್ನು ಬ್ಯುರೋಕ್ರಟಿಕ್ ಮಾಡುವ ಹೊಣೆಗೇಡಿತನಕ್ಕೆ ಸರಕಾರದ ಮಿಷನರಿ ಸೇವಾವಲಯದೊಂದಿಗೆ ಸರ್ಕಸ್ ಮಾಡುತ್ತಿದೆ. ಆರೋಗ್ಯ ಉಪಕೇಂದ್ರವೆಂಬ ಆರೋಗ್ಯ ರಥದ ಎರಡು ಚಕ್ರಗಳಂತೆ ಮಹಿಳಾ ಮತ್ತು ಪುರುಷ ಆರೋಗ್ಯ ಸಹಾಯಕರು ಸೇವಾ ಕೈಂಕರ್ಯ ಮೆರೆಯುತ್ತಿದ್ದರು. ಇತ್ತೀಚೆಗೆ ಆರೋಗ್ಯ ಸಹಾಯಕರ ಪದನಾಮದ ಮರುನಾಮಕರಣ ಮಾಡಿ ಇಬ್ಬರಲ್ಲಿ ಒಡಕು ಹುಟ್ಟಿಸಿದೆ. ಇದರಿಂದ ಜನಾರೋಗ್ಯ ಸೇವೆಗಳ ಮೇಲೆ ದುಷ್ಪರಿಣಾಮ ಬೀರಿದೆ. ನೂರೈವತ್ತು ವರ್ಷಗಳ ಜನಾರೋಗ್ಯ ಸೇವಾ ಇತಿಹಾಸವುಳ್ಳ ಇಲಾಖೆಯಲ್ಲಿ ಇಂತಹ ಅನೇಕ ಅಪಸವ್ಯಗಳು ಜರುಗುತ್ತಲೇ ಇವೆ.

ನಯಾಪೈಸೆಯಷ್ಟು ಅಧಿಕಾರ ಇಲ್ಲದ ಆರೋಗ್ಯದ ಅಪ್ಪಟ ಸೇವಾಬದ್ಧತೆಯೇ ಆದ್ಯತೆಯಾಗಿರುವ ಅನೇಕ ಪದನಾಮಗಳಿಗೆ ‘ಅಧಿಕಾರಿ’ ಹೆಸರಿನ ಅಮಲು ಹಚ್ಚಿಸುವ ಹುಚ್ಚಾಟದ ಕೆಲಸಗಳನ್ನು ಸರಕಾರ ಕೂಡಲೇ ಕೈ ಬಿಡಬೇಕು.

ಗ್ರಾಮೀಣ ಆರೋಗ್ಯ ಸೇವೆಗಳ ಕುರಿತು ಸಮುದಾಯ ಸಹಭಾಗಿತ್ವದ ಕಡೆ ಸರಕಾರ ಗಮನಹರಿಸಬೇಕು. “ನಮ್ಮೂರು ನಮ್ಮಆರೋಗ್ಯ ಕೇಂದ್ರ” ಎಂಬ ಜನಸ್ನೇಹಿ ಮತ್ತು ಆರೋಗ್ಯಕರ ವಾತಾವರಣ ನಿರ್ಮಾಣ ಆಗಬೇಕು.‌ ಅಂತಹ ಆಗು ಮಾಡುವಿಕೆಗಾಗಿ ಆರೋಗ್ಯ ಸಹಾಯಕರ ಉಪಕೇಂದ್ರಗಳು ಸಚೇತನಗೊಳ್ಳಬೇಕು.

ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕರ್ತವ್ಯ ನಿರ್ವಹಣೆಯ ನಿಪುಣತೆ ಹೊಂದಿರುವ ಪುರುಷ ಆರೋಗ್ಯ ಸಹಾಯಕರ ಸಮಾನಾಂತರ ಹುದ್ದೆಯಲ್ಲಿ ಅನೇಕ ಮಂದಿ ಎಂ. ಬಿ. ಬಿ. ಎಸ್. ವೈದ್ಯಾಧಿಕಾರಿಗಳು ಎರವಲು ಸೇವೆಗೆ ವೃಂದ ಮತ್ತು ನೇಮಕಾತಿ (C & R) ನಿಯಮ ಉಲ್ಲಂಘಿಸಿ ಇಷ್ಟಪಟ್ಟು ಹೋಗಿದ್ದಾರೆ. ಅಷ್ಟೇಯಾಕೆ ಆಯಕಟ್ಟಿನ ಜಾಗೆಗಳ ಲಾಭದಾಯಕವಾದ ‘ಸಿ’ ದರ್ಜೆಯ ಈ ಹುದ್ದೆಗಳಿಗೆ ‘ಎ’ ದರ್ಜೆಯ ಎಂ. ಬಿ. ಬಿ. ಎಸ್. ಓದಿ ಬಂದಿರುವ ತಮ್ಮನ್ನೇ ನೇಮಿಸಬೇಕೆಂಬ ಬೇಡಿಕೆಗೂ ಮುಂದಾಗಿರುವುದು ಆರೋಗ್ಯ ಇಲಾಖೆ ಎಂಬ ಜನಾರೋಗ್ಯ ಸೇವಾವಲಯ ತಲುಪುತ್ತಿರುವ ಅನಾಹುತಕಾರಿ ಮತ್ತು ಅಧಃಪತನದ ಬೆಳವಣಿಗೆ.

ಈಗಲಾದರೂ ಜನಾರೋಗ್ಯ ಸೇವೆಗಳಿಗೆ ಎಂ. ಬಿ. ಬಿ. ಎಸ್. ವೈದ್ಯರೇ ಬೇಕೆಂಬ ಭ್ರಮೆಯಿಂದ ಸರಕಾರ ಹೊರಬರಬೇಕಿದೆ. ಅದಕ್ಕೆ ಬದಲು ಈಗಿರುವ ಆರೋಗ್ಯ ಸಹಾಯಕರಲ್ಲಿ ಪಿಯುಸಿ ವಿಜ್ಞಾನ ವಿಷಯದ ಅರ್ಹತೆಯುಳ್ಳವರಿದ್ದಾರೆ. ಅಂಥವರಿಗೆ ಆಧ್ಯತೆಯ ಮೇರೆಗೆ ಮೂರುವರ್ಷದ ಕಂಡೆನ್ಸಡ್ ಕೋರ್ಸ್ ಮಾದರಿಯ ಎಂ.ಬಿ. ಬಿ.ಎಸ್. ಕೋರ್ಸ್ ಅವಕಾಶ ಕಲ್ಪಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರನ್ನಾಗಿ ನೇಮಿಸಲಿ. ಆ ಮೂಲಕ ಕಡಿಮೆ ಸಂಬಳದಲ್ಲಿ ವೈದ್ಯರ ಕೊರತೆ ನೀಗಿಸಬಹುದು. ಮೂಲವೇತನದಷ್ಟೇ ಇತರೆ ವೇತನಗಳನ್ನು ನೀಡುತ್ತೇನೆಂದು ಸರಕಾರ ಅಲವತ್ತುಗೊಂಡರೂ ವೈದ್ಯರು ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಸೇವೆಗಳಿಗೆ ಸೇರುತ್ತಿಲ್ಲ.

ವೈದ್ಯರ ಮರ್ಜಿ ಕಾಯ್ದು, ಕಾಯ್ದು ಸರಕಾರಗಳು ಸೋತು ಸುಣ್ಣವಾಗಿವೆ. ಅದಕ್ಕೆಂದೇ ಜನಾರೋಗ್ಯ ಸುರಕ್ಷೆಗಾಗಿ ಈ ಹಿಂದೆ ಗುಲಾಮ ನಬಿ ಆಜಾದ್ ಕೇಂದ್ರ ಆರೋಗ್ಯ ಸಚಿವರಾಗಿದ್ದಾಗ ಇಂತಹದ್ದೊಂದು ಯೋಜನೆಗೆ ಪ್ರಸ್ತಾವನೆ ಹೊರಡಿಸಿದ್ದರು. ಈಗಲಾದರೂ ಕೇಂದ್ರ ಮತ್ತು ರಾಜ್ಯ ಸರಕಾರ ಈ ದಿಸೆಯಲ್ಲಿ ಪ್ರಯತ್ನಿಸಬೇಕಿದೆ. ದುಬಾರಿ ವೆಚ್ಚದ ಮತ್ತು ಒಲ್ಲದ ಮನಸಿನ ವೈದ್ಯರನ್ನು ಹಳ್ಳಿಗಳಿಗೆ ಕರೆತರುವ ವಿಫಲ ಹೋರಾಟದ ಬದಲು ಆರೋಗ್ಯ ಸಹಾಯಕರಿಗೆ ಅಗತ್ಯ ವೈದ್ಯಕೀಯ ತರಬೇತಿ ನೀಡಿ ಆರೋಗ್ಯ ಕೇಂದ್ರಗಳು ಮತ್ತು ಗುಣಮಟ್ಟದ ಗ್ರಾಮೀಣ ಆರೋಗ್ಯ ಸೇವೆಗಳನ್ನು ಸುಸ್ಥಿರಗೊಳಿಸಬೇಕಿದೆ.

ಮಲ್ಲಿಕಾರ್ಜುನ ಕಡಕೋಳ

9341010712

Don`t copy text!