ವಚನಗಳ ವೈಶಿಷ್ಠ್ಯ.
ಮನುಷ್ಯನು ತನ್ನ ವಿಚಾರ ಮತ್ತು ಭಾವಗಳನ್ನು ಸ್ಪಷ್ಟವಾಗಿ ಬೇರೆಯವರಿಗೆ ತಿಳಿಯುವಂತೆ ವ್ಯಕ್ತ ಮಾಡುವುದೇ ಭಾಷೆಯ ಮೂಲ ಉದ್ಧೇಶ. ಅವುಗಳನ್ನು ಆದಷ್ಟು ಮನೋ-ವೈಜ್ಞಾನಿಕ ರೀತಿಯಿಂದ ವ್ಯಕ್ತ ಮಾಡಿದ ಭಾಷಾ ರೂಪವೇ, ಸಾಹಿತ್ಯ ಅಥವಾ ವಾಙ್ಮಯವೆನಿಸುವದು. ಶರಣರು ತಮ್ಮ ಉಚ್ಛವಾದ ವಿಚಾರಗಳನ್ನು, ಆತ್ಮಜ್ಞಾನದ ಭಾವಗಳನ್ನು ಮನೋ-ವೈಜ್ಞಾನಿಕ ರೀತಿಯಿಂದ ವಚನಗಳಲ್ಲಿ ವ್ಯಕ್ತಪಡಿಸಿರುವದರಿಂದ ಶರಣ ಸಾಹಿತ್ಯವನ್ನು ವಚನ ವಾಙ್ಮಯವೆನ್ನುವದು ಸೂಕ್ತವಾಗಿದೆ. ಪ್ರತಿಕ್ಷಣ ಮಾನವನ ಹೃದಯ ಸಮುದ್ರದಲ್ಲಿ ಏಳುವ ಅನಂತ ಕಲ್ಪನಾ ತರಂಗಗಳು, ವಿವಿಧ ವಿಚಾರ ಲಹರಿಗಳು, ಭಾವೊದ್ರೇಕದಿಂದ ಕೂಡಿದ ಅವ್ಯಕ್ತ ಮತ್ತು ಅ ಸ್ಪಷ್ಟ ರೂಪದಲ್ಲಿ ಇರುತ್ತವೆ. ಅವು ಶಬ್ದ ರೂಪವನ್ನು ತಾಳಿದಾಗ ಸ್ಪಷ್ಟತೆಯನ್ನು ಪಡೆಯುತ್ತವೆ. ಶರಣರ ವಚನಗಳು ಚಿತ್ತವೃತ್ತಿಯ ಮನೋಭಾವಗಳು, ಅರಿವೆಂಬ ಕನ್ನಡಿಯಲ್ಲಿ ಪ್ರತಿಬಿಂಬಿತವಾಗಿ, ಅವು ಶಬ್ಧ ಭಂಡಾರವನ್ನುಟ್ಟು, ಉಪಮಾದಿ ಅಲಂಕಾರಗಳನ್ನಿಟ್ಟು, ಗದ್ಯ ಗತಿಯಿಂದ, ಪದ್ಯ ಪದ್ದತಿಯಿಂದ, ಲಯಬದ್ಧವಾಗಿ ವಾಙ್ಮಯರೂಪ ಪಡೆದಿವೆ.
ಮಾನವನ ಮನೋಮಂಡಲದಲ್ಲಿ ಮೂಡುವ ಪ್ರತಿಯೊಂದು ಭಾವವು, ವಿಚಾರವು, ಕಲ್ಪನೆಯು, ಹೊರಗೆ ಬರಲು ಒಂದು ಯೋಗ್ಯ ವಾಹಕ ಮತ್ತು ಅದು ವ್ಯಕ್ತವಾಗಲು ಒಂದು ಬಾಹ್ಯ ರೂಪವೂ ಬೇಕು, ಆ ವಾಹಕ ಅಥವಾ ರೂಪದ ಮುಖಾಂತರವೇ ಆ ಭಾವವನ್ನು ಅಥವಾ ವಿಚಾರವನ್ನು ಮತ್ತೊಬ್ಬರಿಗೆ ವ್ಯಕ್ತ ಪಡಿಸಲು ಸಾಧ್ಯ. ಆ ವ್ಯಕ್ತ ರೂಪ, ಧರ್ಮ ಸ್ಪೂರ್ತಿಯಿಂದ, ವೈಜ್ಞಾನಿಕ ಅರಿವಿನಿಂದ, ಸಮಾನತೆಯ ತತ್ವದಿಂದ, ಸಾಮಾಜಿಕ ಕಳಕಳಿಯಿಂದ, ಶರಣರ ಅಂತರಾಕಾಶದಲ್ಲಿ ಉದಯಿಸಿದ ಉನ್ನತ ಭಾವವೇ ವಚನ ರೂಪದಿಂದ ಕಂಗೊಳಿಸುತ್ತಿವೆ. ನೀತಿ ನಿಯಮಗಳು ಇಲ್ಲಿ ಶರಣರ ಅಂತರಂಗದ ಅರಿವಿನ ಅನುಭವಗಳ ವ್ಯಕ್ತ ರೂಪ.
ಶರಣರು ಹವ್ಯಾಸಕ್ಕಾಗಿ ಸಾಹಿತ್ಯದಲ್ಲಿ ತೊಡಗಿಸಿಕೊಂಡವರಲ್ಲ. ಅವರು ಅಹರ್ನಿಶಿ ತಮ್ಮ ಅಂತರಂಗದಲ್ಲಿಯ ಸತ್ಯವನ್ನು ಶೋಧಿಸುವ ಸಾಧಕರು. ಸತ್ಯದಂತೆ ನಡೆಯಲೆತ್ನಿಸಿದ ವೀರರು. ಅಜ್ಞಾನದ ಅಂಧಕಾರವನ್ನು ಕಳೆದು, ಸಂದೇಹದ ಮುಸುಕನ್ನು ಸೆಳೆದೊಗೆದು, ಓದುಗನ ಅಂತಃಕರಣದಲ್ಲಿ ಜ್ಞಾನ ಜ್ಯೋತಿಯನ್ನು ಬೆಳಗುವವರು.
“ಎಮ್ಮ ವಚನದೊಂದು ಪಾರಾಯಣಕ್ಕೆ
ವ್ಯಾಸನದೊಂದು ಪುರಾಣ ಸಮ ಬಾರದಯ್ಯಾ.
ಎಮ್ಮ ವಚನದ ನೂರೆಂಟರಧ್ಯಯನಕ್ಕೆ
ಶತರುದ್ರಯಾಗ ಸಮ ಬಾರದಯ್ಯಾ.
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರಿ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ”
ಎಂದು ಶಿವಯೋಗಿ ಸಿದ್ಧರಾಮ ಶರಣರು ವಚನದ ಘನ ವ್ಯಕ್ತಿತ್ವವನ್ನು ಸಾರಿದ್ದಾರೆ. ವಚನದ ಅನುಭಾವವು ವಚನಾತೀತ. ಬರಿ ವಚಿಸಿ ಅನುಭಾವಿಯಾಗದಿದ್ದರೆ, ಬಸವ ತತ್ವ ಸಂಸ್ಕಾರ ಪಡೆದಂತಾಗುವದಿಲ್ಲ. ಬಸವಣ್ಣನವರು ಹೇಳುವ ಹಾಗೆ
ಗಿಳಿಯೋದಿ ಫಲವೇನು?
ಬೆಕ್ಕು ಬಹುದ ಹೇಳಲರಿಯರು
ಜಗವೆಲ್ಲವ ಕಾಬ ಕಣ್ಣು
ತನ್ನ ಕೊಂಬ ಕೊಲ್ಲೆಯ ಕಾಣಲರಿಯದು
ಇದಿರ ಗುಣವ ಬಲ್ಲೆವೆಂಬರು
ತಮ್ಮ ಗುಣವನರಿಯರು ಕೂಡಲಸಂಗಮದೇವಾ ||
ಹಾಗೂ
ಆಡಿದಡೇನು ಹಾಡಿದಡೇನು ಓದಿದಡೇನು
ತ್ರಿವಿಧ ದಾಸೋಹವಿಲ್ಲದನ್ನಕ್ಕರ?
ಆಡದೆ ನವಿಲು ಹಾಡದೆ ತಂತಿ ಓದದೆ ಗಿಳಿ?
ಭಕ್ತಿಯಿಲ್ಲದವರನೊಲ್ಲ ಕೂಡಲಸಂಗಮದೇವ ||
ಇಂತಹ ಎಷ್ಟೊ ವಚನಗಳನ್ನು ನೋಡಬಹುದು.
“ಅರಿವಿನ ತೃಪ್ತಿಗೆ ಅನುಭಾವವೇ ಆಶ್ರಯ”. “ಲಿಂಗಾನು ಭಾವದಿಂದ ನಿಮ್ಮ ಕಂಡೆನ್ನ ಮರೆದೆ ಕೂಡಲ ಸಂಗಮದೇವಾ” ಎಂಬಂತೆ, ದೇಹದ ಬಯಕೆಗಳನ್ನು ಅರಿತು ಅದನ್ನು ತೃಪ್ತಿಪಡಿಸುವಂತೆ, ಆತ್ಮದ ಬಯಕೆಯಾದ ಪರಮಸುಖದ ಪ್ರಾಪ್ತಿಯನ್ನು ಪಡೆದು, ಜನನ ಮರಣಗಳಿಂದ ಮುಕ್ತಿಪಡೆಯುವುದೇ ಮಾನವ ಜನ್ಮದ ಪರಮ ಗುರಿ. ಅದನ್ನು ಸಧೀಸಿದವರೇ ಶರಣರು ಎನಿಸಿಕೊಂಡಿದ್ದಾರೆ.
ಪದ್ಯ ಯಾವಾಗಲೂ ಭಾವಾಭಿವ್ಯಕ್ತಿಯ ಸಾಧನವೆಂದು, ಮತ್ತು ಗದ್ಯವು ವಿಚಾರಾಭಿವ್ಯಕ್ತಿಯ ಸಾಧನವೆಂದು ತಿಳಿಯಲ್ಪಟ್ಟಿದೆ. ಮಾನವನಿಗೆ ಪರಮ ಸುಖವೇ ಮುಖ್ಯ ಧೇಯವಾಗಿರುವದರಿಂದ, ವಚನಗಳು ಸಾಧನೆಯ ಸಿದ್ಧಿಯ ಅನುಭವಪೂರ್ಣ ವಾಙ್ಮಯವು. ಸರ್ವಕಾಲಕ್ಕೂ ಸಲ್ಲತಕ್ಕ, ಜ್ಞಾನಾಮೃತವನ್ನು ಉಣಬಡಿಸಿ, ತೃಪ್ತಿಪಡಿಸುವ ದಿವ್ಯ ಸಾಧನವು.
ದೇಹ ಪೋಷಣೆಗೆ ಅನ್ನವಸ್ತ್ರಗಳು ಅವಶ್ಯವಿದ್ದಂತೆ, ಆತ್ಮ ಮತ್ತು ಮನಸ್ಸನ್ನು ಉನ್ನತ ಸ್ಥಿತಿಗೆ ಏರಬೇಕಾರೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಚಾರಗಳು ಅವಶ್ಯಕವಾಗಿರುವವು. ಮಣಿಗಳಿಗೆ ಸೂತ್ರದ ಸಹಾಯದಿಂದ ಸುಂದರ ಹಾರವಾಗುವಂತೆ, ಬದುಕಿಗೆ, ಧರ್ಮ ಮತ್ತು ನೀತಿಯ ಸೂತ್ರವಿರದೆ ಬಾಳು ಸುಂದರವಾಗದು. ಆದ್ದರಿಂದ ಧರ್ಮ ಮಾರ್ಗ ಪ್ರತಿಯೊಬ್ಬರಿಗೂ ಅವಶ್ಯಕ.
ವಚನಗಳು ಷಟ್ಸ್ಥಲ, ಪಂಚಾಚಾರ, ಅಷ್ಟಾವರಣ, ಲಿಂಗಾಂಗ ಸಂಬಂಧ ಹೀಗೆ ಹಲವಾರು ವಿಷಯಗಳ ಕುರಿತು ವಿವೇಚಿಸುತ್ತವೆ. ತಾತ್ವಿಕ ಮತ್ತು ತುಲನಾತ್ಮಕವಾಗಿ ನೋಡಲಾಗಿ, ಅನ್ಯ ಧರ್ಮದ ವಿಷಯಕ್ಕಿಂತ ವಚನಗಳು ಅತ್ಯಂತ ಸರಳ ಮತ್ತು ಆಕರ್ಷಕವಾಗಿರುವವು.
ವಚನಗಳಲ್ಲಿ ರೂಢಿಯಲ್ಲಿರುವ ಎಷ್ಟೋ ನುಡಿಗಟ್ಟುಗಳು ಇದ್ದಕ್ಕಿದ್ದ ಹಾಗೆ ಅಥವಾ ಸ್ವಲ್ಪ ಪಲ್ಲಟಿಸಿದ ಸ್ವರೂಪದಲ್ಲಿ ದೃಗ್ಗೋಚರವಾಗುತ್ತವೆ. ಉದಾ: “ಕಂಬಳಿಯಲ್ಲಿ ಕಣಕವ ನಾದಿದಂತೆ” “ಹುತ್ತವ ಬಡಿದಡೆ ಹಾವು ಸಾಯಬಲ್ಲುದೆ” “ಸುಣ್ಣದ ಕಲ್ಲು ಮಡಿಲಲ್ಲಿ ಕಟ್ಟಿಕೊಂಡು ಮಡುವಿನಲ್ಲಿ ಬಿದ್ದಂತೆ” “ನೊಂದವರ ನೋವ ನೋಯದವರೆತ್ತ ಬಲ್ಲರು” ಇಂತಹ ಎಷ್ಟೋ ನುಡಿಗಟ್ಟುಗಳನ್ನು ವಚನಗಳಲ್ಲಿ ನೋಡುತ್ತೆವೆ.
ವಚನಗಳಲ್ಲಿ ಅಲಂಕಾರಗಳು ಹೇರಳವಾಗಿ ಬಳಕೆಯಾಗಿವೆ. ನಮ್ಮ ಶರಣರು ಉಪಮಿಸಬಾರದ ಉಪಮಾತೀತರು. “ಸಾಗರಂ ಸಾಗರೋಪಾದಿ” ಎನ್ನುವಂತೆ ನಮ್ಮ ಶರಣರನ್ನು ಯಾರಿಗೂ ಹೊಲಿಸಲು ಸಾಧ್ಯವಿಲ್ಲ. ಶರಣರಿಗೆ ಶರಣರೇ ಸಾಟಿ.
12 ನೇ ಶತಮಾನದ ವಚನಕಾರರ ವಚನಾಂಕಿತಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದಾಗ ಮೂರು ರೀತಿಯ ವಚನಾಂಕಿತಗಳು ನಮ್ಮ ಗಮನಕ್ಕೆ ಬರುತ್ತವೆ. ಒಂದು ಅನುಭವ ಮಂಟಪ ಸ್ಥಾಪನೆಯಾದ ಹೊಸತರಲ್ಲಿ ಇಟ್ಟುಕೊಂಡಂಥಾ ವಚನಾಂಕಿತಗಳು. ತಮ್ಮ ಇಷ್ಟ ದೈವವಾದ, ಕೂಡಲಸಂಗಮದೇವಾ, ಗುಹೇಶ್ವರಾ, ಚೆನ್ನಮಲ್ಲಿಕಾರ್ಜುನಾ ಎನ್ನುವ ಸ್ಥಾವರ ಲಿಂಗಗಳ ಹೆಸರಿನಲ್ಲಿ ಇಟ್ಟುಕೊಂಡಂಥಾ ವಚನಾಂಕಿತಗಳು. ಅವುಗಳಿಗೆ ನಿರಾಕಾರ ಸ್ವರೂಪವನ್ನು ಕೊಟ್ಟು ಜಗದಗಲ , ಮುಗಿಲಗಲ, ಮಿಗೆಯಗಲದ ಪರಿಕಲ್ಪನೆಯನ್ನು ಕೊಟ್ಟರು. ವಚನಾಂಕಿತಗಳು ಮಾತ್ರ ಹಾಗೆಯೇ ಉಳಿದುಕೊಂಡವು.
ಇನ್ನೊಂದು ಅನುಭವ ಮಂಟಪ ಉಚ್ಛ್ರಾಯ ಸ್ಥಿತಿಗೆ ಬಂದ ಮೇಲೆ ಸ್ವತಂತ್ರ ಪ್ರೇರಣೆಯಿಂದ ಇಟ್ಟುಕೊಂಡಂಥಾ ವಚನಾಂಕಿತಗಳು. ವೃತ್ತಿಗನುಸಾರವಾಗಿ ಅಥವಾ ತಮ್ಮ ಸ್ವಭಾವಕ್ಕನುಗುಣವಾಗಿ ಅಥವಾ ಪ್ರೀತಿಯನ್ನು ವ್ಯಕ್ತಪಡಿಸುವ ವ್ಯಾಖ್ಯಾನಕ್ಕಾಗಿ ಇಟ್ಟುಕೊಂಡಂಥವು. ಇಲ್ಲಿ ಸ್ಥಾವರ ಲಿಂಗದ ಕಲ್ಪನೆ ಬರುವುದಿಲ್ಲ. ಅಂಬಿಗರ ಚೌಡಯ್ಯ, ನಗೆಯ ಮಾರಿತಂದೆ, ವೈದ್ಯ ಸಂಗಣ್ಣ ಮುಂತಾದವರು. ಅನುಭವ ಮಂಟಪದ ವೈಭವದ ದಿನಗಳಲ್ಲಿ ಬಹಳ ವಿಚಾರ ಮಾಡಿ ವಚನಾಂಕಿತಗಳನ್ನು ಬಳಸಿದರು.
ಇನ್ನು ಮೂರನೇಯದು ದೀಕ್ಷೆಕೊಟ್ಟ ಗುರುವಿನ ಹೆಸರನ್ನೇ ತಮ್ಮ ವಚನಾಂಕಿತವಾಗಿ ಬಳಸಿದ್ದಾರೆ. ಶರಣೆ ಮುಕ್ತಾಯಕ್ಕ ತನ್ನ ಅಣ್ಣನಾದ ಅಜಗಣ್ಣನ ಹೆಸರನ್ನೇ ವಚನಾಂಕಿತವಾಗಿ ಬಳಸಿದ್ದಾಳೆ.
ವಚನಗಳ ಭಾಷೆ
ವಚನಗಳಲ್ಲಿ ಬಳಸಿದ ಶಬ್ಧ ಭಂಡಾರ ಅಮೋಘ, ಅಷ್ಟೇ ಅದ್ಭುತ. ಶುದ್ಧ ಕನ್ನಡ, ಸಂಸ್ಕೃತ ಮತ್ತು ತದ್ಭವಗಳಿರುವವು. ಧರ್ಮ ಸಂಬಂಧದಿಂದ ಉಪಯೋಗಿಸಲ್ಪಟ್ಟ ಎಷ್ಟೋ ಪದಗಳು ಸಂಸ್ಕೃತ ಮತ್ತು ಪಾರಿಭಾಷಿಕವಾಗಿರುವವು. ಅವುಗಳ ಅರ್ಥವನ್ನು ಒಮ್ಮೆ ಪೂರ್ಣವಾಗಿ ಅರ್ಥಮಾಡಿಕೊಂಡರೆ ಮುಂದೆ ಗೊಂದಲಗಳು ಇರಲಾರವು. ಉದಾ: ಲಿಂಗ, ಅಂಗಸಂಬಂಧಿ ಪದಗಳು, ಇಷ್ಟಲಿಂಗ, ಪ್ರಾಣಲಿಂಗ, ನಿಜೈಕ್ಯ, ಇನ್ನು ಹಲವಾರು ಪದಗಳು ಇವೆ.
ಶುದ್ಧ ಕನ್ನಡದ ಎಷ್ಟೋ ಪದಗಳು ಇಂದು ಕಣ್ಮರೆಯಾಗಿವೆ. ಉದಾ: ಒಗೆತನ, ಗಡಣ, ಸಯ್ಪು, ಮಾಣು, ಸಸಿನ ಇನ್ನು ಹಲವಾರು ಪದಗಳು ಇಂದು ಬಳಕೆಯಲ್ಲಿಲ್ಲ. ಇಂತಹ ಅನೇಕ ಶಬ್ಧಗಳನ್ನು ರೂಢಿಯಲ್ಲಿ ತಂದರೆ ಕನ್ನಡ ಭಾಷೆಯ ಸೊಬಗು ಇನ್ನಷ್ಟು ವೃದ್ಧಿಸುವದು. ಈಗಿಗ ಬಸವ ಭಕ್ತರೆಲ್ಲರೂ , ಶರಣು ಶರಣಾರ್ಥಿಗಳು, ಪ್ರಾಸಾದವಾಯಿತೆ, ಶರಣರೆ ಬನ್ನಿ ಹೀಗೆ ಕೆಲವೇ ಕೆಲವು ಶಬ್ಧಗಳನ್ನು ರೂಢಿಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ಪದಗಳನ್ನು ಬಳಸುವ ಮೂಲಕ ವಚನ ಸಾಹಿತ್ಯ ಭಾಷೆಯನ್ನು ರೂಢಿಸಿಕೊಂಡು ಕನ್ನಡ ಭಾಷೆಯ ಶೋಭೆಯನ್ನು ಹೆಚ್ಚಿಸೋಣ.
“ತಾಯಿಗಿಂತ ಬಂಧು ಇಲ್ಲ, ಸರ್ವಜ್ಞ ಹೇಳದ ವಿಷಯವಿಲ್ಲ” ಎಬಂತೆ ಶರಣರು ಚರ್ಚಿಸದೆ ವಿಷಯವೇ ಇಲ್ಲ ಎನ್ನಬಹುದು. ಆಧ್ಯಾತ್ಮಿಕ ವಿಷಯದ ಜೊತೆಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಇನ್ನು ಹಲವಾರು ವಿಷಯಗಳ ಪ್ರಶ್ನೆಗಳಿಗೆ ಪರಿಹಾರವನ್ನು ವಚನಗಳಲ್ಲಿ ಕಾಣಬಹುದು.
ಒಟ್ಟಾರೆಯಾಗಿ ವಚನ ಸಾಹಿತ್ಯವು, ನಿರ್ಮಲ ನಿರ್ಝರಿಯಂತೆ, ನೀರ ತೊರೆಯಂತೆ, ಇಳೆಗೆ ಇಳಿವ ಮಳೆಯಂತೆ, ಬಂಡುಂಬ ದುಂಬಿಯ ಝೇಂಕಾರದಂತೆ, ವಸಂತದ ಕೋಗಿಲೆಯ ಕೂಗಿನಂತೆ, ವೀಣೆಯ ಮಧುರ ಸ್ವರದಂತೆ, ನಿರ್ಮಲ ಜ್ಯೋತಿಯಂತೆ ಭಕ್ತನ ಅಂತರಂಗದಲ್ಲಿ ಉಕ್ಕುವ ಭಾವಲಹರಿಗಳು, ನಿತ್ಯ ನೂತನ ಸತ್ಯ ಚೇತನದಂತೆ ಆಕರ್ಷಕವಾಗಿ ಕಂಗೊಳಿಸುತ್ತಿವೆ.
–ಸವಿತಾ ಮಾಟೂರು ಇಲಕಲ್ಲ