ಕಲ್ಯಾಣ ಕರ್ನಾಟಕದ ಉತ್ಸಾಹದ ಖಣಿ ಶ್ರೀ ಶರಣಬಸವರಾಜ ಬಿಸರಳ್ಳಿ

ಕಲ್ಯಾಣ ಕರ್ನಾಟಕದ ಉತ್ಸಾಹದ ಖಣಿ ಶ್ರೀ ಶರಣಬಸವರಾಜ ಬಿಸರಳ್ಳಿ

ಶ್ರೀ ಶರಣಬಸವರಾಜ ಬಿಸರಳ್ಳಿ(೯೧) ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಹೈದರಾಬಾದ ವಿಮೋಚನೆಯ ಸಂದರ್ಭದಲ್ಲಿ ರಜಾಕಾರರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಕೊಪ್ಪಳ ತಾಲೂಕು ಬಿಸರಳ್ಳಿ ಗ್ರಾಮದ ಶ್ರೀ ಶರಣಬಸವರಾಜ ಬಿಸರಳ್ಳಿಯವರು ಕಲ್ಯಾಣ ಕರ್ನಾಟಕದ ಹೆಮ್ಮೆಯಾಗಿದ್ದವರು.

ಸ್ವಾತಂತ್ರೋತ್ತರ ಭಾರತದಲ್ಲಿ ಸರ್ಕಾರಿ ಶಾಲಾ ಶಿಕ್ಷಕರಾಗಿ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಕೀರ್ತಿ ಇವರದು.ಕೊಪ್ಪಳ ಶ್ರೀ ಗವಿಮಠದ ಲಿಂಗೈಕ್ಯ ಪರಮ ಪೂಜ್ಯ ಶಿವಶಾಂತವೀರ ಮಹಾಸ್ವಾಮಿಗಳ ಅವರಿಂದ ಲಿಂಗದೀಕ್ಷೆಯನ್ನು ಪಡೆದುಕೊಂಡು ಸಂತ ಜೀವನವನ್ನು ನಡೆಸುತ್ತಿದ್ದರು.ಗವಿಮಠ ವನ್ನು ಕುರಿತು ಗ್ರಂಥವನ್ನು ರಚಿಸಿದ್ದರು.ನಾಡಿನ ಹೆಸರಾಂತ ಮಠ ಪೀಠಾಧೀಶರ ಸಮೀಪವರ್ತಿಯಾಗಿದ್ದವರು.

ಕಳೆದ ಒಂದು ದಶಕದ ಹಿಂದಿನವರೆಗೂ ಕೊಪ್ಪಳವೇ ಅವರ ಕರ್ಮ ಭೂಮಿಯಾಗಿತ್ತು ಇತ್ತಿತ್ತಲಾಗಿ ಹುಬ್ಬಳ್ಳಿಯಲ್ಲಿರುವ ಮಕ್ಕಳ ಮನೆಯಲ್ಲಿ ವಾಸವಾಗಿದ್ದರು ಸಹ ಕೊಪ್ಪಳದ ಸಂಪರ್ಕವನ್ನು ತಪ್ಪಿಸಿಕೊಂಡಿರಲಿಲ್ಲ.ತೊಂಭತ್ತೊಂದನೆಯ ಈ ವಯಸ್ಸಿನಲ್ಲಿಯೂ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಗಾಗಿ ಪರೀಕ್ಷೆ ಬರೆದು ಯಶಸ್ವಿಯಾಗಿ ಸಂಶೋಧನೆಯಲ್ಲಿ ತೊಡಗಿ ಕೊಂಡಿದ್ದ ಉತ್ಸಾಹಿಗಳು.ದೇಹಕ್ಕೆ ವಯಸ್ಸಾಗಿದ್ದರೂ ದೇಹದ ಒಳಗಿರುವ ಆತ್ಮ ಸದಾ ಚಿರ ಯೌವನದಿಂದ ಕಂಗೊಳಿಸುತ್ತಿತ್ತು.ಅವರನ್ನು ನೋಡಿ ನವಯುವಕರು ನಾಚಿಕೊಳ್ಳುವ ಹಾಗಿತ್ತು ಅವರ ದಿನಚರಿ.ವಯೋಸಹಜವಾಗಿ ಬೆನ್ನು ಬಾಗಿದ್ದರೂ ಕಾಲಲ್ಲಿ ಶಕ್ತಿ ಹುರಿಗಟ್ಟಿತ್ತು.

ಕಾಲ ಕಾಲಕ್ಕೆ ಇಂತಹ ಹಿರಿಯರನ್ನು ಪಡೆದುಕೊಂಡ ಕಲ್ಯಾಣ ಕರ್ನಾಟಕ ಪಾವನವಾಗಿದೆ.ಕಲ್ಯಾಣ ಕರ್ನಾಟಕದ ತಾಕತ್ತನ್ನು ಈ ನಾಡಿಗೆ ಪರಿಚಯಿಸಿದವರಲ್ಲಿ ಇವರು ಒಬ್ಬರು.ಇಂದು ದಿನಾಂಕ 17-10-2021 ರಂದು ಅವರು ಲಿಂಗೈಕ್ಯರಾದರೆಂದು ಸುದ್ದಿ ತಿಳಿದು ದುಃಖವಾಯಿತು.ನಮ್ಮ ತಂದೆ ಲಿಂ. ವೀರಪ್ಪ ಕೊಪ್ಪಳ,ಎಚ್. ಎಸ್. ಪಾಟೀಲ, ಕೆ.ಬಿ.ಬ್ಯಾಳಿ,ಲಿಂ.ಡಾ.ಗಂಗಾಧರಯ್ಯ ಹಿರೇಮಠ, ಲಿಂ.ಶಂಕ್ರಪ್ಪ ಬಂಗಾರಶೆಟ್ರ ಮುಂತಾದವರ ಸಮಕಾಲೀನರಾಗಿದ್ದರು.

ಇವರು ನಮ್ಮ ಕೊಪ್ಪಳ ನಾಡಿನ ಹೆಮ್ಮೆ ಗಳಲ್ಲಿ ಒಬ್ಬರಾಗಿದ್ದರು ಇವರ ನಿಧನದಿಂದ ಕೊಪ್ಪಳದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಕೊಂಡಿ ಕಳಚಿಕೊಂಡಂತಾಗಿದೆ.ನನ್ನ ಪೂರ್ವ ನಿಯೋಜಿತ ಕಾರ್ಯಕ್ರಮ ಗಳಿಂದಾಗಿ ಅವರ ಅಂತಿಮ ದರ್ಶನವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಮಹಾತ್ಮಾ ಬಸವೇಶ್ವರ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ…

ಗವಿಸಿದ್ದಪ್ಪ ಕೊಪ್ಪಳ

Don`t copy text!