ಅಸಾಮಾನ್ಯ ಸಾಧಕ

ಅಸಾಮಾನ್ಯ ಸಾಧಕ

ತಾನಿಲ್ಲದೆ ತಾ ಮಾಡುವ ಸಹಜನು;ತಾನಿಲ್ಲದೆ ತಾ ನೀಡುವ ಸಹಜನು.ತಾ ಬೇರಿಲ್ಲದೆ ಬೆರಸಿಹ ನಿಜಪದದೊಳು,ಏನೊಂದರಿ ಹಮ್ಮಿಲ್ಲದೆ ಸಹಜ ಸುಜ್ಞಾನಿಯ ಮಾಟದ ಕೂಟದ ಸ್ಥಲದೊಳು ಕೂಡಿಹ ಕೂಡಲಸಂಗನನದೇನೆಂದುಪಮಿಸುವೆ.

ವಿಶ್ವಗುರು ಬಸವಣ್ಣನವರ ವಚನದ ತಾತ್ಪರ್ಯದಂತೆ ಕಾಯಕ ನಿಷ್ಠೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಯಾವುದೇ ಹಮ್ಮು-ಬಿಮ್ಮುಗಳಿಲ್ಲದೆ,ಅಧಿಕಾರದ ದರ್ಪ ತೋರದೆ, ಜನಸಾಮಾನ್ಯರಂತೆ ಕಾಯಕ ಮಾಡುತ್ತಿರುವ ಗದಗ ತಾಲೂಕಿನ ಐತಿಹಾಸಿಕ ಪ್ರಸಿದ್ಧ ತಾಣ, ಮುಳಗುಂದ ಪಟ್ಟಣದ ಪಟ್ಟಣ ಪಂಚಾಯಿತಿ ಕೆರೆಗಳ ಸಂರಕ್ಷಣೆ ಮತ್ತು ಪುನಶ್ಚೇತನ ಕಾರ್ಯಕ್ರಮದಡಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವಲ್ಲಿ ಅಸಾಮಾನ್ಯ ಸಾಧಕರಾದ ಶ್ರೀ.ಎಂ.ಎಸ್.ಬೆಂತೂರ ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯಿತಿ ಮುಳಗುಂದ ಇವರ ಶ್ರಮ ಅವಿಸ್ಮರಣೀಯ.

ಶ್ರೀ ಎಂ.ಎಸ್.ಬೆಂತೂರ ಮುಳಗುಂದ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಾಗಿ ಕಳೆದ ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.ಈ ಅವಧಿಯಲ್ಲಿ ಈ ಹಿಂದೆಂದೂ ಕಾಣದಷ್ಟು ಆಡಳಿತಾತ್ಮಕ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ.ಇದು ವ್ಯಕ್ತಿಯ ವೈಭವೀಕರಣ ಅಲ್ಲವೇ ಅಲ್ಲ, ವಾಸ್ತವಿಕ ಸತ್ಯ. *ಪಟ್ಟಣ ಪಂಚಾಯಿತಿ ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣೆ* ಯಲ್ಲಿ ಇಡೀ ದೇಶದಲ್ಲಿ 84ನೇ ಶ್ರೇಣಿಯಲ್ಲಿ ಬರುವಂತೆ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. *ಬಯಲು ಮುಕ್ತ ಶೌಚಾಲಯ* ಕ್ಕಾಗಿ 6 ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ.ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿದೆ.ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರತಿ ವಾರ್ಡ್ ಗಳಲ್ಲಿ ಸಿ.ಸಿ.ರಸ್ತೆಗಳಾಗಿವೆ.ಪಟ್ಟಣ ಪಂಚಾಯಿತಿಯ ಆರ್ಥಿಕ ಸ್ಥಿತಿ ಉತ್ತಮವಾಗಿದ್ದು, ಬರಬೇಕಾದ ಎಲ್ಲ ಬಗೆಯ ತೆರಿಗೆಗಳನ್ನು ಸಂಗ್ರಹಿಸಿ ಪ್ರತಿಶತ 87 ರಷ್ಟು ಆದಾಯವನ್ನು ಹೆಚ್ಚಿಸಿಕೊಳ್ಳಲಾಗಿದೆ.ಈ ಕಾರಣದಿಂದಾಗಿಯೇ ಪ.ಪಂ.ನ ಎಲ್ಲಾ ನೌಕರರು ಪ್ರತಿ ತಿಂಗಳು 5 ನೇ ತಾರೀಖನೊಳಗಾಗಿ ವೇತನವನ್ನು ಪಡೆಯುವಂತಾಗಿದೆ.
ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ವಿಂಗಡಿಸಿ ಅದರಿಂದ ಮರುಬಳಕೆ ಮಾಡಿ ಅತ್ಯಂತ ಫಲವತ್ತಾದ ಎರೆಹುಳು ಗೊಬ್ಬರವನ್ನು ತಯಾರಿಸುವ ಘಟಕ ಸ್ಥಾಪಿಸಲಾಗಿದೆ.ಇದರಿಂದ ಪ.ಪಂಚಾಯಿತಿಗೆ ಆದಾಯದ ಮೂಲವನ್ನು ಮಾಡಿರುವುದು ಸ್ತುತ್ಯಾರ್ಹ ಸಂಗಂತಿ.ಇಲ್ಲಿ ಮತ್ತೊಂದು ಗಮನಾರ್ಹ ಸಾಧನೆ ಎಂದರೆ, ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನೂರಾರು ಹೂ,ಹಣ್ಣಿನ ಗಿಡಗಳನ್ನು ನೆಟ್ಟು ಅತ್ಯಾಕರ್ಷಕ ಉದ್ಯಾನವನ್ನು ನಿರ್ಮಿಸಿದ್ದಾರೆ.

*ಚಿಂತಾಯಾ:ಶ್ಚ ಚಿತಾಯಾಶ್ಚ ಬಿಂದುಮಾಂತ್ರಂ ವಿಶಿಷ್ಯತೆ.ಚಿತಾದಹಿತಿ ನಿರ್ಜಿವ ಚಿಂತಾ ದಹಿತಿ ಜೀವಿನಂ*
ಚಿಂತೆ ಮತ್ತು ಚಿತೆಗೆ ಕೇವಲ ಬಿಂದು (೦)ಮಾತ್ರ ವ್ಯತ್ಯಾಸ ಇದೆ.ಆದರೆ ಚಿತೆ ನಿರ್ಜಿವ ವಸ್ತುಗಳನ್ನು ಸುಡುತ್ತದೆ ಆದರೆ ಚಿತೆ ಸಜೀವವನ್ನು ಸುಡುತ್ತದೆ.ಜಗತ್ತಿನಲ್ಲಿ ಯಾರೇ ಇರಲಿ ಚಿಂತೆ ಇಲ್ಲದ ಮನುಷ್ಯನಿಲ್ಲ.ಹಾಗೇ ಸಾವಿಲ್ಲದ ಮನುಷ್ಯರಿಲ್ಲ.
ಈ ಮಾತನ್ನು ನಾನು ಉಲ್ಲೇಖಿಸಲು ಕಾರಣ ಮುಳಗುಂದ ಪಟ್ಟಣದಲ್ಲಿ *ವಾಲಿ* ಮನೆತನದವರು ದೇಣಿಗೆಯಾಗಿ ಕೊಡಮಾಡಿದ ಸ್ಮಶಾನದಲ್ಲಿ ಬಗೆಬಗೆಯ ಸಸಿಗಳನ್ನು ನೆಟ್ಟು ಶವಸಂಸ್ಕಾರಕ್ಕೆ ಬಂದವರಿಗೆ ನೆರಳು ಹಾಗೂ ನೆಮ್ಮದಿಯ ಸ್ಥಳವೆನಿಸಿದೆ.

ನೀರ ಕಂಡಲ್ಲಿ ಮುಳುಗುವರಯ್ಯಾ. ಮರನ ಕಂಡಲ್ಲಿ ಸುತ್ತುವರಯ್ಯಾ ಬತ್ತುವ ಜಲವ ಒಣಗುವ ಮರನ ನೆಚ್ಚಿದವರನು ನಿಮ್ಮನೆತ್ತ ಬಲ್ಲರು, ಕೂಡಲಸಂಗಮದೇವಾ

ಮುಳಗುಂದ ಪಟ್ಟಣ ಐತಿಹಾಸಿಕ ಹಿನ್ನೆಲೆ ಹೊಂದಿರುವ ಪಟ್ಟಣವಾಗಿರುವುದರಿಂದ *ವಾತಾಪಿಯ ಚಾಲುಕ್ಯ ಮನೆತನದ ಅರಸನಾದ 6ನೆಯ ವಿಕ್ರಮಾದಿತ್ಯನ ಸಾಮಂತ ಅರಸನಾದ ಆಯ್ಚರಸ* ಅಬ್ಬಿಗೇರಿ ಕೆರೆಯನ್ನು ನಿರ್ಮಿಸಿರುವ ಬಗೆಗೆ ಶಿಲಾ ಶಾಸನವಿದೆ.ಹಾಗೇ ಕಾಲಾನುಕ್ರಮದಲ್ಲಿ ಏಳು ಕೆರೆಗಳಾದವು.
ಆದರೆ ಅವುಗಳಲ್ಲಿ *ಪಟ್ಟಣಶೆಟ್ಟಿ* ಕೆರೆ ಹಾಗೂ ಇನ್ನಿತರ ಕೆರೆಗಳು ಒತ್ತುವರಿಯಾಗಿದ್ದವು ಕೆಲವಂತೂ ಕೆರೆಯಿತ್ತೆಂಬ ಕುರುಹು ಕೂಡಾ ಇಲ್ಲದಂತಾಗಿತ್ತು.ಅಂತಹ ಕೆರೆಗಳನ್ನು ಪುನಶ್ಚೇತನಗೊಳಿಸಿ,ಕೆರೆಗಳ ಸುತ್ತಲೂ ಹಾಗೂ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸುಮಾರು 5 ಸಾವಿರ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡುತ್ತಿದ್ದಾರೆ.
ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ಒದಗಿಸುತ್ತಿದ್ದಾರೆ.ಅತೀ ಮುಖ್ಯವಾದ ಅಂಶವೆಂದರೆ ಯಾವುದೇ ತೆರನಾದ ಕಾರ್ಯವನ್ನು ಸಾರ್ವಜನಿಕ ಮುಕ್ತ ಹಾಗೂ ಪಾರದರ್ಶಕವಾಗಿ ಇಡಲಾಗಿದೆ.
ಕೋವಿಡ್ ಸಾಂಕ್ರಾಮಿಕ ರೋಗ ವಿಶ್ವವ್ಯಾಪಿ ಹರಡಿದಾಗ ಸ್ಥಳೀಯ ಠಾಣೆಯ ಪಿ.ಎಸ್.ಆಯ್
ಶ್ರೀ ಸಚಿನ ಅಲಮೇಲಕರ ಇವರೊಂದಿಗೆ ಕಾಯ್ದೆ, ಕಾನೂನುಗಳನ್ನು ಕಟ್ಟು-ನಿಟ್ಟಾಗಿ ಜಾರಿಗೊಳಿಸಲಾಗಿತ್ತು.ಅದರಲ್ಲೂ ಮುಳಗುಂದ ಪಟ್ಟಣದ ಅಭಿವೃದ್ಧಿ ಹರಿಕಾರರು, ಸೂರ್ಯ ಚಂದ್ರರಂತಿದ್ದ *ಜಿನೈಕ್ಯ ಶ್ರೀ ಆರ್.ಎನ್.ದೇಶಪಾಂಡೆ(ಧನಿ) ಮತ್ತು ಲಿಂಗೈಕ್ಯ ಶ್ರೀ ಸಿ.ಬಿ.ಬಡ್ನಿ* ಅಂತಿಮ ಸಂಸ್ಕಾರ, ಸಾಮಾಜಿಕ ಅಂತರದೊಂದಿಗೆ ಮಾಡಿದ್ದು ಅವಿಸ್ಮರಣೀಯವಾಗಿದೆ.ಇದು ಮುಳಗುಂದ ಪಟ್ಟಣದ ಪಾಲಿಗೆ ಶಿಲಾ ಶಾಸನವೇ ಸರಿಯೆಂದರೆ ತಪ್ಪಿಲ್ಲ.
*ತಾಲೂಕಾ ಆಡಳಿತ ಮತ್ತು ಜಿಲ್ಲಾ ಆಡಳಿತಗಳಿಂದ* ಹಲವಾರು ಪ್ರಶಸ್ತಿ, ಗೌರವಗಳನ್ನು ಪಡೆದಿದ್ದಾರೆ.ಇಷ್ಟೆಲ್ಲ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದರೂ ಈ ಕಾರ್ಯ ನನ್ನೊಬ್ಬನಿಂದಾಗಿದೆ ಎಂದೂ ಎಲ್ಲಿಯೂ ಹೇಳಿಕೊಂಡಿಲ್ಲ. ಇದಕ್ಕೆಲ್ಲ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಗೂ ಗುರು ಹಿರಿಯರು ಪೌರಕಾರ್ಮಿಕರೇ ಹೊರತು ನಾನಲ್ಲವೆಂದು ಹೇಳುತ್ತಾರೆ.

ಮಾಡುವಂತಿರಬೇಕು,ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು ಕೂಡಲಸಂಗಮದೇವರ ನೆನೆವುತ್ತ ನೆನೆಯುತ್ತ ನೆನೆಯದಂತಿರಬೇಕು

ಇಂತಹ ಅಪರೂಪದ ವ್ಯಕ್ತಿತ್ವದ ವ್ಯಕ್ತಿ ಪರಿಚಯ ಮಾಡಿಸುವುದು ನನಗೆ ಹೆಮ್ಮೆ ಎನಿಸುತ್ತದೆ

ರವೀಂದ್ರ ಪಟ್ಟಣ ಮುಳಗುಂದ

Don`t copy text!