ಶತಮಾನದ ರಂಗಚೇತನಕೆ ಪ್ರಶಸ್ತಿ ದೊರಕಲಿ
ನೂರರ ಪ್ರಾಯದ ಚನ್ನಬಸಯ್ಯ ಗುಬ್ಬಿ ಕಳೆದ ಎಂಬತ್ತು ವರುಷಗಳಿಂದ ಕನ್ನಡ ರಂಗಭೂಮಿಯ ಮೌಲ್ಯಗಳನ್ನು ಬಿತ್ತಿಬೆಳೆದವರು. ವೃತ್ತಿರಂಗಭೂಮಿಯ ಹಲವು ಅನನ್ಯತೆಗಳನ್ನು ಬದುಕಿದವರು. ಸ್ವಾತಂತ್ರ್ಯ ಸೇನಾನಿಗಳಾದ ಸುಭಾಷ್ ಚಂದ್ರ ಬೋಸ್, ಹೊಸಮನಿ ಸಿದ್ದಪ್ಪ, ಇನ್ನೂ ಅನೇಕ ಮಹತ್ವದ ನಾಟಕಗಳನ್ನು ಕನ್ನಡ ರಂಗಭೂಮಿಗೆ ತಂದವರು.
ದೂರದ ದೆಹಲಿ, ಕೊಲ್ಕತ್ತಾಗೆ ಹೋಗಿ ವಾರಗಟ್ಟಲೇ ವಾಸ್ತವ್ಯ ಮಾಡಿ ಸುಭಾಷಚಂದ್ರ ಬೋಸ್ ಅವರ ಮೊಮ್ಮಗ ಶಿಶಿರಚಂದ್ರ ಬೋಸ್ ಅವರನ್ನು ಭೇಟಿಮಾಡಿ ಅಪರೂಪದ ಮಾಹಿತಿ ಸಂಗ್ರಹಿಸಿ ನಾಟಕ ರೂಪಿಸುತ್ತಾರೆ. ಅದಕ್ಕಾಗಿ ಅವರು ಒಂಬತ್ತು ವರ್ಷಕಾಲ ವಿವರಗಳನ್ನು ಸಂಗ್ರಹಿಸುತ್ತಾರೆ. ಸುಭಾಷ್ ಚಂದ್ರ ಬೋಸ್ ಅನುಯಾಯಿಗಳಾದ ಡಿ. ಬಿ. ಕಲ್ಮಣಕರ್ ಅವರ ನಿಕಟ ಒಡನಾಟದ ನೆರವು ಪಡೆಯುತ್ತಾರೆ. ಅದನ್ನು ಇಂಗ್ಲಿಷ್ ಭಾಷೆಯಲ್ಲೂ ಪ್ರಕಟಿಸಿದ್ದಾರೆ.
ಸೌಭಾಗ್ಯಲಕ್ಷ್ಮಿ, ಬಾಲಚಂದ್ರ, ಕಡಕೋಳ ಮಡಿವಾಳಪ್ಪ, ಪುತ್ಥಳಿಯಂತಹ ಅಪರೂಪದ ನೂರೈವತ್ತಕ್ಕು ಅಧಿಕ ನಾಟಕಗಳ ನೂರಾರು ಪಾತ್ರಗಳಲ್ಲಿ ಅಭಿನಯಿಸಿದವರು. ಸಹಸ್ರಾರು ಪ್ರದರ್ಶನಗಳ ಮೂಲಕ ಕನ್ನಡ ರಂಗಭೂಮಿಯ ಪರಂಪರೆಯನ್ನು ಸಮೃದ್ಧಗೊಳಿಸಿದವರು.
ಪರದೆ ಎಳೆಯುವ ರಂಗಕಾರ್ಮಿಕನಾಗಿ, ನಟನಾಗಿ, ನಿರ್ದೇಶಕನಾಗಿ, ನಾಟಕ ಕಂಪನಿ ಮಾಲೀಕನಾಗಿ, ನಾಟಕಕಾರನಾಗಿ, ಚಲನಶೀಲ ರಂಗೇತಿಹಾಸಕಾರನಾಗಿ ಹೀಗೆ ಬಹುಮುಖಿ ರಂಗಕರ್ಮಿಯ ಎಂಟು ದಶಕಗಳನ್ನು ಹಾಳತವಾಗಿ ಬಾಳಿದವರು. ಇನ್ನೂ ಇಂತಹ ಹತ್ತಾರು ಮಹತ್ತರ ರಂಗಭೂಮತ್ವದ ವ್ಯಕ್ತಿತ್ವವುಳ್ಳ ಗುಬ್ಬಿ ಚನ್ನಬಸಯ್ಯ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಇದುವರೆಗೆ ಬಾರದಿರುವುದೇ ಪರಮಾಶ್ಚರ್ಯ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಈ ಹಿರಿಯ ರಂಗಚೇತನದ ಹೆಸರು, ಇವರ ಅಪರೂಪದ ರಂಗವ್ಯಕ್ತಿತ್ವದ ಪರಿಚಯ ಇಲ್ಲವೆಂದೇನಿಲ್ಲ. ಹಾಗಂತ ಇವರ ಹೆಸರು ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಗಮನ ಸೆಳೆದಿಲ್ಲವೆಂತಲೂ ಇಲ್ಲ. ಪ್ರತೀ ಬಾರಿಯೂ ಕಟ್ಟಕಡೇ ಗಳಿಗೆವರೆಗೂ ಇವರ ಹೆಸರು ಕೇಳಿಬಂದು ಪವಾಡ ಸದೃಶದಂತೆ ಅದೇ ಕಟ್ಟಕಡೇ ಕ್ಷಣದಲ್ಲಿ ಆಯ್ಕೆ ಸಮಿತಿಯ ಕಣ್ತಪ್ಪಿಸಿ ಮಾಯವಾಗಿ ಹೋಗುತ್ತದೆ. ಈ ಬಾರಿ ಏನಾಗುತ್ತದೆಂದು ಗೊತ್ತಿಲ್ಲ. ಆದರೆ ಈ ಸಲ ಹಾಗಾಗದಿರಲಿ.
ಚನ್ನಬಸಯ್ಯ ಗುಬ್ಬಿ, ತನ್ನ ಪರಿಚಯಕ್ಕೆ ಮುನ್ನವೇ “ನಾನು ಗುಬ್ಬಿ ವೀರಣ್ಣನವರ ಕುಟುಂಬಕ್ಕೆ ಸಂಬಂಧಿಸಿದವನಲ್ಲ” ಎಂದು ವಿನೀತರಾಗೇ ಸ್ಪಷ್ಟಪಡಿಸುವುದು ಅವರ ಮನೋಧರ್ಮ. ಅದು ಅವರ ಸ್ವಯಂ ಪರಿಚಯದ ಗಟ್ಟಿಧ್ವನಿಯ ವಾಡಿಕೆಯೇ ಆಗಿದೆ.
ಯಾಕೆಂದರೆ ರಂಗಭೂಮಿಯ ಕೆಲವು ಮಂದಿ ಕಲಾವಿದರು ತಮ್ಮ ಪರಿಚಯವನ್ನು ಹೆಗ್ಗಳಿಕೆಯ ಧ್ವನಿಯಲ್ಲಿ “ತಾವು ಗುಬ್ಬಿವೀರಣ್ಣನವರ ಖಾಸಾ ಸಂಬಂಧಿಗಳೆಂಬಂತೆ” ಅವರ ಮರಿ ಗಿರಿ ಮೊಮ್ಮಕ್ಕಳೆಂದು ತಲೆಮಾರುಗಳ ನಂಟನ್ನು ಗಂಟುಹಾಕಿ ಹೇಳುವುದನ್ನು ಕೇಳಿದ್ದೇವೆ. ಎಷ್ಟೋಬಾರಿ ಅವರ ಮೂಲ ಕುಟುಂಬಸ್ಥರಿಗೇ ಅವು ಗೊತ್ತಿರದ ಸಂಬಂಧಗಳಾಗಿರ್ತವೆ.
ಅಂಥದಕ್ಕೆ ಅವಕಾಶವೇ ಬೇಡ ಎನ್ನುವುದಕ್ಕಾಗಿ ಚನ್ನಬಸಯ್ಯ ಗುಬ್ಬಿ ಅದನ್ನು ಕರಾರುವಾಕ್ಕಾಗಿ ಎಂಬಂತೆ ತಮ್ಮ ಹೆಸರಿನ ಪರಿಚಯದ ಆರಂಭಕ್ಕೇ ಅದನ್ನು ಹೇಳಿ ನಿರಾಳರಾಗುತ್ತಾರೆ. ಗುಬ್ಬಿ ವೀರಣ್ಣನವರ ಹೆಸರಿಗೆ ಮುಕ್ಕು ಬಾರದಿರುವ ಆದರಪೂರ್ವಕ ಕಳಕಳಿ ಅವರದು. ಅಷ್ಟು ಮಾತ್ರವಲ್ಲ ಚನ್ನಬಸಯ್ಯ ಗುಬ್ಬಿ ಅವರಿಗೆ ನಾಟಕರತ್ನ ಗುಬ್ಬಿ ವೀರಣ್ಣನವರ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವ.
ಹಿರಿಯ ರಂಗಚೇತನ ಗುಬ್ಬಿ ಚನ್ನಬಸಯ್ಯ ಅವರಿಗೀಗ ಬರೋಬ್ಬರಿ ತೊಂಬತ್ತೊಂಬತ್ತರ ತುಂಬು ಹರೆಯ. ಇನ್ನೇನು (06.05.1923) ಮುಂಬರುವ ಮೇ ಆರಕ್ಕೆ ನೂರರ ಪ್ರಾಯಕ್ಕೆ ಕಾಲಿಡುತ್ತಾರೆ. ಐವತ್ತನೇ ವಯಸಿನಲ್ಲಿ ಅದೆಷ್ಟು ಗಟ್ಟಿಮುಟ್ಟಾಗಿದ್ರೋ ಈಗಲೂ ಅಷ್ಟೇ ಸದೃಢಶಾಲಿ. ಶತಮಾನದ ಹೊಸ್ತಿಲಲ್ಲಿಯೂ ಅವರ ರಂಗೋಲ್ಲಾಸ, ಜೀವನೋತ್ಸಾಹ ಕಿಂಚಿತ್ತೂ ಕುಂದಿಲ್ಲ. ಅಕ್ಷರಶಃ ಅಚ್ಚರಿ ಮೂಡಿಸುವಂತಹದ್ದು.
ಮೊನ್ನೆಯಷ್ಟೇ (07.10.2021) ಅವರು ದಾವಣಗೆರೆಗೆ ಬಂದಿದ್ದರು. ಇಲ್ಲಿ ಮೊಕ್ಕಾಂ ಮಾಡಿರುವ ಚಿತ್ತರಗಿ ಗಂಗಾಧರ ಶಾಸ್ತ್ರಿಗಳ ಕುಮಾರ ವಿಜಯ ನಾಟಕ ಕಂಪನಿಗೆ ಭೇಟಿಕೊಟ್ಟರು. ಚಿತ್ತರಗಿ ಶಾಸ್ತ್ರಿಗಳ ನಾಟಕ ಕಂಪನಿ ಚನ್ನಬಸಯ್ಯ ಅವರಿಗೆ ಗಟ್ಟಿ ಬದುಕು ಕಟ್ಟಿಕೊಟ್ಟ ಅವರ ಪಾಲಿನ ರಂಗಭೂಮಿ ವಿಶ್ವವಿದ್ಯಾಲಯ. ಅಷ್ಟಕ್ಕೂ ಚಿತ್ತರಗಿ ಶಾಸ್ತ್ರಿಗಳ ನಾಟಕ ಕಂಪನಿಗೆ ವೃತ್ತಿ ರಂಗಭೂಮಿ ಚರಿತ್ರೆಯಲ್ಲಿ ಮಹತ್ತರ ಸ್ಥಾನಮಾನ. ಅದಕ್ಕೆ ಗುಣಾತ್ಮಕ ರಂಗಪರಂಪರೆಗಳ ಮೇಲ್ಪಂಕ್ತಿ.
ಅಂದು ದಾವಣಗೆರೆಯಲ್ಲಿ ಚಿತ್ತರಗಿ ಕಂಪನಿಯ ಕಲಾವಿದರಿಗೆ ಚನ್ನಬಸಯ್ಯ ತಾವೇ ಖುದ್ದು ಶಾಲು ಹೊದಿಸಿ ಸನ್ಮಾನ ಮಾಡಿ, ಕೈಲಾದ ಕಾಣಿಕೆ ನೀಡಿ ಹದುಳ ಪ್ರೀತಿಯಿಂದ ಹಾರೈಸಿದರು. ಸೊಗಸಾಗಿ ಓಡಾಡಿ, ಸುಲಲಿತವಾಗಿ ಮಾತಾಡಿ ಅಂದು ಅವರು ವೃತ್ತಿನಾಟಕ ಕಂಪನಿಗಳ ಶತಮಾನದ ತಮ್ಮ ರಂಗಸಂಸ್ಕೃತಿ ಅನುಭವ ಹಂಚಿಕೊಂಡ ರಂಗಚೈತನ್ಯ ಪರಮ ಬೆರಗು ಮೂಡಿಸಿತು. ನೂರರ ಪ್ರಾಯದಲ್ಲೂ ಯಾರ ನೆರವಿಲ್ಲದೇ ದೂರದ ಊರುಗಳಿಗೆ ಸರಕಾರದ ಕೆಂಪು ಬಸ್ಸುಗಳಲ್ಲಿ ಪ್ರಯಾಣಿಸುತ್ತಾರೆ. ಅವಕಾಶ ದೊರಕಿದರೆ ರಂಗಮಂಟಪದಲ್ಲಿ ಅಭಿನಯಿಸುವುದು, ಅಸ್ಖಲಿತವಾಗಿ ಸಂಭಾಷಣೆ ಹೇಳುವುದು… ಹೀಗೆ ಅವರ ಚುರುಕಿನ ರಂಗಚಟುವಟಿಕೆ, ಎಂಥವರಲ್ಲೂ ಸೋಜಿಗ ಮೂಡಿಸಬಲ್ಲದು.
ಚನ್ನಬಸಯ್ಯ ಅವರ ಹುಟ್ಟೂರು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಒಡೆಯರ ಮತಿಘಟ್ಟ. ಸಿದ್ರಾಮಯ್ಯ ಲಕ್ಷ್ಮಿದೇವಮ್ಮ ಇವರ ಅಪ್ಪ ಅಮ್ಮ. ಬಾಲ್ಯದಲ್ಲಿಯೇ ಅಲೆಮಾರಿ ಬದುಕು. ಹತ್ತು ವರ್ಷದ ಬಾಲಕನಿದ್ದಾಗಲೇ ರೈಲು ಹತ್ತಿ ಹುಬ್ಬಳ್ಳಿಗೆ ಹೋಗಿ ಹೊಟೆಲೊಂದರಲ್ಲಿ ಕಪ್ಪುಬಸಿ ತೊಳೆಯುವ ಕಾಯಕ. ಆಗಲೇ ಅಲ್ಲಿ ಕ್ಯಾಂಪ್ ಮಾಡಿದ್ದ ಚಿತ್ತರಗಿಯ ಕುಮಾರ ವಿಜಯ ನಾಟಕ ಮಂಡಳಿಯ ಮಾಲಿಕ ಗಂಗಾಧರ ಶಾಸ್ತ್ರಿಗಳ ಕಣ್ಣಿಗೆ ಬಿದ್ದ ಈ ಬಾಲಕ.
ಚಿಕ್ಕಹುಡುಗ ಚನ್ನಬಸಯ್ಯನ ಕ್ರಿಯಾಶೀಲತೆ ಶಾಸ್ತ್ರಿಗಳ ಅಂತಃಕರಣ ಸೆಳೆಯಿತು. ಅವನ ಸೂಕ್ಷ್ಮ ಸಂವೇದನೆ ಶಾಸ್ತ್ರಿಗಳ ಅಂತರಂಗದಲ್ಲಿ ಅದಮ್ಯವಾದ ಕಕ್ಕುಲತೆ ಹುಟ್ಟಿಸುತ್ತದೆ. ತಡಮಾಡದೇ ಹುಡುಗನ ಮೈದಡವಿ ಅವನಲ್ಲಿ ಮಾತೃತ್ವದ ಪ್ರೀತಿ ಹಂಚುತ್ತಾರೆ. “ನಮ್ ಕಂಪ್ನಿಗೆ ಬರ್ತಿಯಾ” ಅಂತ ಶಾಸ್ತ್ರಿಗಳು ಕೇಳುತ್ತಿದ್ದಂತೆ, ಒಂದೇಮಾತಿಗೆ ಬಾಲಕ ಚನ್ನಬಸಯ್ಯ ಹೊಟೆಲಿನಿಂದ ಸಿದ್ಧಗೊಂಡವರಂತೆ ಎದ್ದು ನಿಲ್ಲುತ್ತಾನೆ. ಶಾಸ್ತ್ರಿಗಳ ತಾಯ್ತನದ ಪ್ರೀತಿ ಬಾಲಕನನ್ನು ನಾಟಕ ಕಂಪನಿಗೆ ಕರೆದೊಯ್ಯುತ್ತದೆ. ಅಂದಿನಿಂದ ಇಂದಿನವರೆಗೂ ಶಾಸ್ತ್ರಿಗಳ ನಂತರವೂ ಅವರ ನಾಟಕ ಕಂಪನಿ ಬಗೆಗಿನ ಮೊದಲಿನ ಮಮಕಾರ ತಾಯ್ತನದ ಪ್ರೀತಿಯ ನಂಟಿಗೆ ಧಕ್ಕೆ ಉಂಟಾಗಿಲ್ಲ.
ಗುಬ್ಬಿ ವೀರಣ್ಣನವರ ಸಮಕಾಲೀನರಾದ ಚಿತ್ತರಗಿ ಗಂಗಾಧರ ಶಾಸ್ತ್ರಿಗಳಿಗೆ ವೀರಣ್ಣನವರ ಬಗ್ಗೆ ಎಲ್ಲಿಲ್ಲದ ಪ್ರೀತಿ. ಅಂತಹ ಪ್ರೀತಿಯ ದ್ಯೋತಕವಾಗಿ ಅದೇ ಗುಬ್ಬಿ ತಾಲ್ಲೂಕಿನ ಚನ್ನಬಸಯ್ಯಗೆ ಗುಬ್ಬಿ ಹೆಸರಿನಿಂದಲೇ ಕರೆಯುವುದು ಶಾಸ್ತ್ರಿಗಳಿಗೆ ರೂಢಿಯಾಗುತ್ತದೆ. ಹಾಗೆ ಕರೆದಾಗಲೇ ಶಾಸ್ತ್ರಿಗಳಿಗೆ ಸಂತೃಪ್ತಿ. “ಎಲೋ ಮಗಾ ಗುಬ್ಬಿ “ಅಂತಲೇ ಕರೆದು ಕರೆದು ಇವರ ಹೆಸರು ಗುಬ್ಬಿ ಚನ್ನಬಸಯ್ಯ ಅಂತಾಗಿ ಬಿಟ್ಟಿದೆ. ಆ ಹೆಸರಿಗೀಗ ನೂರರ ಮಹಾಪ್ರಾಯ.
ಮಿಲ್ಟ್ರಿ ಶಿಸ್ತಿನ ಚಿತ್ತರಗಿ ಶಾಸ್ತ್ರಿಗಳ ರಂಗ ಗರಡಿಯಲ್ಲಿ ಚನ್ನಬಸಯ್ಯ ಶಿಸ್ತಿನ ರಂಗ ಸಿಪಾಯಿಯಾಗಿ ರೂಪುಗೊಳ್ಳುತ್ತಾರೆ. ಅದು ಒಂದಲ್ಲ ಎರಡಲ್ಲ ಬರೋಬ್ಬರಿ ಹದಿನಾರು ವರುಷಗಳ ರಂಗತಾಲೀಮು. ಚಿತ್ತರಗಿ ಕಂಪನಿಯ ಹೆಸರಾಂತ ನಾಟಕಗಳಾದ ಬಾಲಚಂದ್ರ, ಸೌಭಾಗ್ಯಲಕ್ಷ್ಮಿ, ಜೀವನಯಾತ್ರೆ ಈ ಎಲ್ಲ ನಾಟಕಗಳ ಪ್ರಮುಖ ಪಾತ್ರಗಳಲ್ಲಿ ಚನ್ನಬಸಯ್ಯ ಪಳಗುತ್ತಾರೆ. ಆ ಪಾತ್ರಗಳು ಅವರಿಗೆ ಹೆಸರನ್ನು ತಂದುಕೊಡುತ್ತವೆ. ನಂತರದ ಗಜಾನನ ಸಂಗೀತ ನಾಟಕ ಮಂಡಳಿಯಲ್ಲಿ ಕೆಲವುಕಾಲ ರಂಗಾನುಭವ. 1981 ರಲ್ಲಿ ಅಮರೇಶ್ವರ ವಿಜಯ ನಾಟಕ ಸಂಘ, ಸ್ವಂತ ನಾಟಕ ಕಂಪನಿಯ ಸ್ಥಾಪನೆ.
ಚನ್ನಬಸಯ್ಯರ ಬದುಕಿನಲ್ಲಿ ಕೆಲವು ಅನಿರೀಕ್ಷಿತ ತಿರುವುಗಳು ಘಟಿಸುತ್ತವೆ. ಒಂದಲ್ಲ ಎರಡು ಮದುವೆಗಳು. ಇಂತಹ ಕೆಲವು ಘಟನೆಗಳು ಅವರನ್ನು ಕೊಂಚ ಧೃತಿಗೆಡಿಸುತ್ತವೆ. ಆದರೆ ಅವರು ತಮ್ಮೆಲ್ಲ ಸಂಕಟ, ಸಂತಸಗಳನ್ನು ರಂಗಭೂಮಿಯ ತೊಡಗಿಸಿಕೊಳ್ಳುವಿಕೆ ಮೂಲಕ ಬದುಕು ನಿಭಾಯಿಸಿಕೊಂಡು ನೂರರ ಗಡಿ ತಲುಪಿದ್ದಾರೆ. ಆಗೀಗ ಮಗಳ ಆರೈಕೆ, ಬೆಂಗಳೂರಿನ ರಂಗಕರ್ಮಿ ಆಂಜನೇಯ ಪ್ರಭಾವತಿ ದಂಪತಿಗಳ ಮೂರು ದಶಕಗಳ ನೆರವನ್ನು ಅವರೆಂದೂ ಮರೆಯಲಾರರು. ಅಂತಹ ಉಪಸ್ಮರಣೆ ಮೂಲಕ ಹಿರಿಯ ರಂಗಜೀವ ಶತಮಾನದಂಚಿನಲಿ ಪಾದಾರ್ಪಣೆ ಮಾಡುತ್ತಿದೆ.
–ಮಲ್ಲಿಕಾರ್ಜುನ ಕಡಕೋಳ
9341010712