ಅಪ್ಪ
ಅಪ್ಪಾ ಬೇಕಾದುದನೆಲ್ಲಾ
ಕೊಡಿಸಿದವನು
ಬೇಡುವುದನ್ನು ಕಲಿಸಲೇ ಇಲ್ಲ,
ಮಗಳನ್ನೂ ಮಗ
ಎಂದು ಕರೆದವನು
ಭೇದ ಮಾಡಲೇ ಇಲ್ಲ.
ತನ್ನ ಮರ್ಯಾದೆ ಮಗಳ ಕೈಯಲ್ಲಿ
ಎಂದು ಡಂಗುರ ಸಾರಿ
ಮಗಳನ್ನು ಎಂದೂ ಕುಗ್ಗಿಸಲಿಲ್ಲ.
ರಕುತವೂ ಬೆವರಂತೆ ಸುರಿಸಿ
ಸಂಸಾರ ನಡೆಸಿ
ಅಧಿಕಾರ ಜಮಾಯಿಸಲೇ ಇಲ್ಲ!
ಕಷ್ಟಗಳನ್ನೆಲ್ಲಾ ಹೊರಗಿಟ್ಟು
ಹರುಷದೊಂದಿಗೆ ಒಳಗೆ ಬಂದ,
ಯಾವ ನೋವು ಮನೆಗೆ ತರಲಿಲ್ಲ.
ಅನಾರೋಗ್ಯದಿಂದ ಅಮ್ಮ
ಬಳಲಿದಾಗ, ಅಹಂಕಾರ ತೋರದೇ
ಅಡುಗೆ ಮಾಡಿ ಉಣಬಡಿಸಿದ!
ಕಾಲ ಚಕ್ರವನ್ನರಿತ ಅಪ್ಪ
ಮಕ್ಕಳೊಂದಿಗೆ ತನ್ನ
ಪಾತ್ರವನ್ನೂ ಬದಲಾಯಿಸಿದ.
ಹೆಗಲಿಗೆ ಹೆಗಲು ಕೊಟ್ಟು
ಮುಂದೆ ಸಾಗಲು ಬಲ ನೀಡಿ
ಬರೀ ಗುರುವಲ್ಲ ಗೆಳೆಯನೂ ಆದ!
ಅಪ್ಪನಿಗೆ ಏನೂ ಇಷ್ಟವಿಲ್ಲ
ಯಾವ ದಿನಿಸೂ ತಿನ್ನ ಬೇಕೆನಿಸಲ್ಲ,
ಇರುವುದೆಲ್ಲವೂ ಮಕ್ಕಳ ಪಾಲಿಗಿಟ್ಟ!
ಹೊಸ ಬೂಟಿನ ಆಸೆ ಇಲ್ಲ
ಹಬ್ಬಕ್ಕೂ ಇಲ್ಲದ ಮನಸ್ಸು
ಹಳೆ ಬಟ್ಟೆಯಲ್ಲೆ ಅಪ್ಪನ ಹುಮ್ಮಸ್ಸು!
ಚಳಿಯೂ ಆಗಿಲ್ಲ ಬಿಸಿಲೂ ತಾಗಿಲ್ಲ
ಮಳೆಗೆ ನೆನೆದ ದೇಹಕೆ ನೆಗಡಿಯೂ ಬಂದಿಲ್ಲ,
ಕೆಲಸಕ್ಕೆ ಹೋಗದ ದಿನವೆಂದೂ ಬಯಸಿಲ್ಲ!
ಅದ್ಯಾವ ಶ್ರದ್ಧೆಯೋ
ಅದ್ಯಾವ ಹರಕೆಯೋ, ಹೊತ್ತು ಎಣಿಸದೇ
ಬದುಕು ಸಾಗಿಸಲಿಕ್ಕೆ ದುಡಿದ.
ಏರು ಧ್ವನಿ ಬಳಸದೇ
ಗಂಡಿನ ಗಡಸುತನವೂ ಇಲ್ಲದೇ
ಎಲ್ಲರಿಗೂ ಮಾದರಿಯಾದ.
ಮುನಿಸು ಮಾತ್ರವಲ್ಲ
ಮಮತೆಯೂ ತೋರಿಸುವ
ಅಪ್ಪನದ್ದೂ, ತಾಯಿ ಹೃದಯ!!
–ಫರ್ಹಾನಾಜ್ ಮಸ್ಕಿ
ಸಹಾಯಕ ಪ್ರಾಧ್ಯಾಪಕರು