ಹರಹರ ಎಂದು ಹತ್ತು ಬಾರಿ ಎನಬಹುದಲ್ಲದೆ
ಹರಹರ ಎಂದು ಹತ್ತುಬಾರಿ ಎನಬಹುದಲ್ಲದೆ,
ಹರಿವ ಮನವ ಮೆಟ್ಟಿ, ಮನವ ಲಿಂಗದಗೊತ್ತಿನಲ್ಲಿ ನಿಂದಿರಲರಿಯದು ನೋಡಾ!
ಇದು ಕಾರಣ, ತನುವ ಗುರುವಿಂಗಿತ್ತು, ಮನವ ಲಿಂಗಕ್ಕಿತ್ತು, ಒಂದಲ್ಲದೆ ಎರಡುಂಟೆ?
ಇದು ಮುಂದೆ ಆವನಾನೊಬ್ಬ ಭಕ್ತನು ನೋಡಿ ನಡೆವುದಕೆ ಇದೇ ಸಾಧನ,
ಬಸವಪ್ರಿಯ ಕೂಡಲಚನ್ನಬಸವಣ್ಣ
ಅತ್ಯಂತ ಚಂಚಲವಾದ ಮನಸ್ಸು ಮಲಿನವೆಂಬ ಮಾಯೆಯಿಂದ ತುಂಬಿಕೊಂಡಿದೆ. ಮನಸ್ಸಿನ ನಿಗ್ರಹ ಮಾಡುವುದು ಕಠಿಣ ಸಾಧನ. ಮನಸ್ಸನ್ನು ನಿಗ್ರಹಿಸುವ ಪರಿಯನ್ನು ನಿಜಸುಖಿ ಹಡಪದ ಹಪ್ಪಣ್ಣನವರು ಈ ವಚನದಲ್ಲಿ ತಿಳಿಸಿದ್ದಾರೆ.
ಹರಹರ ಎಂದು ಹತ್ತುಬಾರಿ ಎನಬಹುದಲ್ಲದೆ, ಹರಿವ ಮನವ ಮೆಟ್ಟಿ, ಮನವ ಲಿಂಗದಗೊತ್ತಿನಲ್ಲಿ ನಿಂದಿರಲರಿಯದು ನೋಡಾ?
ಮನುಷ್ಯ ತನ್ನ ಬದುಕಿನಲ್ಲಿ ಆಸರಕಿ, ಬೆಸರಕಿ, ಆದಾಗ ಮತ್ತು ದಿನಾಲೂ ರೂಢಿಯಂತೆ ಒಂದಲ್ಲ ಹತ್ತು ಹತ್ತು ಬಾರಿ ಶಿವ ಶಿವಾ, ಹರಹರ ಎಂದು ಸುಲಭವಾಗಿ ಹೇಳುತ್ತೇವೆ. ಶಿವನನ್ನು ನೆನೆಯುವುದು ದೊಡ್ಡ ಸಾಧನೆ ಅಲ್ಲ. ಹಾಗಿದ್ದರೆ ದೊಡ್ಡ ಸಾಧನೆ ಯಾವುದು ? ಮನವ ನಿಲ್ಲಿಸುವುದು. ಮನವನ್ನು ನಿಲ್ಲಿಸುವುದು ಹೇಗೆ? ಹೀಗಿ ಹತ್ತಾರು ಪ್ರಶ್ನೆಗಳು ಬರುವದು ಸಹಜ. ಮನವ ನಿಲ್ಲಿಸಲು ಇಷ್ಟಲಿಂಗ ಶಿವಯೋಗ ಮಾಡುವುದನ್ನು ಸಾಧನೆ ಮಾಡಬೇಕು.ಮನಸ್ಸಿನ ಚಂಚಲತೆ ಮೆಟ್ಟಿ ಆ ಮನವನ್ನು ಲಿಂಗಧ್ಯಾನದಲ್ಲಿ ನಿಲ್ಲಿಸುವುದಾಗಿದೆ.
ಇದು ಕಾರಣ, ತನುವ ಗುರುವಿಂಗಿತ್ತು, ಮನವ ಲಿಂಗಕ್ಕಿತ್ತು, ಧನವ ಜಂಗಮಕ್ಕಿತ್ತು, ತ್ರಿವಿಧವನು ತ್ರಿವಿಧಕ್ಕಿತ್ತ ಬಳಿಕ, ಒಂದಲ್ಲದೆ ಎರಡುಂಟೆ?
ತನು ಗುರುವಿಗೆ, ಮನ ಲಿಂಗಕ್ಕೆ, ಧನ ಜಂಗಮಕ್ಕೆ ನೀಡುವ ಮೂಲಕ ತ್ರಿವಿಧ ದಾಸೋಹಿಯಾದಾಗ ತನುವಿನ ತವಕ, ಮನದ ಚಂಚಲ, ಧನದಾಸೆ ನಿಲ್ಲುತ್ತದೆ. ಅದಾದ ಬಳಿಕ ನಿಜದ ನಿಲುವು ಸಾಧ್ಯವಾದಗ ಮನಸ್ಸು ಹರಿದಾಟ ನಿಲ್ಲಿಸಿ ವಿಶಿಷ್ಠ ಸಾಧನೆಗೆ ದಾರಿಯಾಗುತ್ತದೆ. ಆ ಬಳಿಕ ಆತ್ಮ ಅರಿವು ಬಂದು ಆತ್ಮ- ಪರಮಾತ್ಮ ಒಂದೆಂಬ ಭಾವ ಬಂದು ಭೇದ ಮರೆಯಾಗುತ್ತದೆ.
ಇದು ಮುಂದೆ ಆವನಾನೊಬ್ಬ ಭಕ್ತನು ನೋಡಿ ನಡೆವುದಕೆ ಇದೇ ಸಾಧನ, ಬಸವಪ್ರಿಯ ಕೂಡಲಚೆನ್ನಬಸವಣ್ಣ
ಆತ್ಮದ ನಿಜದ ನಿಲುವು ಅರಿತು ಸಾಧಿಸಿದ ಶರಣರನ್ನು ನೋಡಿ ಉಳಿದ ಭಕ್ತರು ಸಾಧಿಸಲು ಸಾಧನವಾಗಬೇಕೆಂದು ಶ್ರೀ ಹಡಪದ ಅಪ್ಪಣ್ಣ ಶರಣರು ವಚನದಲ್ಲಿ ಅರುಹಿದ್ದಾರೆ.
ಶರಣು ಶರಣಾರ್ಥಿಗಳುು
–ವೀರೇಶ ಸೌದ್ರಿ ಮಸ್ಕಿ