ಹೆತ್ತತಾಯಿಯ ಪ್ರೀತಿಯಂತೆ ಕನ್ನಡದ ಪ್ರೀತಿ…
ಕಳೆದ ವರುಷ ಜರುಗಿದ ಎರಡು ಸಂಗತಿಗಳು ನನ್ನ ಮನದ ಮೂಲೆಯಲ್ಲಿನ್ನೂ ಹಸಿ ಹಸಿಯಾಗಿಯೇ ಇವೆ. ಅವೆರಡೂ ಕನ್ನಡ ವಿರೋಧಿ ಘಟನೆಗಳೊಂದಿಗೆ ನನ್ನ ಮಾತುಗಳನ್ನು ಆರಂಭಿಸುವೆ.
ಘಟನೆ ಒಂದು
ಕನ್ನಡನಾಡಿನ ಅಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಘೋಷಿಸಿದ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮತ್ತು ಸಮರ್ಥನೆ ಹೀಗಿತ್ತು: ಸದರಿ ಪ್ರಾಧಿಕಾರದ ಉದ್ದೇಶಿತ ಗುರಿ ಮರಾಠಿ ಭಾಷೆ ಕುರಿತಾದುದಲ್ಲ. ಮರಾಠಾ ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಗಾಗಿ… ಇನ್ನೂ ಮುಂತಾಗಿ ವಿವರಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಸಮರ್ಥಿಸಿಕೊಂಡರು. ಘೋಷಿತ ಪ್ರಾಧಿಕಾರಕ್ಕಾಗಿ ರುಪಾಯಿ ಐವತ್ತು ಕೋಟಿ ಹಣವನ್ನೂ ಕಾಯ್ದಿರಿಸಿದರು. ನೆನಪಿರಲಿ ಅದೇ ನಮ್ಮ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಆ ವರ್ಷ ಸಿಕ್ಕಿದ್ದು ಕೇವಲ ಎರಡೇ ಎರಡು ಕೋಟಿ. ಎರಡೆಲ್ಲಿ ಐವತ್ತೆಲ್ಲಿ.?.
ಆಗ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರಿಂದ ಮರಾಠ ಅಭಿವೃದ್ಧಿ ಪ್ರಾಧಿಕಾರದ ವಿಶ್ಲೇಷಣೆ ವಿಚಿತ್ರವಾಗಿತ್ತು. “ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು” ರಚಿಸಿದ ಕನ್ನಡದ ಕವಿ ಗದುಗಿನ ಮಾಧ್ವ ಬ್ರಾಹ್ಮಣರಾದ ಹುಯಿಲಗೋಳ ನಾರಾಯಣರಾಯರು ಕನ್ನಡಿಗರಲ್ಲ. ಜಾತಿಯಿಂದಲೂ ಮರಾಠಿಗರು. ಪ್ರಾತಃಸ್ಮರಣೀಯರಾದ ಹುಯಿಲಗೋಳರ ಬಗ್ಗೆ ಹೀಗೆ ಹುಚ್ಚಾಟದ ಹುಯಿಲೆಬ್ಬಿಸಿದರು.
ಸಾಮಾಜಿಕ ಜಾಲತಾಣಗಳ ಇಂತಹ ನೀಲಿಕೆಟ್ಟ ವದಂತಿ ಕುರಿತು ಬೆಂಗಳೂರಿನ ಕೆಲವು ನಕಲಿ ಸಾಹಿತಿಗಳು, ಇತಿಹಾಸಕೋರ ‘ನೆಟ್ಟಿಗರು’ ತರಕಲಾಂಡಿ ಚರ್ಚೆಯನ್ನೇ ನೆಟ್ಟು ಹಾಕಿದರು. ಅಂಥದರಲ್ಲೊಬ್ಬ ಕಂಡಾಪಟಿ ನಿಪುಣನಿದ್ದ. ಅವನು ಎಲ್ಲ ಪಕ್ಷಗಳ ಸರಕಾರಗಳಲ್ಲೂ ಯಾವುದಾದರೂ ಅಕಾಡೆಮಿಯ ಸದಸ್ಯತ್ವ ಹೊಡಕೊಳ್ಳುವ ಮಹಾಬೆರಕಿ. ಪ್ರಗತಿಪರ ಪೋಷಾಕಿನ ಅಂವ ಸ್ವಜಾತಿ ಕಾರಣಕ್ಕಾಗಿ ಅಂತಹ ಪೋಷ್ಟಗಳನ್ನು ವಾರಸುದಾರನಂತೆ ಮರುಹಂಚಿಕೆಯ ಕಾಯಕದೀಕ್ಷೆ ಪಡಕೊಂಡಿದ್ದ.
ಅದೇ ಸಮಯಕ್ಕೆ ಸರಿಯಾಗಿ ಮತ್ತೊಂದು ಕಡೆ ಮಹಾರಾಷ್ಟ್ರದ ಮಂತ್ರಿಯೊಬ್ಬರಿಂದ ಹುಸಿಬಾಂಬು. ಬೆಳಗಾವಿ, ಕಾರವಾರ, ಬೀದರ ತಮಗೆ ಸೇರಬೇಕಾದ ಜಿಲ್ಲೆಗಳೆಂಬ ಕಿಟಿಕಿಟಿಯ ಕಿತಬಿ.
ಪ್ರತೀವರ್ಷ ನವೆಂಬರ್ ಒಂದರಂದು ನಮಗೆ ಕನ್ನಡ ರಾಜ್ಯೋತ್ಸವ. ಹಾಗೆಯೇ ಪ್ರತೀವರ್ಷ ಅದೇದಿನ ಎಂ.ಇ.ಎಸ್. ಮರಾಠಿಗರಿಂದ ಕರಾಳ ದಿನಾಚರಣೆ. ಬೆಳಗಾವಿ ಪ್ರಾಂತ್ಯದಲ್ಲಿ ಕನ್ನಡದ ಎಲ್ಲ ಚಟುವಟಿಕೆಗಳನ್ನು ಎಂ.ಇ.ಎಸ್. ಪಡಪೋಸಿ ಪುಂಡರು ವಿರೋಧಿಸುತ್ತಾರೆ.
ಇನ್ನೇನೂ ಬೇಡ ಅದೇ ಮಹಾರಾಷ್ಟ್ರದಲ್ಲಿ ಲಕ್ಷ, ಲಕ್ಷ ಕನ್ನಡಿಗರು ವಾಸವಾಗಿದ್ದಾರೆ. ಅಲ್ಲಿನ ಕನ್ನಡಿಗರ ಅಭಿವೃದ್ಧಿಗಾಗಿ ಇಂತಹ ಪ್ರಾಧಿಕಾರಗಳು ಅಲ್ಲಿ ಹುಟ್ಟಿಕೊಂಡಿವೆಯಾ.? ಖಂಡಿತಾ ಇಲ್ಲ. ಮೇಲ್ನೋಟದಲ್ಲೇ ಇದೊಂದು ರಾಜಕೀಯ ಪ್ರೇರಿತ ಅವಕಾಶವಾದಿ ನಿರ್ಧಾರ. ಬೆಳಗಾವಿ ಲೋಕಸಭೆ ಉಪಚುನಾವಣೆ ಗೆಲುವಿನ ಒಳಹುನ್ನಾರವೆಂದು ಆಗ ಅದಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾದವು.
ಘಟನೆ ಎರಡು
ಪ್ರಸಾರ ಭಾರತಿ ಅಡಿಯಲ್ಲಿ ಬರುವ ಮುಂಬಯಿ ಆಕಾಶವಾಣಿ ಹತ್ತಾರು ವರ್ಷಗಳಿಂದ ಕನ್ನಡ ಕಾರ್ಯಕ್ರಮಗಳನ್ನು ನಿರಂತರ ಪ್ರಸಾರ ಮಾಡುತ್ತಿತ್ತು. ಏನಕೇನ ಕಾರಣದಂತೆ ಮಹಾರಾಷ್ಟ್ರ ಸರಕಾರ ದಿಢೀರಂತ ಕನ್ನಡ ಕಾರ್ಯಕ್ರಮಗಳನ್ನು ರದ್ದುಗೊಳಿಸಿತು. ನಿಮಗೆ ಗೊತ್ತಿರಲಿ : ನಮ್ಮ ಉತ್ತರಕನ್ನಡದ ಕವಿ ಬಿ. ಎ. ಸನದಿ ಅವರು ಮುಂಬಯಿ ಆಕಾಶವಾಣಿಯಲ್ಲಿ ಹತ್ತಾರು ವರ್ಷಗಳ ಕಾಲ ಕನ್ನಡ ಕಾರ್ಯಕ್ರಮಗಳ ನಿರ್ವಾಹಕರಾಗಿದ್ದರು.
ನೆನಪಿರಲಿ ಮುಂಬಯಿಯಲ್ಲಿ ಇಪ್ಪತ್ತೈದು ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಕನ್ನಡಿಗರಿದ್ದಾರೆ. ಹೀಗಿರುವಾಗ ಪ್ರಸಾರ ಭಾರತಿಯ ಮುಂಬಯಿ ಆಕಾಶವಾಣಿಯು ಕನ್ನಡ ಕಾರ್ಯಕ್ರಮ ನಿಲ್ಲಿಸುವ ಮೂಲಕ ಅಲ್ಲಿ ಕನ್ನಡ ವಿರೋಧಿ ನಿಲುವು ಪ್ರದರ್ಶಿಸಿತು. ಸೋಜಿಗದ ಸಂಗತಿ ಎಂದರೆ ರಾಷ್ಟ್ರಮಟ್ಟದ ಪ್ರಸಾರ ಭಾರತಿಯ ಅಧ್ಯಕ್ಷರು ಯಾರುಗೊತ್ತೆ.? ಅವರೊಬ್ಬ ಮಹಾನ್ ಕನ್ನಡಿಗರು. ಅಷ್ಟು ಮಾತ್ರವಲ್ಲ ಅವರೊಬ್ಬ ಕನ್ನಡದ ಅಂಕಣ ಬರಹಗಾರ. ಕನ್ನಡ ಸಂಸ್ಕೃತಿಯ ಚಿಂತಕ. ಅವರ ಹೆಸರು ಡಾ. ಸೂರ್ಯಪ್ರಕಾಶ. ಮುಂಬಯಿ ಆಕಾಶವಾಣಿ ನಿಲುವನ್ನು ಆಗ ಅವರು ಖಂಡಿಸದೇ ತುಟಿ ಹೊಲಿದುಕೊಂಡಿದ್ದರು.
ಹೀಗೆ ಕನ್ನಡದ ಹಿನ್ನಡೆಗೆ ಹಾಗೂ ಕನ್ನಡ ವಿರೋಧಿಯಾದ ಇವೆರಡೂ ಘಟನೆಗಳು ಮುದ್ದಾಂ ಎಂಬಂತೆ ಜರುಗಿರುವುದು ಕನ್ನಡ ರಾಜ್ಯೋತ್ಸವ ಆಚರಣೆಯ ನವೆಂಬರ್ ತಿಂಗಳಲ್ಲೇ. ನಾವು ನಂಬರ್ ಒನ್ ಕನ್ನಡಿಗರಲ್ಲ ಬದಲಾಗಿ ನವೆಂಬರ್ ಕನ್ನಡಿಗರೆಂಬುದು ಖಾತರಿಯಾಗಿಯೇ ಈ ರೀತಿ ಆಗುತ್ತಿರಬಹುದೇ.?
ಪ್ರಾಯಶಃ ಇಂತಹ ಕಾರಣಕ್ಕಾಗಿಯೇ ವಿಧಾನಸೌಧಕ್ಕೆ ಕನ್ನಡದ ಕಂಕಣ ಕಟ್ಟುವ ಸಂಕಲ್ಪ ಮಾಡಬೇಕು. ಅಲ್ಲಿರುವ ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರು, ಅಧಿಕಾರಿಗಳಿಗೆ ಕನ್ನಡದ ಉಡುದಾರ ಕಟ್ಟಬೇಕು. ಕೊರಳಿಗೆ ಕನ್ನಡದ ತಾಯತ ಕಟ್ಟಬೇಕು. ಇಂತಹ ಮಾತುಗಳು ಹತ್ತಾರು ವರ್ಷಗಳಿಂದ ಕೇಳಿ, ಕೇಳಿ ಸವಕಲಾದರೂ ಮತ್ತೆ, ಮತ್ತೆ ಹೇಳಲೇ ಬೇಕಾಗಿದೆ.
ಕನ್ನಡದ ನಾಮಫಲಕಗಳು ಸೇರಿದಂತೆ, ಬ್ಯಾಂಕ್ ಇತರೆ ಹತ್ತಾರು ಕಡೆ ಕನ್ನಡದ ಬಳಕೆ ಕುರಿತು ಕೆಲವು ಮಂದಿ ಉಟ್ಟು ಓರಾಟಗಾರರು, ವಾಟ್ಸ್ಯಾಪ್ ವಿ.ವಿ.ಯ ವೀರರು ಗುಟುರು ಹಾಕುತ್ತಾರೆ. ವಿಪರ್ಯಾಸವೆಂದರೆ ನವೆಂಬರೆಂಬ ಕನ್ನಡ ರಾಜ್ಯೋತ್ಸವದ ತಿಂಗಳಲ್ಲೇ ಇಂತಹ ಮಾತುಗಳು ದೆವ್ವಗಾಳಿಯಂತೆ ಕೇಳಿ ಬರುವುದು ಕೂಡಾ ಅಷ್ಟೇ ಕ್ಲೀಷೆಯ ವಿಷಯ. ಆಮೇಲೆ ಎಲ್ಲವೂ ಎಂದಿನಂತೆ.
ಹಾಗೆಂದು ಆಳುವ ಸರ್ಕಾರಗಳು ಕನ್ನಡಕ್ಕಾಗಿ ಏನೂ ಮಾಡಿಲ್ಲವೇ ಎಂಬ ಪ್ರಶ್ನೆಗೆ ಉತ್ತರ ಏನೂ ಇಲ್ಲವೆಂದು ಹೇಳಲಾಗದು. ಆದರೆ ಮಾಡಲೇಬೇಕಾದ ಕೆಲಸಗಳಲ್ಲಿ ಕೆಲವು ಖಂಡಿತಾ ಆಗಿವೆ. ಆದರೆ ಆಗಲೇಬೇಕಾದ ಅನೇಕ ಕೆಲಸಗಳು ಅಧಿಕ ಸಂಖ್ಯೆಯಲ್ಲಿವೆ.
ಕನ್ನಡದ ಕೆಲಸವೆಂದರೆ ಶಿಕ್ಷಣದಲ್ಲಿ ಭಾಷಾಮಾಧ್ಯಮ, ಆಡಳಿತ ಮಾಧ್ಯಮ, ಜನರಾಡುವ ನಿತ್ಯದ ಬಳಕೆಯ ಮಾಧ್ಯಮಗಳಾಗಿ ಮಾತ್ರ ಸೀಮಿತ ಮಾಡಿ ಕನ್ನಡವನ್ನು ನೋಡಲಾಗದು. ಅದರೊಂದಿಗೆ ಜಗದಾದ್ಯಂತ ವಾಸಿಸುತ್ತಿರುವ ಸಮಸ್ತ ಕನ್ನಡಿಗರ ಒಟ್ಟು ಬದುಕಿನ ಒಳಿತುಗಳ ಚಿಂತನೆಯಾಗಿದೆ. ಪ್ರಪಂಚದೆಲ್ಲೆಡೆಯ ಎಲ್ಲ ಕನ್ನಡಿಗರ, ಕನ್ನಡದ ಮತ್ತು ಕರ್ನಾಟಕದ ನೆಮ್ಮದಿ, ಶ್ರೇಯಸ್ಸಿನ ಚಿಂತನೆಯಾಗಿದೆ. ಆದರೆ ಭಾಷೆ ಮತ್ತು ಸಂಸ್ಕೃತಿಯ ಪ್ರಸ್ತಾಪ ಬಂದಾಗ ಸಾಹಿತಿಗಳದೇ ಅಬ್ಬರ. ಅವರ ಹೆಸರುಗಳು ಮಾತ್ರ ಹೆಚ್ಚು ಮುಂಚೂಣಿಗೆ ಬರುವುದು ಅಪಾರ.
ಸಾಂಸ್ಕೃತಿಕ ಮತ್ತು ಚಾರಿತ್ರ್ಯೇತಿಹಾಸಗಳ ದೃಷ್ಟಿಯಿಂದ ನಮ್ಮ ಕಾವ್ಯ ಮೀಮಾಂಸಕರು ಕವಿಗಳಿಗೆ ನೀಡಿರುವ ಮಹತ್ವ ಅದು. ಆದರೆ ಬಹುಪಾಲು ನವೆಂಬರ್ ಚಿಂತನೆಗಳು ಕವಿ, ಕಾವ್ಯ, ಚರಿತ್ರೆಗಳ ಸುತ್ತಲೇ ಹೆಚ್ಚು ಗಿರಕಿ ಹೊಡೆಯುತ್ತಿರುತ್ತವೆ. ಆ ಮೂಲಕ ಅದುಮಾತ್ರ ಕನ್ನಡದ ಅಗತ್ಯ ಚಿಂತನೆ ಎಂದು ಭಾವಿಸಬೇಕಿಲ್ಲ. ಕನ್ನಡನಾಡು, ನುಡಿ, ಕನ್ನಡದ ಬದುಕು ಕಟ್ಟಿದವರು ಬರೀ ಸಾಹಿತಿಗಳು ಮಾತ್ರವಲ್ಲ., ಈ ನೆಲದ ಪ್ರತಿಯೊಬ್ಬರೂ. ಜಾತಿ, ಮತ, ಪಂಥ, ಮಾರ್ಗಗಳೆನ್ನದೇ ನೆಲಧರ್ಮ ಪ್ರೀತಿಯಿಂದ ಬೆಳೆದು ಬಾಳಿ ಬದುಕಿದವರೆಲ್ಲರ ಪಾಲೂ ಇದರಲ್ಲಿದೆ. ಇದು ಕಾವ್ಯ ಮೀಮಾಂಸಕರು ಅರಿಯದ್ದೇನಲ್ಲ.
ಆದರೆ ನಿತ್ಯದ ಲೋಕ ಮೀಮಾಂಸಕರಿಗೆ ಎಲ್ಲ ತಿಂಗಳುಗಳು ಕನ್ನಡದ ತಿಂಗಳುಗಳೇ ಆಗಿರ್ತವೆ. ನನ್ನವ್ವ, ಅಪ್ಪ ಇಬ್ಬರೂ ಅನಕ್ಷರಸ್ಥರಾಗಿದ್ದರು. ಆದರೆ ಅವರು ನನ್ನ ಪಾಲಿನ ಕನ್ನಡ ಸಂಸ್ಕೃತಿಯ ಐಕಾನ್ ಗಳು. ಅವರದು ಅಕ್ಷರಶಃ ಅಪ್ಪಟ ದೇಸೀ ನೆಲೆಯ ನೆಲಗನ್ನಡದ ಬದುಕು. ಅದು ಪರಿಶುದ್ದ ಜನಗನ್ನಡದ ಬಾಳು. ಅಂಥವರಿಂದಲೇ ಕನ್ನಡ ಭಾಷೆ, ಸಂಸ್ಕೃತಿ, ಬದುಕಿ ಬೆಳೆದಿದೆ.
ಅದು ಜನಮಾನಸದೊಂದಿಗೆ ಅಗಾಧವಾಗಿ ಬದುಕುಳಿದಿದೆ. ಕನ್ನಡವನ್ನು ಪ್ರೀತಿಸಬೇಕು ಅಂತ ನಾನೊಮ್ಮೆ ನಮ್ಮವ್ವನ ಮುಂದೆ ಹೇಳಿದಾಗ ” ನನ್ನನ್ನು ಪ್ರೀತಿಸು ಅಂತ ನಿನಗೆ ಯಾರಾದರೂ ಕಲಿಸಿ ಕೊಡಬೇಕೇನು ಮಲ್ಲಣ್ಣ .? ”
ಎಂದು ಅವ್ವ ನನಗೆ ಮರುಪ್ರಶ್ನೆ ಹಾಕಿದ್ದಳು. ಅಂದರೆ ಕನ್ನಡದ ಪ್ರೀತಿ ಎನ್ನೋದು ತಾಯಿಯ ಮೇಲಿನ ಪ್ರೀತಿ. ನಮ್ಮ ತಾಯಿಯನ್ನು ಪ್ರೀತಿಸಬೇಕೆಂದು ನಮಗೆ ಯಾರೂ ಕಲಿಸಿಕೊಡಬೇಕಿಲ್ಲ. ಹಾಗೇ ಕನ್ನಡದ ವಾಂಛೆ ಮಾತೃಪ್ರೀತಿಯಂತಹದ್ದು. ಕನ್ನಡ ಬರೀ ಭಾಷೆಯಲ್ಲ, ಅದು ವಚನ ಪ್ರಮಾಣ. ಕನ್ನಡದ ಮಾತೆಂಬುದು ಅಂತಃಶ್ರೋತದ ಜ್ಯೋತಿರ್ಲಿಂಗ.
ಇಂತಹ ಕನ್ನಡವನ್ನು ಪ್ರೀತಿಸುವುದೆಂದರೆ ಅವಳ ಪ್ರಕಾರ ಹಡೆದವ್ವನನ್ನೇ ಪ್ರೀತಿಸುವುದೆಂದರ್ಥ. ದುರಂತವೆಂದರೆ ವರ್ತಮಾನದ ಸ್ಥಿತಿಯಲ್ಲಿ ನಮ್ಮ ತಾಯಿಯನ್ನು ಪ್ರೀತಿಸಲೇಬೇಕೆಂದು ಬೇರೊಬ್ಬರು ನಮಗೆ ಹೇಳಿ ಕೊಡಬೇಕಾದ ದುಃಸ್ಥಿತಿ. ಸರಕಾರ ಅದಕ್ಕಾಗಿ ಕಾನೂನು ರೂಪಿಸಬೇಕಾಗಿದೆ.
ಅಂದರೆ ತಾಯ್ತನದ ಮಾತೃಭಾಷೆ ಪ್ರೀತಿಗಾಗಿ ಕಾನೂನುಗಳು. ಕನ್ನಡ ನೆಲದಲ್ಲೇ ಕನ್ನಡದ ಬದುಕಿಗಾಗಿ ಹೋರಾಟಗಳು. ಪ್ರಯುಕ್ತ ನಮ್ಮಲ್ಲಿ ಕನ್ನಡದ ಉಳಿವು ಬೆಳವಣಿಗೆಗಾಗಿ ಹತ್ತು ಹಲವು ಆಯೋಗ, ಸಮಿತಿ, ಅಕಾಡೆಮಿ, ಪ್ರಾಧಿಕಾರಗಳಿವೆ. ಪ್ರಾಯಶಃ ಬೇರಾವುದೇ ರಾಜ್ಯಗಳಲ್ಲಿ ಅವರ ಭಾಷೆಯ ರಕ್ಷಣೆ ಅಭ್ಯುದಯಕ್ಕಾಗಿ ಇಷ್ಟು ಪ್ರಮಾಣದ ಸಂಘ ಸಂಸ್ಥೆಗಳು ಇದ್ದಿರಲಾರವು.
ಕಳೆದ ನಾಕೈದು ತಿಂಗಳ ಹಿಂದಷ್ಟೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿ ಬಂದಿರುವ ವಿ. ಸುನಿಲಕುಮಾರ್ ಅವರು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಕ್ರಿಯಾಶೀಲತೆಗಾಗಿ ಆಕರ್ಷಕವಾದ ಕೆಲವು ಚುರುಕಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅದೆಲ್ಲಕ್ಕಿಂತ ಮುಖ್ಯವಾಗಿ ಅವರಿಗೆ ತಾನು ಸಚಿವನಾಗಿ ಕನ್ನಡ ಮತ್ತು ಕನ್ನಡ ಸಂಸ್ಕೃತಿಗಾಗಿ ಏನಾದರೂ ಒಳಿತನ್ನು ಮಾಡಬೇಕೆಂಬ ಹೃತ್ಪೂರ್ವಕ ಹಂಬಲ. ಇದು ಸ್ವಾಗತಾರ್ಹ ಕಳಕಳಿ. ಈಗಾಗಲೇ ನಾಲ್ಕು ಕಂದಾಯ ವಿಭಾಗಗಳಲ್ಲಿ ನಾಲ್ಕು ಜಂಟಿ ನಿರ್ದೇಶಕ ಹುದ್ದೆಗಳನ್ನು ಸೃಜಿಸಿದ್ದು ಆ ಹುದ್ದೆಗಳು ಅನುಷ್ಠಾನಕ್ಕೆ ಬಂದಿವೆ.
ಬೆಂಗಳೂರಲ್ಲೇ ಐಕ್ಯಗೊಂಡಿರುವ ಅಕಾಡೆಮಿ, ಪ್ರತಿಷ್ಠಾನ, ಪ್ರಾಧಿಕಾರಗಳನ್ನು ಅದೇ ಮಾದರಿಯಲ್ಲಿ ಪ್ರಾದೇಶಿಕವಾಗಿ ಸೂಕ್ತ ಜಿಲ್ಲೆಗಳಿಗೆ ಸ್ಥಳಾಂತರಿಸಲಿ. ಆ ಮೂಲಕ ಸಾಂಸ್ಕೃತಿಕ ವಿಕೇಂದ್ರೀಕರಣಕ್ಕೆ ನಾಂದಿ ಹಾಡಲಿ. ಏಕೆಂದರೆ ಈಗ ಆಗಿರುವುದು ಕರ್ನಾಟಕದ ಏಕೀಕರಣ ಅಲ್ಲ. ಅದು ರಾಜಕೀಯ ಏಕೀಕರಣ. ಅದರಲ್ಲೂ ಲಿಂಗಾಯತರು, ಒಕ್ಕಲಿಗರೆಂಬ ಎರಡು ಪ್ರಮುಖ ಜಾತಿಗಳ ರಾಜಕೀಯ ಏಕೀಕರಣ.
ಮರೆತ ಮಾತು : ಕನ್ನಡದ ವಚನ ಪ್ರಮಾಣ ಮತ್ತು ಜ್ಯೋತಿರ್ಲಿಂಗದ ಮಾತುಗಳನ್ನು ಓದುವಾಗ ಹಾನಗಲ್ ಮತ್ತು ಸಿಂದಗಿ ಉ.ಚು. ಕಣಗಳಲ್ಲಿನ ರಾಜಕಾರಣಿಗಳ ಕೊಳಕು ನಾಲಗೆಗಳಲ್ಲಿ ಉಕ್ಕಿಹರಿದ ಅತಿಸಾರದ ಅರಚಾಟಗಳನ್ನು ಯಾವುದೇ ಕಾರಣಕ್ಕೂ ನೆನಪು ಮಾಡಿಕೊಳ್ಳಬೇಡಿ.
ಮಲ್ಲಿಕಾರ್ಜುನ ಕಡಕೋಳ
9341010712