ನಾ ಓದಿದ ಪುಸ್ತಕ-ಪುಸ್ತಕ ಪರಿಚಯ
“ಕಂದೀಲಿನ ಕುಡಿ”
( ಕವನ ಸಂಕಲನ)
ಕೃತಿ ಕರ್ತೃ – ಶ್ರೀಮತಿ ರೇಣುಕಾ ಕೋಡಗುಂಟಿ
“ಮೌಢ್ಯದ ಕುಡಿಯನ್ನು ಚಿವುಟುವ ಕಂದೀಲಿನ ಕುಡಿ”
ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಕಂದೀಲಿನ ಬೆಳಕಲ್ಲಿ ಓದುತ್ತಿದ್ದ ಕಾಲ ಇತ್ತು. ಬದುಕನ್ನು ಕಟ್ಟಿಕೊಳ್ಳಲು ಕಂದೀಲು ನಾಂದಿ ಹಾಡುತ್ತಿತ್ತು. ಮನೆಯ, ಮನದ ಕತ್ತಲನ್ನೂ ಕಂದೀಲು ಕಮರಿಸುತ್ತಿತ್ತು. ತನ್ನ ತಾನು ಸುಟ್ಟುಕೊಂಡು ಸತ್ತಲೂ ಬೆಳಕು ಚೆಲ್ಲುತ್ತಿದ್ದ ಕಂದೀಲು ಆದರ್ಶವಾಗಿ ಇಂದು ನಮ್ಮ ಕಣ್ಣ ಮುಂದೆ ನಿಂತಿದೆ ಎಂದರೆ ಶ್ರೀಮತಿ ರೇಣುಕಾ ಕೋಡಗುಂಟಿಯವರು ಅದಕ್ಕೆ ಒಂದು ಕಾವ್ಯದ ರೂಪ ಕೊಟ್ಟಿರುವುದರಿಂದ ಎಂಬುದು ನನ್ನ ಅನಿಸಿಕೆ. ಕಂದೀಲಿನ ಜೊತೆಗೆ ಒಂದು ಭಾವನಾತ್ಮಕ ಮತ್ತು ಸಾಮಾಜಿಕ ಕಳಕಳಿಯ ಸಂದೇಶವನ್ನು ತಮ್ಮ ಬರವಣಿಗೆಯಲ್ಲಿ ಕವಿತೆಗಳ ಮೂಲಕ ಓದುಗರಿಗೆ ಮೂಡಿಸಿದ್ದಾರೆ….
ಬದುಕಿನಲ್ಲಿ ನಮ್ಮದೇ ಆದ ಬೆಳಕನ್ನು ಎಷ್ಟು ಚೆಲ್ಲುತ್ತೇವೆಯೋ ಹಾಗೆ ಕುಡಿ ಕಟ್ಟುವಂತಹ ಕಷ್ಟಗಳ ಕಪ್ಪು ಗಂಟು ನಮ್ಮಲ್ಲಿ ಉದ್ಭವಸುತ್ತಲೇ ಇರುತ್ತವೆ. ಸಮಯೋಚಿತವಾಗಿ ಅದನ್ನು ಚಿವುಟದಿದ್ದರೆ ಮುಂದಿನ ಪ್ರಜ್ವಲತೆ ಕುಂಠಿತವಾಗುತ್ತದೆ. ನಾಮಕಾವಸ್ತೆ ಜೀವನ ನಡೆಸುವ, ನಡೆಸುವ ಅನ್ನುವುದಕ್ಕಿಂತ ಸವೆಸುವ ಅನಿವಾರ್ಯತೆ ಹುಟ್ಟುತ್ತದೆ… ಎಂದರೆ ತಪ್ಪಿಲ್ಲ ಅನಿಸುತ್ತದೆ.
ಅಂತಹ ಅನಿವಾರ್ಯ ಬದುಕಿನಿಂದ ಹೊರ ಬರುವಲ್ಲಿ, ನಮ್ಮನ್ನು ಹೊರತರುವಲ್ಲಿ ಶ್ರೀಮತಿ ರೇಣುಕಾ ಕೋಡಗುಂಟಿ ಅವರ “ಕಂದೀಲಿನ ಕುಡಿ” ಕೆಲಸ ಮಾಡುತ್ತದೆ. ಮೌಢ್ಯತೆಯನ್ನು ತೊಳೆಯುವುದರ ಜೊತೆಗೆ ಮೌಲ್ಯಗಳನ್ನು ಬಿತ್ತುವ, ವಾಸ್ತವ ಸತ್ಯವನ್ನು ಸಾರುವ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡುವ, ಆಳುವವರ ಅಂಧತ್ವವನ್ನು ಬಯಲಿಗೆಳೆಯುವ, ನಮ್ಮನ್ನು ನಮಗೆ ತಿಳಿಸುವ ಮತ್ತು ಇನ್ನೂ ಅನೇಕ ವಿಭಿನ್ನ ಕವಿತೆಗಳ ಸಂಗ್ರಹ ಈ “ಕಂದೀಲಿನ ಕುಡಿ”.
ಪ್ರಾರಂಭದ ಕವಿತೆಯೇ ಆಳವಾದ ಅರ್ಥವನ್ನೊಳಗೊಂಡಿದ್ದು ‘ತಾಳಿದವನು ಬಾಳಿಯಾನು’ ಎಂಬಂತೆ ಕಂದೀಲು….
” ತನ್ನ ಸಹನೆಯ ಕಿಡಿಯನ್ನು
ತಾನೆ ತಾಗಿಸಿಕೊಂಡ
ಕಂದಲು
ಬೆಳಕಿನ ಕುಡಿಯನ್ನು ಹಡೆದು
ಕಂದನನ್ನು
ಎದೆಗವಿಚುಕೊಂಡು ಕುಂತೈತಿ”
ಎಂಬಲ್ಲಿ ಕಷ್ಟ ಎಂಬ ಕುಡಿ ಯಾವತ್ತಿಗೂ ಮನುಷ್ಯನಿಗೆ ಕುಡಿಯಂತೆ ಕಟ್ಟಿಕೊಳ್ಳುತ್ತಲೇ ಇರುತ್ತದೆ. ಅಂತಹ ಕಷ್ಟದ ಗಂಟನ್ನು ಸಹಿಸಿಕೊಳ್ಳದ ಹೊರತು, ಬೆಳಕಂತೆ ಪ್ರಜ್ವಲಿಸುವ ಅವಕಾಶ ದಕ್ಕದು ಎಂಬಂತೆ ಕವಯಿತ್ರಿ ಮಾರ್ಮಿಕವಾಗಿ ಅರ್ಥೈಸುತ್ತಾರೆ.
* ಪ್ರಸ್ತುತ ವಿದ್ಯಾಮಾನಕ್ಕೆ ಕನ್ನಡಿಯಂತೆ “ದುರಿತ ಕಾಲ”ದಲ್ಲಿ, ಕುರುಹಾಗಿ ಉಳಿದ ಅನೇಕ ಉದಾಹರಣೆಗಳನ್ನು ತಿಳಿಸುತ್ತಾ, ಸಮಾಜ ಮುಖಿ ಚಿಂತನೆಯನ್ನು, ಮನದ ವೇದನೆಯನ್ನು…
” ಮಾನವೀಯತೆಯ ಒರತೆ ಬತ್ತಿ ಹೋಗಿದೆ
ಖಾಲಿ ಜೇಬಿಗೆ”
” ಅನ್ನದ ಬಾಯಿಗೆ ಅಕ್ಕಿಯ ಕಾಳು”
” ರುಂಡವಿಲ್ಲದ ಮುಂಡಕ್ಕೆ ಪರಿಹಾರ ನಿಧಿಗಳು”
…. ಈ ರೀತಿಯಾಗಿ ಹೊರಹಾಕಿದ್ದಾರೆ. ಖಾಲಿ ಜೇಬಿಗೆ ಎಂದೂ ಮಾನವೀಯ ಸ್ಪರ್ಶ ಯಾರಿಂದಲೂ ತಟ್ಟದು, ಅನ್ನ ನೀಡುವ ಅನ್ನದಾತರಿಗೇ ಅಕ್ಕಿ ಭಾಗ್ಯ ಕೊಟ್ಟು ನೀವು ಯಾವತ್ತಿದ್ದರೂ ಬಡವರೇ ಎಂಬ ಮನಸ್ಥಿತಿಯನ್ನು ಹೇರುತ್ತಿದ್ದಾರೆಂದು ಪರೋಕ್ಷವಾಗಿ ಕಪಾಳ ಮೋಕ್ಷ ಮಾಡಿದಂತಹ “ದುರಿತ ಕಾಲ” ಕವಿತೆ ಎರಡೆರಡು ರೀತಿಯಲ್ಲಿ ಅರ್ಥೈಸಿಕೊಳ್ಳುವಂತೆ ಮೂಡಿಬಂದಿದೆ.
ಇದೇ ದೃಷ್ಟಿಕೋನದಲ್ಲಿ “ಸರಕಾರದ ಹೊಸ ಕಾನೂನು” ಕವಿತೆ ಓದುಗನನ್ನು ಸೆರೆಹಿಡಿಯುತ್ತದೆ. ಕೋಟಿಗಟ್ಟಲೇ ಲೂಟಿ ಹೊಡೆಯುವ ಹಸ್ತ ಪರೀಕ್ಷಿಸದ ಸರಕಾರ
“ಇಸ್ತ್ರಿ ಅಂಗಿಯವರು
ಮೂಸಿ ಕೂಡ ನೋಡದ
ಈ ನ್ಯಾಯಬೆಲೆ ಅಂಗಡಿಯ ಅಕ್ಕಿಗೆ”
ಬಡವರು ಹೆಬ್ಬೆರಳು ಗುರುತಿನ ಸಾಕ್ಷಿ ನೀಡಬೇಕೆಂಬ ನೀತಿ ಜಾರಿಗೊಳಿಸಿದ್ದನ್ನು ಕಟುವಾಗಿ ಟೀಕಿಸುತ್ತಾರೆ.
“ತೋಳಗಳನ್ನು ಬಿಟ್ಟು, ನೊಣಗಳಿಗೆ ಬಲೆ ಬೀಸಿದಂತೆ” ಎಂದು ವಿಡಂಬಿಸುತ್ತಾರೆ.
ಮೊದಲು ನಾವು ಪರಿಶುದ್ಧರಾಗಬೇಕು ನಂತರ ನೆರೆಹೊರೆಯವರ ಶುದ್ಧತೆಯ ಕಡೆ ಚಿತ್ತ ಹರಿಸಬೇಕು, ನಮ್ಮ ಹದಗೆಟ್ಟ ಪರಿಸ್ಥಿತಿಯ ಕುರಿತಾಗಿ ಚಿಂತಿಸದೆ ಪರರ ಸ್ಥಿತಿಯ ಬಗ್ಗೆ ಕುಹಕವಾಡುವ ಮನಸುಗಳ ವಿಚಿತ್ರತನವನ್ನು “ಎಲ್ಲಾ ಹೀಗೆ” ಕವಿತೆಯಲ್ಲಿ ಹೊರಹಾಕಿದ್ದು, ಇದು ಕವಯಿತ್ರಿಯವರು ನೈಜ ಬದುಕನ್ನು ಸೂಕ್ಷ್ಮ ದೃಷ್ಟಿಕೋನದಿಂದ ನೋಡುವ ಪರಿಯನ್ನು ಸೂಚಿಸುತ್ತದೆ.
ಮತ್ತೊಂದು ಓದುಗರನ್ನು ಬಹುವಾಗಿ ಕಾಡುವ ಕವಿತೆ “ಕೌದಿ”. ಎಷ್ಟೆಲ್ಲಾ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಬಾಳಿ ಹೋದ ಮಹನೀಯರ ಆತ್ಮಗಳು ಇಂದಿನ ಅಮೌಲ್ಯಯುತ ಬದುಕನ್ನು ಕಂಡು ರೋಸಿಹೋಗಿ, ಮುಗ್ಧ ಮನದ ಮನಸುಗಳಲ್ಲಿ ಬೆರೆಯಲು ತವಕಿಸುತ್ತಿವೆ ಎಂದು “ಕೌದಿ”ಯ ಮೂಲಕ ಓದುಗರ ಮನಸಲ್ಲಿ ಬುದ್ಧ, ಬಸವ, ಗಾಂಧಿಯವರು ಬಯಸಿದ ಸಮಾಜ ನಿರ್ಮಿಸಬೇಕೆಂದು ನೆನಪಿಸುತ್ತಾರೆ.
ಕೇವಲ ರಾಮರಾಜ್ಯ ಬಯಸಿದರೆ ಸ್ವಾರ್ಥವಾದೀತು. ಮತ್ತೆ ಅದೇ ಪುರುಷ ಪ್ರಧಾನ ಸಮಾಜಕ್ಕೆ ಕಟ್ಟುಬಿದ್ದಂತಾಗುತ್ತದೆ. ಕಾರಣ ನಾವು “ಸೀತಾರಾಮ ರಾಜ್ಯ” ನಿರ್ಮಾಣದ ಕನಸನ್ನು ಕಾಣಬೇಕು. ಆಗ ಮಾತ್ರ ಸಮಾನತೆಯ ಸಾಮ್ರಾಜ್ಯ ಸ್ಥಾಪನೆಯಾಗುತ್ತದೆ. ಇದಕ್ಕಾಗಿ ಮನಸುಗಳು ಹೊಸ ಆದರ್ಶದ ಕಡೆ ವಾಲಬೇಕೆಂದು “ಕನಸಿನ ರಾಜ್ಯ” ಕವಿತೆಯಲ್ಲಿ ಮನೋಜ್ಞವಾಗಿ ಹೇಳುತ್ತಾರೆ.
ಹೀಗೆ ಕವಯಿತ್ರಿ ಸಹೋದರಿ ರೇಣುಕಾ ಕೋಡಗುಂಟಿಯವರ ಈ ಸಂಕಲನದಲ್ಲಿ “ಗಾಂಧಿ ಮತ್ತು ದೇವರು”, “ಹೆಣ ಅನಾಥವಾಗಿದೆ”, “ಕಲಿಗಾಲ”, “ಮತ್ತೊಮ್ಮೆ ಬಸವಣ್ಣ”, “ಗಾಯ”, “ಸಮಯ”, “ಗೆರೆಗಳು”, ಇನ್ನೂ ಅನೇಕ ವೈವಿಧ್ಯಮಯ ಕವಿತೆಗಳು ಓದಿಗೆ ಸಿಗುತ್ತವೆ.
ಒಂದೊಂದು ಕವಿತೆಗಳೂ ಭಿನ್ನವಾದ ಅನುಭವವನ್ನು ನೀಡುತ್ತವೆ. ಸಮಾಜದ ಕಟ್ಟಳೆಗಳನ್ನು ಪ್ರತಿರೋಧಿಸುವ, ವಿಡಂಬಿಸುವ ಸ್ವಾತಂತ್ರ್ಯ, ಅದರ ಜೊತೆಗೆ ಬದುಕನ್ನು ಉತ್ತಮವಾಗಿ ಸವೆಸುವ ರಹದಾರಿಯನ್ನೂ ಪದಗಳ ಮೂಲಕ ಸಮಾಜಕ್ಕೆ ತಿಳಿಸುವ ಕವಿ ಭಾವ ಯಾವತ್ತಿಗೂ ವಿಶೇಷ, ಸ್ವಾಗತಾರ್ಹ ಅಭಿನಂದನಾ ಯೋಗ್ಯವಾದುದು. ಆ ನಿಟ್ಟಿನಲ್ಲಿ ಕವಯಿತ್ರಿಯವರ ಈ ವಿಶೇಷ ಪ್ರಯತ್ನ ಫಲ ನೀಡಲಿ , ನಾಡಿನಾದ್ಯಂತ ಕಂದೀಲು ತನ್ನ ಕಾವ್ಯದ ಬೆಳಕಿನಿಂದ ಓದುಗರ ಮನ ಸೇರಲಿ ಎಂದು ಆಶಿಸುತ್ತೇನೆ….
– ವರದೇಂದ್ರ ಕೆ ಮಸ್ಕಿ
9945253030
ಪುಸ್ತಕಕ್ಕಾಗಿ ಸಂಪರ್ಕಿಸಿ
— ಶ್ರೀಮತಿ ರೇಣುಕಾ ಕೋಡಗುಂಟಿ
8095897118
– ಭಂಡಾರ ಪ್ರಕಾಶನ ಮಸ್ಕಿ
9880132569