ತತ್ವಾಧಾರಿತ ರಾಜಕಾರಣಿ, ಪಕ್ಷ ನಿಷ್ಠ  ವಿಧಿಷ್ಠ ವ್ಯಕ್ತಿ ವೀರಣ್ಣ ಮತ್ತಿಕಟ್ಟಿ

ತತ್ವಾಧಾರಿತ ರಾಜಕಾರಣಿ, ಪಕ್ಷ ನಿಷ್ಠ  ವಿಧಿಷ್ಠ ವ್ಯಕ್ತಿ ವೀರಣ್ಣ ಮತ್ತಿಕಟ್ಟಿ

ತತ್ವಾಧಾರಿತ ರಾಜಕಾರಣ ಮತ್ತು ಪಕ್ಷ ನಿಷ್ಠೆಗೆ ಮತ್ತೊಂದು ಹೆಸರಾಗಿರುವ ಶ್ರೀ ಎಂ.ವಿ. ರಾಜಶೇಖರನ್ ರವರ ಶಿಷ್ಯ ಶ್ರೀ ವೀರಣ್ಣಮತ್ತಿಕಟ್ಟಿಯವರು ಎರಡು ಅವಧಿಗೆ ರೋಣ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿ ಎರಡು ಅವಧಿಗೆ ಕರ್ನಾಟಕದ ವಿಧಾನ ಪರಿಷತ್ತಿನ ಸದಸ್ಯರಾಗಿ, ಸಭಾಪತಿಗಳಾಗಿ ಸೇವೆಯನ್ನು ಸಲ್ಲಿಸಿದ ಇವರು ನಮ್ಮ ಕನ್ನಡ ನಾಡಿನ ಹೆಮ್ಮೆ.

ತಮಗೆಲ್ಲ ನೆನಪಿರಬಹುದು ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಲು ಖಡಕ್ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಸಾಕಾರಗೊಳಿಸಿದ ನಾಲ್ಕು ಜನ ಲಿಂಗಾಯತ ಮಹನೀಯರೆಂದರೆ, 2008 ರ ನಂತರದ ಸಂದರ್ಭದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾಗಿದ್ದ ಶ್ರೀ ವೀರಣ್ಣ ಮತ್ತಿಕಟ್ಟಿ ಮತ್ತು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿದ್ದ ಶ್ರೀ ಜಗದೀಶ ಶೆಟ್ಟರ್ ವರು ಬೆಳಗಾವಿಯ ಪುಣೆ ಬೆಂಗಳೂರು ಹೆದ್ದಾರಿಯ ಪಕ್ಕದಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣಕ್ಕೆ ಜಾಗೆಯನ್ನು ಗುರುತಿಸಿ  ಅನುಮೋದಿಸಿದರು. ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಸುವರ್ಣ ವಿಧಾನಸೌಧ ನಿರ್ಮಾಣಕ್ಕೆ ಬೇಕಾದಂಥ ಹಣಕಾಸನ್ನು ಮಂಜೂರು ಮಾಡಿದರು.ಸುವರ್ಣ ವಿಧಾನಸೌಧವನ್ನು ಅಚ್ಚುಕಟ್ಟಾಗಿ ನಿರ್ಮಾಣವಾಗುವಲ್ಲಿ ಉಸ್ತುವಾರಿ ವಹಿಸಿ ನಿಗದಿತ ಅವಧಿಯಲ್ಲಿ ಸುವರ್ಣವಿಧಾನಸೌಧದ ಕಾಮಗಾರಿಗಳನ್ನು ಮುಗಿಸಿ ಲೋಕಾರ್ಪಣೆಗೊಳ್ಳಲು ಶ್ರಮಿಸಿದವರು ಅಂದಿನ ಲೋಕೋಪಯೋಗಿ ಸಚಿವರಾಗಿದ್ದ ಲಿಂಗೈಕ್ಯ ಶ್ರೀ ಸಿ.ಎಂ.ಉದಾಸಿಯವರು ಅಂದರೆ ಲಿಂಗಾಯತರ ಕೈಯಲ್ಲಿ ಅಧಿಕಾರ ಸಿಕ್ಕಾಗ ಆ ಅಧಿಕಾರವನ್ನು ನಾಡು ನುಡಿಯ ಅಭಿವೃದ್ದಿಗಾಗಿ ಬಳಸಿಕೊಳ್ಳುತ್ತಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ.

ವೀರಣ್ಣ ಮತ್ತಿಕಟ್ಟಿಯವರು ಜನಿಸಿದ್ದು ರೋಣ ತಾಲೂಕಿನ ಯಾವಗಲ್ ಗ್ರಾಮದಲ್ಲಿ ಅಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ ರೋಣದಲ್ಲಿ ಪ್ರೌಢ ಶಿಕ್ಷಣವನ್ನು ಪಡೆದುಕೊಂಡು,ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಪೂರೈಸಿದರು.ಅದೇ ಸಂದರ್ಭದಲ್ಲಿ ರಾಜಕಾರಣದಲ್ಲಿ ಆಸಕ್ತಿಯನ್ನು ತಳೆದಿದ್ದ ಶ್ರೀ ವೀರಣ್ಣ ಮತ್ತಿಕಟ್ಟಿ ಅವರು ರೋಣದ “ಸೇಲ ಸೊಸೈಟಿ” ಅಧ್ಯಕ್ಷರಾಗಿ ರಾಜಕಾರಣದ ಅಂಗಳದಲ್ಲಿ ಧುಮಿಕಿದರು.ಸೊಸೈಟಿಯ ಅಧ್ಯಕ್ಷರಾಗಿದ್ದುಕೊಂಡು ಕರ್ನಾಟಕ ಕಾನೂನು ಕಾಲೇಜಿನಲ್ಲಿ ಎಲ್.ಎಲ್.ಬಿ ಪದವಿಯನ್ನು ಪಡೆದುಕೊಂಡು ಪ್ರಾಕ್ಟೀಸ್ ಪ್ರಾರಂಭಿಸಬೇಕೆನ್ನುವಷ್ಟರಲ್ಲಿ ರಾಜಕಾರಣದ ಸೆಳೆತ ತೀವ್ರವಾಗಿದ್ದುದರಿಂದ ವಕೀಲರಾಗಿ ಪ್ರ್ಯಾಕ್ಟಿಸ್ ಮಾಡಲೇ ಇಲ್ಲ.

ಎಂಭತ್ತರ ದಶಕದ ವೇಳೆಗೆ ರಾಜ್ಯ ಯುವ ಕಾಂಗ್ರೆಸ್ ನಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ಇವರು ತಮ್ಮ ಕ್ರಿಯಾಶೀಲತೆಯಿಂದ ಹಿರಿಯ ನಾಯಕರ ಗಮನವನ್ನು ತಮ್ಮೆಡೆಗೆ ಸೆಳೆದುಕೊಂಡಿದ್ದರು. ಪರಿಣಾಮವಾಗಿ 1983 ರಲ್ಲಿ ರೋಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆ ಆದರು.ಬಹುಶಃ ವೀರಣ್ಣ ಮತ್ತಿಕಟ್ಟಿಯವರ ರಾಜಕಾರಣದ ಪ್ರಯಾಣ ಸುಗಮವಾಗಿರಲಿಲ್ಲ ಏನಿಸುತ್ತದೆ. ಹಳೆ ಧಾರವಾಡ ಜಿಲ್ಲೆಯ ಪ್ರಭಾವಿ ಹಾಗೂ ಪ್ರಮುಖ ರಾಜಕಾರಣಿ ಮನೆತನದವರು ಪಕ್ಷ ಹಾಗೂ ಸರ್ಕಾರದಲ್ಲಿ ಪ್ರಮುಖ ಹುದ್ದೆಗಳು ಶ್ರೀ ವೀರಣ್ಣ ಮತ್ತಿಕಟ್ಟಿಯವರಿಗೆ ದೊರಕದಂತೆ ನೋಡಿಕೊಂಡರು ಎಂದು ಜನ ಮಾತನಾಡಿಕೊಳ್ಳುತ್ತಿರುವುದನ್ನು ಕೇಳಿದ್ದೇನೆ.ಹೀಗಾಗಿ ಅಧಿಕಾರ ರಾಜಕಾರಣದಲ್ಲಿ ವೀರಣ್ಣ ಮತ್ತಿಕಟ್ಟಿಯವರು ತಮಗೆ ಸಿಗಬೇಕಾದ ಹಲವಾರು ಸ್ಥಾನಮಾನಗಳಿಂದ ವಂಚಿತರಾದರು ಎಂದು ಅವರ ಸಮಕಾಲೀನ ಗೆಳೆಯರು ಮಾತನಾಡಿಕೊಳ್ಳುವುದನ್ನು ಕೇಳಿದ್ದೇನೆ. ಏನೇ ಕಷ್ಟ ಬಂದರೂ ಎಂತಹುದೇ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷವನ್ನು ಅಧಿಕಾರದ ಆಸೆಗಾಗಿ ತೊರೆಯಲಿಲ್ಲ,ಪಕ್ಷ ನಿಷ್ಠೆಯಲ್ಲಿ ಅಗ್ರಸ್ಥಾನದಲ್ಲಿ ಉಳಿದುಕೊಂಡರು.ಸುಮಾರು ಎರಡು ದಶಕಗಳ ಕಾಲ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಲಯದಲ್ಲಿ ಪದಾಧಿಕಾರಿಯಾಗಿ ಪಕ್ಷ ಸಂಘಟನೆಯ ಮುಂದಾಳತ್ವವನ್ನು ವಹಿಸಿದ್ದರು.ಕೊನೆಗೂ ಇವರ ಪಕ್ಷ ನಿಷ್ಠೆಗೆ ಫಲ ದೊರಕಿತು. ಮುಂದೆ ಎರಡು ಸಲ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಸಭಾಪತಿಗಳಾಗಿ ಕಾರ್ಯ ನಿರ್ವಹಿಸಿ ಕರ್ನಾಟಕ ರಾಜಕಾರಣದ ಅಂಗಳದಲ್ಲಿ ತಮ್ಮದೇ ಆದ ಹೆಜ್ಜೆಯ ಗುರುತನ್ನು ಮೂಡಿಸುವಲ್ಲಿ ಯಶಸ್ವಿಯಾದರು.

ಅಗ್ರಿಕಲ್ಚರ್ ಆಫೀಸರ್ ಆಗಿದ್ದ ಶೆಲೂಡಿಯ ಭರಡಿ ಶೆಟ್ಟರ ಮಗಳು ಶ್ರೀಮತಿ ಶಕುಂತಲಾರವರ ಜೊತೆಗೆ ದಾಂಪತ್ಯ ಜೀವನ ಪ್ರಾರಂಭಿಸಿ ವಿವಾಹ ವಾರ್ಷಿಕೋತ್ಸವ ರಜತಮಹೋತ್ಸವದ ಸಂಭ್ರಮದಲ್ಲಿದ್ದಾರೆ.ಇವರಿಗೆ ಮೂರು ಜನ ಗಂಡು ಮಕ್ಕಳು, ಒಬ್ಬ ಹೆಣ್ಣು ಮಗಳು. ಹಿರಿಯ ಮಗ ವಿಜಯ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಮುಂತಾದ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ, ಕಿರಿಯ ಮಗ ಅಶೋಕ ಧಾರವಾಡದಲ್ಲಿ ಪೆಟ್ರೋಲ್ ಬಂಕ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ, ಮೂರನೆಯ ಮಗ ಮಹೇಶ ಗಜೇಂದ್ರಗಡ ದಲ್ಲಿರುವ ಗ್ಯಾಸ್ ಏಜೆನ್ಸಿ ಶಿಕ್ಷಣ ಸಂಸ್ಥೆಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.ಮಗಳು ಶ್ರೀಮತಿ ವಿದ್ಯಾಳನ್ನು ಗದುಗಿನ ಪ್ರತಿಷ್ಟಿತ ಮೆಣಸಿನಕಾಯಿ ಮನೆತನದ ಯುವಕನೊಂದಿಗೆ ವಿವಾಹ ಮಾಡಿಕೊಟ್ಟಿದ್ದಾರೆ. ಮಕ್ಕಳೆಲ್ಲರೂ ತಂದೆ ತಾಯಿಯವರಿಂದ ಶ್ರೇಷ್ಟ ಸಂಸ್ಕಾರ ಪಡೆದುಕೊಂಡು “ಕಾಯಕವೇ ಕೈಲಾಸ” ಎನ್ನುವ ತತ್ವದಲ್ಲಿ ನಂಬಿಕೆಯಿಟ್ಟು ಮುನ್ನಡೆಯುತ್ತಿದ್ದಾರೆ.ಶ್ರೀ ವೀರಣ್ಣ ಮತ್ತಿಕಟ್ಟಿಯವರು ಸಾರ್ವಜನಿಕ ಜೀವನ, ರಾಜಕಾರಣ ಎಂದು ಮನೆಯಲ್ಲಿದ್ದುದಕ್ಕಿಂತ, ಮನೆಯಿಂದ ಹೊರಗಿದ್ದದ್ದೆ ಹೆಚ್ಚು.ಹೀಗಿದ್ದಾಗ ಮನೆಯ ವ್ಯವಹಾರವನ್ನು ನೋಡಿಕೊಳ್ಳುತ್ತಾ ಮಕ್ಕಳಿಗೆ ವಿದ್ಯೆ, ಬುದ್ಧಿ, ಸಂಸ್ಕಾರವನ್ನು ನೀಡಿ ಮಕ್ಕಳನ್ನು ಯೋಗ್ಯ ಪ್ರಜೆಗಳನ್ನಾಗಿ ಬೆಳೆಸಿದ ಶ್ರೀಮತಿ ಶಕುಂತಲಾ ವೀರಣ್ಣ ಮತ್ತಿಕಟ್ಟಿಯವರ ಸಹನೆ ಮತ್ತು ತಾಳ್ಮೆಗೆ ನನ್ನದೊಂದು ದೊಡ್ಡ ಸಲಾಂ. ಶ್ರೀ ವೀರಣ್ಣ ಮತ್ತಿಕಟ್ಟಿಯವರು ತಮ್ಮದೇ ಬಸವೇಶ್ವರ ಎಜುಕೇಶನ್ ಟ್ರಸ್ಟ ಅಡಿಯಲ್ಲಿ ಪದವಿಪೂರ್ವ ಹಾಗೂ ಪದವಿ ಕಾಲೇಜು, ಬಿ.ಎಡ್ ಕಾಲೇಜ್ ಐ.ಟಿ.ಐ ಹಾಗೂ ಹುಬ್ಬಳ್ಳಿಯಲ್ಲಿ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯ, ಗಜೇಂದ್ರಗಡ,ರೋಣ ಹಾಗೂ ಹುಬ್ಬಳ್ಳಿಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ಕ್ಷೇತ್ರಕ್ಕೂ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ.ಇವರ ಇನ್ನೊಬ್ಬ ಸಹೋದರ ಶ್ರೀ ಶರಣಪ್ಪ ಕೊಟಗಿಯವರು ಸಹ ಹುಬ್ಬಳ್ಳಿಯಲ್ಲಿದ್ದಕೊಂಡು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಾ ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ.

ಶ್ರೀ ವೀರಣ್ಣ ಮತ್ತಿಕಟ್ಟಿಯವರಿಗೆ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆ ಇದ್ದರೂ,ತತ್ವಾಧಾರಿತ ರಾಜಕಾರಣದ ಹಂಬಲಕ್ಕೆ ಬಿದ್ದು ಅಚಲ ಪಕ್ಷ ನಿಷ್ಠೆಯನ್ನು ತೋರಿಸಿದ್ದರ ಪರಿಣಾಮ ಹಾಗೂ ಅಡ್ಡದಾರಿಗಿಳಿದು ಹಣ ಮಾಡುವುದರಲ್ಲಿ ಹಿಂದೆ ಬಿದ್ದದ್ದು ಇವರಿಗೆ ಅಡ್ಡಿಯಾಯಿತು ಎನಿಸುತ್ತದೆ.ಮುಖ್ಯಮಂತ್ರಿಯಾಗದಿದ್ದರೆ ಏನಂತೆ ಅಚಲ ಪಕ್ಷ ನಿಷ್ಠೆ ಮತ್ತು ತತ್ವಾಧಾರಿತ ರಾಜಕಾರಣಕ್ಕೆ ಮತ್ತೊಂದು ಹೆಸರಾಗಿ ವೀರಣ್ಣ ಮತ್ತಿಕಟ್ಟಿಯವರು ಕರ್ನಾಟಕ ರಾಜಕಾರಣದ ಚರಿತ್ರೆಯ ಪುಟಗಳಲ್ಲಿ ಉಳಿದುಕೊಂಡರಲ್ಲ ಅದೇ ನಮಗೆಲ್ಲರಿಗೂ ಹೆಮ್ಮೆ ಮತ್ತು ಸಮಾಧಾನ.

ಯಾವುದೇ ಆಶೆ ಆಮಿಷಗಳಿಗೆ ಒಳಗಾಗದೆ ಕೈ, ಬಾಯಿ,ಕಚ್ಚೆಯನ್ನು ಶುದ್ಧವಾಗಿಟ್ಟುಕೊಂಡು ಬದುಕುತ್ತಿದ್ದಾರಲ್ಲ, ಇಂಥವರು ಬಲು ಅಪರೂಪ ಇಂದಿನ ದಿನಗಳಲ್ಲಿ ಎನ್ನುವುದು ಸತ್ಯ.ರಾಜಕಾರಣದ ಭರಾಟೆಯಲ್ಲಿ ಆರೋಗ್ಯವನ್ನು ಅಲಕ್ಷಿಸಿ ಜನ ಸೇವೆಯಲ್ಲಿ ತೊಡಗಿಕೊಂಡಿದ್ದರ ಪರಿಣಾಮ, ಮುಖ್ಯವಾದ “ಸನ್ನಿವೇಶ-ಸಮಯ-ಸಂದರ್ಭದಲ್ಲಿ” ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗುವ ಅವಕಾಶವನ್ನು ಕಳೆದುಕೊಂಡರು ಎನಿಸುತ್ತದೆ.ಇಲ್ಲದಿದ್ದರೆ ಮುಖ್ಯಮಂತ್ರಿ ಗಾದಿಯ ಸನಿಹಕ್ಕೆ ಹೋಗುವ ಅವಕಾಶವಿರುತ್ತಿತ್ತು.ರಾಜಕಾರಣದಲ್ಲಿ ಉನ್ನತ ಹುದ್ದೆಗೇರುವ ಆಕಾಂಕ್ಷೆಯುಳ್ಳವರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಅಜಾತಶತ್ರುವಾಗಿರುವ ಶ್ರೀ ವೀರಣ್ಣ ಮತ್ತಿಕಟ್ಟಿಯವರನ್ನು ಎಲ್ಲ ಪಕ್ಷಗಳ ಹಿರಿಯರು ಹಾಗೂ ಮುಖಂಡರು ಗೌರವದಿಂದ ಕಾಣುತ್ತಾರೆ.

ಹಾವೇರಿಯ ಲೋಕಸಭಾ ಸದಸ್ಯರು ಹಾಗೂ ಬಸವ ತತ್ತ್ವಾನುಯಾಯಿಗಳಾಗಿದ್ದ ಶ್ರೀ ಐ. ಸನದಿಯವರು ಇವರ ಆತ್ಮಿಯ ಬಳಗದಲ್ಲಿರುವ ಹಿರಿಯರು. ಕೊಪ್ಪಳದ ಲಿಂ. ಮಲ್ಲಿಕಾರ್ಜುನ ಅಗಡಿ, ಲಿಂ.ಮಲ್ಲಿಕಾರ್ಜುನ ದಿವಟರ, ನರೇಗಲ್ಲಿನ ವೀರಣ್ಣ ಜೋಳದ ಮುಂತಾದವರು ವೀರಣ್ಣ ಮತ್ತಿಕಟ್ಟಿಯವರ ಆತ್ಮೀಯ ಸ್ನೇಹಿತರು.ನಾನು ಸಮಾಜ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾಗ ಶ್ರೀ ವೀರಣ್ಣ ಮತ್ತಿಕಟ್ಟಿಯವರು ಕಾಲಕಾಲಕ್ಕೆ ಮಾರ್ಗದರ್ಶನ ನೀಡಿ ಬೆಂಬಲಿಸಿದ್ದನ್ನು ನಾನೆಂದೂ ಮರೆಯಲು ಸಾಧ್ಯವಿಲ್ಲ.ಈಗಲೂ ನನ್ನ ಫೋನ್ ಕರೆಯನ್ನು ಸ್ವೀಕರಿಸಿ ವಿಚಾರಗಳನ್ನು ತಿಳಿದುಕೊಂಡು ಸಹಾಯ ಸಹಕಾರ ನೀಡುವ ಉದಾರ ಗುಣ ಹೊಂದಿದ್ದಾರೆ. ಇವರಷ್ಟೇ ಅಲ್ಲದೆ ಇಡೀ ಕರ್ನಾಟಕದ ಉದ್ದಗಲಕ್ಕೂ ಆತ್ಮಿಯ ಗೆಳೆಯರ ಜಾಲ, ಅಭಿಮಾನಿಗಳು ಹಾಗೂ ಹಿತೈಷಿಗಳ ಬಳಗ ಹರಡಿಕೊಂಡಿದೆ.ಇವರ ಬದುಕು ಸಾರ್ವಜನಿಕ ಜೀವನದಲ್ಲಿರಬೇಕು ಎನ್ನುವವರಿಗೆ ಆದರ್ಶ.ನಾನು ಸಮಾಜ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾಗ ಕಾಲಕಾಲಕ್ಕೆ ಮಾರ್ಗದರ್ಶನ ನೀಡುತ್ತಾ ಬೆನ್ನು ತಟ್ಟಿ ಬೆಂಬಲವನ್ನು ನೀಡಿದ್ದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ.ಹಾಗೆಯೇ ಇಂದಿಗೂ ನನ್ನ ಫೋನ್ ಕರೆಯನ್ನು ಸ್ವೀಕರಿಸಿ ವಿಚಾರಗಳನ್ನು ತಿಳಿದುಕೊಂಡು ನನಗೆ ಸಹಾಯ, ಸಹಕಾರ ಹಾಗೂ ಮಾರ್ಗದರ್ಶನ ನೀಡುವ ಉದಾರ ಉದಾರ ಗುಣಕ್ಕೆ ನಾನು ಕೃತಜ್ಞನಾಗಿದ್ದೇನೆ.ಸಾಹಿತ್ಯ ಸಂಸ್ಕೃತಿಯ ಆರಾಧಕರು, ಮೃದು ಹೃದಯಿಗಳು, ಸ್ನೇಹಜೀವಿಗಳು ಹಾಗೂ ಬಸವಾಭಿಮಾನಿಗಳಾಗಿರುವ ಶ್ರೀ ವೀರಣ್ಣ ಮತ್ತಿಕಟ್ಟಿಯವರು ಇನ್ನೂ ಅನೇಕ ದಶಕಗಳ ಕಾಲ ನಮ್ಮೊಂದಿಗೆ ಇದ್ದು ಮಾರ್ಗದರ್ಶನ ಮಾಡಲಿ ಎಂದು ಆಶಿಸುತ್ತಾ ಶ್ರೀ ವೀರಣ್ಣ ಮತ್ತಿಕಟ್ಟಿಯವರಿಗೆ ಮಹಾತ್ಮ ಬಸವೇಶ್ವರ ಆರೋಗ್ಯ, ಆಯುಷ್ಯ,ಸಂಪತ್ತನ್ನು ಕರುಣಿಸಿ ಕಾಪಾಡಲಿ ಎಂದು ಪ್ರಾರ್ಥಿಸುತ್ತಾ ಹುಟ್ಟು ಹಬ್ಬದ ಶುಭಾಶಯಗಳು ಸರ್ …

ಗವಿಸಿದ್ದಪ್ಪ ವೀ. ಕೊಪ್ಪಳ

Don`t copy text!