ರಾಮನಗರ ಜಿಲ್ಲಾ ಕಸಾಪ ಚುನಾವಣೆ
ಬಿಳಿದಾಳೆ ಪಾರ್ವತೀಶ ಮುಂಚುಣಿಯಲ್ಲಿ
ಪಾರ್ವತೀಶ ಹಾಗೂ ಬಿಳಿದಾಳೆ ಈಶ ಎಂಬ ಹೆಸರಿನಿಂದ ಪರಿಚಯವಾಗಿರುವ ಹಾಗೂ ಅದೇ ಹೆಸರಿನಲ್ಲಿ ಬರೆಯುವ ಜನಪರ ಪತ್ರಕರ್ತ ಹಾಗೂ ಲೇಖಕ ಪಾರ್ವತೀಶ ಬಿಳದಾಳೆ ಅವರು ರಾಮನಗರ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ಎದುರಿಸುತ್ತಿದ್ದಾರೆ.
ಕನಕಪುರ ತಾಲ್ಲೂಕಿನ ಬಿಳಿದಾಳೆ ಗ್ರಾಮದವರಾದ ಪಾರ್ವತೀಶರವರು ಅರೆಕಾಲಿಕ ರೈತರೂ ಆಗಿದ್ದರು. ಕೆಲಕಾಲ ಸರ್ಕಾರಿ ನೌಕರಿ ಮಾಡಿದ ಪಾರ್ವತೀಶ ಬಿಳಿದಾಳೆ ಅವರು ನಂತರ ಕರ್ನಾಟಕ ಪ್ರಗತಿರಂಗ ಹಾಗೂ ಕರ್ನಾಟಕ ವಿಮೋಚನಾ ರಂಗದ ಸಕ್ರಿಯ ಕಾರ್ಯಕರ್ತರಾಗಿಯು ಕೆಲಸ ಮಾಡಿದ್ದಾರೆ. ನಂತರ
‘ಲಂಕೇಶ್ ಪತ್ರಿಕೆ’, ‘ಗೌರಿ ಲಂಕೇಶ್’ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿರುವ ಬಿಳಿದಾಳೆ ಪಾರ್ವತೀಶ ಅವರು ಸಾಕೇತ್ ರಾಜನ್ ಹೆಸರಲ್ಲಿ ‘ಸಾಕೇತ್’ ಎನ್ನುವ ವಾರಪತ್ರಿಕೆಯನ್ನೂ ತಾವೇ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದವರು. ಅಲ್ಲದೇ ಮುಂದೆ ‘ಗೈಡ್’ ಎಂಬ ಮಾಸಪತ್ರಿಕೆಯ ಸಂಪಾದಕರಾಗಿಯೂ ದುಡಿದಿದವರು ಮತ್ತು ಈಗಲೂ ದುಡಿಯುತ್ತಿದ್ದಾರೆ.
ಪಾರ್ವತೀಶ ಬಿಳಿದಾಳೆ ಅವರು ಕನ್ನಡದಲ್ಲಿ ಬಳಕೆಯಲ್ಲಿರುವ ಅನ್ಯಭಾಷಾ ಪದಗಳ ವಿವರಣೆ ನೀಡುವ Someಪದ, ಚೆಕ್ ಪೋಸ್ಟ್, ಕಾಮೆಂಟರಿ ಎಂಬ ಕೃತಿಗಳನ್ನೂ ಪ್ರಕಟಿಸಿದ್ದಾರೆ. ಪಿ.ಲಂಕೇಶ್ ಅವರ ಟೀಕೆ-ಟಿಪ್ಪಣಿ, ಈ ನರಕ ಈ ಪುಲಕ, ಆಟ-ಜೂಜು-ಮೋಜು ಕೃತಿಗಳನ್ನು ಸಂಪಾದಿಸಿದವರು.
ಈಗ ರಾಮನಗರದಲ್ಲಿ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಅಭ್ಯರ್ಥಿಯಾಗಿ ಸಾಹಿತ್ಯ ಪರಿಷತ್ತಿನ ಸದಸ್ಯರೆಲ್ಲರ ಮುಂದೆ ಬಂದು ನಿಂತಿದ್ದಾರೆ. ಇಂತಹ ಪಾರ್ವತೀಶ ಬಿಳಿದಾಳೆ ಅವರನ್ನು ಆಯ್ಕೆ ಮಾಡಿ ಸಾಹಿತ್ಯ ಪರಿಷತ್ತಿನ ಗೌರವವನ್ನೂ ಮತ್ತು ಸಾಹಿತ್ಯವನ್ನೂ ಗೌರವಿಸುವುದು ರಾಮನಗರ ಕಸಾಪ ಸದಸ್ಯರ ಜವಬ್ದಾರಿಯಾಗಿದೆ.ರಾಮನಗರದಲ್ಲಿ ಸಾಹಿತ್ಯ ಪರಿಷತ್ತಿನ ಚುನಾವಣೆ ಅಬ್ಬರ ಜೋರಾಗಿದೆ.
ರಾಮನಗರ ಜಿಲ್ಲೆಯಲ್ಲಿ 9,680 ಕನ್ನಡ ಸಾಹಿತ್ಯ ಪರಿಷತ್ ಮತದಾರರು ಇದ್ದಾರೆ. ಈ ಮತದಾರರ ಪಟ್ಟಿಪರಿಷ್ಕರಣೆಗೊಂಡು ಹಲವು ದಶಕಗಳೇ ಕಳೆದಿವೆ. ಹಿಂದಿದ್ದ ವಾಸ ಸ್ಥಳದಿಂದ ಬೇರೆಡೆಗೆ ವರ್ಗಾವಣೆಯಾದವರು, ಆನಂತರದಲ್ಲಿ ವಿಳಾಸ ಬದಲಾಯಿಸಿಕೊಂಡಿಲ್ಲ. ಪರಿಷತ್ ಸದಸ್ಯರಾಗಿದ್ದ ಯುವತಿಯರು ಮದುವೆಯಾಗಿ ಬೇರೆ ಊರಿಗೆ ಹೋಗಿದ್ದಾರೆ. ಅವರ ವಿಳಾಸವೂ ಬದಲಾಗಿಲ್ಲ. ಮೃತಪಟ್ಟಿರುವ ಸದಸ್ಯರ ಹೆಸರನ್ನು ಕೈಬಿಟ್ಟಿಲ್ಲ. ಹಲವು ಮತದಾರರ ವಿಳಾಸದಲ್ಲಿ ಊರಿನ ಹೆಸರುಗಳನ್ನು ತಪ್ಪಾಗಿ ನಮೂದಿಸಲಾಗಿದೆ. ಈ ಎಲ್ಲಾ ಕಾರಣಗಳಿಂದ ಮತದಾರರನ್ನು ಹುಡುಕುವುದು ಅಭ್ಯರ್ಥಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈಗ ಕಣದಲ್ಲಿರುವ ಅಭ್ಯರ್ಥಿಗಳು
ಕನಕಪುರದ ಪಾರ್ವತೀಶ ಬಿಳಿದಾಳೆ, ಮಾಗಡಿಯ ಕಲ್ಪನಾ ಶಿವಣ್ಣ, ರಾಮನಗರದ ಡಿ.ಕೃಷ್ಣಮೂರ್ತಿ, ಚನ್ನಪಟ್ಟಣದ ಬಿ.ಟಿ.ನಾಗೇಶ, ಯೋಗೀಶ ಚಕ್ಕರೆ, ವಿ.ಸಂದೇಶ ಚುನಾವಣಾ ಕಣದಲ್ಲಿದ್ದಾರೆ.
ಬಿಳಿದಾಳೆ ಪಾರ್ವತೀಶ ಅವರು ರಾಮನಗರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಗೆದ್ದು ಬಂದರೆ ಲಂಕೇಶ್ ಮತ್ತು ಗೌರಿ ಲಂಕೇಶ್ ಅವರಂತೆಯೇ ಜನಪರ ಕೆಲಸಗಳ, ಹೋರಾಟಪರರಾಗಿರುವಂತೆಯೇ ಕನ್ನಡ ಸಾಹಿತ್ಯ ಪರಿಷತ್ತನ್ನೂ ಒಂದು ಚಳುವಳಿಯಾಗಿ ಮಾಡಲು ಈ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
ಅವರು ಮಾಡಲು ಬಯಸಿರುವ ಕಾರ್ಯಗಳ ಬಗೆಗೆ ಸಂಕ್ಷಿಪ್ತವಾಗಿ ಕೆಲವು ವಿಚಾರಗಳನ್ನು ಹೀಗೆ ಹೇಳುತ್ತಾರೆ.
೧) ಕರ್ನಾಟಕ ರಾಜ್ಯದ ಆಡಳಿತ, ವ್ಯವಹಾರ ಹಾಗೂ ನಿತ್ಯ ಜೀವನದಲ್ಲಿ ಕನ್ನಡಕ್ಕೇ ಅಗ್ರಸ್ಥಾನ ಪಡೆವುವಂತೆ ಕಾರ್ಯತತ್ಪರತರಾಗುವುದು.
೨) ಕರ್ನಾಟಕದಲ್ಲಿ ಕಾರ್ಯನಿಸುತ್ತಿರುವ ಬ್ಯಾಂಕ್ ಗಳು ಮತ್ತು ಅಂಚೆ ಕಚೇರಿಗಳಲ್ಲಿ ಕನ್ನಡ ಬಳಕೆಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮುಖೇನ ಹೋರಾಟ ಮಾಡುವುದು.
೩) ಕರ್ನಾಟಕ ಗ್ರಾಮೀಣ ಬ್ಯಾಂಕುಗಳ ನೇಮಕಾತಿಯಲ್ಲಿ ಕನ್ನಡ ಭಾಷಾ ಜ್ಞಾನ ಮತ್ತು ಸ್ಥಾನ ಸಿಗುವಂತೆ ಒತ್ತಯ ಮಾಡುದಷ್ಟೇ ಅಲ್ಲದೇ ಸದಾ ಹೋರಾಡುವುದು.
೪) ಜಿ.ಎಸ್.ಟಿ. ತೆರಿಗೆಯಲ್ಲಿ ಕರ್ನಾಟಕದ ನ್ಯಾಯಬದ್ದ ಪಾಲನ್ನು ಪಡೆಯಲು ಒತ್ತಾಯಿಸುವುದು ಮತ್ತು ಆ ನಿಟ್ಟಿನಲ್ಲಿ ಪಾಲು ಪಡೆಯುವವರೆಗೂ ಹೋರಾಟ ಮಾಡುವುದು.
೫) ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕನ್ನಡಕ್ಕೆ ಸೂಕ್ತ ಸ್ಥಾನ ಪ್ರಾಶಸ್ತ ಸಿಗುವವರೆಗೂ ಸದಾಕಾಲವೂ ಹೋರಾಟ ಮಾಡುವುದು.
೬) ನಾಡಿನ ನೆಲ, ಜಲ, ಜನಹಿತಾಶಕ್ತಿಗಳ ಪರವಾಗಿ ಸದಾ ಕಾಲ ಸ್ಪಂದಿಸುವುದು.
ಹೀಗೆಯೇ ಕನ್ನಡದ ಸರ್ವಾಂಗೀಣ ಪ್ರಗತಿಗಾಗಿ ಸದಾ ಜೀವನ್ಮುಖವಾಗಿರುವುದು ಬಿಳಿದಾಳೆ ಪಾರ್ವತೀಶರ ಆಶಯವಾಗಿದೆ.
– ಕೆ.ಶಿವು ಲಕ್ಕಣ್ಣವರ