ಐತಿಹಾಸಿಕ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಮತ್ತು ಆಕಾಂಕ್ಷಿಗಳ ಬಿರಿಸಿನ ಪ್ರಚಾರ.!
ಪ್ರಪ್ರಥಮವಾಗಿ ರಾಜ್ಯ ಸಾಹಿತ್ಯ ಪರಿಷತ್ತಿನಲ್ಲಿ ಗಮನ ಸೆಳೆಯುತ್ತಿದ್ದಾರೆ ಡಾ.ಸರಸ್ವತಿ ಚಿಮ್ಮಲಗಿಯವರು.!!–
ಕನ್ನಡ ಸಾಹಿತ್ಯ ಪರಿಷತ್ತಿನ ಚನಾವಣಾ ಚಟುವಟಿಕೆಗಳು ಗರಿಗೆದರಿವೆ. ಕಸಾಪ ಚುನಾವಣೆ ಘೋಷಣೆ ಬೆನ್ನಲ್ಲೇ ಆಕಾಂಕ್ಷಿಗಳ ಚುನಾವಣೆ ಪ್ರಚಾರ ಕೂಡ ಬಿರುಸುಗೊಂಡಿದೆ. ಚುನಾವಣೆ ಘೋಷಣೆಗೂ ಮುನ್ನವೇ ಕಳೆದ ಆರು ತಿಂಗಳಿನಿಂದಲೇ ಆಕಾಂಕ್ಷಿಗಳು ಪ್ರಚಾರ ಕಾರ್ಯವನ್ನು ಆರಂಭಿಸಿದ್ದರು. ಮೊನ್ನೆ ಚುನಾವಣಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಕನ್ನಡ ಸಾಹಿತ್ಯ ಪರಿಷತ್‍ಗೆ ಚುನಾವಣೆಯನ್ನು ಅಧಿಕೃತವಾಗಿ ಘೋಷಣೆ ಮಾಡುತ್ತಿದ್ದಂತೆ ಇತ್ತ ಆಕಾಂಕ್ಷಿಗಳು ತಮ್ಮ ಪ್ರಚಾರ ಕಾರ್ಯವನ್ನು ಮತ್ತಷ್ಟು ಬಿರುಸುಗೊಳಿಸಿದ್ದಾರೆ.
ಕೇಂದ್ರ ಸಾಹಿತ್ಯ ಪರಿಷತ್‍ಗೆ ಅಧ್ಯಕ್ಷ ಆಕಾಂಕ್ಷಿಗಳು ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ಅಧ್ಯಕ್ಷ ಆಕಾಂಕ್ಷಿಗಳು ಮತ್ತು ಗಡಿನಾಡು, ಹೊರನಾಡು ಅಧ್ಯಕ್ಷ ಆಕಾಂಕ್ಷಿಗಳು ನಾಮಪತ್ರ ಸಲ್ಲಿಕೆ ಚುನಾವಣಾ ಪ್ರಚಾರ ಮತ್ತಿತರ ಚಟುವಟಿಕೆಗಳತ್ತ ಗಮನಹರಿಸಿದ್ದಾರೆ.
ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೀಯ ಸ್ಥಾನದ ಮೇಲೆ ಕಣ್ಣಿಟ್ಟಿರುವ ದೂರದರ್ಶನ ನಿವೃತ್ತ ಅಧಿಕಾರಿ ಡಾ.ಮಹೇಶ್ ಜೋಷಿ, ಕನ್ನಡ ಸಾಹಿತ್ಯ ಪರಿಷತ್‍ನ ಗೌರವ ಕಾರ್ಯದರ್ಶಿಗಳಾದ ವ.ಚ.ಚನ್ನೇಗೌಡ, ಸಿ.ಕೆ.ರಾಮೇಗೌಡ, ಕೊಪ್ಪಳ ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ್ ಮಾಲಿ ಪಾಟೀಲ್ ಹಾಗೂ ಸರಸ್ವತಿ ಚಿಮ್ಮಲಗಿ ಸೇರಿದಂತೆ ಹಲವರು ಬಿರುಸಿನ ಪ್ರಚಾರ ನಡೆಸಿದ್ದಾರೆ.
ಇವರಲ್ಲಿ ಕೊಪ್ಪಳದ ಶೇಖರಗೌಡ ಮಾಲಿ ಪಾಟೀಲ, ಮಹೇಶ್ ಜೋಷಿ ಮತ್ತು ಸಿ.ಕೆ.ರಾಮೇಗೌಡ ಹಾಗೂ ಸರಸ್ವತಿ ಚಿಮ್ಮಲಗಿ ನಡುವೆಯೇ ಸ್ಪರ್ಧೆ ಏರ್ಪಟ್ಟಿದ್ದೆ. ಇವರಲ್ಲಿ ಯಾರೂ ಗೆದ್ದರೂ ಅದು ಕೋದಲೆಳೆಯ ಅಂತರದಲ್ಲಿ.
ಈಗಾಗಲೇ ಇವರು ರಾಜ್ಯಾದ್ಯಂತ ಸಂಚರಿಸಿ ಹಲವು ಸುತ್ತಿನ ಪ್ರಚಾರ ನಡೆಸಿದ್ದಾರೆ. ಸಾಹಿತಿಗಳು, ಕನ್ನಡಪರ ಹೋರಾಟಗಾರರು, ಮತದಾರರನ್ನು ಸೆಳೆಯುವ ತಂತ್ರದಲ್ಲಿ ತೊಡಗಿದ್ದಾರೆ. ಒಟ್ಟು 3,10,520 ಮತದಾರರು ರಾಜ್ಯವಾರು ಮತದಾನದ ಹಕ್ಕು ಪಡೆದಿದ್ದಾರೆ. ಈ ಮತದಾರರ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಜಿಲ್ಲಾವಾರು ಪ್ರವಾಸ ನಡೆಸಿ ಹಾಲಿ ಜಿಲ್ಲಾಧ್ಯಕ್ಷರು, ಜಿಲ್ಲಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳನ್ನು ಭೇಟಿ ಮಾಡಿ ತಮ್ಮ ಗೆಲುವಿನ ಪ್ರಯತ್ನ ನಡೆಸಿದ್ದಾರೆ.
ಬೆಂಗಳೂರು ಹೊರತುಪಡಿಸಿ ಅತಿಹೆಚ್ಚು ಮತದಾರರನ್ನು ಹೊಂದಿರುವ ಜಿಲ್ಲೆ ಎಂದರೆ ಮಂಡ್ಯ. ಇಲ್ಲಿ 24207 ಮತದಾರರು ಇದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 36,262 ಮತದಾರರು ಇದ್ದಾರೆ. ರಾಜ್ಯಾದ್ಯಂತ ಇದೇ ಮೊದಲ ಬಾರಿಗೆ ಮತದಾನ ಮಾಡಲಿರುವ 1,21,165 ಅರ್ಹ ಮತದಾರರು ಇದ್ದಾರೆ. ಚುನಾವಣಾ ದಿನಾಂಕವಾದಿಂದ ಮೂರು ವರ್ಷಗಳ ಹಿಂದಿನಿಂದ ಸತತವಾಗಿ ಕಸಾಪ ಸದಸ್ಯರಾಗಿರುವವರ ಮಾತ್ರ ಮತದಾನ ಮಾಡಲು ಅರ್ಹರಾಗಿರುತ್ತಾರೆ.
ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಚುನಾವಣಾ ದಿನಾಂಕಕ್ಕೆ 10 ವರ್ಷಗಳ ಹಿಂದಿನಿಂದ ಸತತವಾಗಿ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು 5 ವರ್ಷಗಳ ಹಿಂದಿನಿಂದ ಕಸಾಪ ಸದಸ್ಯರಾಗಿರಬೇಕು. ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಚುನಾವಣಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅವಕಾಶವಿದೆ.
ಬೆಳಗ್ಗೆ 8 ಗಂಟೆಯಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಅಂಚೆಪತ್ರಗಳ ಮತ ಎಣಿಕೆ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷರ ಫಲಿತಾಂಶ ಪ್ರಕಟ, ಕೇಂದ್ರ ಕಸಾಪ ಅಧ್ಯಕ್ಷರ ಚುನಾವಣೆಗೆ ಸಂಬಂಧಿಸಿದ ಮತ ಎಣಿಕೆ ಹಾಗೂ ಫಲಿತಾಂಶ ಘೋಷಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾಧಿಕಾರಿ ಗಂಗಾಧರಸ್ವಾಮಿ ತಿಳಿಸಿದ್ದಾರೆ.
ಮತದಾರರ ಅನುಕೂಲಕ್ಕಾಗಿ ಇದೇ ಮೊದಲ ಬಾರಿಗೆ electionkasapa2020-21 ಮೊಬೈಲ್ ಆ್ಯಪ್‍ನ್ನು ರೂಪಿಸಲಾಗಿದೆ. ಕಸಾಪ ಅಧಿಕೃತ ವೆಬ್‍ಸೈಟ್www.kasapa.in ನಲ್ಲೂ ಸುಲಭವಾಗಿ ವಿವರಗಳನ್ನು ಪಡೆಯುವ ಹಾಗೆ ಹುಡುಕುವ ಆಯ್ಕೆ(ಸರ್ಚಿಂಗ್)ಯನ್ನು ಸಹ ರೂಪಿಸಲಾಗಿದೆ. ಮತದಾರರು ತಮ್ಮ ವಿವರಗಳನ್ನು ಇಲ್ಲಿ ಪಡೆಯಬಹುದಾಗಿದೆ.
# ಶೇಖರಗೌಡ ಮಾಲಿ ಪಾಟೀಲ–
ಕಸಾಪ ಚುನಾವಣೆಯಲ್ಲಿ ಈ ಬಾರಿ ಶೇಖರಗೌಡ ಮಾಲಿ ಪಾಟೀಲ್ಗೆ ಗೆಲುವು ಕಚಿತವೆನ್ನುತ್ತಾರೆ ಸಾಹಿತ್ಯ ಪರಿಷತ್ತಿನ ಕೆಲವರು ಹಾಗೂ ಸ್ವತಃ ಅಭ್ಯರ್ಥಿ..!–
ಕಸಾಪ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಹೆಚ್ಚು ಮತಗಳನ್ನು ಪಡೆಯಬೇಕಿದೆ. ಅಲ್ಲಿ 36 ಸಾವಿರ ಮತಗಳಿದ್ದು, 25 ಸಾವಿರ ಮತದಾನವಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ 5 ಜನರು ಸ್ಪರ್ಧಿಸಿದ್ದು, ಅವರೆಲ್ಲರೂ ಪಡೆಯುವ ಒಟ್ಟು ಮತಗಳನ್ನು ನಾನು ಪಡೆಯುತ್ತೇನೆ ಎನ್ನುತ್ತಾರೆ ಶೇಖರಗೌಡ ಮಾಲಿಪಾಟೀಲ.
ಈ ಸ್ಪರ್ಧೆಗೆ ಕಲ್ಯಾಣ ಕರ್ನಾಟಕ ಪ್ರತಿನಿಧಿಸುತ್ತಿದ್ದರೂ, ಅಖಂಡ ಕರ್ನಾಟಕ ಕಲ್ಪನೆಯ ಹಿನ್ನೆಲೆಯಲ್ಲಿ ಸ್ಪರ್ಧಿಸಿದ್ದೇನೆ. ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಈ ಭಾಗಕ್ಕೆ ಮಾನ್ಯತೆ ಸಿಗಬೇಕಿದೆ. ರಾಜ್ಯ ಎಲ್ಲಾ ಜಿಲ್ಲೆಗಳಲ್ಲಿಯೂ ಒಂದು ಸುತ್ತಿನ ಪ್ರಚಾರ ಕೈಗೊಂಡಿದ್ದೇವೆ. ಇದೀಗ ಮತ್ತೊಂದು ಸುತ್ತಿನ ಪ್ರಚಾರ ಆರಂಭಿಸಿದ್ದು, ಎಲ್ಲೆಡೆ ಗೆಲ್ಲುವ ವಾತಾವರಣ ಸೃಷ್ಟಿಯಾಗಿದೆ. ಜಯಶಾಲಿಯಾಗುವ ಸ್ಪಷ್ಟ ಸೂಚನೆಗಳು ಸಿಕ್ಕಿದೆ ಎನ್ನುವುದು ಶೇಖರಗೌಡ ಮಾಲಿ ಪಾಟೀಲ್ ಅಭಿಪ್ರಾಯವಷ್ಟೇ ಅಲ್ಲ, ಹಲವಾರು ಸಾಹಿತಿಗಳ ಅಂಬೋಣವೂ ಆಗಿದೆ.
# ಮಹೇಶ ಜೋಶಿ–
ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಚುನಾವಣೆಯಲ್ಲಿ ಪರಿಷತ್ತಿನ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ದೂರದರ್ಶನದ ಹೆಚ್ಚುವರಿ ಮಹಾನಿರ್ದೇಶಕರಾಗಿ ನಿವೃತ್ತಿಯಾಗಿರುವ ಡಾ.ಮಹೇಶ ಜೋಶಿ ಅವರೂ ಸ್ಪರ್ಧಿಸಿದ್ದಾರೆ.
‘ನಾನು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂದು ಕರೆದುಕೊಳ್ಳುವುದಿಲ್ಲ. ಆ ಸ್ಥಾನದ ಸೇವಾಕಾಂಕ್ಷಿ. ಅಧಿಕಾರದ ಲಾಲಸೆಯಿಂದ ನಾನು ಸ್ಪರ್ಧಿಸುತ್ತಿಲ್ಲ. ಕನ್ನಡದ ರಾಯಭಾರಿಯಾಗಿ ಕೆಲಸ ಮಾಡಿ ಹೊಸ ದಿಕ್ಕನ್ನು ಸೃಷ್ಟಿಸುವ ಉದ್ದೇಶದಿಂದ ಕಣಕ್ಕಿಳಿಯುತ್ತಿದ್ದೇನೆ’ ಎಂದು ಡಾ.ಮಹೇಶ ಜೋಷಿ ಹೇಳುತ್ತಾರೆ.
‘ಅಧ್ಯಕ್ಷನಾಗಿ ಆಯ್ಕೆಯಾದರೆ, ಕನ್ನಡ ಸಾಹಿತ್ಯ ಪರಿಷತ್ತನ್ನು ಜನರ ಹತ್ತಿರಕ್ಕೆ ತರಲು ಪ್ರಮುಖವಾಗಿ ನಾಲ್ಕು ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಸದಸ್ಯರಾಗಲು ಸರಳೀಕರಣ ವ್ಯವಸ್ಥೆ, ಪರಿಷತ್ತಿನ ಸುಧಾರಣೆ, ಆಡಳಿತದಲ್ಲಿ ಪಾರದರ್ಶಕತೆ, ವ್ಯವಸ್ಥೆಯ ಶುದ್ಧೀಕರಣ ಮಾಡುತ್ತೇನೆ. ಪರಿಷತ್ತಿಗಾಗಿ ಆ್ಯಪ್ ಅಭಿವೃದ್ಧಿ ಪಡಿಸಿ, ಅದರ ಮೂಲಕ ಸದಸ್ಯತ್ವಕ್ಕೆ ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗುವುದು’ ಅನ್ನುತ್ತಾರೆ ಮಹೇಶ್ ಜೋಷಿ.
# ಗಡಿ ಜಿಲ್ಲೆಯಲ್ಲಿ ಸಮ್ಮೇಳನ–
‘ಗಡಿ ಜಿಲ್ಲೆ ಚಾಮರಾಜನಗರಕ್ಕೆ ಹೆಚ್ಚು ಆದ್ಯತೆ ನೀಡಲಾಗುವುದು. ಇಡೀ ರಾಜ್ಯದಲ್ಲಿ ಇದುವರೆಗೆ ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿಲ್ಲ. ನಾನು ಆಯ್ಕೆಯಾದರೆ ಒಂದು ವರ್ಷ ಚಾಮರಾಜನಗರದಲ್ಲಿ ಖಂಡಿತವಾಗಿ ಸಮ್ಮೇಳನ ನಡೆಸಲಾಗುವುದು. ಕನ್ನಡ ಭವನಕ್ಕೆ ನಿವೇಶನ ಇದ್ದರೂ ಕಟ್ಟಡ ಇಲ್ಲ. ಅದ್ದರಿಂದ ಭವನ ನಿರ್ಮಿಸಲಾಗುವುದು. ಗಡಿ ಭಾಗದಲ್ಲಿ ಕನ್ನಡ ಉಳಿಸಲು ಒತ್ತು ನೀಡಲಾಗುವುದು’ ಅನ್ನುತ್ತಾರೆ ಮಹೇಶ ಜೋಶಿ.
# ನಿಯಮಗಳ ಅನುಸಾರ ಸ್ಪರ್ಧೆ–
ಇತ್ತೀಚಿನ ವರ್ಷಗಳಲ್ಲಿ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸಾಹಿತಿಗಳನ್ನು ಬಿಟ್ಟು, ಸಾಹಿತಿಗಳಲ್ಲದವರು, ನಿವೃತ್ತ ಅಧಿಕಾರಿಗಳು ಸ್ಪರ್ಧಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆಯಲ್ಲಾ ಎಂಬ ಪ್ರಶ್ನೆಗೆ ಮಹೇಶ ಜೋಶಿ ಅವರು, ‘ಪರಿಷತ್ತಿನ ಸದಸ್ಯರಾಗಲು ಅಥವಾ ಅಧ್ಯಕ್ಷರಾಗಲು ಸಾಹಿತಿಯೇ ಆಗಬೇಕು ಎಂಬ ನಿಯಮ ಇಲ್ಲ. ಪರಿಷತ್ತಿನ ಸದಸ್ಯರಾಗಿ ಹತ್ತು ವರ್ಷ ಅನುಭವವಿರುವ, ಕನ್ನಡದ ನೆಲ, ಜಲ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ಅರಿವಿರುವ ಯಾರು ಬೇಕಾದರೂ ಸ್ಪರ್ಧಿಸಬಹುದು’ ಅನ್ನುತ್ತಾರೆ ಅವರು
# ಸಿ.ಕೆ.ರಾಮೇಗೌಡ
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಆಯ್ಕೆಯಾದರೆ ಪ್ರಾದೇಶಿಕ ಅಸಮತೋಲನ ನಿವಾರಣೆ ಜತೆಗೆ, ಜಾತಿ ಮತ್ತು ಹಣದ ಪ್ರಾಬಲ್ಯವನ್ನು ಹೋಗಲಾಡಿಸಲು ಆದ್ಯತೆ ನೀಡುವೆ. ನಾಡು-ನುಡಿ ವಿಷಯದಲ್ಲಿ ಪರಿಷತ್ ಸದಾ ಕನ್ನಡಿಗರ ಪರವಾಗಿ ನಿಲ್ಲುವಂತೆ ಮಾಡಲಾಗುವುದು’ ಎಂದು ಪರಿಷತ್ ಚುನಾವಣೆ ಆಕಾಂಕ್ಷಿ ಹಾಗೂ ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ಹೇಳುತ್ತಾರೆ.
‘ಪರಿಷತ್ ನಲ್ಲಿ ದಕ್ಷಿಣ ಕರ್ನಾಟಕದವರದ್ದೇ ಪ್ರಾಬಲ್ಯ ಎಂಬ ಮಾತು ಇದೆ. ಅದಕ್ಕಾಗಿ, ಉತ್ತರ ಕರ್ನಾಟಕ ಭಾಗದವರನ್ನು ಪರಿಷತ್‌ಗೆ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗುವುದು. ಕಾರ್ಯಕಾರಿ ಸಮಿತಿ ನೇಮಕದಲ್ಲೂ ಇದೇ ಮಾನದಂಡ ಅನುಸರಿಸಲಾಗುವುದು’ ಎಂದೂ ಸಿ.ಕೆ.ರಾಮೇಗೌಡ ಅನ್ನುತ್ತಾರೆ.
‘ಗ್ರಾಮಕ್ಕೊಂದು ವಾಚನಾಲಯ, ಪಂಚಾಯ್ತಿಗೊಂದು ಗ್ರಂಥಾಲಯ, ಹೋಬಳಿ ಮಟ್ಟದಲ್ಲಿ ಹಳೆಗನ್ನಡದ ಮರು ಓದು ಹಾಗೂ ಗಮಕ ವಾಚನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂಬುದು ಸಿ.ಕೆ.ರಾಮೇಗೌಡರ ಅಭಿಪ್ರಾಯವಾಗಿದೆ.
ಇದರ ಜೊತೆಯಲ್ಲಿ ಈಗ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯಾಗಿ ರಾಜ್ಯ ಕಸಾಪದ ಚುನಾವಣೆಯಲ್ಲಿ ಗಮನಾರ್ಹ ಅಭ್ಯರ್ಥಿಯಾಗಿ ಗಮನ ಸೆಳೆತ್ತಾರೆ ಡಾ.ಸರಸ್ವತಿ ಚಿಮ್ಮಲಗಿಯವರು.
.ಡಾ.ಸರಸ್ವತಿ ಚಿಮ್ಮಲಗಿಯವರು.
ಕಸಾಪ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾದ ಮೊಲನೇ ಮಹಿಳಾ ಅಭ್ಯರ್ಥಿ ಡಾ.ಸರಸ್ವತಿ ಚಿಮ್ಮಲಗಿಯೂ ಈ ಬಾರಿ ರಾಜ್ಯ ಕಸಾಪದ ಗಮನ ಸೆಳಿದ್ದಾರೆ, ಅಷ್ಟೇ ಅಲ್ಲ ಈ ಕಸಾಪದಲ್ಲಿ ಆಗುಂತಕಳಾಗಿಯೇ ಕಾಣಿಸುತ್ತಿದ್ದಾರೆ ಡಾ.ಸರಸ್ವತಿ. ಚಿಮ್ಮಲಗಿಯವರು. ಅಂದರೆ ಈ ಮಹಿಳೆಯೂ ಈ ಬಾರಿ ಸಾಕಷ್ಟು ಪೈಪೋಟಿಯಲ್ಲಿ ಇರುವಂತೆ ಕಾಣುತ್ತಿದ್ದಾರೆ. ಹೌದು ಈ ಚುನಾವಣೆಯ ಕೊನೆಯ ಘಳಿಗೆಯಲ್ಲಿ ಎಂಬುದು ಎಲ್ಲರಿಗೂ ಮೊದಲ ಬಾರಿ ಹೌದಪ್ಪ ಹೌದು ಶತಮಾನದ ರಾಜ್ಯ ಕಸಾಪದ ಅಧ್ಯಕ್ಷರಾದರೆ, ಅದು ಪುರುಷ ಪ್ರಧಾನ ರಾಜ್ಯ ಕಸಾಪದಲ್ಲಿ ನಿಜವಾಗಿಯೂ ಸರಿಯಾದ ರೀತಿಯ ಆಯ್ಕೆಯಾದಂತೆ ಆಗುತ್ತದೆ ಎಂಬುದೇ ಈ ಬಾರಿ ಎಲ್ಲಾ ಕಸಾಪದ ಸದಸ್ಯರ ಅಂಬೋಣವಾಗಿದೆಯೂ ಕೂಡ..!
105 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದುವರೆಗೂ 25 ಜನ ಪುರುಷರೇ ಅಧ್ಯಕ್ಷರಾಗಿದ್ದಾರೆ. ಇಷ್ಟು ವರ್ಷಗಳ ಕಾಲ ಒಬ್ಬೇ ಒಬ್ಬ ಮಹಿಳಾ ಅಭ್ಯರ್ಥಿಯ ಆಯ್ಕೆ ನಡೆದಿಲ್ಲ. ಅಲ್ಲದೇ ಮಹಿಳೆಯನ್ನು ಕಸಾಪದಿಂದ ಹೊರಗಿಡಲಾಗಿದೆ. ಅದರಿಂದ ಈ ಬಾರಿ ಕಸಾಪಕ್ಕೆ ಈ ಮಹಿಳಾ ಅಭ್ಯರ್ಥಿಗೆ ಕಸಾಪ ಮಣೆ ಹಾಕಬೇಕಾಗಿದೆ.
ಅದ್ದರಿಂದ ಶತಮಾನದ ಇತಿಹಾಸ ಹೊಂದಿರುವ ಕಸಾಪ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಈ ಬಾರಿಯ ಚುನಾವಣೆಯಲ್ಲಿ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಈ ಮಹಿಳಾ ಅಭ್ಯರ್ಥಿಯನ್ನು ಬೆಂಬಲಿಸುವುದೂ ಎಲ್ಲಾ ಪುರುಷ ಮತ್ತು ಸ್ತ್ರೀಯರನ್ನು ಸಮಾನವಾಗಿ ಕಾಣುವ ಪ್ರತಿಯೊಬ್ಬ ಕಸಾಪದ ಸದಸ್ಯರ ಕರ್ತವ್ಯವೂ ಆಗಿದೆ.
ಮಹಿಳಾ ಆಸ್ಮಿತೆಯಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ನಾನು ಮಹಿಳಾ ಮೀಸಲು ಕೇಳುತ್ತಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಬೇಕಾದ ಎಲ್ಲ ಅರ್ಹತೆಗಳು ನನ್ನಲ್ಲಿವೆ. ನಾಡಿನಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದೆ. ಕಸಾಪದಲ್ಲಿ ಇರುವ ಲಿಂಗಬೇಧವನ್ನು ಅಳಿಸಿ ಹಾಕಲು ಮತದಾರರು ಈ ಭಾರೀ ನನ್ನನ್ನು ಬೆಂಬಲಿಸಬೇಕು ಎಂದೂ ಮೊದಲ ಮಹಿಳಾ ಅಭ್ಯರ್ಥಿ ಡಾ.ಸರಸ್ವತಿ ಚಿಮ್ಮಲಗಿಯವರೂ ಕೋರುತ್ತಾರೆ. ಅವರ ಈ ಕೋರಿಕೆಯಲ್ಲಿ ನ್ಯಾಯವೂ ಅಡಗಿದೆ ಎಂಬುದಲ್ಲಿ ಎರಡು ಮಾತಿಲ್ಲ..!
ಅಧ್ಯಕ್ಷೆಯಾಗಿ ಆಯ್ಕೆಯಾದರೆ ಕನ್ನಡ ನಾಡು, ನುಡಿ, ನೆಲ,ಜಲ, ಗಡಿ ಸಮಸ್ಯೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಹೆಚ್ಚಿನ ಕಾಳಜಿ ವಹಿಸಲಾಗುವುದು. ಸಾಹಿತ್ಯಿಕ ಸಂದರ್ಭದ ಎಲ್ಲಾ ಹಂತಗಳಲ್ಲಿ ಮಹಿಳೆಯರಿಗೆ ಸಮಾನ ಆದ್ಯತೆ ನೀಡಲಾಗುವುದು. ತಾಲ್ಲೂಕು ಘಟಕಗಳಿಗೂ ಅಧ್ಯಕ್ಷರ ಆಯ್ಕೆ ಸಂಬಂಧ ಪರಿಷತ್ತಿನ ಬೈಲಾದಲ್ಲಿ ತಿದ್ದುಪಡಿ ತರಲಾಗುವುದೂ ಡಾ.ಸರಸ್ವತಿ ಚಿಮ್ಮಲಗಿ ಅವರ ಮೊದಲ ಘೋಷಣೆಯಾಗಿದೆ.
ಐದು ವರ್ಷದ ಆಡಳಿತಾವಧಿಯಲ್ಲಿ ಎರಡು ಸಾಮಾನ್ಯ, ಎರಡು ಮಹಿಳಾ ಮತ್ತು ಒಂದು ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಲಾಗುವುದು. ನಾಲ್ಕು ವಿಭಾಗಗಳಲ್ಲಿ ಮಹಿಳಾ ಮತ್ತು ದಲಿತ ವಿಶೇಷ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲಾಗುವುದೂ ಎಂಬುದು ಅವರ ಕಳಕಳಿಯಾಗಿದೆ. ಈ ಕಳಕಳಿ ಇಂದು ಮತ್ತು ನಿನ್ನೆಯದಲ್ಲ ಬಹು ದಿನದ ಬೇಡಿಕೆಯೂ ಆಗಿದೆ. ಇದನ್ನು ಮೊದಲ ಬಾರಿಗೆ ಡಾ.ಸರಸ್ವತಿ ಚಿಮ್ಮಲಗಿ ಹೇಳುತ್ತಿಲ್ಲ. ಈ ಮೊದಲೇ ಮಹಿಳಾ ಸಾಹಿತಿಗಳ ಕೋರಿಕೆಯೂ ಆಗಿದೆ.
# ಪರಿಷತ್ತಿಗೂ ಹಾಗೂ ವಿವಿಧ ಅಕಾಡೆಮಿಗಳು, ಸಾಂಸ್ಕೃತಿಕ ಸಂಸ್ಥೆಗಳ ಆತಂಕರಿಕ ಸಂಬಂಧ ಬೆಸೆಯಲು ಆದ್ಯತೆ ನೀಡಲಾಗುವುದು ಎಂಬುದೂ ಅವರ ಪ್ರಮುಖ ಕೊರಿಕೆಯಾಗಿದೆ.
# ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಕನ್ನಡ ಭವನ ಹಾಗೂ ಗ್ರಂಥಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಇಷ್ಟೇ ಅಲ್ಲದೇ ಇನ್ನಿತರ ಕಾರ್ಯ — ಕಲಾಪಗಳೂ ಡಾ.ಸರಸ್ವತಿ ಚಿಮ್ಮಲಗಿಯವರ ಇಂಗಿತದಲ್ಲಿವೆ.
# ರಾಜ್ಯ ಮಟ್ಟದಿಂದ ಹಳ್ಳಿಯವರೆಗೆ ಸಾಹಿತ್ಯ ಸರಸ್ವತಿಯನ್ನು ಕೊಂಡೊಯ್ಯಲಾಗುವುದು, ಗಡಿ ನಾಡು ಸಮ್ಮೇಳನಗಳನ್ನು ಆಯೋಜಿಸಲಾಗುವುದು ಹಾಗೂ ಸದಸ್ಯರ ಮತದಾನದ ಹಕ್ಕು ಬೈಲಾ ತಿದ್ದುಪಡಿ ಮಾಡಲಾಗುವುದು.
# ಕಸಾಪದಲ್ಲಿ 80 ಸಾವಿರ ಮಹಿಳಾ ಮತದಾರರು ಇದ್ದಾರೆ. ಎಲ್ಲರೂ ಬೆಂಬಲಿಸುವ ವಿಶ್ವಾಸವಿದೆ ಡಾ.ಸರಸ್ವತಿ ಚಿಮ್ಮಲಗಿಯವರಿಗಿದೆ.
# ಬಹುಮುಖದ ಡಾ.ಸರಸ್ವತಿ ಚಿಮ್ಮಲಗಿಯವರಿಗೆ ಕನ್ನಡ ಪ್ರಶಸ್ತಿ ಗರಿಯೂ..!
ಸಾಹಿತ್ಯಕ್ಕೂ ಸೈ, ಅಭಿನಯಕ್ಕೂ ಸೈ, ಹೋರಾಟಕ್ಕಂತೂ ಸೈಯೋ ಸೈ ಈ ಎಂದೆಂದಿಗೂ ಜೈ ಎನ್ನುತ್ತಿದ್ದ ಡಾ.ಸರಸ್ವತಿ ಚಿಮ್ಮಲಗಿಗೆ ಬಂದಿದೆಯೂ ರಾಜ್ಯೋತ್ಸವ ಪ್ರಶಸ್ತಿಯೂ..!
ಮಹಿಳೆಯರ ಮೇಲಿನ ಶೋಷಣೆ ವಿರುದ್ಧ ಬರಹದ ಮೂಲಕ ಹೋರಾಟ ಮಾತ್ರವಲ್ಲದೇ, ರಂಗಭೂಮಿ, ರಾಜಕೀಯ, ಕೃಷಿ, ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವಿಜಯಪುರ ಜಿಲ್ಲೆಯ ಸಾಹಿತಿ ಡಾ.ಸರಸ್ವತಿ ಚಿಮ್ಮಲಗಿ ರಾಜ್ಯ ಸರಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದರು.
ವಿಜಯಪುರ ಜಿಲ್ಲೆಯ ಚಿಮ್ಮಲಗಿ ಗ್ರಾಮದ (ಈಗ ಮುಳುಗಡೆಯಾಗಿದ್ದು , ಬುದ್ನಿ ಗ್ರಾಮಕ್ಕೆ ಸ್ಥಳಾಂತರ) ಡಾ.ಸರಸ್ವತಿ ಚಿಮ್ಮಲಗಿ ಅವರು ಕಾವ್ಯ, ಪ್ರಬಂಧ, ವಿಮರ್ಶೆ ಸೇರಿದಂತೆ 22 ಕೃತಿಗಳನ್ನು ಬರೆದಿದ್ದಾರೆ.
ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು, ಮಹಿಳೆಯರ ಮೇಲಿನ ಘೋಷಣೆಗಳ ವಿರುದ್ಧ ಬರಹದ ಮೂಲಕ ಹೋರಾಟ ಮಾಡಿದರು ಆಗಿದ್ದಾರೆ.
ಪ್ರೌಢಶಾಲೆಯಲ್ಲಿದ್ದಾಗಲೇ ಸಾಹಿತ್ಯದತ್ತ ಆಕರ್ಷಿತಳಾದ ಡಾ.ಸರಸ್ವತಿ ಚಿಮ್ಮಲಗಿ, ಗುರುವಿನ ಬಗ್ಗೆ ಮೊದಲ ಕವನ ಬರೆದವರು, ಇವರು ಪದವಿ ಕಲಿಯುವಾಗ ಸಾಹಿತ್ಯದ ಗಮನ ಸೆಳೆದವರು. ಹಾಗೆಯೇ ಪದವಿ ಕಲಿಯುವಾಗ ಸಾಹಿತ್ಯ ಕೃಷಿಗೆ ಹೆಚ್ಚು ತೊಡಗಿಸಿಕೊಂಡವರು, ಆಗಲೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದವರು. ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ ಸರಸ್ವತಿ ಚಿಮ್ಮಲಗಿ, ಕಲಬುರ್ಗಿಯ ಶ್ರೀಮತಿ.ವೀರಮ್ಮ.ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದವರು.
ನಾವೂ ನಿಮ್ಮವರೇ ಸ್ವಾಮಿ (ಕವನ ಸಂಕಲನ), ಕೋಡಿಲ್ಲದ ಕೊಡಗ, ಮುಳ್ಳು ಬೇಲಿ, ಎಡಬಿಡಂಗಿದೇವನ ವಚನಗಳು, ಹಳೇ ನೆನಪು ಹಸಿರಾದಾಗ, ಕಾವ್ಯ ಕುಂಜ, ಕವಿತೆ, ಹಡೆದವ್ವ,ಆಯ್ದ ಎಡಬಿಡಂಗಿದೇವನ ವಚನಗಳು, ಮಹಿಳೆ-ಮದುವೆ-ವಿಚ್ಛೇದನ-ಸಂಶೋಧನೆ, ಅಂತರಂಗ, ಬಾಳು ಕೊಡವ್ವ, ನೋವಾವಿ ಇವರ ಪ್ರಮುಖ ಕವನ ಸಂಕಲನಗಳಾಗಿವೆ.
‘ಸೋಡ ಚೀಟಿ — ಒಂದು ಜಾನಪದ ಅಧ್ಯಯನ’, ಡಾ.ಕಮಲಾ ಹಂಪನ ಕೃತಿಗಳು — ಒಂದು ಅಧ್ಯಯನ, ಸಾಂಗತ್ಯ– ಒಂದು ಪಕ್ಷಿನೋಟ, ಬಸವಪೂರ್ವ ಕಾಲದ ವಚನಕಾರರು, ಅನುಪಮಾ ಅವರ ಮಕ್ಕಳ ಸಾಹಿತ್ಯ, ರಾಜಪುರುಹೋತರ ಜೀವನ ಚರಿತ್ರೆಗಳು, ಜೀವನ ವಿಕಾಸ, ಸಾಕ್ಷರತಾ ಕಿರಣ, ಯುಗದರ್ಶಿನಿ ಸಂಶೋಧನಾ ಕೃತಿಗಳನ್ನು ಹೊರತಂದವರು ಇವರು.
ದಿಲ್ಲಿಯ ಅಖಿಲ ಭಾರತ ಕವಯತ್ರಿಯರ ಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ ಡಾ.ಸರಸ್ವತಿ ಚಿಮ್ಮಲಗಿಯವರು.
ರಂಗಭೂಮಿಯಲ್ಲೂ ಸೇವೆ — ಸಾಹಿತ್ಯ ಮಾತ್ರವಲ್ಲದೇ ರಂಗಭೂಮಿಯಲ್ಲೂ ಆಸಕ್ತಿ ಮೂಡಿಸಿಕೊಂಡಿರುವ ಡಾ.ಸರಸ್ವತಿ ಚಿಮ್ಮಲಗಿ ಅವರು ಹವ್ಯಾಸಿ ಕಲಾವಿದೆ. ಜೋಗಿಬಾವಿ, ಜೋಕುಮಾರಸ್ವಾಮಿ, ಕಾಡುಕುದುರೆ, ನಾಯಕ, ಶಾಂತಲಾ, ಕತ್ತಲೆ-ಬೆಳಕು, ತಾಳಿ ಕಟ್ಟೋಕ ತಯಾರ, ಧ್ವನಿ-ಬೆಳಕು, ಚಿಂಗಾರಿ ನಾಟಕ, ದೂರದರ್ಶನದಲ್ಲಿ ಪ್ರದರ್ಶನಗೊಂಡ ‘ಅಕ್ಕಮ್ಮನ ಶಾಲೆ, ಹೊಸ ಹಾದಿ, ನೆರೆಹೊರೆಯವರು, ಅವ್ವನ ಜಡ್ಡು, ಜೀವನ ಜೋಕಾಲಿ ನಾಟಕದಲ್ಲಿ ಅಭಿನಯಿಸಿದ್ದಾರೆ. ಇವರ ಮನೋಜ್ಞ ಅಭಿನಯಕ್ಕೆ ರಂಗಾಸಕ್ತರಿಂದ ಶಹಬ್ಬಾಸ್ ಗಿರಿ ಪಡೆದುಕೊಂಡಿದ್ದಾರೆ.
# ಈಗ ರಾಜ್ಯೋತ್ಸವ ಗರಿಯೂ — ಶಾಲಾ, ಕಾಲೇಜು ದಿನಗಳಲ್ಲಿ ಅತ್ಯುತ್ತಮ ಕ್ರೀಡಾಪಟು ಆಗಿರುವ ಡಾ.ಸರಸ್ವತಿ ಚಿಮ್ಮಲಗಿ, ಜಾವೆಲಿನ್, ಡಿಸ್ಕಸ್ ಥ್ರೋ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದಾರೆ. ಬಹುಮುಖ ಪ್ರತಿಭೆಯ ಡಾ.ಸರಸ್ವತಿ ಚಿಮ್ಮಲಗಿ ಅವರಿಗೆ ದಾನಾ ಚಿಂತಾಮಣಿ ಅತ್ತಿಮಬ್ಬೆ , ಅಂತಾರಾಷ್ಟ್ರೀಯ ಮಹಿಳಾ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರತಿಷ್ಠಾನ ಕೊಡ ಮಾಡುವ ನವರತ್ನ ಪ್ರಶಸ್ತಿ, ಮಹಾಂತಜ್ಯೋತಿ ಪ್ರತಿಷ್ಠಾನದ ಕಲಾ ಜ್ಯೋತಿ ಪ್ರಶಸ್ತಿ, ಸಮಾಜ ಕಲ್ಯಾಣ ಇಲಾಖೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸಿಗಳೂ ದಕ್ಕಿವೆ.
ಅಷ್ಟೇಯಲ್ಲದೇ ಇಂಗ್ಲೆಂಡ್ ದೇಶದ ‘ಟೆಂಟ್ವಿಯತ್ ಸೆಂಚೂರಿ ಅವಾರ್ಡ್ ಫಾರ್ ಅಚೀವಮೆಂಟ್ಸ್’, ಈಜಿಪ್ಟ್ ದೇಶದಿಂದ ಡಾಟರ್ ಆಫ್ ನೈಲ್, ದುಬೈನ ‘ಯೂ ಆಫ್ ದಿ ಎರಾ’, ಟರ್ಕಿ ದೇಶದ ‘ಫಸ್ಟ್ ಮಿಸ್ ಎಐಪಿಸಿ ವರ್ಲ್ಡ್’ ಅವಾರ್ಡ್‌ಗೆ ಭಾಜನರಾಗಿದ್ದಾರೆ. ಕೃಷಿಯಲ್ಲಿ ತೊಡಗಿಸಿಕೊಂಡಿರುವ ಡಾ.ಸರಸ್ವತಿ ಚಿಮ್ಮಲಗಿ ಅವರಿಗೆ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿಯೂ ಲಭಿಸಿದೆ. ಈಗ ಸಾಹಿತ್ಯ ಕ್ಷೇತ್ರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ. 2008 ರಲ್ಲಿ ಬಬಲೇಶ್ವರ ಮತ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗದೇ ಬಿಎಸ್ಪಿಯಿಂದ ಚುನಾವಣೆಗೂ ಸ್ಪರ್ಧಿಸಿ ಸೋತವರು ಡಾ.ಸರಸ್ವತಿ ಚಿಮ್ಮಲಗಿಯವರು.
# ಡಾ.ಸರಸ್ವತಿ ಚಿಮ್ಮಲಗಿ ಉವಾಚ–
ನನಗೆ ತಡವಾಗಿಯಾದರೂ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದಕ್ಕೆ ಖುಷಿಯಾಗಿದೆ. ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ನನಗೆ ಪ್ರಶಸ್ತಿ ಬಂದಿದ್ದು , ಜಿಲ್ಲೆಯ ಎಲ್ಲಸಾಹಿತಿಗಳಿಗೂ, ಸಾಹಿತ್ಯಾಭಿಮಾನಿಗಳಿಗೆ ಸಂದ ಗೌರವವೇ ಆಗಿದೆ ಎಂದು ಡಾ.ಸರಸ್ವತಿ ಚಿಮ್ಮಲಗಿ ಹೇಳುತ್ತಾರೆ.
# ಹೀಗೆಯೇ ಮತ್ತೊಬ್ಬ ಕಸಾಪದ ಅಧ್ಯಕ್ಷೀಯ ಆಶಾದಾಯಕದಲ್ಲಿರುವ ಸಂಗಮೇಶ ಬಾದವಾಡಗಿಯವರು ತಮ್ಮದೇ ಉವಾಚವನ್ನು ಹೀಗೆ ಹೇಳುತ್ತಾರೆ.
ಸಂಗಮೇಶ ಬಾದವಾಡಗಿ
ನಾನು ಕಸಾಪದ ಅಧ್ಯಕ್ಷನಾದರೆ ‘ಕನ್ನಡ ಅನ್ನದ ಭಾಷೆಯಲ್ಲ ಎನ್ನುವ ಅಭಿಪ್ರಾಯವನ್ನು ಅಳಿಸಿ ಹಾಕುವ ದಿಶೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕಾರದೊಂದಿಗೆ ಉದ್ಯೋಗ ಆಧಾರಿತವಾದ ಭಾಷೆಯನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತೇನೆ. ಸರ್ಕಾರಿ ಉದ್ಯೋಗದಲ್ಲಿ ಕನ್ನಡ ಮಾಧ್ಯಮದವರಿಗೆ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸುತ್ತೇನೆ’ ಹೇಳುತ್ತಿದ್ದಾರೆ.
‘ಪರಿಷತ್ತು-ಹಳ್ಳಿಗಳ ಸುತ್ತು’ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಮಟ್ಟಕ್ಕೂ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ರಿಯಾ ಚಟುವಟಿಕೆಗಳನ್ನು ವಿಸ್ತರಿಸುತ್ತೇನೆ ಹಾಗೂ ತಾಲ್ಲೂಕು ಮತ್ತು ಹೋಬಳಿಗಳ ಮಟ್ಟದಲ್ಲಿ ಕನ್ನಡ ಭವನಗಳನ್ನು ನಿರ್ಮಿಸಲು ಆದ್ಯತೆ ನೀಡುತ್ತೇನೆ ಎಂದೂ ಹೇಳುತ್ತಾರೆ ಸಂಗಮೇಶ ಬಾದವಾಡಗಿ.
‘ಪರಿಷತ್ತಿನ ಕೇಂದ್ರೀಕೃತ ಆಡಳಿತ ಹಾಗೂ ಸಾಹಿತ್ಯಿಕ ಚಟುವಟಿಕೆಗಳ ಸಂಘಟನೆಯನ್ನು ವಿಭಾಗೀಯ ಮಟ್ಟಕ್ಕೆ ವಿಸ್ತರಿಸಿ, ವಿಕೇಂದ್ರೀಕರಣದ ನಾಂದಿಯೊಂದಿಗೆ ಪ್ರಾದೇಶಿಕ ನ್ಯಾಯ, ಪ್ರತಿಭಾ ನ್ಯಾಯ, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸಾಕಾರಗೊಳಿಸುವುದು. ಗಡಿಭಾಗದಲ್ಲಿ ಕನ್ನಡಮಯ ವಾತಾವರಣವನ್ನು ಸೃಜನಗೊಳಿಸುವುದು, ಗಡಿ ಉತ್ಸವದಂತೆಯೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇನೆ ಅನ್ನುತ್ತಾರೆ ಸಂಗಮೇಶ ಬಾದವಾಡಗಿಯವರೂ..!
ಪ್ರಾಚೀನ ಭಾಷೆಯ ಹಿರಿಮೆಯುಳ್ಳ ಕನ್ನಡದ ಪ್ರಾತಿನಿಧಿಕ ಸಂಸ್ಥೆ ಆಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವ ವಹಿಸುವವರ ಆಯ್ಕೆಗಾಗಿ ಚುನಾವಣೆ ಸನ್ನಿಹಿತವಾಗಿದೆ. 105 ವರ್ಷಗಳ ಸುದೀರ್ಘವಾದ ಇತಿಹಾಸ ಹೊಂದಿರುವ ಈ ಸಂಸ್ಥೆಯ ಮಹತ್ವವನ್ನು ಎತ್ತಿ ಹಿಡಿದು ಭವಿಷ್ಯತ್ತಿನಲ್ಲಿ ಪ್ರಸ್ತುತತೆಯನ್ನು ಉಳಿಸಿಕೊಳ್ಳಬೇಕಾದ ದೊಡ್ಡ ಹೊಣೆ ಗಾರಿಕೆ ಕೂಡ ಹೊಸ ಪದಾಧಿಕಾರಿಗಳ ಮೇಲೆ ಇದೆ.
ಶತಮಾನದ ಹಿಂದೆ ಆರಂಭವಾದ ಪರಿಷತ್ತಿನ ಆಸೆ, ಆಶೋತ್ತರಗಳು, ಉದ್ದೇಶಗಳು ಮತ್ತು ಕಾರ್ಯ ವಿಧಾನಗಳ ಮುಂದುವರಿಕೆ ಜತೆಗೆ ಬದಲಾದ ಸನ್ನಿವೇಶಕ್ಕೆ ತಕ್ಕಂತೆ ರೂಪರೇಶ, ಕಾರ್ಯಚಟುವಟಿಕೆಗಳು ಮಾರ್ಪಾಟು ಆಗಬೇಕಾದ ಅನಿವಾರ್ಯ ಕೂಡ ಸೃಷ್ಟಿ ಆಗಿದೆ.
ಏಕೆಂದರೆ ಕನ್ನಡ ಸಾಹಿತ್ಯ ಪರಿಷತ್ತು ಆರಂಭವಾದಾಗ ಇದ್ದ ಜನಸಂಖ್ಯೆ, ಕನ್ನಡಿಗರು ಮತ್ತು ಅನ್ಯ ಭಾಷಿಗರ ಸಂಖ್ಯಾಬಲಕ್ಕೂ ಜತೆಗೆ ಈಗಿನ ಸಂದರ್ಭಕ್ಕೂ ಅಜಗಜಾಂತರವಿದೆ ವ್ಯತ್ಯಾಸವಿದೆ. ಸನ್ನಿವೇಶಕ್ಕೆ ತಕ್ಕಂತೆ ಕನ್ನಡ ಕಾಯಕವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ನಿತ್ಯೋತ್ಸವ ಆಗಬೇಕಾದ ಆವಶ್ಯಕತೆ, ಶತಮಾನದ ಹಿಂದಿನ ಪರಿಷತ್ತು ಹುಟ್ಟಿಕೊಂಡ ರೀತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ನಡೆಯಬೇಕಿದೆ.
ಕನ್ನಡಿಗರ ಪ್ರಾತಿನಿಧಕ ಸಂಸ್ಥೆ ಆಗಿರುವ ಕನ್ನಡ ಸಾಹಿತ್ಯ ಪರಿಷತ್ತು ಚಿಗುರೊಡೆದ ರೀತಿ ಮತ್ತು ಸಾಗಿಬಂದ ದಾರಿ ಕುತೂಹಲಕಾರಿ ಆಗಿದೆ. ಬ್ರಿಟಿಷ್ ಆಡಳಿತ ಅವಧಿಯಲ್ಲಿ ಅಲ್ಲಲ್ಲಿ ಚದುರಿ ಹೋಗಿದ್ದ ಕನ್ನಡಿಗರನ್ನು, ಕನ್ನಡ ಭಾಷೆ ಮತ್ತು ಈ ನೆಲದ ಸಂಸ್ಕೃತಿಯನ್ನು ಒಂದುಗೂಡಿಸುವ ಹಿನ್ನೆಲೆಯಲ್ಲಿ ಜನ್ಮತಳೆದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ಆಗಿದೆ. ಇದರ ಜತೆಗೆ ಕನ್ನಡ ಭಾಷೆಯಲ್ಲಿ ವಿವಿಧ ಗ್ರಂಥಗಳನ್ನು ರಚಿಸುವವರ ಪ್ರೋತ್ಸಾಹಕ್ಕಾಗಿ ರೂಪಿತವಾದ ಸಂಸ್ಥೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
# ಕನ್ನಡ ಸಾಹಿತ್ಯ ಪರಿಷತ್ತಿನ ಅವಶ್ಯಕತೆಯೂ
ಈ ಹಿಂದೆ ಕನ್ನಡ ಭಾಷೆ ಮಾತನಾಡುವ ಪ್ರಾಂತ್ಯಗಳು ಹರಿದು ಹಂಚಿಹೋಗಿದ್ದವು. ಅವೆಲ್ಲವೂ ಬೇರೆ ಬೇರೆ ಆಡಳಿತಕ್ಕೆ ಸೇರ್ಪಡೆ ಯಾಗಿದ್ದವು. ಬೊಂಬಾಯಿ, ಮದರಾಸು, ಮೈಸೂರು, ಹೈದರಾ ಬಾದ್ ಸಂಸ್ಥಾನಗಳಿಗೆ ಕನ್ನಡ ಭಾಷೆಯನ್ನು ಮಾತನಾಡುವ ಹಲವು ಪ್ರದೇಶಗಳು ಸೇರ್ಪಡೆಗೊಂಡಿದ್ದವು. ವಿಶೇಷ ಅಂದರೆ ಈಗಿನ ಕೊಡಗು ಕೂಡ ಒಂದು ಪ್ರತ್ಯೇಕ ಆಳ್ವಿಕೆಗೆ ಒಳಪಟ್ಟಿತ್ತು.
ಬ್ರಿಟಿಷ್ ಆಡಳಿತಕ್ಕೆ ಸೇರಿದ್ದ ಮದರಾಸು, ಬೊಂಬಾಯಿ, ಪ್ರಾಂತ್ಯಗಳಲ್ಲಿ ದ್ವೀಪಗಳಂತೆ ಈಗಿನ ಸೊಂಡೂರು, ಸವಣೂರು, ರಾಮದುರ್ಗ ಸೇರಿದಂತೆ ಇನ್ನೂ ಅನೇಕ ಸಂಸ್ಥಾನಗಳು ಸೇರಿಕೊಂಡಿದ್ದವು. ಆ ಹಿನ್ನೆಲೆಯಲ್ಲಿ ಕನ್ನಡ ಭಾಷೆಯನ್ನು ಮಾತನಾಡುವವರು ಕೂಡ ಒಂದೊಂದು ಪ್ರಾಂತ್ಯಗಳಿಗೆ ಚದುರಿ ಹೋಗಿದ್ದರು. ಜತೆಗೆ ಭಿನ್ನ-ಭಿನ್ನ ಆಡಳಿತ ಘಟಕದ ಹಿಡಿತದಲ್ಲಿದ್ದರು.
ಈ ಕಾರಣದಿಂದಾಗಿಯೇ ಕನ್ನಡಿಗರು ಆಡುತ್ತಿದ್ದ ಭಾಷೆಯ ಮೇಲೆ ಅನ್ಯ ಭಾಷಿಕರ ಮತ್ತು ಭಾಷೆಯ ಪ್ರಭಾವವಿತ್ತು. ಅವರು ಮಾತನಾಡು ಶೈಲಿಯಲ್ಲೂ ಕೂಡ ಬಹಳಷ್ಟು ವ್ಯತ್ಯಾಸವಿತ್ತು. ಈ ಎಲ್ಲ ಕಾರಣ ಗಳಿಂದಾಗಿಯೇ ಆಯಾ ಭಾಗದಲ್ಲಿ ನೆಲೆಸಿದ್ದ ಕನ್ನಡಿಗರು ಅಪರಿಚಿತರಂತೆ ವ್ಯವಹರಿಸುವ ಪರಿಸ್ಥಿತಿ ಉಂಟಾಗಿತ್ತು. ಹೀಗಾಗಿ ಬೇರೆ ಬೇರೆ ಪ್ರಾಂತ್ಯಗಳಿಗೆ ಒಳಪಟ್ಟಿದ್ದ ಕನ್ನಡಿಗರು ಕನ್ನಡ ಭಾಷೆ, ಸಂಸ್ಕೃತಿ ಸಂರಕ್ಷಣೆ ಮತ್ತು ಅಭಿವೃದ್ದಿಯ ಆವಶ್ಯಕತೆಯನ್ನು ಮನಗಂಡರು. ಆಗಲೇ ಮೈಸೂರಿನಲ್ಲಿ ಕನ್ನಡಿಗರನ್ನು ಒಂದಾಗಿಸು ಕನಸು ಚಿಗುರೊಡೆಯಿತು.
# ಮೈಸೂರು ಒಡೆಯರ್ ಪರಿಕಲ್ಪನೆ
– ಮೈಸೂರು ಸಂಸ್ಥಾನದ ಅಂದಿನ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಈ ಬಗ್ಗೆ ಯೋಜನೆ ರೂಪಿಸಿದರು. ಈ ಕಾರ್ಯದ ಸಲಹೆ ಸೂಚನೆಗಳನ್ನು ನೀಡಲು ಅವರು ಮೈಸೂರು ಸಂಪದಭ್ಯುದಯ ಸಮಾಜ (ಮೈಸೂರು ಎಕನಾಮಿಕ್ ಕಾನ್ಫರೆನ್ಸ್) ರಚಿಸಿದ್ದರು. ವಿದ್ಯಾ ವಿಷಯಗಳಿಗಾಗಿ ಯೋಜನೆಗಳನ್ನು ರೂಪಿಸುವ ಕಾರ್ಯವನ್ನು ಎಚ್.ನಂಜುಂಡಯ್ಯ ವಹಿಸಿದರು.
ಮುಂದಿನ ದಿನಗಳಲ್ಲಿ ‘ವಿದ್ಯಾ ವಿಷಯಕ ಮಂಡಳಿ’ ಸ್ಥಾಪನೆಯಾಯಿತು. 1914ರಲ್ಲಿ ಈ ಮಂಡಳಿಯು ಕರ್ಣಾಟಕ ಭಾಷೆಯಲ್ಲಿ ವಿವಿಧ ಗ್ರಂಥಗಳನ್ನು ರಚಿಸುವವರ ಪ್ರೋತ್ಸಾಹಕ್ಕಾಗಿಯೇ ಸ್ವತಂತ್ರ ಅಧಿಕಾರವುಳ್ಳ ಪರಿಷತ್ತು ಇರಬೇಕು ಮತ್ತು ಸರಕಾರ ಆ ಪರಿಷತ್ತನ್ನು ಅಂಗೀಕರಿಸಿ ಅದಕ್ಕೆ ವಿಶೇಷ ಸಹಾಯ ಮಾಡುವುದು ಉಚಿತ ಎಂಬ ಶಿಫಾರಸನ್ನು ಸರಕಾರಕ್ಕೆ ಮಾಡಿತು.
ಅನಂತರ 1915ರ ಮೇ ತಿಂಗಳ 6ರಂದು ಅಪರಾಹ್ನ 3ಕ್ಕೆ ಬೆಂಗಳೂರಿನ ಸರಕಾರಿ ಹೈಸ್ಕೂಲ್ ಮೈದಾನದಲ್ಲಿ ಮೊದಲ ಸಮ್ಮೇಳನ ನಡೆಯಿತು. ಧಾರವಾಡ, ಬಿಜಾಪುರ, ಕಾರವಾರ, ಬೊಂಬಾಯಿ, ಮದರಾಸು, ಬಳ್ಳಾರಿ, ದಕ್ಷಿಣ ಕನ್ನಡ ಭಾಗದ ಅನೇಕ ಜನಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಜತೆಗೆ ವಿವಿಧ ಪತ್ರಿಕೆಗಳ ಸಂಪಾದಕರು ಕೂಡ ಇದ್ದರು.1915ರಲ್ಲಿ ಕಸಾಪದ ಮೊದಲ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಎಚ್.ವಿ. ನಂಜುಂಡಯ್ಯ ಅವರು 1960ರ ವರೆಗೆ ಕಾರ್ಯ ನಿರ್ವಹಿಸಿದರು.
ಅಲ್ಲಿಂದ ಈಗಿನ ಅಧ್ಯಕ್ಷ ಮನು ಬಳಿಗಾರ್ ವರೆಗೂ ಸುಮಾರು 25 ಮಂದಿ ಅಧ್ಯಕ್ಷರನ್ನು ಕನ್ನಡ ಸಾಹಿತ್ಯ ಪರಿಷತ್ತು ಕಂಡಿದೆ. ಮೈಸೂರು ಮಹಾರಾಜರ ಆಶ್ರಯದ ಅನಂತರ ರಾಜ್ಯ ಸರಕಾರದ ಆಶ್ರಯ ಪಡೆದು ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಕೇಂದ್ರವಾಗಿ ಬೆಳೆದು ನಿಂತಿದೆ ಕನ್ನಡ ಸಾಹಿತ್ಯ ಪರಿಷತ್ತು.
# ಮತದಾರರ ಸಂಖ್ಯೆ ದ್ವಿಗುಣವೂ– ವರ್ಷದಿಂದ ವರ್ಷಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಸಂಖ್ಯೆ ದ್ವಿಗುಣವಾಗುತ್ತಿದೆ. 2016ರಲ್ಲಿ 1,89,355 ಇದ್ದ ಮತದಾರರ ಸಂಖ್ಯೆ 2021ರ ಹೊತ್ತಿಗೆ 3,10,520ಕ್ಕೆ ಬಂದು ತಲುಪಿದೆ. ಸದ್ಯ ಚುನಾವಣಧಿಕಾರಿಗಳು ನೀಡಿರುವ ಅಂಕಿ- ಅಂಶದಂತೆ 3,10,520 ಮಂದಿ ಮತದಾರರಿದ್ದಾರೆ. ಇದರಲ್ಲಿ 33 ಪೋಷಕರು, 22 ದಾತೃಗಳು,138 ಆಜೀವ ಅಂಗ ಸಂಸ್ಥೆಗಳು ಸದಸ್ಯ ಮತದಾರರಿದ್ದಾರೆ. ಆ ಪೈಕಿ ರಾಜ್ಯದಲ್ಲಿ 3,05,643 ಸದಸ್ಯರು ನೆಲೆಸಿದ್ದಾರೆ. ಆಂಧ್ರಪ್ರದೇಶದಲ್ಲಿ 2289, ಮಹಾರಾಷ್ಟ್ರದಲ್ಲಿ 458, ಕೇರಳ 526 ಮತ್ತು ಗೋವಾದಲ್ಲಿ 433 ಸದಸ್ಯರಿದ್ದಾರೆ. ಹಾಗೆಯೇ ಹೊರ ರಾಜ್ಯದಲ್ಲಿ 82 ಮತ್ತು ಹೊರ ದೇಶದಲ್ಲಿ 23 ಸದಸ್ಯರಿದ್ದಾರೆ.
# ಚುನಾವಣೆಗೆ ನಿಲ್ಲಲು ಅರ್ಹರಲ್ಲದವರೂ– ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ನಿಲ್ಲಲು ಹಲವು ರೀತಿಯ ನಿಬಂಧನೆಗಳಿವೆ. ಪರಿಷತ್ತಿನಲ್ಲಿ ಬಾಕಿ ಉಳಿಸಿಕೊಂಡಿ ರುವವರು ಹಾಗೂ ಕೋರ್ಟಿನಿಂದ ಶಿಕ್ಷೆಗೆ ಒಳಗಾದವರು ಚುನಾವಣೆಯಲ್ಲಿ ಸ್ಪರ್ಧಿಸುವ ಹಾಗೆಯೇ ಇಲ್ಲ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿ ಕನ್ನಡ ಬಲ್ಲವರಾಗಿರಬೇಕು. ಚುನಾವಣ ತಾರೀಖೀಗೆ 10 ವರ್ಷ ಹಿಂದಿನಿಂದ ಸತತವಾಗಿ ಪರಿಷತ್ತಿನ ಸದಸ್ಯರಾಗಿರತಕ್ಕದ್ದು.
ಅಲ್ಲದೇ ಕನ್ನಡ ಭಾಷೆ, ಸಂಸ್ಕೃತಿ ವಿಚಾರದಲ್ಲಿ ಸೇವೆ ಮಾಡಿರಬೇಕು. ಒಂದು ಸಾರಿ ಅಧ್ಯಕ್ಷರಾಗಿ ಚುನಾಯಿತರಾದವರು ಮುಂದಿನ ಅವಧಿ ಕಳೆದ ಅನಂತರ ಸ್ಪರ್ಧಿಸಲು ಮಾತ್ರ ಅವಕಾಶ. ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಮತ್ತು ಕೋಶಾಧ್ಯಕ್ಷರು ತಮ್ಮ ಅಧಿಕಾರ ಅವಧಿಯಲ್ಲಿ ಬೆಂಗಳೂರಿನಲ್ಲೇ ವಾಸಿಸಬೇಕು. ಒಂದು ವರ್ಷಕ್ಕೆ ಮೀರಿ ಅಧ್ಯಕ್ಷರು ಗೈರು ಹಾಜರಾದರೆ ಆ ಸ್ಥಾನ ತೆರವಾಗಿದೆ ಎಂದೇ ಪರಿಗಣಿಸಲಾಗುವುದು ಎಂಬುವುದು ಕೂಡ ಕಸಾಪ ಬೈಲಾದಲ್ಲಿ ಸೇರಿದೆ.
# ಪರಿಷತ್ತಿನ ಅಧ್ಯಕ್ಷರಾಗಿದ್ದ ಸಾಹಿತಿಗಳು:
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನವನ್ನು ಘಟಾನುಘಟಿಗಳು ಅಲಂಕರಿಸಿದ್ದಾರೆ. ಕನ್ನಡಪರ ಹೋರಾಟಗಾರರು ಪರಿಷತ್ತನ್ನು ಆಳಿದ್ದಾರೆ. ರಾಜ ಸೇವಾಧುರೀಣ ಸರ್.ಎಂ.ಕಾಂತರಾಜ ಅರಸ್, ಕಂಠೀರವ ನರಸಿಂಹರಾಜ ಒಡೆಯರ್ ಬಹದ್ದೂರ್, ಒಂಟಿಮುರಿಯ ಶ್ರೀಮಂತ ಬಸವಪ್ರಭು ರಾಜಾ ಲಖಮನಗೌಡ ಸರದೇಸಾಯಿ ಬಹದ್ದೂರ್, ಜಸ್ಟೀಸ್ ಲೋಕೂರ್ ನಾರಾಯಣರಾವ್ ಸ್ವಾಮಿರಾವ್ ಸೇರಿದಂತೆ ಹಲವು ಧೀಮಂತರು ಕಸಾಪ ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ.
ಇವರ ಜತೆಗೆ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಸಾಹಿತಿ ತಿರುಮಲೆ ತಾತಾಚಾರ್ಯ ಶರ್ಮ, ರೆವರೆಂಡ್ ಉತ್ತಂಗಿ ಚೆನ್ನಪ್ಪ, ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್. ಮೂರ್ತಿರಾವ್, ಬಿ.ಶಿವಮೂರ್ತಿ ಶಾಸ್ತ್ರಿ, ಪ್ರೊ.ಜಿ.ವೆಂಕಟಸುಬ್ಬಯ್ಯ, ಡಾ.ಹಂಪಾ ನಾಗರಾಜಯ್ಯ, ಪ್ರೊ.ಎಸ್.ಜಿ. ಸಿದ್ದಲಿಂಗಯ್ಯ, ಗೊ.ರು. ಚನ್ನಬಸಪ್ಪ, ಡಾ.ಸಾ.ಶಿ. ಮರುಳಯ್ಯ, ಎನ್. ಬಸವರಾಧ್ಯ, ಚಂದ್ರಶೇಖರ ಪಾಟೀಲ, ಡಾ.ನಲ್ಲೂರು ಪ್ರಸಾದ್ ಸೇರಿದಂತೆ ಹಲವರು ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಜಿ. ನಾರಾಯಣ್, ಎಚ್.ಬಿ. ಜ್ವಾಲನಯ್ಯ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಪುಂಡಲೀಕ ಹಾಲಂಬಿ, ಡಾ.ಮನು ಬಳಿಗಾರ್ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
# ಬೈಲಾ ತಿದ್ದುಪಡಿಯೂ
ಸಾಹಿತ್ಯ ಕ್ಷೇತ್ರದ ಸಾಧಕರು ಮತ್ತು ಕನ್ನಡಪರ ಹೋರಾಟ ಗಾರರು ಮತ್ತು ಸರಕಾರಿ ಸೇವೆಯಿಂದ ನಿವೃತ್ತಿ ಪಡೆದವರು ಪರಿಷತ್ತಿನನ್ನು ಆಳಿದ್ದಾರೆ. ಪುಂಡಲೀಕ ಹಾಲಂಬಿ ಅವರವರೆಗೂ ಪ್ರತೀ ಮೂರು ವರ್ಷಗಳಿಗೊಮ್ಮೆ ನಡೆಯುತ್ತಿದ್ದ ಪರಿಷತ್ತಿನ ಚುನಾವಣೆಗೆ ಹಾಲಿ ಅಧ್ಯಕ್ಷ ಮನು ಬಳಿಗಾರ್ ಅವರು ಹೊಸ ಬದಲಾವಣೆಗೆ ನಾಂದಿ ಹಾಡಿದರು. ಹಲವು ವಿರೋಧಗಳ ನಡುವೆಯೂ ಉಡುಪಿಯಲ್ಲಿ ಕಾರ್ಯಕಾರಿಣಿ ಸಭೆ ನಡೆಸಿ ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಾಕ್ಕೆ ತಿದ್ದುಪಡಿ ತಂದು ಆಡಳಿತ ಅವಧಿಯನ್ನು ಐದು ವರ್ಷಕ್ಕೆ ವಿಸ್ತರಣೆ ಮಾಡಿದರು.
ಕನ್ನಡ ಪರ ಹೋರಾಟಗಾರರು, ಸಾಹಿತಿಗಳು, ಸಹಕಾರ ಕ್ಷೇತ್ರದ ಧುರೀಣರು, ಸರಕಾರಿ ಅಧಿಕಾರಿಗಳು ಈ ಬಾರಿಯ ಸ್ಪರ್ಧಾ ಅಖಾಡದಲ್ಲಿದ್ದಾರೆ. ವಿಶೇಷ ಅಂದರೆ 105 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ವಿಜಯಪುರ ಮೂಲದ ಲೇಖಕಿ ಡಾ| ಸರಸ್ವತಿ ಚಿಮ್ಮಲಗಿ ಅವರು ಕೂಡ ಹೋರಾಟದ ಕಣದಲ್ಲಿದ್ದಾರೆ.
ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟಿಕೆ, ಕಾವೇರಿ ನದಿ ವಿಚಾರದಲ್ಲಿ ಆಗಾಗ್ಗೆ ತಮಿಳುನಾಡಿ ನೊಂದಿಗೆ ಮುನಿಸು, ಕನ್ನಡ ಶಾಲೆಗಳ ಕಣ್ಮರೆ, ರಾಜಧಾನಿ ಬೆಂಗಳೂರಿನಲ್ಲಿ ಅನ್ಯ ಭಾಷಿಗರ ಪ್ರಭಾವ ಇಂತಹ ಸಮಯದಲ್ಲಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಗೆ ದಕ್ಷ ಆಡಳಿತಗಾರರ ಆವಶ್ಯಕತೆಯಿದೆ. ಕನ್ನಡ ನೆಲ, ಜಲ, ಭಾಷೆಯ ಉಳಿವಿಗಾಗಿ ಹೋರಾಟ ನಡೆಸುವ ಅಗತ್ಯವಿದೆ. ಈ ಚುನಾವಣೆ ದಕ್ಷ ಆಡಳಿತಗಾರರಿಗೆ ದಾರಿ ಆಗಲಿ, ಭಾಷೆ ಬೆಳಗುವ ಕಟ್ಟಾಳು ಬರಲಿ ಎಂಬುದು ಕನ್ನಡಿಗರ ಆಶಯವೂ ಆಗಿದೆ..!
–ಕೆ.ಶಿವು ಲಕ್ಕಣ್ಣವರ
#