ಮಸ್ಕಿ : ಕಳೆದ 15 ದಿನಗಳ ಹಿಂದೆ ಮಸ್ಕಿ ಹಳ್ಳದಲ್ಲಿ ಪ್ರವಾಹಕ್ಕೆ ಸಿಲುಕಿ ಕೊಚ್ಚಿಕೊಂಡ ಹೋದ ಚನ್ನಬಸವ ಮಡಿವಾಳ ಅವರ ಕುಟುಂಬಕ್ಕೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಕಾಡಾ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ ಅವರು ವಯಕ್ತಿಕವಾಗಿ 50 ಸಾವಿರ ರೂ ಸಹಾಯ ಧನವನ್ನು ಸೋಮವಾರ ವಿತರಿಸಿದರು.
ಪಟ್ಟಣದ ಮುದುಗಲ್ ಕ್ರಾಸ್ ಹತ್ತಿರ ಇರುವ ಚನ್ನಬಸವ ಮನೆಗೆ ಬೇಟಿ ನೀಡಿ ಚನ್ನಬಸವನ ಪತ್ನಿ ನೇತ್ರಮ್ಮಳಿಗೆ ಮತ್ತು ಕುಟುಂಬ ವರ್ಗದವರಿಗೆ ಸಾಂತ್ವಾನ ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಚನ್ನಬಸವನ ಕುಟುಂಬ ತುಂಬಾ ತೊಂದರೆಯಲ್ಲಿದೆ. ಮನೆಗೆ ಆದಾರ ಸ್ಥಂಭವಾಗಿದ್ದವರನ್ನು ಕಣ್ಣೆದುರಿನಲ್ಲಿ ಕಳೆದುಕೊಂಡು ಕುಟುಂಬ ಸಂಕಷ್ಟವನ್ನು ಅನುಭವಿಸುತ್ತಿದೆ. ಅವರ ನೋವಿನಲ್ಲಿ ನಾವು ಕೂಡ ಬಾಗಿಯಾಗುತ್ತೇವೆ. ಅಲ್ಲದೇ ಯುವಕನ ಕುಟುಂಬಕ್ಕೆ ಸರ್ಕಾರದಿಂದ ಬರುವ ಪರಿಹಾರವನ್ನು ಕೊಡಿಸಿ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.
ಮಸ್ಕಿ ತಾಪಂ ಅಧ್ಯಕ್ಷ ಶಿವಣ್ಣ ನಾಯಕ ವೆಂಕಟಾಪೂರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಅಪ್ಪಾಜಿಗೌಡ ಪಾಟೀಲ್, ಸಿದ್ದಣ್ಣ ಹೂವಿನಾಬಾವಿ, ಅಭಿಜೀತ್ ಮಾಲಿ ಪಾಟೀಲ್, ಮಹಾಂತೇಶ ಜಾಲವಾಡಗಿ, ನಾಗರಾಜ ಗುಡಿಸಲಿ, ಸದಾಂ, ಶರಣು ನಾಯಕ, ಈರಣ್ಣ ನಾಯಕ ಸೇರಿದಂತೆ ಇನ್ನಿತರರು ಇದ್ದರು.
————————-
ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ತುಂಗಭದ್ರಾ ಕಾಡಾ ಅಧ್ಯಕ್ಷ ಆರ್.ಬಸನಗೌಡ ಮಸ್ಕಿ ಕ್ಷೇತ್ರದಲ್ಲಿ ಮೂಲ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ ಇದರಿಂದ ಸಹಜವಾಗಿ ನಮ್ಮ ಕಾರ್ಯಕರ್ತರಿಗೆ ನೋವಾಗಿದೆ. ಎಲ್ಲಾ ಕಾರ್ಯಕರ್ತರ ಅಭಿಪ್ರಾಯವನ್ನು ಸಹ ಸಂಗ್ರಹಿಸಲಾಗುತ್ತಿದೆ. ಅಲ್ಲದೇ ಇನ್ನೇರಡು ದಿನಗಳಲ್ಲಿ ಬಿಜೆಪಿ ಹೈಕಮಾಂಡ್ ಜೊತೆ ಮಾತುಕತೆ ನಡೆಸಿ ಸ್ಪಷ್ಟ ತಿರ್ಮಾನ ತಿಳಿಸುವುದಾಗಿ ಹೇಳಿದರು.
ಆರ್.ಬಸನಗೌಡ ತುರ್ವಿಹಾಳ ಚನ್ನಬಸವನ ಕುಟುಂಬಕ್ಕೆ ಸಾಂತ್ವಾನ ಹೇಳಲು ಹೋದಾಗ ಬಹುತೇಕ ಕಾಂಗ್ರೆಸ್ ಕಾರ್ಯಕರ್ತರು, ಮೂಲ ಬಿಜೆಪಿಗರು ಇದದ್ದು ಕಂಡುಬಂದಿತು.