ಕಟ್ಟ ಬನ್ನಿ
ಬನ್ನಿರೈ ಬಸವ ಗಣವೇ
ಕಾಯುತಿದೆ ಕಲ್ಯಾಣ
ಸತ್ಯ ಸಮತೆ ಶಾಂತಿ ಪ್ರೀತಿ
ನೆಲೆಗೊಳಿಸುವ ತಾಣ
ಮತ್ತೆ ವಚನ ಮೊಳಗಬೇಕು
ಅನುಭಾವ ನಡೆಯಬೇಕು
ಗುರು ಲಿಂಗ ಜಂಗಮಕೆ
ನಿಜ ರೂಪ ನೀಡಬೇಕು
ಶತಮಾನಗಳು ಕಳೆದವು
ಹುಸಿ ಭರವಸೆ ಮಠಗಳಲಿ
ದುಡಿವ ವರ್ಗ ತೆಲೆ ಎತ್ತಿತು
ಶ್ರಮ ಪ್ರಸಾದ ಮೆರೆಯಿತು
ನಿನ್ನ ಶರಣರ ಕಾಣಲಾರೆವು
ಜಡಗೊಂಡಿವೆ ಗದ್ದುಗೆ
ನಿತ್ಯ ಪೂಜೆ ಕಾಯಿ ಕರ್ಪುರ
ಮೌನವಾದೆವು ಅವರ ಸದ್ದಿಗೆ
ನಿಮ್ಮ ಹೆಸರಲಿ ಸುಲಿಗೆ ಶೋಷಣೆ
ಕಾವಿ ಲಾಂಛನ ದಂಧೆಯೂ
ನಿಮ್ಮ ಬರುವಿಗೆ ಕಾಯುತಿಹೆವು
ಕಟ್ಟ ಬನ್ನಿ ಭಾರತ
–ಡಾ.ಶಶಿಕಾಂತ ಪಟ್ಟಣ ರಾಮದುರ್ಗ