ನಿಮ್ಮೂರಲಿ ಏನು ಸುದ್ದಿ..?
ಇಲ್ಲಿಗ ಮಳೆ ಗೆಳೆಯಾ
ನಿಮ್ಮೂರಲಿ ಏನು ಸುದ್ದಿ…?
ಬಾನು ಭೂಮಿಯ ನಡುವೆ
ಭಾನುವಿನ ಕಣ್ಣುಮುಚ್ಚಾಲೆಯಾಟ
ನಿಮ್ಮೂರಲಿ ಏನು ಸುದ್ದಿ….?
ಮುಗಿಲ ಅಂಗಳದಿ
ಕಾಮನ ಬಿಲ್ಲಿ ರಂಗೊಲಿ
ನಿಮ್ಮೂರಲಿ ಏನು ಸುದ್ದಿ…?
ಗುಡುಗು ಡಂಗುರ ಬಾರಿಸುತಿದೆ
ಕಣ್ಣು ಕೊರೆಯುತ್ತಿದೆ ಮಿಂಚು
ನಿಮ್ಮೂರಲಿ ಏನು ಸುದ್ದಿ…?
ಗಾಳಿ ತೋರಣ ಕಟ್ಟಿದೆ
ಗಿಡಮರದ ಟೊಂಗೆಗೆ
ನಿಮ್ಮೂರಲಿ ಏನು ಸುದ್ದಿ…?
ತಂಗಾಳಿಯ ಚಾಮರ
ಮಣ್ಣ ಕಂಪು ಹರಡಿದೆ
ನಿಮ್ಮೂರಲಿ ಏನು ಸುದ್ದಿ…?
ಹೊಂಗಿರಣದ ಬೆಳಕಿನಾರತಿ
ರಂಗುತುಂಬಿದೆ
ನಿಮ್ಮೂರಲಿ ಏನು ಸುದ್ದಿ…?
ಕಾರ್ತೀಕ ಚಳಿ ಮರೆತು
ಮೋಡಿ ಮೊರೆ ಹೊಕ್ಕಿದೆ
ನಿಮ್ಮೂರಲಿ ಏನು ಸುದ್ದಿ….?
-ಡಾ. ನಿರ್ಮಲಾ ಬಟ್ಟಲ
ಬೆಳಗಾವಿ