ಗೌರಿ ಹುಣ್ಣಿಮೆಯು ಸಕ್ಕರೆ ಆರತಿಯೂ
ಭಾರತ ಹಬ್ಬ ಹರಿದಿನ, ಜಾತ್ರೆಗಳ ತವರೂರು. ಅವು ಸಂಪ್ರದಾಯ ಮತ್ತು ಸಂಸ್ಕೃತಿಗಳ ಸಂಗಮ. ಅದುವೇ ಅನೇಕತೆಯಲ್ಲಿ ಏಕತೆ. ಇಲ್ಲಿ ಪ್ರತಿ ಹುಣ್ಣಿಮೆಗು, ಅಮವಸ್ಯೆಗೂ ಹಬ್ಬಗಳು ಜೋಡಣೆಯಾಗಿ ಮಹತ್ವ ಪಡೆದಿವೆ. ಹಬ್ಬ ಹರಿದಿನಗಳು ಸಡಗರಕ್ಕಾಗಿ ಅಷ್ಟೇ ಅಲ್ಲ ನಮ್ಮ ಸಂಪ್ರದಾಯ ಸಂಸ್ಕೃತಿಯನ್ನು ಬಿಂಬಿಸುತ್ತವೆ.
ಅಕ್ಟೋಬರ- ನವ್ಹಂಬರ ತಿಂಗಳಲ್ಲಿ ಸಾಲು ಸಾಲುಹಬ್ಬಗಳು. ದೀಪಾವಳಿಯ ನಂತರ ಬರುವ ಹುಣ್ಣಮೆಯೇ ಗೌರಿ ಹುಣ್ಣಿಮೆ. ನಮ್ಮ ನಾಡಿನ ಪರಂಪರೆಯ ಹಬ್ಬ . ಗೌರಿ ಹಬ್ಬ ಅಂದರೆ ಹೆಣ್ಣುಮಕ್ಕಳಿಗೆ ಸಂಭ್ರಮವೇ ಸಂಭ್ರಮ. ಮಾಗಿಯ ಚಳಿಗಾಲ ಚುಮುಚುಮು ಅಂತ ಪ್ರಾರಂಭವಾಗುವ, ಹೊಲಗಳಲ್ಲಿ ಹತ್ತಿ ಕಡಲೆ ಇನ್ನುಳಿದ ಪೈರುಗಳು ಬಸಿರೊಡೆದು ಅರಳುವ ಕಾಲ. ಅಂತೆಯೇ ರೈತ ಮಹಿಳೆಯರಲ್ಲಿ ಚೈತನ್ಯ, ಹುರುಪು ಮೂಡಿಸುವ ಹಬ್ಬ. ಇದನ್ನು ಕಾರ್ತಿಕ ಹುಣ್ಣಿಮೆ ಅಂತಲೂ ಹೇಳುವದಿದೆ. ಉತ್ತರ ಕರ್ನಾಟಕದಲ್ಲಿ ಆಚರಿಸಲ್ಪಡುವ ವಿಶೇಷ ಹಬ್ಬ. ಗೌರಿ ವರ್ಷಕ್ಕೊಮ್ಮೆ ಭೂಲೋಕಕ್ಕೆ ಬರುತ್ತಾಳೆ. ಮನೆ ಮಗಳು ಗೌರಿಯನ್ನು ಗೌರವಾದರಗಳಿಂದ ಬರಮಾಡಿಕೊಂಡು ಅವಳನ್ನ ಪೂಜಿಸಿ ನಕ್ಕು ನಲಿದು ಬೀಳ್ಕೊಡುವದು ಹಬ್ಬದ ಹಿನ್ನೆಲೆ.
ಮಣ್ಣಿನಿಂದ ಇಲ್ಲವೆ ಕಟ್ಟಿಗೆಯಿಂದ ಮಾಡಿದ ಮೂರ್ತಿ ಶಿವನ ತೊಡೆಯಮೇಲೆ ಕುಳಿತ ಸಾಲಂಕೃತ ಗೌರಿಯನ್ನು ತಂದು ಕೆಲವರ ಮನೆಗಳಲ್ಲಿ ಅಥವಾ ದೇವಸ್ಥಾನಗಳಲ್ಲಿ ೫ ಇಲ್ಲವೆ ೩ ದಿನಗಳ ವರೆಗೆ ಕೂಡ್ರಿಸಲಾಗುವದು. ಹಾಲು ಚೆಲ್ಲಿದಂತಹ ಬೆಳದಿಂಗಳು. ಚೇತೋಹಾರಿ ವಾತಾವರಣ. ಸಾಯಂಕಾಲ ಊರ ಹೆಣ್ಣುಮಕ್ಕಳು ಟೋಪಶೆರಗಿನ ಸೀರೆ ಉಟ್ಟು, ದಾಗೀನ ಹಾಕಿಕೊಂಡು ತಲೆಗೆ ಹೂಮುಡಿದು ಆರತಿ ತಗೊಂಡ ಹೊರಟರ ಚಿಕ್ಕಮಕ್ಕಳು ಜರತಾರಿ ಲಂಗಾ ಹಾಕ್ಕೊಂಡು ತಲೆಗೆ ದಂಡಿ ಮುಡಕೊಂಡ ಕೈಯ್ಯಲ್ಲಿ ಸಕ್ಕರೆ ಆರತಿ ತಗೊಂಡು ಹೋಗುವ ಸಂಭ್ರಮವೇ ಹಬ್ಬದ ವಿಶೇಷತೆ. ಓಣಿಗಳೆಲ್ಲ ಹೆಂಗೆಳೆಯರ ಕಲರವದಿಂದ ತುಂಬಿರತ್ತದೆ. ಅಲಂಕರಿಸಿದ ಮಂಟಪದೊಳಗ ಗೌರವ್ವನಿಗೆ ದಂಡಿ ಮುಡಿಸುವದು ಮತ್ತು ಸಕ್ಕರೆ ಆರತಿ ಮಾಡೋದು
“ಆರುತಿ ಬೆಳಗಿರೆ ಪಾರ್ವತಿಗೆ ಗಿರಿಜಕಲ್ಯಾಣಿ ಗೀರ್ವಣಿಗೆ, ಆರುತಿ ಬೆಳಗಿರೆ ಪಾರ್ವತಿಗೆ, ಮುತ್ತಿನದಾರುತಿ ಮುತ್ತು ಮಾಣಿಕದಾರುತಿ, ಮುತ್ತೈದೆರಲ್ಲ ಬೆಳಗೀರೆ, ಮುತ್ತೈದರೆಲ್ಲ ಬೆಳಗದಂತಾರುತಿ
ಸಕ್ಕರಿ ಅಚ್ಚಿನಾರತಿ ಬಣ್ಣಬಣ್ಣದಾರುತಿ ಸಣ್ಣವರೆಲ್ಲ ಬೆಳಗೀರೆ ಸಣ್ಣವರೆಲ್ಲ ಬೆಳಗೀರೆ
ಸಕ್ಕರಿ ಆರತಿ ಮಕ್ಕಳೆಲ್ಲ ಬೆಳಗಿದಂತಾರುತಿ”
ಅನ್ನುವ ಪದ ಎಲ್ಲರು ಒಕ್ಕೊರಲಿಂದ ಹೇಳುವದು ವಿಶೇಷ. ಅಲ್ಲಿ ಸೇರಿದ ಮಕ್ಕಳು ಯುವತಿಯರು ಕೋಲ ಹಾಕ್ಕೋತ ಗೌರವ್ವನ ಹಾಡ ಹಾಡತಾ, ಆಟಗಳನ್ನ ಆಡತಾ ನಕ್ಕು ನಲೀತಾರೆ. ಸಕ್ಕರೆ ಆರತಿಗು ಗೌರಿ ಹುಣ್ಣಿಮೆಗು ಅವಿನಾಭಾವ ಸಂಬಂಧ. ಸಕ್ಕರಿ ಆರತಿ ಹಬ್ಬ ಅಂತಲೂ ಹೇಳುವದಿದೆ. ಹುಣ್ಣಿಮೆಗಿಂತ ೮-೧೦ ದಿನ ಮೊದಲೆ ಮಾರ್ಕೆಟ್ ನಲ್ಲಿ ವಿಧ ವಿಧದ, ಬಣ್ಣ ಬಣ್ಣದ ಸಕ್ಕರೆಗೊಂಬೆ ಬರತಾವ. ಅವುಗಳನ್ನು ನೋಡೋದ ಒಂದ ಖುಷಿ. ಕಟ್ಟಗೆ ಅಚ್ಚಿನಲ್ಲಿ ಹದವಾದ ಪಾಕದಿಂದ ಮಾಡಿರುತ್ತಾರೆ. ಕೆಲವರು ಈಗಲು ಮನೆಯಲ್ಲೇ ಮಾಡಿಕೊಳ್ಳುವವರಿದ್ದಾರೆ. ಸಕ್ಕರಿ ಆರತಿ ತಯಾರಿಕೆ ಕೆಲವರ ಬದುಕಿಗೆ ದಾರಿಯು ಹೌದು. ಸಕ್ಕರೆ ಪಾಕದಿಂದ ಗುಡಿ, ತೇರು,,ಗಿಳಿ, ನವಿಲು, ಆರತಿ,ಗೋಪುರ,ಗೊಂಬೆ, ನಂದಿ ಹೀಗೆ ಅನೇಕ ತೆರನಾದ ಸಕ್ಕರೆ ಆರತಿ ನೋಡೋದು ಚಂದ. ಅವನ್ನು ಸವಿಯೋದು ಇನ್ನೂ ಚೆನ್ನ. ಬಾಯಲ್ಲಿಟ್ಟರೆ ಪಟ್ಟಂತ ಕರಗಿ ಸಿಹಿಯ ಸ್ವಾದ ಸಿಗತದಲ್ಲ ಅದರ ಮಜಾನ ಮಜಾ!. ಹೆಣ್ಣುಮಕ್ಕಳು ತಟ್ಟೆಯೊಳಗ ದೀಪದ ನಿಲಾಂಜನ ಹಚ್ಚಿ ಸುತ್ತಲೂ ಸಕ್ಕರೆ ಆರತಿ ಇಟ್ಟು ಗರವ್ವಗ ಬೆಳಗಾಕ ಹೊಗೋ ಚಂದ ನೋಡುವಂಗಿರತದ. ದಟ್ಟ ಬೆಳದಿಂಗಳ ಸಂಜೆ ಕತ್ತಲಲಿ ಬೀರುವ ಆ ಬೆಳಕು ನೋಡಿ ಆ ಚಂದ್ರನು ಸಂಭ್ರಮಿಸುವನು. ಸಕ್ಕರಿ ಆರತಿಗು ಹೆಣ್ಣಮಕ್ಕಳಿಗು ಬಹಳ ನಂಟು. ನಮ್ಮ ಕಡೆ ನಡತಿ ಕೊಡೋದು ಅಂತಾರೆ. ಅಂದರೆ ಹೊಸದಾಗಿ ಮದುವೆ ಗಟ್ಟಿಯಾದ ಹುಡಗಿಮನೀಗೆ ಗಂಡಿನ ಕಡೆಯವರು ಸಕ್ಕರಿ ಆರತಿ ತರುವ ಪದ್ಧತಿ. ಹುಡಗಿಗೂ ಹೆಣ್ಣಿನಕಡೆ ಬಳಗಕ್ಕೂ ಸಂಭ್ರಮ. ಗಂಡಿನ ಕಡೆಯವರು ಹುಡಗೀಗೆ ೪-೫ ಕೆ.ಜಿ. ಆರತಿ, ಸೀರೆ,
ಹೂವಿನ ದಂಡಿ, ಮಾಲೆ, ಚುರಮುರಿ, ವಿಶೇಷವಾಗಿ ಬಣ್ಣದ ಕೋಲು ತರತಾರೆ. ಸಂಜೆ ಅವಳಿಗೆ ಸಕ್ಕರಿ ಆರತಿ ಮಾಡುವಾಗ ಓಣಿಯ ಹೆಣಮಕ್ಕಳನ್ನ ಕಿರಿತಾರೆ. ಬಂದವರಿಗೆಲ್ಲ ಸಕ್ಕರಿ ಆರತಿ, ಚುರುಮರಿ ಹಂಚುವರು.ಅವರೆಲ್ಲ ಹಾಡಿ ನಕ್ಕು ನಲಿದು ಚೇಷ್ಟೆ ಮಾಡುವದು ನಗೆ ಚಟಾಕಿ ಹಾರಿಸುವದು ಜೀವನೋತ್ಸಾಹ ತುಂಬುವಂಥದು.
ಇವೆಲ್ಲ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುವಲ್ಲಿ ಸಹಾಯಕಾರಿಯಗುವ ರೂಢಿಗಳು. ಉ.ಕರ್ನಾಟಕದ ಈ ಹಬ್ಬದ ವರ್ಣನೆಗೆ ಶಬ್ಧಗಳೇ ಸಾಲದು.
ಭಾರತೀಯ ಹಬ್ಬಗಳು ಬಹಳ ವೈಶಿಷ್ಟಪೂರ್ಣ. ಇನ್ನು ಗೌರಿಯ ವಿಸರ್ಜನೆಯಂತು ವರ್ಣನಾತೀತ. ಸಂಜೆಯಿಂದ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಗೌರಿಯಹಾಡು ಹೇಳುವದು. ಅಲಂಕರಿಸಿದ ಎತ್ತು ಚಕ್ಕಡಿಯಲ್ಲಿ ಚಿಕ್ಕಮಕ್ಕಳಿಗೆ ಸೀತಾ, ರಾಮ, ಶಿವ ಪಾರ್ವತಿ ಲಕ್ಷ್ಮಿ ಮುಂತಾದ ಪಾತ್ರ ಹಾಕಿ ಕೂಡ್ರಿಸಿರುತ್ತಾರೆ. ಮುಂದೆ ಯುವತಿಯರು ಗೌರಿಯ ಹೊಂಗೊಡ ಹೊತ್ತು ವೈಯ್ಯಾರದಿಂದ ನಡೆಯುತ್ತಾರೆ. ಹೆಣ್ಣುಮಕ್ಕಳೆಲ್ಲ “ನಾವಾಡೋದು ಗೌರಿ ಹುಣ್ಣಮ್ಯಾಗ, ಗೌರಿಯಾಡೋದು ಹೂಬನದಾಗ, ಕೋಲು ಕೋಲೆನ್ನ ಕೋಲ ರನ್ನದ ಕೋಲು ಕೊಲೆನ್ನಕೋಲೆ” ಅಂತ ಕೋಲು ಹಾಕಿ ಆಡಿ ಕುಣಿದು ಕುಪ್ಪಳಿಸುವರು. ಬಗಾಟಬಗರಿ ಆಡುತ್ತಾ ಹಾಡುಹೇಳುತ್ತ ಹತ್ತಿರದ ಕೆರೆ ನದಿಗಳ ಕಡೆ ಹೊರಡುತ್ತಾರೆ. ಸನಾದಿ ಊದುವವರು ಬಂದಿರುತ್ತಾರೆ. ” ಹೋಗಿ ಬಾ ಗೌರವ್ವ, ಸಾಗಿ ಬಾ ಗೌರವ್ವ, ವರ್ಷಕ್ಕೊಮ್ಮೆ ಬರಹವಾಕೆ, ಹರುಷ ತರುವಾಕೆ” ಅಂತ ಅವಳನ್ನು ಗಂಡನಮನೆಗೆ ಗೌರವಾದರದಿಂದ ಬಿಳ್ಕೊಡುವರು.ಸುಖ ಶಾಂತಿ ನೆಮ್ಮದಿ ನೀಡಿ ಹರಸಲು ಕೇಳಿಕೊಳ್ಳುವರು. ನೀರಲ್ಲಿ ಗೌರಿಕೊಡ ತೇಲಿಬಿಡುವದು ಕಣ್ಮನ ಸೆಳೆಯುವಂಥದು.
ಇಲ್ಲಿ ಗೌರಿ ಹೆಣ್ಣು ಮಕ್ಕಳ ಪ್ರತಿನಿಧಿಯಾಗಿ ಸಂಸ್ಕ್ರತಿ ಯೊಂದರ ರಾಯಭಾರಿಯಾಗಿ ಕಾಣಿಸುವಳು. ಅಪ್ಪಟ ಗ್ರಾಮೀಣ ಹಬ್ಬ ಇನ್ನೂ ತನ್ನ ಮೆರಗು ಉಳಿಸಿಕೊಂಡಿದೆ. ಪಟ್ಟಣದ ಹಳೆಯ ಕೆಲ ಭಾಗಗಳಲ್ಲೂ ಆಚರಿಸುವದಿದೆ. ಇಂಥ ಹಬ್ಬಗಳು ಉಳಿಯಬೇಕೆಂದರೆ ಎಲ್ಲರು ಆಚರಿಸಬೇಕು ಮತ್ತು ಮುಂದಿನ ಪೀಳಿಗೆ ಅರಿಯಬೇಕು.
–ಶಾರದಾ ಕೌದಿ
ಧಾರವಾಡ