ತೀರಿಹೋದ ಸನ್ಮಿತ್ರ : ತೀರದ ನೆನಪುಗಳು

ತೀರಿಹೋದ ಸನ್ಮಿತ್ರ : ತೀರದ ನೆನಪುಗಳು

ಹಿರಿಯ ಕಲಾವಿದ ತಿಪ್ಪಣ್ಣ ಬಸವಣ್ಣೆಪ್ಪ ಸೊಲಬಕ್ಕನವರ ತೀರಿಹೋಗಿ (೧೯.೧೧.೨೦೨೦) ಬರೋಬ್ಬರಿ ಒಂದು ವರ್ಷವಾಯಿತು‌. ಅವರು ನನಗೆ ಶತಮಾನದ ಸನ್ಮಿತ್ರ. ದೊಡ್ಡಾಟದ ಪುನಶ್ಚೇತನಕ್ಕಾಗಿ ಕೈತುಂಬಾ ಸಂಬಳದ ಸರಕಾರಿ ಉಪನ್ಯಾಸಕ ಹುದ್ದೆಯನ್ನೇ ಬಿಟ್ಟು ಬಂದವರು ಸೊಲಬಕ್ಕನವರ.

ಈಗ್ಗೆ ಮೂವತ್ತು ವರ್ಷಗಳ ಹಿಂದೆ ಡಾವಣಗೇರಿಯ ಫೈನ್ ಆರ್ಟ್ ಕಾಲೇಜಿನ ಉಪನ್ಯಾಸಕ ಹುದ್ದೆ ತೊರೆದು ಹುಟ್ಟೂರು ಹುಲಸೋಗಿಗೆ ಹೊರಟು ನಿಂತರು. ಆಗ ನನ್ನವ್ವ ” ತಮಾ ಹತ್ತು ಸಾವಿರ ರುಪಾಯಿ ಪಗಾರದ ನೌಕರಿ ಬಿಟ್ಟು, ಉಣ್ಣುವ ಅನ್ನದ ಗಂಗಾಳನ್ನೇ ಕೈಯ್ಯಿಂದ ಹಿಂದಕ ಸರಿಸಿ ಹೋಗ್ತಿದಿ. ನಿನಗ, ನಿನ್ ಹೆಣ್ತಿ, ಮಕ್ಳಿಗೆ ದೇವ್ರು ಒಳ್ಳೇದು ಮಾಡಲಿ ” ಅಂತ ಸೊಲಬಕ್ಕನವರಿಗೆ ಹಾರೈಸಿದ ಹದುಳ ಹಾರೈಕೆಯ ಮಾತುಗಳನ್ನು ನಾನು ಮರೆತಿಲ್ಲ. ಅದನ್ನು ಅವರೂ ಬಹಳ ದಿನಗಳಕಾಲ ಮರೆತಿರಲಿಲ್ಲ. ಅಂದು ಅವ್ವಗೆ ನಮಸ್ಕರಿಸಿದ ಅವರು ಕ್ಷಣಕಾಲ ಹಾಗೇ ನಿಂತು ಅದೇನೋ ಧೇನಿಸಿದ್ರು. ಆ ಚಿತ್ರವಿನ್ನೂ ನನ್ನ ಚಿತ್ತ ಭಿತ್ತಿಯಲ್ಲಿ ಅಚ್ಚೊತ್ತಿದಂತಿದೆ.

ಅದಾದ ಮೇಲೆ ಅವರು ಹಾವೇರಿ ಜಿಲ್ಲೆ ಹುಲಸೋಗಿಯ ತಮ್ಮ ಹೊಲದ ಮನೆಯಲ್ಲಿ ಸಂಸಾರ ಹೂಡಿ ಅಲ್ಲೇ ಒಂದು ಪುಟ್ಟ ಕೊಳದಲ್ಲಿ ಮಿರಿ ಮಿರಿ ಮಿಂಚುವ ಮಲಗಿದ ಎಮ್ಮೆಯ ಶಿಲ್ಪಗಳನ್ನು ನಿರ್ಮಿಸಿದ್ದರು. ನಾನು ಟಪಾಲು ಹಾಕಿದಾಗೆಲ್ಲ ಅವರು ನಿರ್ಮಿಸಿದ ಕಲಾತ್ಮಕ ಶಿಲ್ಪಗಳಾದ ಎಮ್ಮೆ, ಆಡು, ಹಂದಿ ಇತರೆ ಪ್ರಾಣಿ ಪಕ್ಷಿಗಳ ಆರೋಗ್ಯ ಕುರಿತು ವಿಚಾರಿಸುತ್ತಿದ್ದೆ. ಸೆಕೆಂಡ್ ಸಾಟರ್ಡೇ, ಸಂಡೇ ಅಲ್ಲಿಗೆ ಹೋಗಿ ಶಿಲ್ಪಗಳ ಯೋಗಕ್ಷೇಮ ವಿಚಾರಿಸುತ್ತಿದ್ದೆ. ನನಗೆ ಪ್ರಿಯವಾದ ದೊಡ್ಡಾಟ ತರಬೇತಿ, ಅದರ ಬೆಳವಣಿಗೆಗಳೊಂದಿಗೆ ತಾದಾತ್ಮ್ಯಗೊಳ್ಳುತ್ತಿದ್ದೆ. ಅವರ ಮನೆ ದೊಡ್ಡಾಟದ ತರಬೇತಿ ಕೇಂದ್ರವೇ ಆಗಿತ್ತು. ಹತ್ತಾರು ಯುವಕ ಯುವತಿಯರ ಬಯಲಾಟದ ರಂಗಪಡೆ ಅವರ ಮಹತ್ವಾಕಾಂಕ್ಷೆಯ ಕಕ್ಷೆಯಲ್ಲಿತ್ತು.

ಎಲಿಗಾರ, ಮಾಳವಾಡ, ಹುದ್ದಾರ, ಭಜಂತ್ರಿಯವರಂತಹ ದೊಡ್ಡಾಟದ ಒಡನಾಡಿಗಳ ವಾತ್ಸಲ್ಯದ ಸಾಹಚರ್ಯ ಮರೆಯಲಾಗದು. ಅಷ್ಟಕ್ಕೂ ಅದು ದೊಡ್ಡಾಟದ ಹೆಡ್ ಮಾಸ್ತರರೇ ಆಗಿದ್ದ, ಹೆಜ್ಜೆಮ್ಯಾಳದ ಸಂತ ಶಿಶುನಾಳ ಶರೀಫರ ಕರ್ಮಭೂಮಿ. ಸೊಲಬಕ್ಕನವರು ದಾವಣಗೆರೆಯಲ್ಲಿರುವಾಗಲೇ ಕಲಾವಿದರಾಗಿ ರಾಷ್ಟ್ರಮಟ್ಟದ ಖ್ಯಾತಿ ಗಳಿಸಿದ್ದರು. ಆದರೆ ಹಣ ಗಳಿಸಿರಲಿಲ್ಲ. ಅವರು ನೂರಿಪ್ಪತ್ತು ಅಡಿ ಬಣ್ಣದ ನಡೆ ಅಣುಸಮರಕ್ಕೆ ಜನತೆಯ ತಡೆ ಎಂಬ ಜೀವಸಂಕುಲದ ವಿಕಾಸ ಕಥನ, ಯುದ್ಧವಿರೋಧಿ ಮತ್ತು ಕೋಮು ಸೌಹಾರ್ದದ ಕಲಾಕೃತಿಯ ನಿರ್ಮಾತೃ. ಈ ಕಲಾಕೃತಿ ದೇಶ, ವಿದೇಶ ಸಂಚರಿಸಿ ಜೀವಜಗತ್ತಿಗೆ ಬಹುಳಪ್ರಜ್ಞೆಯ ಕನಸುಗಳ ಬೀಜ ಬಿತ್ತಿತ್ತು. ಅಂತೆಯೇ ಅದು ಜನಸಂಸ್ಕೃತಿ ಚಳವಳಿಯ ದಿವಿನಾದ ದೀವಟಿಗೆಯಾಗಿತ್ತು.

ದಾವಣಗೆರೆಯ ಕುರುಬರ ಹಾಸ್ಟೆಲ್ ಆವರಣದಲ್ಲಿ ಸೊಲಬಕ್ಕನವರ ಮತ್ತು ಕಲಾಶಾಲೆಯ ಕರಿರಾಜು ಇಬ್ಬರೂ ಸೇರಿ ಹಗಲು ರಾತ್ರಿಯೆನ್ನದೇ ತಿಂಗಳುಗಟ್ಟಲೇ ಊಟ ನಿದ್ರೆಯ ಪರಿವೆಯಿಲ್ಲದೇ ಆರಡಿ ಎತ್ತರ ನೂರಿಪ್ಪತ್ತು ಅಡಿ ಉದ್ದದ ಕಲಾಕೃತಿ ಸಿದ್ದಗೊಳಿಸಿದರು. ಸಮುದಾಯದ ಸಂಗಾತಿ, ಲೇಖಕ ಮಿತ್ರ ಈಶ್ವರಪ್ರಸಾದ ಈ ಕಲಾಕೃತಿಗೆ ನೂರಿಪ್ಪತ್ತು ಅಡಿ ಬಣ್ಣದ ನಡೆ ಅಣುಸಮರಕ್ಕೆ ಜನತೆಯ ತಡೆ ಎಂಬ ಶೀರ್ಷಿಕೆ ಸೂಚಿಸಿದ್ದು.

ಅಪೂರ್ವ ಕಲಾಕೃತಿಯ ಲೋಕ ಸಮರ್ಪಣೆ ಕಾರ್ಯಕ್ರಮ ದಾವಣಗೆರೆ ನಗರಸಭೆ ಆವರಣದಲ್ಲಿ ಏರ್ಪಾಡು. ಸಂಸ್ಕೃತಿ ಚಿಂತಕರಾದ ಜಿ.ಆರ್. ಮತ್ತು ಬಿ.ಆರ್. ಅಂದರೆ ಜಿ.ರಾಮಕೃಷ್ಣ ಮತ್ತು ಬರಗೂರು ರಾಮಚಂದ್ರಪ್ಪ ಅತಿಥಿಗಳು. ರಾಯಚೂರು ಸಮುದಾಯದ ಸಂಗಾತಿ ಶಾಂತಾ ಕುಲಕರ್ಣಿ ಅಂದು ಹಾಡಿದ…

ಪಯಣದ ಹಾದಿ ಬಲುದೂರ!
ಹೋಗಿ ಬಾರಯ್ಯ ಸರದಾರ!!

ಎಂಬ ಮನ ಕಲಕುವ ಪ್ಯಾಥೋ ಸಾಂಗ್ ಜೀವನಾನುಭೂತಿಯ ಗುಣಾಕಾರ, ಭಾಗಾಕಾರಗಳನ್ನು ಇವತ್ತಿಗೂ ಮತ್ತೆ ಮತ್ತೆ ನನ್ನ ನಾದನಾಭಿಯಲ್ಲಿ ಕೂಡಿ ಕಳೆದು ಗುಣಿಸಿದಂತಾಗುತ್ತವೆ.

ಯಾವತ್ತೂ ಹಿಂದಕ್ಕೆ ಬಾಚಿದ ಕಪ್ಪು ಕೂದಲು. ಅವರು ಸದಾ ತೊಡುವ ಕಪ್ಪು ಪ್ಯಾಂಟ್, ಅರ್ಧತೋಳಿನ ತಿಳಿ ಬಾದಾಮಿ ಬಣ್ಣದ ಉದ್ದನೆ ಅಂಗಿ. ಅಂಗಿಯ ಎಡ ಭುಜದಡಿಯ ನಾಲ್ಕುಗುಂಡಿಗಳ ಅವರದೇ ವಿಶಿಷ್ಟ ಶೈಲಿಯ ಉಡುಗೆ. ಗೋಟಡಿಕೆ, ನರಗಳಿರುವ ಹಚ್ಚಗಿನ ವೀಳ್ಯದೆಲೆ ಮೆಲುಕಿಸುವ ನಗುಮೊಗ. ಮುಖದ ತುಂಬಾ ಸಾತ್ವಿಕತೆಯೇ ತುಂಬಿ ತುಳುಕುವ ಆರ್ದ್ರತೆಯ ಜೀವಚಿತ್ರ ನನ್ನ ಭಾವಕೋಶದಲ್ಲಿ ಪ್ರಖರವಾಗಿದೆ.
ಎಡ ಮತ್ತು ಪ್ರಜಾಸತ್ತಾತ್ಮಕ ಗರಡಿ ಮನೆಯಲ್ಲಿ ಸಾಮು ತೆಗೆದು ಬಂದವರಂತಿದ್ದರು ಸೊಲಬಕ್ಕನವರ. ಸರಕಾರಿ ನೌಕರಿ ಬಿಟ್ಟು ಊರುಸೇರಿದ ಅವರಿಗೆ ಖಾದರಲಿಂಗ ಶಿಶುನಾಳರ ಸೀಮೆಯ ದೊಡ್ಡಾಟದ ಹೆಜ್ಜೆಮೇಳಕ್ಕೆ ಸಾಕಷ್ಟು ಸಹಕಾರ, ಪ್ರೀತಿ, ಪ್ರೋತ್ಸಾಹ ದೊರಕಿತು.

ದೊಡ್ಡಾಟಗಳು ಮುಗಿದು ರಾತ್ರಿ ಎರಡು ಮೂರು ಗಂಟೆಗೆ ಬಂದರೂ ಹತ್ತಿಪ್ಪತ್ತು ಮಂದಿ ಕಲಾವಿದರಿಗೆ ಅಡಿಗೆ ಮಾಡಿ ಬಡಿಸುತ್ತಿದ್ದುದು ಸಾಕ್ಷಾತ್ ಅನ್ನಪೂರ್ಣೆಯೇ ಆಗಿದ್ದವರು ಸೊಲಬಕ್ಕನವರ ಪತ್ನಿ ಸಾವಿತ್ರಮ್ಮ. ಸಾವಿತ್ರಮ್ಮನವರು ಅಕ್ಷರಶಃ ಸಹನಾಮೂರ್ತಿಯೇ ಹೌದು. ಸೊಲಬಕ್ಕನವರ ಎಲ್ಲ ಸಾಧನೆಗಳ ಹಿಂದೆ ಸಾವಿತ್ರಮ್ಮನವರ ತಾಳ್ಮೆ, ಪ್ರೀತಿ ಸಂಪನ್ನತೆಯ ಸಾಕಾರವಿದೆ. ಅಂತಃಕರಣದ ಆ ಮಹಾತಾಯಿಯನ್ನು ಇವತ್ತಿಗೂ ನಮ್ಮ ದೊಡ್ಡಾಟದ ಕಲಾವಿದರು ಸ್ಮರಿಸುತ್ತಾರೆ.

ಹಾಗೆ ನೋಡಿದರೆ ಸೊಲಬಕ್ಕನವರ ದೊಡ್ಡಾಟದ ಅನುಭವಿ ಕಲಾವಿದ, ಅಧ್ಯಯನಶೀಲ ವಿದ್ವಾಂಸರೇನಲ್ಲ. ಅವರಿಗಿದ್ದ ಸೃಜನಾತ್ಮಕ ಕಳಕಳಿಯಿಂದಾಗಿ ಅವರನ್ನು ದೊಡ್ಡಾಟ ಅಪ್ಪಿಕೊಂಡಿತ್ತು. ಮಾಳವಾಡ ವಿರಚಿತ ಏಳುಕೊಳ್ಳದ ಎಲ್ಲಮ್ಮ, ಕಿತ್ತೂರು ಚೆನ್ನಮ್ಮ, ದಲಿತಕವಿ ಸಿದ್ಧಲಿಂಗಯ್ಯನವರ ಏಕಲವ್ಯ, ಶ್ರೀಶೈಲ ಹುದ್ದಾರರ ಬಸವ ವಿಜಯಗಳ ಮೂಲಕ ದೊಡ್ಡಾಟದ ಪಾರಂಪರಿಕ ನೆಲೆ ಮತ್ತು ಲಯಗಳಿಗೆ ಹೊಸದೊಂದು ಸಾಂಸ್ಕೃತಿಕ ಸ್ಪರ್ಶ ನೀಡುವ ದಿವ್ಯಕಾಳಜಿ ಅವರದಾಗಿತ್ತು. ಒಂದೆರಡು ಜಿಲ್ಲೆಯ ಯಕ್ಷಗಾನವನ್ನು ಶಿವರಾಮ ಕಾರಂತರು ರಷಿಯಾದ ಬ್ಯಾಲೆಯ ಎತ್ತರಕ್ಕೆ ಕೊಂಡೊಯ್ದರೆಂದರೆ ಅಂದಿನ ಹದಿನೇಳು ಹದಿನೆಂಟು ಜಿಲ್ಲೆಯ ನಮ್ಮ ದೊಡ್ಡಾಟವನ್ನು ರಾಷ್ಟ್ರಮಟ್ಟದ ಎತ್ತರಕ್ಕೆ ಕೊಂಡೊಯ್ಯುವ ಅಗ್ನಿದಿವ್ಯದ ಸಂಕಲ್ಪ ಸೊಲಬಕ್ಕನವರದಾಗಿತ್ತು. ಅಂತೆಯೇ ದೊಡ್ಡಾಟದ ಪ್ರಾದೇಶಿಕ ಸಂಗೀತ, ಕುಣಿತ, ಪ್ರಸಾಧನ, ಭಾಗವತಿಕೆ ಹೀಗೆ ಒಟ್ಟು ಪ್ರಾಕಾರದ ಅಪ್ಡೇಟ್ ಮತ್ತು ಪುನಶ್ಚೇತನಕ್ಕಾಗಿ ಪಣತೊಟ್ಟರು.

ಅದಕ್ಕಾಗಿ ರಾಜ್ಯಮಟ್ಟದ ದೊಡ್ಡಾಟದ ಟ್ರಸ್ಟ್ ಮಾಡಿದರು. ಪ್ರೊ. ಬರಗೂರು ರಾಮಚಂದ್ರಪ್ಪ ಅಂಥವರು ದೊಡ್ಡಾಟ ಟ್ರಸ್ಟ್ ಪದಾಧಿಕಾರಿಗಳಾಗಿದ್ದರು. ನಾನು ಕೂಡ ಟ್ರಸ್ಟ್‌ ಜತೆಗಿದ್ದೆ. ದೊಡ್ಡಾಟ ಕುರಿತು ಅನೇಕ ವಿಚಾರ ಸಂಕಿರಣ, ಪ್ರದರ್ಶನ, ಪ್ರಾತ್ಯಕ್ಷಿಕೆಗಳನ್ನು ಮಾಡಿದೆವು. ಕೊಂಡಜ್ಜಿಯಲ್ಲಿ ಏಳು ಹಗಲು ಏಳು ರಾತ್ರಿಗಳ ದೊಡ್ಡಾಟೋತ್ಸವದ ಮಹಾಬೆರಗಿನ ಬೆಳಕನ್ನೇ ಹರಿಸಿದೆವು. ಮಹಿಳಾ ತಂಡದ ದೊಡ್ಡಾಟ ಪ್ರದರ್ಶನ ಆಗಿನ ವಿಶೇಷವಾಗಿತ್ತು. ಅಂದಿನ ದೊಡ್ಡಾಟೋತ್ಸವದ ನಮ್ಮ ಆಮಂತ್ರಣವೇ ಮೊಳದುದ್ದದಷ್ಟು ದೊಡ್ಡದಾಗಿತ್ತು.

ನಾನು ಆಗಿನ ನಮ್ಮ ದೊಡ್ಡಾಟ ಸಮಿತಿಯ ಕಾರ್ಯದರ್ಶಿಯಾಗಿದ್ದೆ. ಸೊಲಬಕ್ಕನವರು ಅಧ್ಯಕ್ಷರಾಗಿದ್ದರು. ಪ್ರೊ. ಜಾದವ ಮಲ್ಲಿಕಾರ್ಜುನ ಅವರು ಖಜಾಂಚಿಗಳಾಗಿ ನಾಕೈದು ವರ್ಷಗಳ ಕಾಲ ದೊಡ್ಡಾಟದ ಚಟುವಟಿಕೆಗಳನ್ನು ಶೈಕ್ಷಣಿಕ ಶಿಸ್ತಿನಿಂದ ಬೆಳೆಸಲು ಹೆಣಗಿದೆವು. ಹಣದ ಮುಗ್ಗಟ್ಟಿನಿಂದ ಮುಂದುವರೆಸಲು ದುಃಸಾಧ್ಯವಾಯಿತು. ಕಡೆಗೆ ಸೊಲಬಕ್ಕನವರು ತಮ್ಮ ಪಾಲಿನ ಹೊಲವನ್ನೇ ಮಾರಿ ದೊಡ್ಡಾಟದ ಕೆಲಸಕ್ಕೆ ತಮ್ಮನ್ನು ತೀವ್ರವಾಗಿ ತೊಡಗಿಸಿಕೊಂಡರು.

ಅಂದಿನ ಹಾವೇರಿ ಜಿಲ್ಲಾ ಅಪರ ಜಿಲ್ಲಾಧಿಕಾರಿಗಳಾಗಿದ್ದ ನೂರ್ ಮನ್ಸೂರ್ ಅವರು ಗೊಟಗೋಡಿ ಕೆರೆಯ ಮೂಲೆಯಲ್ಲಿದ್ದ ಬಕ್ಕಪ್ಪಸ್ವಾಮಿ ಮಠದ ಮೂಲೆಯಲ್ಲಿ ( ಈಗಿನ ಜಾನಪದ ವಿಶ್ವ ವಿದ್ಯಾಲಯದ ಹತ್ತಿರ) ಊರಿನವರ ಸಹಕಾರದೊಂದಿಗೆ ದೊಡ್ಡಾಟ ತರಬೇತಿಗೆ ಅವಕಾಶ ಮಾಡಿಕೊಟ್ಟರು. ಕೆಲಕಾಲ ಸೊಲಬಕ್ಕನವರ ಕುಟುಂಬ ವಾಸ್ತವ್ಯ ಹೂಡಿ, ಅಲ್ಲಿ ಮೂರ್ನಾಲ್ಕು ವರ್ಷಗಳ ಕಾಲ ದೊಡ್ಡಾಟಕ್ಕೆ ಬೆವರು ಸುರಿಸಿದರೂ ನಿರೀಕ್ಷಿತ ಫಲಿತಾಂಶ ದೊರಕಲಿಲ್ಲ. ಹಾಗೆಂದು ಅವರು ಅದರ ಮೇಲಿನ ಪ್ರೀತಿ ಕಳಕೊಳ್ಳಲಿಲ್ಲ. ಉಸಿರಾಟದ ಕಡೇಗಳಿಗೆವರೆಗೂ ಆ ಪ್ರೀತಿ ಕಾಪಿಟ್ಟು ಕೊಂಡಿದ್ದರು. ನಮ್ಮ ಬಯಲಾಟದ ವಿಶ್ವಕೋಶ ತಯಾರಿಸಬೇಕು ಇದು ಮಗಳು ವೇದಾರಾಣಿಗೆ ಅವರು ಹೇಳಿದ ಸಾವಿನ ಕಡೇಗಳಿಗೆಯ ಕಡೆಯ ಮಾತು.

ಉಚ್ರಾಯದ ಕಾಲಘಟ್ಟದಲ್ಲಿ ಸೊಲಬಕ್ಕನವರಿಗೆ ಎಚ್.ಕೆ. ಪಾಟೀಲರು ಮತ್ತು ಐ.ಎ.ಎಸ್. ಅಧಿಕಾರಿ ಡಾ. ಎಸ್. ಎಂ. ಜಾಮದಾರ ಅವರ ಸ್ನೇಹ ಸಹಕಾರಗಳ ಅನನ್ಯ ಸಂಪರ್ಕ ದೊರಕಿತು. ಅದರಿಂದಾಗಿ ಸರಕಾರದ ವತಿಯಿಂದ ಆಲಮಟ್ಟಿ ಹಾಗೂ ಬಾಗಲಕೋಟ ನವನಗರದ ಶಿಲ್ಪೋದ್ಯಾನಗಳ ನಿರ್ಮಾಣ ಕಾರ್ಯ. ಅಂದಿನಿಂದ ಸೊಲಬಕ್ಕನವರ ಬದುಕಿನ ಚಿತ್ರ ಮಾತ್ರವಲ್ಲದೇ ಗ್ಯಾಲರಿಗಳಲ್ಲೇ ಠಿಕಾಣಿ ಹೂಡಿಕೊಂಡಿದ್ದ ಶಿಲ್ಪ ಕಲಾಲೋಕದ ಬದುಕಿನ ಚಿತ್ರವೇ ಬದಲಾಯಿತು.

ಅವರು ಕಲ್ಲು, ಕಬ್ಬಿಣ, ಕಟ್ಟಿಗೆ, ಇಟ್ಟಿಗೆ, ಮಣ್ಣು, ಸಿಮೆಂಟುಗಳಿಗೆ ಸಂವೇದನಾಶೀಲ ಜೀವಪ್ರಜ್ಞೆ ಸೃಜಿಸಿದರು. ಜತೆಗೆ ಸೊಲಬಕ್ಕನವರು ವ್ಯವಹಾರಿಕವಾಗಿಯೂ ಯಶಸ್ಸು ಗಳಿಸಿದರು. ಪ್ರಭುತ್ವದ ಜತೆಗಿನ ಹೊಂದಾಣಿಕೆಯಿಂದ ಅವರಿಗೆ ಅನೇಕ ಯೋಜನೆಗಳು ದೊರಕಿದವು. ಸಹಜವಾಗಿ ಅವರಲ್ಲಿನ ಪ್ರತಿರೋಧ ಸಂಸ್ಕೃತಿಗೆ ಅಳುಕು. ಲೋಕಶಾಹಿ ಮತ್ತು ಅಧಿಕಾರಶಾಹಿ ಒಂದೇ ಹಡಗಿನಲ್ಲಿ ಪಯಣಿಸುವುದು ದುಸ್ತರ. ತರುವಾಯದಲ್ಲಿ ಈಡೇರಿದ್ದು ಶಿಲಾಶ್ರಯ ಸಂಸ್ಕೃತಿಯ ಅವರ ಅಖಂಡ ಮತ್ತು ಅನನ್ಯ ಕನಸು ಅಂದರೆ ಉತ್ಸವ ರಾಕ್ ಗಾರ್ಡನ್. ಇದು ಸೇರಿದಂತೆ ಸರಕಾರದ ಸಹಭಾಗಿತ್ವದಲ್ಲಿ ಅವರು ನಿರ್ಮಿಸಿದ ಶಿಲ್ಪೋದ್ಯಾನಗಳೆಲ್ಲವೂ ರಾಷ್ಟ್ರೀಯ ಮಟ್ಟದ ಪವಾಡ ಸದೃಶ ದಾಖಲೆಗಳೇ ಹೌದು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾವು ಸ್ಥಳೀಯ ಶಾಸಕರಾಗಿದ್ದ ಕಾಲದಿಂದಲೂ ಸೊಲಬಕ್ಕನವರ ಕಲಾ ನೈಪುಣ್ಯತೆ ಗುರುತಿಸಿ ಹತ್ತಿರಗೊಂಡವರು. ಬಲಪಂಥೀಯ ಸರಕಾರ ಅವರನ್ನು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಿದಾಗ ಅನೇಕ ಪ್ರಗತಿಪರರಿಗೆ ಅಚ್ಚರಿಯೋ ಅಚ್ಚರಿ. ಗೊಟಗೋಡಿಯ ಜಾನಪದ ವಿ. ವಿ.ಯ ರೀತಿ ರಿವಾಜುಗಳನ್ನು ವಿರೋಧಿಸುತ್ತಿದ್ದ ಅವರು ಅದೇ ವಿ. ವಿ. ನೀಡಿದ ಗೌರವ ಡಾಕ್ಟರೇಟ್ ಒಪ್ಪಿ ಪಡಕೊಂಡರು. ಅಷ್ಟೊತ್ತಿಗಾಗಲೇ ಎಡಪಂಥೀಯ ಬದ್ಧತೆ ಅವರಲ್ಲಿ ಜಡಗೊಂಡಿತ್ತು. ಮೊನ್ನೆಯಷ್ಟೇ ಅವರ ಅನುಪಸ್ಥಿತಿಯಲ್ಲಿ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ ರಾಜ್ಯಪ್ರಶಸ್ತಿ’ ಉತ್ಸವ ರಾಕ್ ಗಾರ್ಡನ್ ಸಂಸ್ಥೆಗೆ ದೊರಕಿದೆ. ಅವರ ತರುವಾಯ ಅವರ ಮಗ ಹರ್ಷ ಮತ್ತು ಮಗಳು ವೇದಾರಾಣಿ ಇಬ್ಬರೂ ಅಪ್ಪ ಉಳಿಸಿ ಹೋದ ಇನ್ನುಳಿದ ಕನಸುಗಳನ್ನು ಅದ್ಯಾವ ರೀತಿಯಲ್ಲಿ ಸಾಕಾರಗೊಳಿಸುತ್ತಾರೆಂಬುದನ್ನು ಕಾದು ನೋಡಬೇಕಿದೆ.

ಮಲ್ಲಿಕಾರ್ಜುನ ಕಡಕೋಳ
9341010712

Don`t copy text!