ಅರಿವೆ ಮುಖ್ಯವಯ್ಯಾ

ಅರಿವೆ ಮುಖ್ಯವಯ್ಯಾ

ಬತ್ತಲೆ ಇದ್ದವರೆಲ್ಲ ಕತ್ತೆಯ ಮಕ್ಕಳು
ತಲೆ ಬೊಳಾದವರೆಲ್ಲ ಮುಂಡೆಯ ಮಕ್ಕಳು. ತಲೆ ಜಡಗಟ್ಟಿದವರೆಲ್ಲ ಹೊಲೆಯರ ಸಂತಾನ. ಆವ ಪ್ರಜಾರವಾದಡೇನು? ಅರಿವೆ ಮುಖ್ಯವಯ್ಯಾ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ

                                            – ಅಕ್ಕಮ್ಮನ ವಚನ

ಈ ವಚನದಲ್ಲಿ ಶರಣೆ ಅಕ್ಕಮ್ಮ ಬಹಿರಂಗದ ವೇಷ, ಅಂತರಂಗದ ಮನಸ್ಸಿನ ಧೃಡ ನಿಲುವಿನ ಸಂಘರ್ಷವನ್ನು ವಿವರಿಸುತ್ತಾರೆ.

ಬತ್ತಲೆ ಇದ್ದವರೆಲ್ಲ ಕತ್ತೆಯ ಮಕ್ಕಳು

ಮೈಮೇಲಿರಬೇಕಾದ ಬಟ್ಟೆಗಳನ್ನು ಕಿತ್ತೆಸೆದು, ಬತ್ತಲೆಯಾಗಿ ಅಲೆದಾಡಿದರೆ ಅವರನ್ನು ಮುನಿಯಂದು ಜನ ಭಾವಿಸುತ್ತಾರೆ. ಶರಣರು ಹಾಗೆ ಭಾವಿಸುವುದಿಲ್ಲ. ಮುನಿತನ ಎನ್ನುವದು ತನ್ನೊಳಗಿನ ಮಲಿನತ್ವದಿಂದ ಮುಕ್ತನಾಗುವದು ಎಂದರ್ಥ. ಮಲಿನತನದಿಂದ ಮುಕ್ತನಾದವನೆ ಮುನಿ. ಉದರ ನಿಮಿತ್ಯ ವೇಷಕ್ಕಾಗಿ ಬತ್ತಲೆಯಾದರೆ ಅವರು ಮುನಿಗಳಲ್ಲ. ಕತ್ತೆಯ ಮಕ್ಕಳು ಎಂದು ಅಕ್ಕಮ್ಮ ಕಠೋರವಾಗಿ ನುಡಿಯುತ್ತಾಳೆ. ಒಳಗೆ ಶುಚಿಯಿಲ್ಲದೆ ಹೊರಗೆ ಬೆತ್ತಲಾದರೆ ಸಾಲದು ಭಾವ ಬೆತ್ತಲೆಯಾದರೆ ಬೆತ್ತಲೆ ಇಲ್ಲದಿದ್ದರೆ ಬರೀ ಕತ್ತೆಯ ಮಕ್ಕಳು ಎನ್ನುತ್ತಾರೆ.

ತಲೆ ಬೊಳಾದವರೆಲ್ಲ ಮುಂಡೆಯ ಮಕ್ಕಳು
ತಲೆ ಬೊಳಿಸಿಕೊಂಡು ಯತಿಯಾದನೆಂದು ಬೀಗುವವರಿಗೆ ಅಕ್ಕಮ್ಮ ಕೇಳುತ್ತಾಳೆ. ಹೊರಗೆ ತಲೆ ಬೊಳಿಸಿಕೊಂಡರೆ ಯತಿಯೆ? ಮನ ಬೊಳಾಗಬೇಕು. ಮನಸ್ಸಿನ ದುರಾಸೆ ನಷ್ಟವಾಗಬೇಕು. ಆಗ ಅದು ನಿಜವಾದ ಬೊಳು. ಗಂಡ ಸತ್ತಿರುವವರು ತಲೆ‌ಬೊಳಿಸಿಕೊಳ್ಳುತ್ತಾರೆ. ಅವರೆಲ್ಲ ಯತಿಗಳಾಗುತ್ತಾರೆಯೇ? ಹೊರಗೆ ತಲೆ ಬೊಳಿಸಿಕೊಂಡವರು ಮುಂಡೆಯ ಮಕ್ಕಳು ಅಷ್ಟೆ.

ತಲೆ ಜಡೆಗಟ್ಟಿದವರೆಲ್ಲ ಹೊಲೆಯರ ಸಂತಾನ
ಹೊರಗೆ ಅಶುಚಿಯಾಗಿ ಒಳಗೆ ಶುದ್ಧರೆಂದು ನಟಿಸುವವರಿಗೆ ಹೊಲೆಯರ ಸಂತಾನ ಎಂದು ಅಕ್ಕಮ್ಮ ಟೀಕಿಸುತ್ತಾರೆ. ಸಾಧಕರು ಹೊರ ಒಳಗೂ ಶುಚಿಯಾಗಿರಬೇಕು. ತಪ್ಪಸ್ಸಿನಲ್ಲಿ ನಿರತರಾಗಿ ಹೊರಗೆ ಗಡ್ಡ ಮೀಸಿ, ಜಡೆ ಬೆಳಸಿಕೊಂಡು ಸ್ನಾನ‌ ಮಾಡದೆ ಒಳಗೆ ಶುದ್ಧವಾಗಿದ್ದೇವೆ ಎನ್ನುವುದು ಮುರ್ಖತನ. ಹೊಲೆಯರು ಅಂದರೆ ಜಾತಿ ಸೂಚಕವಲ್ಲ. ಅಶುಚಿತ್ವದಿಂದ ಇರುವವರು. ಅಶುಚಿತ್ವದಿಂದ ಇರುವವರೆಲ್ಲ ತಪಸ್ವಿಗಳೇ ಎಂದು ಅಕ್ಕಮ್ಮ ಪ್ರಶ್ನಿಸುತ್ತಾಳೆ.

ಆವ ಪ್ರಕಾರವಾದಡೇನು? ಅರಿವೆ ಮುಖ್ಯವಯ್ಯಾ, ಆಚಾರವೇ ಪ್ರಾಣವಾದ ರಾಮೇಶ್ವರಲಿಂಗದಲ್ಲಿ
ಅರಿವು ಇಲ್ಲದ ಆಚರಣೆಗಳು ಅಂಧಕಾರಮಯವಾಗಿರುತ್ತವೆ. ಅರಿವಿಲ್ಲದ ಬೊಳು, ಬತ್ತಲೆ, ಜಡೆ ಉಪಯುಕ್ತವಾಗುವುದಿಲ್ಲ. ಅರಿವು ಬೇಕು. ಅರಿವಿನಿಂದ ತನ್ನ ತಾನರಿಯಬಹುದು ಎಂಬುದನ್ನು ಶರಣೆ ಅಕ್ಕಮ್ಮನವರು ಈ ವಚನದ ಮೂಲಕ ಅರಿವು‌ ಮೂಡಿಸಿದ್ದಾರೆ.

ವೀರೇಶ ಸೌದ್ರಿ, ಮಸ್ಕಿ

One thought on “ಅರಿವೆ ಮುಖ್ಯವಯ್ಯಾ

Comments are closed.

Don`t copy text!