ಚಕ್ರವರ್ತಿಯಾಗುತ್ತೇನೆ

(ಡಾ. ಎಂ ಎಂ ಕಲಬುರಗಿಯವರ ಜನ್ಮದಿನ ಇಂದು.
ಲಿಂಗೈಕ್ಯ ಚೇತನಕ್ಕೆ ನಮನಗಳು..)

ಚಕ್ರವರ್ತಿಯಾಗುತ್ತೇನೆ

ನಾನು ಹುಟ್ಟಿದ್ದು ಸಾಯಲಿಕ್ಕೆ ಅಲ್ಲˌ
ಸೂರ್ಯ ಚಂದ್ರರ ಕೂಡ ಬದುಕಲಿಕ್ಕೆ .

ಹಿಮದಂತೆ ಹೆಪ್ಪುಗಟ್ಟದೆ
ಇಳಿಯುತ್ತೇನೆˌ ದುರ್ಜನರ ಎದೆಯಲ್ಲಿ
ದೊಡ್ಡ ದಾಳಿಯಾಗಿ.
ಸುಳಿಯುತ್ತೇನೆˌಸಜ್ಜನರ ಪ್ರಾಣದಲ್ಲಿ
ಪ್ರಾಣವಾಯುವಾಗಿ.
ಇವರಿಬ್ಬರೊಳಗೆ
ಹನಿ ಹನಿಯಾಗಿ ಹಂಚಿಹೋಗುತ್ತೇನೆ.
ಇವರೊಳಗೆ ಒಳಗೆ
ಹನಿ ವಾಹಿನಿಯಾಗಿ ಹರಿಯುತ್ತಲೇ ಇರುತ್ತೇನೆ.

ಇವರ ವಂಶವಾಹಿನಿಯಲ್ಲಿ ತಂದೆಯಾಗಿ ಸತ್ತರೇನಂತೆˌ
ಮಗನಾಗಿ ಮತ್ತೆ ಹುಟ್ಟುತ್ತೇನೆ.
ಇವರನ್ನು ಆಚಂದಾರ್ಕ ಆಳುತ್ತೇನೆ.

ಸೆಲೆಯಲ್ಲಿ ಹನಿಯೊಡೆದು
ಕಳೆದುಕೊಳ್ಳುತ್ತೇನೆ ಹಳ್ಳದಲ್ಲಿ.
ಕೊಚ್ಚಿಹೋದರೇನು ಹೊಳೆಯಲ್ಲಿ
ಬಿಚ್ಚಿಕೊಳ್ಳುತ್ತೇನೆ ಕಡಲಿನಲ್ಲಿ.

ಅವಕಾಶ ಹುಡುಕಿ
ಆಕಾಶದಲ್ಲಿ ಘನವಾಗಿ ನಿಲ್ಲುತ್ತೇನೆ.
ಮತ್ತೆ
ಮಳೆಯಾಗಿ ಇಳಿದುˌ
ಒರತೆಯಾಗಿ ಒಸರುತ್ತೇನೆˌ
ಇಳೆಯ ಗರ್ಭದಲ್ಲಿ ಸುಳಿದು.

ಹೀಗೆ
ಇವರ ವಂಶಚಕ್ರದಲ್ಲಿ
ಚ-ಕ್ರ-ವ-ರ್ತಿ ಆಗುತ್ತೇನೆˌ
ಚಕ್ರ-ವರ್ತಿಯಾಗುತ್ತೇನೆˌ
ಚಕ್ರವರ್ತಿಯಾಗುತ್ತೇನೆ.

~ ಡಾ. ಎಂ ಎಂ ಕಲಬುರ್ಗಿ
(ನೀರು ನೀರಡಿಸಿತ್ತು
ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ)

Don`t copy text!