ಅಗ್ನಿ ಶ್ರೀಧರ್ ಅವರ ‘ಎದೆಗಾರಿಕೆ’ !

ಅಗ್ನಿ ಶ್ರೀಧರ್ ಅವರ ‘ಎದೆಗಾರಿಕೆ’ !

ಅಗ್ನಿ ಶ್ರೀಧರ್ ಪತ್ರಕರ್ತರು, ಲೇಖಕರು, ಚಲನಚಿತ್ರ ಸಂಭಾಷಣೆಗಾರರು ಹಾಗೂ ನಿರ್ದೇಶಕರು ಕೂಡ. ಅಗ್ನಿ ಎಂಬ ವಾರಪತ್ರಿಕೆಯನ್ನೂ ನಡೆಸುತ್ತಿದ್ದರು. ಈಗ ‘ಅಗ್ನಿ’ ಯೂಟ್ಯೂಬ್ ಆಗಿದ್ದರಿಂದ ‘ಅಗ್ನಿ’ ವಾರಪತ್ರಿಕೆಯನ್ನು ನಿಲ್ಲಿಸಿದ್ದಾರೆ.

ಮೊದಲು. ಅವರು ‘ಕರುನಾಡ ಸೇನೆ’ಯ ಸ್ಥಾಪಕರೂ ಸಹ ಆಗಿದ್ದಾರೆ. ನಂತರ ಅವರು ಸಾಪ್ತಾಹಿಕವಾದ ‘ಅಗ್ನಿ’ ಕನ್ನಡ ವೃತ್ತಪತ್ರಿಕೆಯನ್ನು ಆರಂಭಿಸಿದರು, ಆ ವಾರಪತ್ರಿಕೆಯನ್ನು 10-12 ವರ್ಷ ನಡೆಸಿ, ‘ಅಗ್ನಿ’ ಯೂಟ್ಯೂಬ್ ಈಗಷ್ಟೇ ನಡೆಸುತ್ತಿದ್ದಾರೆ.

ವೃತ್ತಿಪರ ಬರಹಗಾರರೂ ಆಗಿದ್ದಾರೆ ಅಗ್ನಿ ಶ್ರೀಧರ್. ಅವರು ‘ದಾದಗಿರಿಯ ದಿನಗಳು’ ಎಂಬ ತಮ್ಮ ಆತ್ಮಕತನವನ್ನು ಬರೆದಿದ್ದಾರೆ. ಅಗ್ನಿ ಅಸ್ತ್ರ ಎಂಬ ಯು- ಟ್ಯೂಬ್ ಚಾನಲ್‌ನಲ್ಲೂ ತಮ್ಮ ವಿಮರ್ಷೆಗಳನ್ನು ಪ್ರಕಟಿಸಿದ್ದಾರೆ.

ಅವರ ಪುಸ್ತಕಗಳೆಂದರೆ ಹೀಗಿವೆ — ಆಧುನಿಕ ಮಾಂತ್ರಿಕರ ಜಾಡಿನಲ್ಲಿ, ಕ್ವಾಂಟಂ ಜಗತ್ತು, ಟಿಬೇಟಿಯನ್ನರ ಸತ್ತವರ ಪುಸ್ತಕ, ಕಾಡುವ ಸಾಧಕರು, ಸಂಗತಿಗಳು, ತೊಟ್ಟಿಕ್ಕುತ್ತಲೇ ಇದೆ ನೆತ್ತರು, ಎದೆಗಾರಿಕೆ, ದಾದಾಗಿರಿಯ ದಿನಗಳು ಭಾಗ-1, ದಾದಾಗಿರಿಯ ದಿನಗಳು ಭಾಗ 2, ದಾದಾಗಿರಿಯ ದಿನಗಳು ಭಾಗ 3. ಈ ಮೂರೂ ಭಾಗಗಳನ್ನು ಕ್ರೋಡಿಕರಿಸಿ ಇಂಗ್ಲೀಷಿನಲ್ಲಿಯೂ ‘My Days in the Underworld – Rise of Bangalore Mafia’ ಎಂಬ ಪುಸ್ತಕವನ್ನು ಬರೆದಿದ್ದಾರೆ ಅಗ್ನಿ ಶ್ರೀಧರ್ ರವರು.

ತಮ್ಮದೇ ಆದ ಪುಸ್ತಕಗಳಾದ ಎದೆಗಾರಿಕೆ ಹಾಗೂ ಆ ದಿನಗಳು ಮತ್ತು ಕಳ್ಳರ ಸಂತೆ ಚಿತ್ರಗಳಿಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ತಮಸ್ಸು ಚಿತ್ರವನ್ನು ಕಥೆ, ಚಿತ್ರಕಥೆಯೊಂದಿಗೆ ನಿರ್ದೇಶನವನ್ನೂ ಅಗ್ನಿ ಶ್ರೀಧರ್ ಮಾಡಿದ್ದಾರೆ. ತಮಸ್ಸು ಚಿತ್ರಕ್ಕೆ ಎರಡನೇ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಯನ್ನು 2010-11ಸಾಲಿನಲ್ಲಿ ಪಡೆದಿದ್ದಾರೆ. ಅದೇ ಚಿತ್ರಕ್ಕೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿಗೆ ಸಹ ಪಾತ್ರರಾಗಿದ್ದಾರೆ.

‘ದಾದಾಗಿರಿಯ ದಿನಗಳು’ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಲಭಿಸಿದೆ.

ಇದಿಷ್ಟು ಅಗ್ನಿ ಶ್ರೀಧರ್ ಅವರ ಪರಿಚಯವಾಗಿದೆ.

ಇನ್ನೂ ನಾನು ಹೇಳಬೇಕಾದ ವಿಷಯ ‘ಎದೆಗಾರಿಕೆ’ ಕಾದಂಬರಿಯನ್ನು ಚಲನಚಿತ್ರ ಮಾಡಿದರು. ಈ ಚಲನಚಿತ್ರವನ್ನು ಸುಮನಾ ಕಿತ್ತೂರು ಅವರು ನಿರ್ದೇಶನ ಮಾಡಿದರು. ಆ ಚಲನಚಿತ್ರವೂ ಬಹು ದೊಡ್ಡ ಹೆಸರು ಮಾಡಿತು..! ಅದರ ಕುರಿತೇ ಈಗ ಮತ್ತೊಮ್ಮೆ ಚಿಂತಿಸುತ್ತಿದ್ದೇನೆ. ಏಕೆಂದರೆ ಈ ಪುಸ್ತಕ ಮತ್ತು ಚಲನಚಿತ್ರ ಚಿಂತನೆಗೆ ಹಚ್ಚುವ ಚಲನಚಿತ್ರವಾಗಿದೆ. ಅದರ ಕುರಿತು ಒಂದಿಷ್ಟು ನೋಡೋಣ.

ಇದೋ ಇಲ್ಲಿದೆ ನೋಡಿ ‘ಎದೆಗಾರಿಕೆ’ ಚಲನಚಿತ್ರದ ಹುರುಳು.

# ಎದೆಗಾರಿಕೆ —

ಭೂಗತ ಜಗತ್ತಿನ ಆಚೆಗಿರುವ ಬಯಲು..!

ಅದ್ಯಾಕೋ ಅಂದು ರಾತ್ರಿ ಅಗ್ನಿ ಶ್ರೀಧರ ಅವರ ‘ಎದೆಗಾರಿಕೆ’ ಕಾದಂಬರಿ ಮತ್ತೆಮತ್ತೇ ನೆನಪಾಯಿತು. ಆ ಕಾದಂಬರಿ ಓದುವುದೇ ಅಥವಾ ‘ಎದೆಗಾರಿಕೆ’ ಸಿನೆಮಾ ನೋಡುವುದೋ ಎಂಬ ಜಿಜ್ಞಾಸೆಯಲ್ಲಿ ಕಾದಂಬರಿ ಓದುವುದು ಬಿಟ್ಟು, ‘ಎದೆಗಾರಿಕೆ’ ಸಿನಿಮಾವನ್ನೇ ನೋಡೋಣವೆಂದು ಅನ್ನಿಸಿತು.

ನನ್ನಲ್ಲಿ ಅಗ್ನಿ ಶ್ರೀಧರ್ ಅವರ ಪುಸ್ತಕಗಳು ಮತ್ತು ಅವರ ಚಲನಚಿತ್ರಗಳ ಸಿಡಿಗಳು ಅಷ್ಟೂ ಇರುವುದರಿಂದ ಈ ಆಸೆ ಹುಟ್ಟಿತು. ಆಗ ನಾನು ಎದೆಗಾರಿಕೆ ಚಲನಚಿತ್ರವನ್ನೇ ನೋಡೋಣವೆಂದು ಬಹುವಾಗಿ ಅನ್ನಿಸಿದ್ದರಿಂದ ಆ ಸಿನೆಮಾ ನೋಡಲು ಹತ್ತಿದೆ. ಆಗ ನನಗೆ ಅನ್ನಿಸಿದ ಕುತೂಹಲಕಾರಿ ವಿಷಯಗಳ ಹೂರಣವೇ ಈ ವಿಮರ್ಶೆ.

ಸಿನಿಮಾವನ್ನು ಎರಡು ರೀತಿಯಲ್ಲಿ ನೋಡುವ ವರ್ಗವಿದೆ. ಆಯಾ ವರ್ಗಕ್ಕೆ ತಕ್ಕಂತೆ ಕತೆಗಳು ಮತ್ತು ಅದರ ನಿರ್ಮಾಣ ವ್ಯವಸ್ಥೆ ರೂಪುಗೊಳ್ಳುತ್ತದೆ. ಇದರ ಮಧ್ಯೆ ಮೂರನೆಯ ವ್ಯವಸ್ಥೆಯೊಂದು ತಲೆಯೆತ್ತಿದೆ. ಅದು ಇವರೆಡನ್ನೂ ಒಟ್ಟಾಗಿಸುವ ಪ್ರಯತ್ನದಲ್ಲಿದೆ. ಇಂತಹ ಮೂರನೆಯ ವ್ಯವಸ್ಥೆಗೆ ಸುಮನಾ ಶ್ರೀನಿವಾಸ್ ಕಿತ್ತೂರು ನಿರ್ದೇಶನದ ಎದೆಗಾರಿಕೆ ಹೊಸ ಸೇರ್ಪಡೆ ಆಗುತ್ತದೆ.

ನಿಮಗೂ ಗೊತ್ತಿರಬಹುದು. ಎದೆಗಾರಿಕೆ ಪತ್ರಕರ್ತ ಅಗ್ನಿ ಶ್ರೀಧರ್ ಅವರ ಅದೇ ಹೆಸರಿನ ಕಾದಂಬರಿ ಆಧಾರಿತ ಚಿತ್ರ. ಇದು ನೈಜ ಘಟನೆಗಳ ಆಧಾರದ ಮೇಲೆ ರಚಿಸಲ್ಪಟ್ಟ ಕತೆಯಾಗಿದೆ. ಕಾದಂಬರಿ ಓದುತ್ತಾ ಹೋದಾಗ, ಅದು ಭೂಗತ ಜಗತ್ತಿನ ನಂಟಿರುವ ವ್ಯಕ್ತಿಗಳ ಕತೆಯೆಂದು ಮೇಲ್ನೋಟಕ್ಕೆ ಅನಿಸುತ್ತದೆ. ಆದರೆ, ಆಳಕ್ಕೆ ಇಳಿದಂತೆಲ್ಲ ಹಲವು ಕುತೂಹಲಗಳು ಹುಟ್ಟಿಕೊಳ್ಳುತ್ತವೆ. ಇಂತಹ ಕುತೂಹಲಗಳು ಓದುಗನಿಗೆ ಸುಲಭವಾಗಿ ಸಿಕ್ಕಷ್ಟು ಸಿನಿಮಾ ನೋಡುವ ಪ್ರೇಕ್ಷಕನಿಗೆ ಸಿಗಲಾರದು. ಯಾಕೆಂದರೆ, ಸಿನಿಮಾ ನೋಡುವ ಪ್ರೇಕ್ಷಕ ಬಹುತೇಕ ಸಿನಿಕತನದ ಮನಸ್ಥಿತಿಯವನು. ಹೀಗಿರುವಾಗ ಕಾದಂಬರಿ ಆಧಾರಿತ, ಅದರಲ್ಲೂ ಭೂಗತ ಜಗತ್ತಿನ ಕತೆಗಳನ್ನು ತೆರೆಗೆ ಅಳವಡಿಸುವಾಗ ನೋಡುಗನ ಭಾವನೆಗಳ ಜತೆ ನಿರ್ದೇಶಕ ವಿಹರಿಸಬೇಕಾಗುತ್ತದೆ. ಆತನ ಸಿನಿಕತನವನ್ನು ಸಮರ್ಥವಾಗಿ ವಶೀಕರಣ ಮಾಡಿಕೊಳ್ಳಬೇಕಾಗುತ್ತದೆ. ಪಾತ್ರಗಳೊಂದಿಗೆ ನೋಡುಗ ಸಂವಾದಿಯಾದಾಗ ಮಾತ್ರ ಈ ರೀತಿ ಸಿನಿಮಾಗಳು ಗೆಲ್ಲುತ್ತವೆ. ಈ ಕೆಲಸವನ್ನು ನಿರ್ದೇಶಕಿ ಸುಮನಾ ಶ್ರೀನಿವಾಸ್ ಕಿತ್ತೂರ್ ಅಚ್ಚುಕಟ್ಟಾಗಿ ಮಾಡಿದ್ದಾರೆ.

ರೌಡಿಸಂ ಸಿನಿಮಾಗಳು ಅಂದಾಕ್ಷಣ ಸಾಮಾನ್ಯವಾಗಿ ರಕ್ತದೋಕಳಿ ಹರಿಯುತ್ತದೆ. ಸೇಡಿನ ಭೂತ ಕಾಡುತ್ತದೆ. ಕಾಮುಕ ಕಣ್ಣುಗಳು ಅರಳಿರುತ್ತವೆ. ಇಲ್ಲಿ ಇದಾವುದೂ ಇಲ್ಲ. ಭೂಗತ ಪಾತಕಿಗಳ ಎದೆಯಲ್ಲೂ ಪ್ರೇಮ ಅರಳುತ್ತದೆ. ಅವರಲ್ಲೂ ಮನುಷ್ಯತ್ವ ಇರುತ್ತದೆ. ಅವರನ್ನು ಅರ್ಥೈಸುವ ರೀತಿಯಲ್ಲಿ ಬದಲಾಗಬೇಕು. ಹೀಗೆ ಚರ್ಚೆಗೆ ಒಡ್ಡಬಲ್ಲ ಒಂದಷ್ಟು ವಿಚಾರಗಳು ಸಿಗುತ್ತವೆ.

ನಾಗರಿಕ ಸಮಾಜದಲ್ಲಿ ರೌಡಿಸಂ ಒಪ್ಪತಕ್ಕದ್ದಲ್ಲ. ಆದರೆ, ಅವರ ವರ್ತನೆಯಿಂದ ಕಲಿಯಬೇಕಾದ ವಿಷಯಗಳು ನಾಗರಿಕ ಸಮಾಜಕ್ಕೆ ತುಂಬಾ ಇವೆ. ಇವೆಲ್ಲ ಆಶಯಗಳನ್ನು ಹೊತ್ತು ಈ ಚಿತ್ರ ಬಂದಿದೆ. ತುಂಬಾ ಕುತೂಹಲ ಹುಟ್ಟಿಸುವ ಸಂಗತಿ ಅಂದರೆ, ಚಿತ್ರಕತೆ. ಅನಗತ್ಯವಾದ ಒಂದೇ ಒಂದು ದೃಶ್ಯವೂ ಚಿತ್ರದಲ್ಲಿ ಇಲ್ಲ. ಪಾತ್ರಗಳಿಗೆ ನ್ಯಾಯ ಒದಗಿಸುವುದು ಅಂತಾರಲ್ಲ, ಆ ರೀತಿಯಲ್ಲಿ ಪ್ರತಿ ಪಾತ್ರಗಳು ಕಾಣಿಸುತ್ತವೆ. ಅಚ್ಚರಿಯ ಸಂಗತಿ ಅಂದರೆ, ಪ್ರತಿ ಅರ್ಧ ಗಂಟೆಗೊಮ್ಮೆ ಕತಾ ನಾಯಕ ಬದಲಾಗುವುದು. ಇಡೀ ಚಿತ್ರ ಸೋನು ಸುತ್ತಲೇ ಸುತ್ತಿದರೂ, ಮೊದಲಾರ್ಧ ಮುತ್ತಪ್ಪಣ್ಣ ಪಾತ್ರ ಮುಖ್ಯವೆನಿಸುತ್ತದೆ. ಆಮೇಲೆ ಸೋನು. ಕೊನೆಯಲ್ಲಿ ಶ್ರೀಧರ್ ನಾಯಕರಾ? ಅನ್ನುವ ಅಚ್ಚರಿ ಕಾಡುತ್ತದೆ. ಚಿತ್ರ ಮುಗಿಸಿ ಆಚೆ ಬಂದಾಗ ಒಂದೊಳ್ಳೆ ಸಿನಿಮಾ ನೋಡುವ ಅನುಭವ ಸಿಗುವುದು ಗ್ಯಾರಂಟಿಯಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಆದಿತ್ಯ ಸಿನಿಮಾಗಳನ್ನು ಕಂಡರೆ ಭಯಪಡುವಂತಹ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಸೋನಾ ಪಾತ್ರದಲ್ಲಿ ಆದಿತ್ಯ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಬಚ್ಚನ್ ಪಾತ್ರದಲ್ಲಿ ಸೃಜನ್ ಲೋಕೇಶ್, ಶ್ರೀಧರ್ ಪಾತ್ರದಲ್ಲಿ ಅತುಲ್ ಕುಲಕರ್ಣಿ, ಮುತ್ತಪ್ಪಣ್ಣ ಪಾತ್ರದಲ್ಲಿ ಧರ್ಮ ಉತ್ತಮ ನಟನೆ ಮಾಡಿದ್ದಾರೆ.

ನಾಯಕಿ ಗ್ಲಾಮರ್ ಪಾತ್ರಕ್ಕೆ ಮಾತ್ರ ಸೀಮಿತ ಅನ್ನುವುದು ಈ ಸಿನಿಮಾದಲ್ಲಿ ಸುಳ್ಳಾಗಿದೆ. ಏಳೆಂಟು ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ನಾಯಕಿ ಆಕಾಂಕ್ಷ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಇರುವ ಒಂದೇ ಒಂದು ಹಾಡಿನಲ್ಲೂ ಸುಂದರವಾಗಿ ಕಾಣಿಸುತ್ತಾರೆ. ಬಿ.ರಾಕೇಶ್ ಛಾಯಾಗ್ರಹಣದಲ್ಲಿ ಕರ್ನಾಟಕದ ಸಲಕೇಶಪುರಕ್ಕಿಂತಲೂ ಬಾಂಬೆ ಸೊಗಸಾಗಿ ಮೂಡಿ ಬಂದಿದೆ. ಹಿನ್ನೆಲೆ ಸಂಗೀತದಲ್ಲಿ ಸಾಧು ಕೋಕಿಲಾ ಸಿಕ್ಸರ್ ಬಾರಿಸಿದ್ದಾರೆ. ದಾಳಿಕೋರಂಗೆ ಧರ್ಮ ಉಂಟೆ? ಎಂಬ ಮಾತಿನಂತೆ, ಹೊಡಿತೀನಿ ಅಂತ ನಿರ್ಧಾರ ಮಾಡಿದೋನಿಗೆ ಮಕ್ಕಳಾದ್ರೇನು, ಮಹಿಳೆಯರಾದ್ರೇನು? ಅನ್ನುವಂತಹ ಸಂಭಾಷಣೆಗಳು ಇಷ್ಟವಾಗುತ್ತವೆ. ಅಲ್ಲದೇ ರೌಡಿಗಳಿಗೂ ಇರುವ ವಿಶೇಷ ಹವ್ಯಾಸಗಳನ್ನು ಹಿಡಿದಿಟ್ಟ ರೀತಿ ಚೆನ್ನಾಗಿದೆ.

ಇಲ್ಲಿಯವರೆಗೂ ಬೆಂಗಳೂರಿನ ರೌಡಿಸಂ ಕತೆಗಳನ್ನು ತೆರೆ ಮೇಲೆ ನೋಡಿದ ಪ್ರೇಕ್ಷಕರಿಗೆ ಮತ್ತೊಂದು ಜಗತ್ತಿನ ಈ ಹೊಸ ಕತೆ ವಿಶೇಷ ಅನಿಸಬಹುದು. ಈ ಪ್ರಯತ್ನವನ್ನು ಅಗ್ನಿ ಶ್ರೀಧರ್ ಅವರು, ಆ ದಿನಗಳು ಚಿತ್ರದಲ್ಲಿ ಮಾಡಿದ್ದರು. ಆನಂತರ ಬಂದ ಮತ್ತೊಂದು ಸಿನಿಮಾ ಅವರದ್ದೇ ಕತೆಯ ಎದೆಗಾರಿಕೆ ಕೂಡ..!

# ಕೆ.ಶಿವು.ಲಕ್ಕಣ್ಣವರ

Don`t copy text!