ಗಝಲ್
ಸುಮ್ಮನಿರು- ರದೀಫ್ ಬಳಸಿ
ಹಾದಿಯಲಿ ಮುಳ್ಳುಗಳಿದ್ದರೂ ಸರಿಸಿ ನಡೆಯಬಹುದು ಸುಮ್ಮನಿರು/
ಹಣತೆಯ ತೈಲಕಸಿದರೂ ನಕ್ಷತ್ರ ಗಳ ಬೆಳಕಿಹುದು ಸುಮ್ಮನಿರು/
ಕತ್ತಲೆಯ ಗೂಡಿನಲ್ಲಿ ತಪ್ಪಿರದ ನಿನ್ನನ್ನು ಕೂಡಿಟ್ಟಿಹರು/
ಬಿಸಿಲಕೋಲೊಂದು ತೂರಿಬಂದು ದಾರಿ ತೋರಿಹುದು ಸುಮ್ಮನಿರು/
ಕೂಗದಂತೆ ನಿನ್ನ ದನಿಯ ಮೌನಶರಧಿಯಲಿ ಮುಳುಗಿಸಿರುವರು/
ಮೆಲುಮಾತಿನ ತೆಪ್ಪವೊಂದು ತೇಲಿ ಬರುತಲಿಹುದು ಸುಮ್ಮನಿರು/
ಓಡಿ ಗುರಿಮುಟ್ಟದಂತೆ ಕಾಲುಗಳಿಗೆ ಸಂಕೋಲೆಯ ತೊಡಿಸಿಹರು/ಹರಿದೊಗೆದು ತೆವಳುತ್ತಲೇ ಮುಂದೆ ಸಾಗಬಹುದು ಸುಮ್ಮನಿರು/
ಕನಸಿನಂಗಳದ ಚಲುವ ಚಿತ್ತಾರಗಳನೆಲ್ಲ ಹೊಸಕಿ ಹಾಕಿಹರು/
ತುಳಿದು ಅಳಿಸಿದರೂ ಮತ್ತೆ ಬೆಳೆದುನಿಲ್ಲಬಹುದು ಸುಮ್ಮನಿರು/
ಬೆದರಿಕೆಗಳಿಗೆ ಹೆದರಿ ಅನಾಚಾರಗಳಿಗೆ ನಲುಗಿ ಉಡುಗಬೇಡ/
ಇಂದು ಬಿದ್ದರೂ ನಾಳೆ ತಲೆಎತ್ತಿ ಬಾಳಿಬದುಕಬಹುದು ಸುಮ್ಮನಿರು/
–ಇಂದಿರಾ ಮೋಟೆಬೆನ್ನೂರ. ಬೆಳಗಾವಿ.