ಲಿಂಗದೊಳು ಬಯಲಾದ ಈಶ್ವರ ಮಂಟೂರು
ನಿನ್ನೆ ಮಾತಾಡಿದ ಈಶ್ವರ ಮಂಟೂರು ಇಂದು ಇಲ್ಲ. ನಂಬಲಾಗುತ್ತಿಲ್ಲ
ಇಂದು ಮಧ್ಯಾಹ್ನ ೧೨ ಗಂಟೆಗೆ ಇಲ್ಲಕಲ್ಲಿನ ಶರಣೆ, ಆಧುನಿಕ ವಚನಕಾರ್ತಿ ಸವಿತಾ ಮಾಟೂರು ಪೋನ್ ಮಾಡಿ ಈಶ್ವರ ಮಂಟೂರು ಲಿಂಗದೊಳಗಾಗಿದ್ದಾರೆ ಎಂದಾಗ ನಂಬಲಾಗಲಿಲ್ಲ. ನಿನ್ನೆ (ಬುಧವಾರ ) ಸಂಜೆ ೬ ಗಂಟೆಗೆ ನನಗೆ ದೂರವಾಣಿ ಮಾಡಿ.ಡಿ.೨೫, ೨೬,೨೭ ಮೂರು ದಿನ ಕಾರ್ಯಕ್ರಮಕ್ಕೆ ಬರಬೇಕು ತಪ್ಪಿಸಬೇಡ ಎಂದು ಅಪ್ಪಣೆ ಮಾಡಿದರು. ಡಿ.೨೭ ರಂದು ತಂಗಿಯ ಮದುವೆ ಇದೆ. ಮುಂದಿನ ಬಾರಿ ಖಂಡಿತ ಬರುವೆ ಎಂದು ವಿನಂತಿಸಿದಾಗ ಆಗಲಿ ಎಂದು ತಂಗಿ ಮದುವೆಗೆ ಶುಭಾಶಯಗಳನ್ನು ಹೇಳಿದರು. ಅವರಾಡಿದ ಮಾತುಗಳು ಇನ್ನು ನನ್ನ ಕಿವಿಯಲ್ಲಿ ಗುಂಯ್ಯಗುಟ್ಟುತ್ತಿವೆ.
ಇಂದು ಬೆಳಿಗ್ಗೆ ಈಶ್ವರ ಮಂಟೂರು ಇಲ್ಲ ಎಂಬುದು ಖಚಿತವಾಗಿದ್ದರು ಮನಸ್ಸು ಯಾಕೋ ಒಪ್ಪುತ್ತಿಲ್ಲ
ಶ್ರದ್ಧಾಂಜಲಿ
ಶರಣ ಈಶ್ವರ ಮಂಟೂರು ಲಿಂಗೈಕ್ಯರಾಗಿದ್ದು ಶರಣ ಸಂಸ್ಕೃತಿಯ ವಾರಸುದಾರನನ್ನು ಕಳೆದುಕೊಂಡಿದ್ದೇವೆ. ಸಾಹಿತ್ಯ ರಚನಕಾರ, ಸಂಗೀತಗಾರ ವಿಶೇಷವಾಗಿ ವಚನ ಸಾಹಿತ್ಯವನ್ನು ಅಧ್ಯಯನ ಮಾಡಿ ಶ್ರೋತೃಗಳಿಗೆ ಮುಟ್ಟಿಸುತ್ತಿದ್ದ ರೀತಿ ಅನನ್ಯವಾಗಿತ್ತು. ಒಬ್ಬ ಕ್ರೀಯಾಶೀಲ ವ್ಯಕ್ತಿ ಶಕ್ತಿಯನ್ನು ಕಳೆದುಕೊಂಡಿದ್ದೇವೆ ಎಂದು ಸಂತೆಕೆಲ್ಲೂರಿನ ಘನಮಠೇಶ್ವರ ಮಠದ ಪೂಜ್ಯ ಗುರುಬಸವ ಮಹಾಸ್ವಾಮೀಜಿ ಕಂಬನಿ ಮಿಡಿದಿದ್ದಾರೆ.
ಮಸ್ಕಿಯ ಗಚ್ಚಿನಮಠದ ಪೂಜ್ಯರಾದ ಶ್ರೀ ವರರುದ್ರಮುನಿ ಶಿವಾಚಾರ್ಯರು ಮಾತನಾಡಿ ನಾಡಿನ ಪ್ರಮುಖ ಪ್ರವಚನಕಾರರಾಗಿದ್ದ ಈಶ್ವರ ಮಂಟೂರು ಅವರ ಸಾಧನೆ, ಬಡವರ ಬಗ್ಗೆ ಅವರಿಗಿದ್ದ ಕಾಳಜಿ, ಅನಾಥ ಮಕ್ಕಳ ಪೋಷಣೆ ಮಾಡುವ ಮೂಲಕ ಉದಾತ್ತ, ಆದರ್ಶ ವ್ಯಕ್ತಿಯಾಗಿದ್ದರು ಎಂದು ಸ್ಮರಿಸಿದ್ದಾರೆ.
ಕುಷ್ಟಗಿ ಶಾಸಕ ಅಮರೇಗೌಡ ಭಯ್ಯಾಪುರ, ಮಸ್ಕಿಯ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಡಾ.ಶಿವಶರಣಪ್ಪ ಇತ್ಲಿ, ಸಿದ್ದಲಿಂಗಯ್ಯ ಗಚ್ಚಿನಮಠ, ಮಲ್ಲಪ್ಪ ಕುಡತನಿ, ಷಡಕ್ಷರಪ್ಪ ಬಾಳೆಕಾಯಿ, ವೀರೇಶ ಸೌದ್ರಿ, ಮಹಾಂತೇಶ ಮಸ್ಕಿ, ಪ್ರಕಾಶ ಮಸ್ಕಿ, ಪ್ರಕಾಶ ಧಾರಿವಾಲ, ದಯನಂದ ಜೋಗಿನ್, ಎನ್.ಶಿವಕುಮಾರ, ಮಲ್ಲಿಕಾರ್ಜುನ ಹಳ್ಳಿ, ಮಂಜುನಾಥ ಬಿಜ್ಜಳ ಹಾಗೂ ಇತರರು ಸಂತಾಪ ಸೂಚಿಸಿದ್ದಾರೆ.