ಶರಣಶ್ರೀ ಡಾ. ಈಶ್ವರ ಮಂಟೂರ  ಅನುಭಾವಿ ಶರಣರು

ಶರಣಶ್ರೀ ಡಾ. ಈಶ್ವರ ಮಂಟೂರ  ಅನುಭಾವಿ ಶರಣರು

ಶರಣಶ್ರೀ ಡಾ. ಈಶ್ವರ ಮಂಟೂರ ಅವರು ಅನುಭಾವಿ ಪ್ರವಚನಕಾರರಾಗಿ, ಸಾಹಿತಿಗಳಾಗಿ ಬದುಕು ಸವೆಸಿದವರು.

ಶರಣಶ್ರೀ ಡಾ. ಈಶ್ವರ ಮಂಟೂರ ಅವರು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹುನ್ನೂರಿನ ‘ಕಲಾ ನೇಕಾರ’ ಕುಟುಂಬದಲ್ಲಿ 23-03-1972 ರಂದು ಜನಿಸಿದರು. ತಂದೆ ಶ್ರೀಶೈಲಪ್ಪ ತಾಯಿ ಅನ್ನಪೂರ್ಣ.

1993 ರಲ್ಲಿ ಬಿ.ಕಾಂ. ಪದವಿ ಪಡೆದರು. ನಂತರ ಅಣ್ಣಾ ಗೃಹಪಾಠ ಶಿಕ್ಷಣ ಕೇಂದ್ರ ಆರಂಭಿಸಿ ಐದು ವರ್ಷಗಳ ಕಾಲ ಆಧ್ಯಾತ್ಮಿಕ ತಳಹದಿಯ ಮೇಲೆ ಸಹಸ್ರಾರು ಮಕ್ಕಳಿಗೆ ಜ್ಞಾನ ದಾಸೋಹ ಮಾಡುತ್ತ ಬ್ಯಾಂಕಿನಲ್ಲಿ ಕರಣಿಕರಾಗಿ ಸೇವೆ ಸಲ್ಲಿಸಿದವರು.

ಬಸವಾದಿ ಶಿವಶರಣರ ತತ್ತ್ವಸಿದ್ಧಾಂತಗಳನ್ನು ಬಿತ್ತರಿಸುವ ಸಂಕಲ್ಪದಿಂದ ಬ್ಯಾಂಕ್ ಹುದ್ದೆಗೆ ರಾಜೀನಾಮೆ ನೀಡಿ, ಶರಣ ಪಥದಲ್ಲಿ ಹೆಜ್ಜೆಯಿರಿಸಿದವರು.

ಬಸವ ಭಾವಗೀತೆಗಳು, ವಚನವಂದನೆ ಮುಂತಾದ ಸಿ. ಡಿ., ವ್ಹಿ.ಸಿ.ಡಿ ಗಳನ್ನು ನೀಡಿದ್ದಾರೆ.

ಪ್ರವಚನ ಭಾಸ್ಕರ, ಪ್ರವಚನ ಪ್ರಭಾಕರ, ಪ್ರವಚನ ಚೇತನ, ಪ್ರವಚನ ಭೂಷಣ, ಸಂಗೀತ ಸುಧಾಕರ, ಕಂಚಿನ ಕಂಠದ ವೀರವಾಣಿ, ಶರಣಶ್ರೀ ಶ್ರೇಷ್ಠ ಕವಿ ಮುಂತಾದ ಗೌರವ ಬಿರುದುಗಳಿಗೆ ಭಾಜನರಾಗಿದ್ದಾರೆ.

ಎಂ. ಎ. ಪದವಿ ಪಡೆದ ನಂತರ “ಕನ್ನಡದಲ್ಲಿ ಪ್ರವಚನ ಸಾಹಿತ್ಯ” ಪಿಎಚ್.ಡಿ. ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ 2013 ಡಿಸೆಂಬರ್ 21 ರ ನುಡಿಹಬ್ಬದ ಸಂಭ್ರಮದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದರು.

ಜಮಖಂಡಿ ತಾಲೂಕಿನ ಹುನ್ನೂರ-ಮಧುರಖಂಡಿಯ ಸುಂದರ ಪರಿಸರದಲ್ಲಿ “ಬಸವಜ್ಞಾನ ಗುರುಕುಲ” ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ ಆಶ್ರಮವನ್ನು ಸ್ಥಾಪಿಸಿದ್ದಾರೆ.

ಡಿಸೆಂಬರ್ 25, 26 ಮತ್ತು 27 ಮೂರು ದಿನಗಳ ಕಾಲ “ಶರಣ ಸಂಸ್ಕೃತಿ ಉತ್ಸವ ಹಾಗೂ ಜಾನಪದ ಕಲಾಮಹೋತ್ಸವ” ವನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸುವ ಸಂಕಲ್ಪ ಮಾಡಿದ್ದರು.

ಕೇವಲ ಒಂದು ವಾರದ ಕೆಳಗೆ ಇಳಕಲ್ಲಿನಲ್ಲಿ ಭೇಟಿಯಾದ ಸಂದರ್ಭದಲ್ಲಿ, ನನ್ನ ಮಗಳ ಮದುವೆ ಪತ್ರಿಕೆ ನೀಡಿದಾಗ ಹೃತ್ಪೂರ್ವಕವಾಗಿ ಆಶೀರ್ವಾದಿಸಿದ್ದರು. ಕಮ್ಮಾರ ಅವರೇ ನೀವೂ ಸಹ ನಮ್ಮ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಕೂಡ ಕೇಳಿಕೊಂಡಿದ್ದರು.

ಕಾಯಕದಲ್ಲೇ ಕೈಲಾಸ ಇದೆ ಎಂಬುದನ್ನು ಕರಸ್ಥಳದಲ್ಲಿ ಪ್ರತಿಷ್ಠಾಪಿಸಿಕೊಂಡ ಶಿವಾನುಭಾವಿ ಶರಣರು ಲಿಂಗೈಕ್ಯರಾದ ಸುದ್ದಿ ವಿಷಾದನೀಯ.

ಬಸವಪಥದ ಪ್ರಮುಖ ಕೊಂಡಿ ಕಳಚಿದ್ದು ಬಸವ ಚಿಂತನೆಯ ಬಳಗಕ್ಕೆ ತುಂಬಲಾರದ ನಷ್ಟ.

ವಿಷಾದದೊಂದಿಗೆ ಶೃದ್ಧಾಂಜಲಿ.

ವಿಜಯಕುಮಾರ ಕಮ್ಮಾರ

Don`t copy text!