ಬಂದು ಬಿಡು ನನ್ನೆದುರು

 

ಬಂದು ಬಿಡು ನನ್ನೆದುರು

ಒಂದು ಸೂರ್ಯೋದಯದ ಸಮಯದಲ್ಲಿ
ಬಂದು ಬಿಡು ನನ್ನೆದುರು

ಆಗಿನ್ನು ಹುಟ್ಟಿದ ಹಸುಗೂಸನ್ನು ತಾಯಿ ಎತ್ತಿಕೊಳ್ಳುವಂತೆ
ನನ್ನ ಎತ್ತಿಕೋ ನಿನ್ನ ವಿಶಾಲವಾದ
ಪ್ರೇಮ ತುಂಬಿದ ತೋಳುಗಳಲ್ಲಿ

ನನ್ನೆಲ್ಲ ಕಡುಮೋಹಕಾಮಗಳ ಬಾರವನಿಲ್ಲೇ
ನೆಲದಲ್ಲೇ ಬಿಟ್ಟು ಹಗುರಾಗುತ್ತೇನೆ
ಹತ್ತಿಯ ಹಾಗೆ

ಹಾರಿಬಿಡು ನನ್ನ ಕರೆದುಕೊಂಡು
ಆ ನೀಲಾಕಾಶದ ಕೆಳಗಿನ ಕಡಲಿನಾ ತೀರದತ್ತ
ಇಳಿಸಲ್ಲೆನ್ನ ಮೆಲ್ಲಗೆ ಕಡುನೀಲಿಕಡಲಿನೊಳಗೆ

ಸಂಜೆ ಬರುವ ಸೂರ್ಯನೊಳಗೆ ಲೀನವಾಗಿ ಬಿಡುತ್ತೇನೆ
ಇನ್ನೂ ಏನಾದರು ಉಳಿದಿದ್ದರೆ ನನ್ನ ಅಹಮ್ಮಿನ ತುಣುಕುಗಳು
ಉರಿದು ಹೋಗಲವನ ಶಾಖದೊಳಗೆ

ಮತ್ತೆ ಹುಟ್ಟುವ ಮಾತೆಲ್ಲಿಯದು
ಮರುದಿನ ಬರುತ್ತೇನೀ ಜಗಕೆ
ನಾನೂ ಹೊಸ ಸೂರ್ಯನಾಗಿ

ಮಧುಸೂಧನ ರಂಗೇನಹಳ್ಳಿ

Don`t copy text!