ಬಸವ ಬೆಳಗು

ಬಸವ ಬೆಳಗು

ಬಸವ ಬಾರೈ ಮರ್ತ್ಯಲೋಕದೊಳಗೆ ಭಕ್ತರುಂಟೆ

ಹೇಳಯ್ಯಾ ಮತ್ತಾರೂ ಇಲ್ಲವಯ್ಯಾ ಮತ್ತಾರೂ

ಇಲ್ಲವಯ್ಯಾ ಮತ್ತಾರೂ ಇಲ್ಲವಯ್ಯಾ ನಾನೊಬ್ಬ

ನೇ ಭಕ್ತನು ಮರ್ತ್ಯ ಲೋಕದೊಳಗಣ

ಭಕ್ತರೆಲ್ಲರೂ ಜಂಗಮರು ಲಿಂಗ ನೀನೇ ಅಯ್ಯಾ

ಕೂಡಲ ಸಂಗಮ ದೇವಾ.

ಬಸವಣ್ಣನವರ ಈ ವಚನ ತಾತ್ವಿಕ ಭಕ್ತಿಯ ನಿವೇದನೆಯಾಗಿದೆ. ಭಕ್ತ ಮತ್ತು ಭಗವಂತನ ತಾದಾತ್ಮಕ ಅನುಸಂಧಾನದ ಪ್ರವೇಶವನ್ನು ಒದಗಿಸುತ್ತದೆ. ಈ ವಚನದ ಒಡಲಲ್ಲಿ ಭಾವದ ಗೇಯತೆಯನ್ನು ಕಾಣಬಹುದು.ಗೀತ ಮೀಮಾಂಸಾ ಸಂವಾದದ ಜೊತೆಗೆ ಕವಿ ಪ್ರಜ್ಞೆ ಯನ್ನು ಪ್ರೇರೇಪಿಸುತ್ತದೆ.

೧೨ ನೇ ಶತಮಾನದಲ್ಲಿಯೇ ಶರಣರು ವಚನ ಗಳನ್ನು ಹಾಡಲು ಸಾದ್ಯ ಎಂದು ತೋರಿಸಿ ಬರೆದವರು ಶರಣರಾಗಿದ್ದರು”.ಆನು ಒಲಿದಂತೆ ಹಾಡುವೆನಯ್ಯಾ”ಈ ಗೀತ ಗುಣವನ್ನು ಗಮನಿಸ ಬೇಕು. ಭಾವಾತೀತವಾದ ಗುಣ ವಚನ ಗಳಿಗಿದ್ದರೆ ಭಾವ ಗೀತೆಯನ್ನು ಹೋಲುತ್ತದೆ. “ಬಸವ ಬಾರೈ ಮರ್ತ್ಯಲೋಕದೊಳಗೆ” ಇಲ್ಲಿ ಶಿವಭಕ್ತನ ಅದ್ವೈತ ಮನಸ್ಥಿತಿಯ ಸಂವಾದ ವಿದಾಗಿದೆ.ಭಕ್ತಿಯ ತುರೀಯಾವಸ್ಥೆ ಯಲ್ಲಿ ಭಾವವನ್ನು ತತ್ವ ವಾಗಿಸುವ ಪರಿಕ್ರಮ. ಶರಣಧರ್ಮದ ತತ್ವದಲ್ಲಿ ಷಟ್ಸ್ಥಲಗಳು ಭಕ್ತನ ಮನದ ಸೋಪಾನಗಳು.ಭಕ್ತಿಯ ಪ್ರಾಥಮಿಕ ನೆಲೆಯಲ್ಲಿ ಭಕ್ತ ಸ್ಥಲ ಮಹೇಶ ಪ್ರಸಾದಿ ಪ್ರಾಣಲಿಂಗ ಶರಣ ಮತ್ತು ಐಕ್ಯಸ್ಥಲ ಗಳು ಧರ್ಮದ ಸ್ವತಂತ್ರ ರೂಪಗಳು.
ಭಕ್ತಿ ಮಾರ್ಗದ ವೈಚಾರಿಕತೆಗೆ “ಮತ್ತಾರು ಇಲ್ಲವಯ್ಯ” ಎನ್ನುವ ಪುನರಾವರ್ತನೆ ಗುರು-ಲಿಂಗ-ಜಂಗಮದ ಭಾವ ಸ್ಥಿತಿಯದು. ಹೀಗಾಗಿ ಅಣ್ಣನ ಗೌಣ ಭಕ್ತಿ ಪರಾ ಭಕ್ತಿಯಾಗಿ ನಾನೊಬ್ಬನೇ ಭಕ್ತ. ಎನ್ನುವ ದ್ವಿಗುಣ ನೀತಿ. ಶಬ್ದಗಳಿಗೆ ಹೊಸ ಅರ್ಥವನ್ನು ನೀಡುವ ಮುಕ್ತತೆಯಾಗಿದೆ. ನಾನೊಬ್ಬನೇ ಭಕ್ತ ಎನ್ನುವ ವಿಚಾರದಲ್ಲಿ ಭಕ್ತನಲ್ಲಿ ಭಕ್ತ ನಾಗುವ ಭಕ್ತನಲ್ಲಿ ಪ್ರಾಣಲಿಂಗಿ ಯಾಗುವ ಭಕ್ತನಾಗಿ ಶರಣೆಂದು ಶರಣಾಗುವ ಐಕ್ಯ ಸ್ಥಿತಿಯ ಅನುಭಾವಿಕ ನೆಲೆಯದ. “ಮತ್ತಾರು ಇಲ್ಲವಯ್ಯ ಎನ್ನುವ ಪುನರಾವರ್ತನೆಯು ಭಕ್ತಿಮಾರ್ಗದ ಹಾಡಾಗಿದೆ. ಭಾಷೆಗೆ ಸುಂದರತೆಯನ್ನು ಕೊಡುವ ಸಂಗೀತದ ಧ್ಯಾನಸ್ಥ ಮನಸ್ಥಿತಿಯದು. ಹೀಗಾಗಿ ಹಾಡಿನ ಲಯ ಮತ್ತು ನಮ್ರ ಭಕ್ತಿ,. ಸಂಗೀತಕ್ಕೆ ಪ್ರೇರೇಪಿಸುತ್ತವೆ.
“ಭಕ್ತರಲ್ಲರೂ ಜಂಗಮರು ” ಶರಣಧರ್ಮದ ಕವಿಮನಸ್ಸಿನ ರೂಪಕವಾಗಿದೆ. ಜಂಗಮ ವ್ಯವಸ್ಥೆಯ ಚಾರಿತ್ರಿಕ ರೂಪ ಶರಣ ಸಮುದಾಯದಲ್ಲಿ ಶಾಶ್ವತವಾಗಿ ಗಟ್ಟಿಗೊಳ್ಳು ವುದಾಗಿದೆ. ಜಂಗಮ ಲಿಂಗ ವಾಗಬೇಕಾದರೆ ಚರವೇ ಜಂಗಮವೆಂಬ .ತೀರ್ಮಾನ ಅಣ್ಣನದು. ಮತ್ತಾರು ಅಲ್ಲ ವಯ್ಯ ಆಲಾಪನೆ ಮೂರು ರೀತಿಯದು. ಸ್ವಯ,ಚರ,ಪರ, ಸ್ವಯವೆಂದರೆ ತಾನು, ಚರ ವೆಂದರೆ ಚರಿಸುವುದು, ಪರ ವೆಂದರೆ ಅರಿವು. ಹೀಗಾಗಿ ಲಿಂಗ ಪೂಜೆಗೆ ಪದವಿದೆ, ಫಲವಿದೆ, ಭವವಿದೆ. ಜಂಗಮ ಪೂಜೆಗೆ ಪದವಿಲ್ಲ ಫಲವಿಲ್ಲ ಹುಟ್ಟು ಸಾವು ಗಳಿಲ್ಲ. ಜಂಗಮ ತತ್ವವನ್ನು ಘನೀ ಕರೆಸಿಕೊಳ್ಳುವ ಅನಿವಾರ್ಯತೆಯಲ್ಲಿ ತತ್ವವೇ ಕಾವ್ಯವಾಗಿದೆ. ಭಕ್ತಿಯ ಘನತೆ ಸಾಧಕನ ಅನುಭಾವಾಗಿದೆ. ಗುರು ಲಿಂಗ ಜಂಗಮದ ನಮ್ರತೆ ಯಾಗಿದೆ. ಇವರು ಮರ್ತ್ಯ ಲೋಕದ ಭಕ್ತರು. ಆಧ್ಯಾತ್ಮಿಕ ಭಾವದ ತಳಹದಿಯ ರುವಾರಿಗಳು. ತನು-ಮನ-ಧನದ ಕಾವ್ಯಾತ್ಮಕ ಶಕ್ತಿಯ ಹಾಡುಗಾರರು ಇವರು.
ಈ ವಚನ ಭಾವಗೀತೆಯ ಗುಣವನ್ನು ಹೊಂದಿದೆ. ಅಣ್ಣನಿಗೆ ಭಕ್ತನ ಮನ ಘನವಾಗಿ ಸುವ ಉದ್ದೀಪನ ಭಕ್ತಿಯ ಭಾವ ವಿದಾಗಿದೆ.
ಗುರು-ಲಿಂಗ-ಜಂಗಮದ ಮಹೋನ್ನತ ಆರಾಧನೆಯೇ ಭಕ್ತಸ್ಥಲ ವಾಗಿದೆ. ಈ ದೇಹದ ಭೌತಿಕ ಆಸೆ ಗಳೆಲ್ಲವೂ ದೂರವಾಗಿ ಪರಮಾತ್ಮನ ಜೊತೆ ಒಂದಾಗುವ ಭಕ್ತಸ್ಥಲದ ಭಕ್ತಿ ಭಾವವಾಗಿದೆ.

-ಡಾ. ಸರ್ವಾಮಂಗಳ ಸಕ್ರಿ
ಕನ್ನಡ ಉಪನ್ಯಾಸಕರು.
ರಾಯಚೂರು.

Don`t copy text!