ಮಾಜಿ ಸಚಿವ, ಅಹಿಂದ ನಾಯಕ ಆರ್‌.ಎಲ್‌.ಜಾಲಪ್ಪ ಅಸ್ತಂಗತ

 

ಮಾಜಿ ಸಚಿವ, ಅಹಿಂದ ನಾಯಕ ಆರ್‌.ಎಲ್‌.ಜಾಲಪ್ಪ ಅಸ್ತಂಗತ

ಅತ್ಯಂತ ಹಿಂದುಳಿದ ಈಡಿಗ ಸಮುದಾಯದವರಾದ ಜಾಲಪ್ಪ ಅವರು ಒಕ್ಕಲಿಗ ಸಮುದಾಯದ ಪ್ರಾಬಲ್ಯವಿದ್ದ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ನಿರಂತರ ಗೆಲವು ಸಾಧಿಸಿದ ಜನಪ್ರತಿನಿಧಿಯಾಗಿದ್ದವರು.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರದ ಮಾಜಿ ಸಚಿವ, ಅಹಿಂದ ನಾಯಕ ಆರ್‌.ಎಲ್‌.ಜಾಲಪ್ಪ ಅವರು ಈಗ ತೀರಿದ್ದಾರೆ.

ಶ್ವಾಸಕೋಶ ಸಮಸ್ಯೆ ಹಾಗೂ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಅವರಿಗೆ ಡಯಾಲಿಸಿಸ್‌ ಮಾಡಲಾಗಿತ್ತು. ಕೋಲಾರದ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆರ್‌.ಎಲ್‌.ಜಾಲಪ್ಪ ಅವರು 19, ಅಕ್ಟೋಬರ್‌ 1925 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಜನಿಸಿದವರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ್ದವರು.

ಒಂದಿಷ್ಟು ವಯಸ್ಸಾದ ಮೇಲೆ ರಾಜಕಾರಣಕ್ಕೆ ಬಂದವರು ಆರ್.ಎಲ್.ಜಾಲಪ್ಪನವರು. ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ನಿರಂತರವಾಗಿ ಎಂಎಲ್‌ಎ ಆಗಿ ಆಯ್ಕೆಯಾಗಿ ಸಂಚಲನ ಮೂಡಿಸಿದ್ದ ಅವರು, ಲೋಕಸಭಾ ಚುನಾವಣೆಯಲ್ಲಿ ಒಮ್ಮೆ ಸೋಲನ್ನೂ ಕಂಡಿದ್ದವರು.

ಆರ್.ಎಲ್.ಜಾಲಪ್ಪ ಅವರು ಈಡಿಗ ಸಮುದಾಯಕ್ಕೆ ಸೇರಿದವರು. ದೊಡ್ಡಬಳ್ಳಾಪುರ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ, ನಂತರ ಶಾಸಕರಾಗಿ ಗೆದ್ದವರು. ದೇವರಾಜ ಅರಸು ಅವರಿಗೆ ಆಪ್ತರಾಗಿದ್ದವರು.

ಅರಸುರವರ ಜೊತೆಯಲ್ಲಿ ಮೊದಲು ಕಾಂಗ್ರೆಸ್‌ನಲ್ಲಿದ್ದವರು. ನಂತರ ಅರಸು ಅವರು ಕರ್ನಾಟಕ ಕ್ರಾಂತಿ ರಂಗ ಪಕ್ಷ ಕಟ್ಟಿದಾಗ ಆರ್.ಎಲ್.ಜಾಲಪ್ಪ ಅವರೂ ಕ್ರಾಂತಿರಂಗ ಸೇರಿದವರು.

ಕ್ರಾಂತಿರಂಗ ಜನತಾ ಪಾರ್ಟಿಯೊಂದಿಗೆ ವಿಲೀನವಾಯಿತು ಆಗ. ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜಾಲಪ್ಪ ಅವರು ಒಮ್ಮೆಯೂ ಸೋಲಲಿಲ್ಲ. ಇಂದಿರಾಗಾಂಧಿಯವರ ಕೊಲೆಯಾದ ಮೇಲೆ ನಡೆದ 1985 ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಮಾತ್ರ ಸೋಲು ಕಂಡವರು. 1996 ರಲ್ಲಿ ಮತ್ತೆ ಲೋಕಸಭಾ ಚುನಾವಣೆಗೆ ನಿಂತು ಗೆದ್ದವರು ಆರ್.ಎಲ್.ಜಾಲಪ್ಪ ಅವರು. ಸತತ ನಾಲ್ಕು ಬಾರಿ ಲೋಕಸಭೆಗೆ ಪುನರಾಯ್ಕೆಯಾದವರು. ರಾಮಕೃಷ್ಣ ಹೆಗಡೆ, ಎಚ್‌.ಡಿ.ದೇವೇಗೌಡ, ಜೆ.ಜೆ.ಪಾಟೇಲ್‌, ಎಸ್.ಆರ್‌.ಬೊಮ್ಮಾಯಿ ಅವರ ನಂತರದ ಸ್ಥಾನದಲ್ಲಿ ಜಾಲಪ್ಪ ಅವರ ಹೆಸರಿತ್ತು

.ಕೊಲೆ ಆಪಾದನೆವೂ ಮತ್ತು ರಾಜಕೀಯ ಹಿನ್ನೆಡೆ-

ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ಜಾಲಪ್ಪ ಅವರು ಗೃಹ ಸಚಿವರಾಗಿದ್ದವರು. ಈ ಅವಧಿಯಲ್ಲಿ ರಶೀದ್ ಎಂಬ ವಕೀಲರ ಕೊಲೆಯಾಯಿತು. ಆಗ ಜಾಲಪ್ಪ ಅವರ ಸೂಚನೆ ಮೇರೆಗೆ ಕೊಲೆಯಾಗಿದೆ ಎಂದೂ ಸುದ್ದಿಯಾಯಿತು. ಆಗ ಇವರು ರಾಜೀನಾಮೆ ಕೊಡಬೇಕಾಗಿ ಬಂತು. ಸಿಬಿಐ ಅರೆಸ್ಟ್ ಮಾಡಿತ್ತು. ಈ ಕಾರಣದಿಂದಾಗಿ ಒಂದಿಷ್ಟು ಕಾಲ ಜಾಲಪ್ಪ ಅವರ ವರ್ಚಸ್ಸು ಕುಗ್ಗಿತು.

ಹಿಂದುಳಿದ ಜಾತಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮೆಡಿಕಲ್‌ ಕಾಲೇಜುಗಳನ್ನು ಈ ಸಮುದಾಯಗಳಿಗೆ ನೀಡಿದ್ದವರು. ದೇವರಾಜ ಅರಸು ಹಿಂದುಳಿದ ವರ್ಗಗಳ ಟ್ರಸ್ಟ್‌ ರಚಿಸಿ, ಆ ಟ್ರಸ್ಟ್‌ಗೆ ಒಂದು ಮೆಡಿಕಲ್ ಕಾಲೇಜು ನೀಡಿದರು. ಈ ಟ್ರಸ್ಟ್‌ ವಿಚಾರದಲ್ಲೇ ವಿವಾದ ಉಂಟಾಗಿ ವಕೀಲ ರಶೀದ್‌ ಅವರ ಕೊಲೆಯಾಯಿತು.

ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಕ್ಷಣಗಳಲ್ಲಿ ರಾಜೀನಾಮೆ ನೀಡಿದ್ದವರು ಆರ್.ಎಲ್.ಜಾಲಪ್ಪ ಅವರು.

ಜಾಲಪ್ಪನವರು ಲೋಕಸಭೆಗೆ ಆಯ್ಕೆಯಾದ ಅವಧಿಯಲ್ಲೇ ದೇವೇಗೌಡರು ಪ್ರಧಾನಿಯಾದರು. ಈ ಅವಧಿಯಲ್ಲಿ ಜಾಲಪ್ಪ ಜವಳಿ ಖಾತೆಯ ರಾಜ್ಯ ಸಚಿವರನ್ನಾಗಿ ಮಾಡಿದರು ದೇವೇಗೌಡರು. ಸೀನಿಯರ್‌ ಆಗಿದ್ದರಿಂದ ಸಂಪುಟ ದರ್ಜೆಯಲ್ಲಿ ಸಚಿವನಾಗುತ್ತೇನೆ ಎಂದು ಜಾಲಪ್ಪ ಭಾವಿಸಿದ್ದರು ಆರ್.ಎಲ್.ಜಾಲಪ್ಪನವರು. ಆದರೆ ರಾಜ್ಯ ಖಾತೆ ಸ್ಥಾನಮಾನ ಸಿಕ್ಕಿತ್ತು. ಬೇರೆ ದಾರಿ ಇಲ್ಲದೇ ಪ್ರಮಾಣ ವಚನ ಸ್ವೀಕರಿಸಿದ್ದರು.

ಆದರೆ ಪ್ರಮಾಣ ವಚನ ಸ್ವೀಕರಿಸಿ ಕೆಳಗೆ ಇಳಿದು ಬಂದವರೇ ದೇವೇಗೌಡರಿಗೆ ರಾಜೀನಾಮೆ ನೀಡಿದ್ದವರು ಆರ್.ಎಲ್.ಜಾಲಪ್ಪನವರು. ದೇವೇಗೌಡರು ಎರಡು ದಿನಗಳ ನಂತರ ಜಾಲಪ್ಪ ಅವರನ್ನು ಸಂಪುಟ ದರ್ಜೆ ಸಚಿವರನ್ನಾಗಿ ಮಾಡಿದರು. ಮುಂದೆ ಜನತಾದಳ ಬಿಟ್ಟು ಕಾಂಗ್ರೆಸ್‌ ಸೇರಿದರು.

ಒಕ್ಕಲಿಗರ ಪ್ರಾಬಲ್ಯ ಕ್ಷೇತ್ರದಲ್ಲಿ ಬೆಳೆದ ಈಡಿಗ ನಾಯಕ —

ಚುನಾವಣೆಯಲ್ಲಿ ಜಾತಿ ಪ್ರಾಬಲ್ಯ ಅಗತ್ಯವಾದುದು. ಜಾಲಪ್ಪ ಅವರ ವಿಶೇಷವೇನೆಂದರೆ ಒಕ್ಕಲಿಗ ಪ್ರಾಬಲ್ಯವಿದ್ದ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಸತತವಾಗಿ ಗೆದ್ದು ಬಂದ ಈಡಿಗ ಸಮುದಾಯದ ವ್ಯಕ್ತಿಯಾಗಿದ್ದವರು. ಕರಾವಳಿ ಭಾಗದಲ್ಲಾದರೆ ಈಡಿಗರು ಪ್ರಾಬಲ್ಯ ಹೊಂದಿದ್ದಾರೆ. ಆದರೆ ದೊಡ್ಡಬಳ್ಳಾಪುರ ಭಾಗದಲ್ಲಿ ಈಡಿಗರ ಸಂಖ್ಯೆ ತೀರಾ ಕಡಿಮೆ. ತುಂಬಾ ಹಿಂದುಳಿದ ಸಮಾಜದಿಂದ ಬಂದು, ಎಲ್ಲರನ್ನೂ, ಎಲ್ಲವನ್ನೂ ಎದುರಿಸಿ ನಿಂತು ರಾಜಕಾರಣ ಮಾಡಿದ ವ್ಯಕ್ತಿ ಜಾಲಪ್ಪನವರು.

ಅಹಿಂದ’ದಲ್ಲಿ ಮುಂಚೂಣಿ —

ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಶುರುವಾಗಿ ಮೊದಲ ಸಮ್ಮೇಳನ ಕೋಲಾರದಲ್ಲಿ ನಡೆಯಿತು. ಈ ಸಮ್ಮೇಳನದ ಉದ್ಘಾಟನೆ ಮಾಡಿದ್ದು ಸಿದ್ದರಾಮಯ್ಯನವರಾದರೇ, ಅಧ್ಯಕ್ಷತೆ ವಹಿಸಿದ್ದು ಆರ್.ಎಲ್.ಜಾಲಪ್ಪನವರ. ಅಹಿಂದ ವಿಚಾರದಲ್ಲಿ ಕಡೆಯವರೆಗೂ ಜಾಲಪ್ಪ ಅವರಿಗೆ ನಿಷ್ಠೆ, ಒಲವು – ನಿಲುವಿತ್ತು.

ಜಾಲಪ್ಪ ಅವರಿಗೆ ಹಿಂದುಳಿದ ವರ್ಗಗಳ ಪರ ಒಲವಿತ್ತು. ಸಿದ್ದರಾಮಯ್ಯನವರು ಸಿ.ಎಂ. ಆಗಬೇಕೆಂಬುದು ಅವರ ಆಸೆಯಾಗಿತ್ತು. ಜಾಲಪ್ಪ ಅವರು ರಾಜಕಾರಣದಲ್ಲಿ ಶುದ್ಧ ಹಸ್ತರೆಂದು ಹೇಳಲಾಗದಿದ್ದರೂ ಕೋಟಿ ಕೋಟಿ ರೂಪಾಯಿಗಳನ್ನು ಸಂಪಾದಿಸಿದ ವ್ಯಕ್ತಿಯೇನೂ ಆಗಿರಲಿಲ್ಲ. ಮುಖ್ಯವಾಹಿನಿ ರಾಜಕಾರಣದಲ್ಲಿ ಇತರರಿಗಿಂತ ಭಿನ್ನವಾಗಿದ್ದರು ಆರ್.ಎಲ್.ಜಾಲಪ್ಪನವರು.

ಸಿದ್ದರಾಮಯ್ಯ, ಬೊಮ್ಮಾಯಿ ಸಂತಾಪ —

ಜಾಲಪ್ಪ ಅವರ ನಿಧನಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂತಾಪ ಸೂಚಿಸಿದ್ದಾರೆ.

“ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ಇವರ‌ ಸಾವಿನಿಂದ ನನ್ನ‌ ಕುಟುಂಬದ ಸದಸ್ಯನಂತಿದ್ದ, ನನ್ನ ಹಿತೈಷಿ ಮತ್ತು‌ ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇನೆ. ಅವರ ಕುಟುಂಬದ ದು:ಖದಲ್ಲಿ‌ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಕೋರುವೆ” ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

“ಆರ್ ಎಲ್ ಜಾಲಪ್ಪ ಅವರು ರಾಜ್ಯ ರಾಜಕಾರಣದ ಹಿರಿಯ ಮುಖಂಡರು. ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಮಾಜಮುಖಿ ಕೆಲಸ ಮಾಡಿದ್ದವರು. ಆರ್.ಎಲ್.ಜಾಲಪ್ಪ ಅವರ ನಿಧನದಿಂದ ರಾಜ್ಯದ ಸಾತ್ವಿಕ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬದವರಿಗೆ ಮತ್ತು ಅವರ ಅನುಯಾಯಿಗಳಿಗೆ ಕರುಣಿಸಲಿ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ” ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ..!

ಇಂತಿಪ್ಪ ಆರ್.ಎಲ್.ಜಾಲಪ್ಪನವರು ಇನ್ನೂ ಕನಸು ಮಾತ್ರ…

ಕೆ.ಶಿವು.ಲಕ್ಕಣ್ಣವರ

Don`t copy text!