ಪ್ರೇಮ ಪಾರಿವಾಳ
ಇಲ್ಲ ಇವುಗಳಿಗೆ
ಆಧಾರ ಕಾರ್ಡ
ಬ್ಯಾಂಕ ಅಕೌಂಟ್
ಸೈಟ್ ಖರೀದಿ ಚಿಂತಿ
ಎಲ್ಲೆಂದರಲ್ಲಿ
ಗೂಡು ಕಟ್ಟುತ್ತವೆ
ತತ್ತಿ ಹಾಕುತ್ತವೆ
ಕಾವು ಕೊಡುತ್ತವೆ
ಬೇಕಿಲ್ಲ ಇವುಗಳಿಗೆ
ನಗರಪಾಲಿಕೆಯ
ಪರವಾನಿಗೆ
ಕಾಳು ಕಡಿ ಆಹಾರ
ಕೂಡಿ ಇಡುವದಿಲ್ಲ
ಮಕ್ಕಳು ಮರಿಗಳಿಗೆ
ಡೊನೇಷನ್ ಫಿ
ಕಟ್ಟುವ ಹಾಗಿಲ್ಲ
ಮುಗಿಲಿನ ಅಂಗಳದಲ್ಲಿ
ಹಾರಾಡಬಹುದು
ನಲಿಯಬಹುದು
ಇಲ್ಲ ಯಾರ ನಿರ್ಬಂಧ
ಮಠ ಮಂದಿರ ಚರ್ಚು
ಬಸದಿ ಗುರುದ್ವಾರ
ವಿಹಾರ ಮಸೀದೆಗಳಲ್ಲಿ
ಮುಕ್ತ ಪ್ರವೇಶ
ಇಲ್ಲ ಇವುಗಳಿಗೆ ಜಾತಿ ಧರ್ಮ
ಮಂಡಿಯೂರಬೇಕಿಲ್ಲ
ಪಠಿಸಬೇಕಿಲ್ಲ ಮಂತ್ರ
ಕೂಗಬೇಕಿಲ್ಲ ಅಜಾನ
ಹೇಳಬೇಕಿಲ್ಲ ವೇದ ಶಾಸ್ತ್ರ
ಪ್ರವಚನ ಪುರಾಣ
ಕದನವಿಲ್ಲ ನೀರಿಗೆ ಭಾಷೆಗೆ
ಗಡಿ ಸಮಸ್ಯೆಯಿಲ್ಲ
ಹಾರಿ ಹೋಗುತ್ತವೆ
ದೂರ ದೂರದ ದೇಶಗಳಿಗೆ
ಬೇಕಿಲ್ಲ ಪಾಸಪೋರ್ಟ್ ವೀಸಾ
ಭದ್ರತೆ ಬಂದೂಬಸ್ತಿ ಅಗತ್ಯವಿಲ್ಲ
ಬಂದೂಕಿನ ನಳಿಕೆಯ
ನೆರಳಲ್ಲಿ ಇವುಗಳ ಭಾವ ಗೀತೆ
ಮನುಜ ಮತಕೆ ವಿಶ್ವ ಪಥಕೆ
ಬೇಕು ಪ್ರೇಮ ಪಾರಿವಾಾಳ
–ಡಾ.ಶಶಿಕಾಂತ.ಪಟ್ಟಣ ರಾಮದುರ್ಗ