ಕೊಪ್ಪಳದ ಭಗೀರಥ ಅಂದಾನಪ್ಪ ಅಗಡಿ

ಅಂದಾನಪ್ಪ ಗುರುಶಾಂತಪ್ಪ ಅಗಡಿ ಎಂಭತ್ತರ ದಶಕದಲ್ಲಿ ಕೊಪ್ಪಳ ಸಿಟಿ M.L.A ಎನಿಸಿಕೊಂಡಿದ್ದವರು. ಕೊಪ್ಪಳ ನಗರಸಭೆಯ ಅಧ್ಯಕ್ಷರಾಗಿ, ಕಲಬುರಗಿ ಕಾಡಾ ಆಧ್ಯಕ್ಷರಾಗಿ,ಆರ್. ಡಿ. ಸಿ. ಸಿ. ಬ್ಯಾಂಕಿನ ಉಪಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.
ಅಂದಣ್ಣ ಎಂಭತ್ತರ ದಶಕದಿಂದಲೂ ಕೊಪ್ಪಳ ರಾಜಕಾರಣದಲ್ಲಿ ಕ್ರಿಯಾಶೀಲರಾಗಿದ್ದಾರೆ.ಎಂಭತ್ತರ ದಶಕದ ಸಂದರ್ಭ ಕುಡಿಯುವ ನೀರಿಗಾಗಿ ಕೊಪ್ಪಳ ನಗರದಲ್ಲಿ ಹಾಹಾಕಾರ ಉಂಟಾಗಿತ್ತು.
ಕೊಪ್ಪಳದ ಜನತೆ ಹಗಲು ರಾತ್ರಿ ಎನ್ನದೆ ಬಾವಿಗಳು ಹಾಗೂ ಸಾರ್ವಜನಿಕ ನಲ್ಲಿಗಳ ಮುoದೆ ಮೈಲುಗಟ್ಟಲೆ ಉದ್ದದ ಸಾಲಿನಲ್ಲಿ ಕೊಡಗಳನ್ನು ಇಟ್ಟುಕೊಂಡು ನೀರಿಗಾಗಿ ಸರದಿಯಲ್ಲಿ ಕಾಯುತ್ತಿದ್ದ ದೃಶ್ಯ ಕಣ್ಣೀರು ತರಿಸುವಂತಿತ್ತು.ಓಣಿ ಓಣಿಯಲ್ಲಿ ನೀರಿಗಾಗಿ ಹೆಂಗೆಳೆಯರ ಕದನ ಸಾಮಾನ್ಯ ದೃಶ್ಯವಾಗಿತ್ತು.ಇಂತಹ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷರಾಗಿದ್ದ ಅಂದಾನಪ್ಪ ಅಗಡಿಯವರು ಕೊಪ್ಪಳ ನಗರದ ಓಣಿ ಓಣಿಗಳಲ್ಲಿ ಸುಮಾರು ಎಪ್ಪತ್ತು ಎಂಬತ್ತು ಬೋರವೇಲ್ ಗಳನ್ನು ಕೊರೆಸಿ ಪೈಪ್ ಲೈನ್ ಮಾಡಿಸಿ ಜನರಿಗೆ ಕುಡಿಯುವ ನೀರನ್ನು ಒದಗಿಸುವದರ ಮೂಲಕ ಜನತೆಯ ಪಾಲಿಗೆ ಆಧುನಿಕ ಭಗೀರಥ ಎನಿಸಿಕೊಂಡಿದ್ದರು.


ಅಷ್ಟೇ ಅಲ್ಲ ಕೊಪ್ಪಳದ ಹೃದಯ ಭಾಗವಾದ ಅಶೋಕ್ ಸರ್ಕಲ್ಲಿನ ಬಳಿ ಸಾಹಿತ್ಯ ಭವನ , ಲಯನ್ಸ್  ಕಣ್ಣಿನ ಆಸ್ಪತ್ರೆ ಹಾಗೂ ಶಾದಿಮಹಲ್  ಗಳ ನಿರ್ಮಾಣಕ್ಕೆ ನಗರಸಭೆಯ ಅಧ್ಯಕ್ಷರಾಗಿ ಸರ್ಕಾರದಿಂದ ಜಾಗೆಯನ್ನು ಉಚಿತವಾಗಿ ಕೊಡಲು ಮಂಜೂರಾತಿ ನೀಡಿದ್ದನ್ನು ಕೊಪ್ಪಳದ ಜನತೆ ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಈಗ ಸಾಕಾರಗೊಳ್ಳುತ್ತಿರುವ ಅಳವಂಡಿ, ಬೆಟಗೇರಿ, ಬಿಸರಳ್ಳಿ, ಗೊಂಡಬಾಳ ಏತನೀರಾವರಿ ಕಾಮಗಾರಿಗಳ ಮಂಜೂರಾತಿಗಾಗಿ ಅಂದಂದಿನ ಸರ್ಕಾರಗಳ ಮುಂದೆ ಹಕ್ಕೊತ್ತಾಯ ಮಂಡಿಸುತ್ತಾ ಸರ್ಕಾರದ ಗಮನ ಸೆಳೆದು. ಆ ಯೋಜನೆಗಳಿಗೆ ಸರ್ಕಾರ ಮಂಜೂರಾತಿ ನೀಡಿ ಕಾಮಗಾರಿ ಪ್ರಾರಂಭಿಸುವಲ್ಲಿ ಅಂದಣ್ಣ ಅಗಡಿ ಅವರ ಶ್ರಮವಿದೆ ಎನ್ನುವದನ್ನು ಕೊಪ್ಪಳದ ಯಾವ ರಾಜಕಾರಣಿಯೂ ಅಲ್ಲಗಳೆಯಲಾರರು. ಕೊಪ್ಪಳ ಜಿಲ್ಲೆಯ ರಾಜಕಾರಣದಲ್ಲಿ ಅಂದಣ್ಣ ಅಗಡಿ ಹೆಸರು ಚಿರಪರಿಚಿತ.ಕೊಪ್ಪಳ ನಗರದ ಅನೇಕ ಯುವಕರು ಅಂದಣ್ಣ ಅಗಡಿಯವರಿಂದಾಗಿಯೇ ನಾವು ರಾಜಕಾರಣದಲ್ಲಿ ಬೆಳೆದುಬಂದೆವು ಎನ್ನುವದನ್ನು ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಿರುತ್ತಾರೆ.ಹಾಗೆಯೇ ತಮ್ಮ ಮಾತು ನಡೆಯುವ ಕಾಲಕ್ಕೆ ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಅನೇಕ ಯುವಕರಿಗೆ ಗ್ರಾಮ ಪಂಚಾಯತ, ತಾಲ್ಲೂಕು ಪಂಚಾಯತ,ಹಾಗೂ ಜಿಲ್ಲಾ ಪಂಚಾಯತ,ನಗರಸಭೆ ಚುನಾವಣೆಗಳಲ್ಲಿ ಟಿಕೆಟ್ ಕೊಡಿಸಿ ಅವರು ಆಯ್ಕೆಯಾಗಿ ರಾಜಕಾರಣದಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುವಲ್ಲಿ ಬೆನ್ನೆಲುಬಾಗಿ ನಿಂತವರು.


1980-90 ರ ದಶಕದಲ್ಲಿ ಕೊಪ್ಪಳ ರಾಜಕಾರಣದ ಅಂಗಳದಲ್ಲಿ ಕಾಂಗ್ರೆಸ್ಸಿನ ಪ್ರಶ್ನಾತೀತ ಮುಖಂಡರಾಗಿದ್ದ ಶ್ರೀ ಪಾಷಾಮಿಯಾ ಖಾದ್ರಿಯವರು ಅಂದಿನ ಲೋಕಸಭಾ ಸದಸ್ಯರಾಗಿದ್ದ ಶ್ರೀ ಎಚ್.ಜಿ.ರಾಮುಲುರವರ ನಿಷ್ಠಾವಂತ ಬೆಂಬಲಿಗರಾಗಿದ್ದರು.ಇರಕಲ್ ಗಡಾ ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಶ್ರೀ ಪಾಷಾಮಿಯಾ ಖಾದ್ರಿಯವರು ಸ್ಪರ್ಧಿಸಿದ್ದರು.ಇವರ ವಿರುದ್ಧ ಜನತಾದಳದಿಂದ ಕಿನ್ನಾಳದ ವೀರಣ್ಣ ಗಡಾದರವರಿಗೆ ಅಥವಾ ಇರಕಲ್ ಗಡಾದ ಸಿದ್ದಣ್ಣ ಪಟ್ಟಣಶೆಟ್ಟರಿಗೆ ಟಿಕೆಟ್ ಕೊಡಬೇಕೆಂದು ಅಂದಿನ M.L.A ವಿರುಪಾಕ್ಷಪ್ಪ ಅಗಡಿಯವರು ತೀರ್ಮಾನಿಸಿದ್ದರು.ಆದರೆ ಅಂದಿನ ಸಿಟಿ ಎಮ್ಮೆಲ್ಲೆ ಎನಿಸಿಕೊಂಡಿದ್ದ ಜನಪ್ರಿಯ ಯುವನಾಯಕ ಅಂದಣ್ಣ ಅಗಡಿಯವರು ಶ್ರೀ ಪಾಷಾಮಿಯಾ ಖಾದ್ರಿಯವರ ವಿರುದ್ಧ ಸ್ಪರ್ಧಿಸಲು ತಾಲ್ಲೂಕ್ ಬೋರ್ಡನ ಸದಸ್ಯರಾಗಿದ್ದ ಶ್ರೀ ಸಂಗಣ್ಣ ಕರಡಿಯವರಿಗೆ ಟಿಕೆಟ್ ಕೊಡಬೇಕು ಇಲ್ಲದಿದ್ದರೆ ಪಕ್ಷ ಬಿಟ್ಟು ಹೋಗುತ್ತೇನೆ ಎಂದು ವಿರುಪಾಕ್ಷಪ್ಪ ಅಗಡಿಯವರಿಗೆ ತಿಳಿಸಿದಾಗ, ಅಂದಣ್ಣನವರ ಮಾತನ್ನು ಮೀರದೆ ಅನಿವಾರ್ಯವಾಗಿ ಸಂಗಣ್ಣ ಕರಡಿ ಅವರಿಗೆ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಟಿಕೆಟನ್ನು ಕೊಟ್ಟರು.
ಕೊಪ್ಪಳ ಜನತಾದಳದ ಎಲ್ಲ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದರ ಪರಿಣಾಮವಾಗಿ ಶ್ರೀ ಸಂಗಣ್ಣ ಕರಡಿಯವರು ಘಟಾನುಘಟಿ ಕಾಂಗ್ರೆಸ್ಸಿನ ಸ್ಪರ್ಧಾಳುವಾಗಿದ್ದ ಶ್ರೀ ಪಾಷಾಮಿಯಾ ಖಾದ್ರಿಯವರನ್ನು ಚುನಾವಣೆಯಲ್ಲಿ ಪರಾಭವಗೊಳಿಸಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದರು.ಅಲ್ಲಿಂದ ಅವರು ಹಿಂತಿರುಗಿ ನೋಡಲೇ ಇಲ್ಲ ನೋಡನೋಡುತ್ತಲೇ ನಾಲ್ಕು ಸಲ ಶಾಸಕರಾದರು ಈಗ ಎರಡನೆಯ ಅವಧಿಗೆ ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವದನ್ನು ಕಂಡು, ಇರಕಲ್ ಗಡಾದ ಜಿಲ್ಲಾ ಪಂಚಾಯಿತಿ ಚುನಾವಣೆ ಅಂದಣ್ಣ ಅಗಡಿ,ವಿರುಪಾಕ್ಷಪ್ಪ ಅಗಡಿ, ಪಾಷಾಮಿಯಾ ಖಾದ್ರಿ ಹಾಗೂ ಸಂಗಣ್ಣ ಕರಡಿ ಇವರೆಲ್ಲರ ರಾಜಕೀಯ ಬದುಕಿನಲ್ಲಿ ಪ್ರಮುಖ ತಿರುವು ( ಮೈಲ್ ಸ್ಟೊನ್) ಆಯಿತು ಎಂದು ಹಿರಿಯರು ಈಗಲೂ ಮಾತನಾಡಿಕೊಳ್ಳುತ್ತಿರುವುದನ್ನು ಕೇಳಿದ್ದೇನೆ.
ಕೊಪ್ಪಳದ ಶಾಸಕನಾಗಿ ಸೇವೆ ಮಾಡಬೇಕೆಂಬ ಅಂದಣ್ಣ ಅಗಡಿ ಅವರ ಕನಸು ಈಡೇರಲೇ ಇಲ್ಲ.ಒಂದು ಬಾರಿ ಪಕ್ಷೇತರನಾಗಿ, ಇನ್ನೆರಡು ಬಾರಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಯಾಗಿ ಕೊಪ್ಪಳದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದರೂ ಜಯ ಗಳಿಸಲು ಸಾಧ್ಯವಾಗಲಿಲ್ಲ.ಸುಮಾರು ಮೂರು ದಶಕಗಳ ಕಾಲ ಅಂದಣ್ಣ ಅಗಡಿ ಅವರ ಮನೆಯಲ್ಲಿ ಚಹಾ ಕುಡಿದವರು,ಉಪಹಾರ ಮಾಡಿದವರು,ಊಟ ಮಾಡಿದವರಷ್ಟೇ ಓಟು ಹಾಕಿದ್ದರೆ ಸಾಕಾಗಿತ್ತು ಅಂದಣ್ಣ ಎಂದೋ ಶಾಸಕನಾಗಿ ಬಿಡುತ್ತಿದ್ದ ಎಂದು ಈಗಲೂ ಜನ ಮಾತನಾಡಿಕೊಳ್ಳುತ್ತಾರೆ.”ಇಲಿಯಪ್ಪನ ಪೆಟ್ಟು, ಗಣಪನಿಗೆ ಬಿತ್ತಂತೆ “. ಹಾಗೆ ಯಾರೋ ಮಾಡಿದ ತಪ್ಪು ಅಂದಣ್ಣನಿಗೆ ತಗುಲಿತು ಎಂದು ಜನ ಗುನುಗುಡುತ್ತಿರುವದನ್ನು ಕೇಳಿದ್ದೇನೆ.
ಆದರೂ ಧೃತಿಗೆಡಲಿಲ್ಲ, ಧೈರ್ಯ ಕಳೆದುಕೊಳ್ಳಲಿಲ್ಲ, ವಿಪರೀತ ಮನೋಸ್ಥೈರ್ಯ (Will Power ನ )ದ ಅದ್ಭುತ ವ್ಯಕ್ತಿ ಅಂದಣ್ಣ. ಇಷ್ಟೊಂದು ವಿಲ್ ಪವರ್ ( Will Power) ನ ಹಿಂದಿರುವ ಶಕ್ತಿ ಯಾವುದು ಎಂದು ಯೋಚನೆ ಮಾಡಿದಾಗ ಹೊಳೆಯುವ ಹೆಸರೆಂದರೆ ಅವರ ಧರ್ಮಪತ್ನಿ ಶ್ರೀಮತಿ ಲಲಿತಾ ಅಕ್ಕಾ ಅವರು.
ಹಚ್ಚ ಹಸಿರು ಮಲೆನಾಡಿನ ಶಿರಾಳಕೊಪ್ಪದಿಂದ ಬಿರು ಬಿಸಿಲು ನಾಡಿನ ಕೊಪ್ಪಳಕ್ಕೆ ಅಂದಣ್ಣ ಅಗಡಿಯವರ ಜೊತೆ ಸಪ್ತಪದಿ ತುಳಿಯುತ್ತಾ ಬಂದು ತವರು ಮನೆಯನ್ನೇ ಮರೆತು ಇಲ್ಲಿ ಹೊಂದಿಕೊಂಡ ಪರಿ ಆಶ್ಚರ್ಯವೆನಿಸುತ್ತದೆ. ಶ್ರೀಮತಿ ಲಲಿತಾ ಅಗಡಿ ಅದ್ಭುತ ಸಹನೆ,ಮತ್ತು ತಾಳ್ಮೆಯ ಹೆಣ್ಣುಮಗಳು.ಉಳಿದ ಹೆಣ್ಣು ಮಕ್ಕಳಂತೆ ಗೊಡ್ಡು ಸಂಪ್ರದಾಯ,ಆಚರಣೆ,ವ್ರತ, ನಿಯಮಗಳಿಗೆ ತನ್ನನ್ನು ಒಗ್ಗಿಸಿಕೊಂಡವರಲ್ಲ.ಒಣ ಪೂಜೆ ಪುನಸ್ಕಾರಗಳಿಗೂ ತಲೆಕೆಡಿಸಿಕೊಂಡವರಲ್ಲ, ಇಷ್ಟಲಿಂಗಪೂಜೆ,ಗಂಡನ ಮನೆಯ ಸೇವೆಯಲ್ಲಿಯೇ ಸಂತೃಪ್ತಿಯನ್ನು ಕಾಣುತ್ತಿರುವ ಲಲಿತಕ್ಕ ಅಂದಣ್ಣ ಅಗಡಿಯವರ ಜೀವಾಳ.
ಲಲಿತಕ್ಕ ಕೊಪ್ಪಳ ನಗರಸಭೆಯ ಅಧ್ಯಕ್ಷಳಾಗಿ ಸೇವೆಯನ್ನು ಸಲ್ಲಿಸಿ ಹಲವಾರು ಜನಪರ ಕಾರ್ಯಗಳನ್ನು ಮಾಡಿದ್ದಾರೆ.ಕೊಪ್ಪಳದಲ್ಲಿ ಈಗ ಇರುವ ಒಂದೇ ಒಂದು ಸಿದ್ದಯ್ಯ ಪುರಾಣಿಕ ( ಪಾರ್ಕ್ ) ಉದ್ಯಾನದ ನಿರ್ಮಾತೃ ಲಲಿತಾ ಅಗಡಿಯವರು. ಇಂದಿಗೂ ಅಂದಣ್ಣನವರು ಮನೆಗೆ ಬಂದವರಿಗೆಲ್ಲಾ ಉಣಿಸಬೇಕು,ತಿನಿಸಬೇಕು ಎಂದು ಸದಾ ಸ್ಪರ್ಧೆಗೆ ಬಿದ್ದಿರುತ್ತಾರೆ.ಈ ಸ್ಪರ್ಧೆಯ ಹಿಂದಿನ ಶಕ್ತಿಯೇ ಶ್ರೀಮತಿ ಲಲಿತಾ ಅಂದಾನಪ್ಪ ಅಗಡಿ. ಕಾಯಕ ಮತ್ತು ದಾಸೋಹ ಲಲಿತಾ ಅಗಡಿಯವರ ವ್ಯಕ್ತಿತ್ವದ ಲಕ್ಷಣ.ಶ್ರೀ ಅಂದಣ್ಣ ಹಾಗೂ ಶ್ರೀಮತಿ ಲಲಿತಾ ಅಗಡಿಯವರು ದಾಸೋಹದಲ್ಲಿ ಸಂತಪ್ತಿಯನ್ನು ಕಾಣುವ ಆದರ್ಶ ದಂಪತಿಗಳೂ ಹೌದು.
ಇವರ ಆತ್ಮೀಯ ಗೆಳೆಯರಲ್ಲಿ ಶ್ರೀ ಬಸವರಾಜ ತಂಬ್ರಳ್ಳಿ,ಶ್ರೀ ಶಾಂತಣ್ಣ ಮುದಗಲ್, ಶ್ರೀ ಬಸವರಾಜ ಗಣವಾರಿ, ಶ್ರೀ ಕೆ ಬಸವರಾಜ ಹಿಟ್ನಾಳ, ಶ್ರೀ ಗುರನಗೌಡ್ರ ಹಲಗೇರಿ,ಶ್ರೀ ಕೆ ಬಸವರಾಜ ಹಲಗೇರಿ, ಶ್ರೀ ಕರಿಯಣ್ಣ ಸಂಗಟಿ,ಎಂ.ಎಂ. ಕಿಲ್ಲೇದಾರ, ಲಿಂ.ಮಲ್ಲಣ್ಣ ತಂಬ್ರಳ್ಳಿ, ಲಿಂ.ಮಲ್ಲಣ್ಣ ಗೋಪುರ ಶೆಟ್ಟರ್, ಜಸ್ವಂತ್ ಮೆಹತಾ, ಸಿದ್ದಣ್ಣ ನಾಲ್ವಾಡ,ವಿಶ್ವನಾಥ ಬಳ್ಳೊಳ್ಳಿ,ಲಿಂ.ಗವಿಸಿದ್ಧಪ್ಪ ಗಣವಾರಿ,ನಾಗರಾಜ (ಬಂಡು) ಬಬಲೇಶ್ವರ,ನೀಲಕಂಠಯ್ಯ ಹಿರೇಮಠ, ಮಹೇಶ ಮಿಟ್ಟಲ್ ಕೋಡ,ವೀರಣ್ಣ ಸಂಕ್ಲಾಪುರ ಮುಂತಾದವರು ಪ್ರಮುಖರು. ಬಾಷುಸಾಬ ಖತೀಬ್,  ಎಚ್.ಎಲ್.ಹಿರೇಗೌಡರ,ಗಂಗಣ್ಣ ಡಂಬಳ,ಬಸವರಡ್ಡಿ ಹಳ್ಳಿಕೇರಿ,ಸಿಂದೋಗಿಯ ಬಸನಗೌಡ್ರ ಪಾಟೀಲ,ಆಸಿಫ್ ಅಲಿ ವಕೀಲರು,ಶಬ್ಬೀರ್ ಹುಸೇನ್ ವದಿ೯,ದೌಲತ್ ಸಾಬ,ನವಾಬ ಸಾಬ್,ಗವಿಸಿದ್ದಪ್ಪ ಮುಂಡರಗಿ,ಗವಿಸಿದ್ದಪ್ಪ ಮಟ್ಟಿ,ಸಂಗಪ್ಪ ಬಿಜಕಲ್,ವೀರಣ್ಣ ಹಂಚಿನಾಳ,ಗವಿಸಿದ್ಧಪ್ಪ ತಳಕಲ್,ಮರಿಯಪ್ಪ ಬೆಲ್ಲದ,ಶಂಕ್ರಯ್ಯ ಹಿರೇಮಠ,ವಿಜಯರಡ್ಡಿ ರಡ್ಡೇರ ಮುಂತಾದವರು ರಾಜಕಾರಣದ ಗೆಳೆಯರು. ಕೊಪ್ಪಳ ನಾಡಿನಲ್ಲಿ ಅಗಡಿ ಮನೆತನ ಅತ್ಯಂತ ಪ್ರತಿಷ್ಠಿತವಾದದ್ದು.
ಸ್ವಾತಂತ್ರ್ಯ ಪೂರ್ವದಿಂದ ಸ್ವಾತಂತ್ರ ನಂತರದವರೆಗೂ ಅಂದಿನ ಹೈದರಾಬಾದ್( ಕಲ್ಯಾಣ) ಕರ್ನಾಟಕದ ರಾಜಕಾರಣದಲ್ಲಿ ಕೊಪ್ಪಳ ಜಿಲ್ಲೆಯ ಅಳವಂಡಿ ಶಿವಮೂರ್ತಿ ಸ್ವಾಮಿಗಳು ಇನಾಂದಾರ,ಕೊಪ್ಪಳದ ಸಂಗಣ್ಣ ಅಗಡಿ ಹಾಗೂ ವೀರಣ್ಣ ಅಗಡಿ ಸಹೋದರರು ಅತ್ಯಂತ ಪ್ರತಿಷ್ಟಿತ ವ್ಯಕ್ತಿಗಳಾಗಿದ್ದವರು.
ಲಿಂ.ಸಂಗಣ್ಣ ಅಗಡಿಯವರು ಹೈದ್ರಾಬಾದ್ ನವಾಬ ಸಾಲಾರಜಂಗನ ಜೊತೆಗೆ ಟೆನಿಸ್ ಆಡುವಷ್ಟರ ಮಟ್ಟಿಗೆ ಗೆಳೆತನ ಮತ್ತು ಸಲುಗೆ ಇತ್ತಂತೆ.ಈ ಗೆಳೆತನದ ಪರಿಣಾಮವಾಗಿ ಕೊಪ್ಪಳ ತಾಲ್ಲೂಕಿನ ಹುಲಗಿಯಲ್ಲಿ ಸಕ್ಕರೆ, ಹಾಗೂ ರಟ್ಟಿನ ಕಾರ್ಖಾನೆ, ಕೊಪ್ಪಳದಲ್ಲಿ ಆಯಿಲ್ ರಿಫೈನರಿ ಹಾಗೂ ಪ್ರೆಸ್ಸಿಂಗ್ ಮಿಲ್ಲನ್ನು ಹೈದ್ರಾಬಾದ್ ನವಾಬರ ಪಾಲುದಾರಿಕೆಯಲ್ಲಿ ಪ್ರಾರಂಭಿಸಿ ಕೊಪ್ಪಳದಲ್ಲಿ ಉದ್ಯಮಗಳನ್ನು ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸಂಗಣ್ಣ ಅಗಡಿಯವರು ಎರಡು ಅವಧಿಗೆ ಲೋಕಸಭಾ ಸದಸ್ಯರಾಗಿ, ಕರ್ನಾಟಕದ ವಿಧಾನ ಪರಿಷತ್ತಿನ ಸದಸ್ಯರಾಗಿ ಹಾಗೂ ಕರ್ನಾಟಕ ಹೌಸಿಂಗ್ ಬೋರ್ಡಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಇವರ ಸಹೋದರ ವೀರಣ್ಣ ಅಗಡಿಯವರು ಕೊಪ್ಪಳ ಪುರಸಭೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಕೊಪ್ಪಳದ ಗವಿ ಸಿದ್ದೇಶ್ವರ ಅರ್ಬನ್ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರು ಹೌದು.ಇವರ ಮೊಮ್ಮಗನೆ ಅಂದಣ್ಣ ಅಗಡಿಯವರು.69 ವಯಸ್ಸಿನ ಅಂದಣ್ಣ ಅಗಡಿಯವರು ನಡೆದು ಬಂದ ದಾರಿಯನ್ನು ಹಿಂತಿರುಗಿ ನೋಡಿದರೆ,ಅಲ್ಲಿ ಕಾಣುವುದು ರಾಜಕಾರಣದ ಹುಚ್ಚಿಗೆ ಬಿದ್ದು ವ್ಯಾಪಾರ ಉದ್ಯಮಗಳನ್ನು ಕಳೆದುಕೊಂಡದ್ದು.ಆರ್ಥಿಕವಾಗಿ ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿದರೂ ಎದೆಗುಂದದೆ ಸದಾ ನಗುನಗುತ್ತಾ ಇರುವ ಅಂದಣ್ಣ ಎಲ್ಲರಿಗೂ ಇಷ್ಟವಾಗುತ್ತಾರೆ.
ಡ್ರೆಸ್ಸೆ ಸೆನ್ಸ್ ಉಳ್ಳ ಅಂದಣ್ಣ ಅಗಡಿ ಸದಾ ಗರಿ ಗರಿಯಾದ ಗಂಜಿ ಬಟ್ಟೆ ತೊಟ್ಟು ಎಂತಹ ಜನಸಮೂಹದಲ್ಲೂ ಎದ್ದುಕಾಣುವಂತಹ ವ್ಯಕ್ತಿತ್ವ ರೂಢಿಸಿಕೊಂಡು ಬಂದಿದ್ದಾರೆ. ದೊಡ್ಡ ಮನೆತನದ ವ್ಯಕ್ತಿಯಾಗಿ ಕುಟುಂಬದ ಕೀರ್ತಿಗೆ ಅಪಚಾರವಾಗದಂತೆ ಬದುಕುತ್ತಿದ್ದಾರೆ. ರಾಜಕಾರಣದಲ್ಲಿ ಹಠ,ಒಣ ಪ್ರತಿಷ್ಠೆ,ಒಣ ಜಿದ್ದನ್ನು ಬಿಟ್ಟು ರಾಜಿ ಮನೋಭಾವ ರೂಢಿಸಿಕೊಂಡಿದ್ದರೆ ಅಂದಣ್ಣ ಮತ್ತಷ್ಟು ಎತ್ತರಕ್ಕೆ ಬೆಳೆಯಬಹುದಾಗಿತ್ತೆoದು ಅವರ ಹಿತೈಷಿಗಳು, ಅಭಿಮಾನಿಗಳು ಮಾತನಾಡಿಕೊಳ್ಳುತ್ತಿರುವುದನ್ನು ಸಹ ಕೇಳಿದ್ದೇನೆ. ಇನ್ನೂ ಅನೇಕ ದಶಕಗಳ ಕಾಲ ನಮ್ಮ ಜತೆಗಿದ್ದು ಮಾರ್ಗದರ್ಶನ ಮಾಡಲಿ.


ಲೇಖಕರು -ಗವಿಸಿದ್ದಪ್ಪ ವೀ. ಕೊಪ್ಪಳ

Don`t copy text!