e-ಸುದ್ದಿ ಓದುಗರಿಗೆ ರಾಜ್ಯೋತ್ಸವದ ಶುಭಾಶಯಗಳು

e-ಸುದ್ದಿ ಅಂತರಜಾಲ ಪತ್ರಿಕೆಯ ಓದುಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಅಕ್ಟೋಬರ ೨ ಗಾಂಧಿ ಜಯಂತಿಯಂದು e-ಸುದ್ದಿ ಅಂತರಜಾಲ ಪತ್ರಿಕೆ ಪ್ರಾರಂಭವಾಗಿ ಇಂದಿಗೆ ಒಂದು ತಿಂಗಳಾಯಿತು.
ನಮ್ಮ ಸುತ್ತಮುತ್ತ ನಡೆಯುವ ಘಟನೆಗಳನ್ನು, ಸುದ್ದಿಗಳನ್ನು ಆಧುನಿಕ ತಂತ್ರಜ್ಞಾನದ ಸಹಾಯದಿಂದ ಜನರಿಗೆ ಬಹು ಬೇಗನೆ ತಲುಪಲು ಇದೊಂದು ಉತ್ತಮ ಮಾದ್ಯಮ ಎಂಬುದು ಸಾಬೀತಾಗಿದೆ.
ಅಂಗೈ ಅಗಲದ ಮೊಬೈಲ್ ಎಂಬ ಮಾಂತ್ರಿಕ ಪೆಟ್ಟಿಗೆಯಲ್ಲಿ ಜಗತ್ತಿನ ಎಲ್ಲಾ ವಿದ್ಯಮಾನಗಳನ್ನು ದರ್ಶಿಸಬಹುದು. ಇಂದು ಮೋಬೈಲ್ ಮಾತನಾಡಲು ಸಹಾಯ ಮಾಡುವ ವಸ್ತುವಾಗಿ ಉಳಿದಿಲ್ಲ. ಜಗತ್ತಿನ ಎಲ್ಲಾ ಕ್ಷೇತ್ರದ ವಿಷಯಗಳನ್ನು ಅರಿಯಲು ಗೂಗಲ್ ಬಳಕೆಗೆ ಇದೊಂದು ಅತ್ಯುತ್ತಮ ಸಾಧನವಾಗಿದೆ. ಕ್ಷಣಾರ್ಧದಲ್ಲಿ ಜಗತ್ತಿನ ಯಾವ ವ್ಯಕ್ತಿಯೊಂದಿಗಾದರು ಸಂಪರ್ಕ ಸಾಧಿಸಬಹುದು.
ಕಲ್ಯಾಣ ಕರ್ನಾಟಕದ ಪ್ರತಿಭೆಗಳ ಪರಿಚಯ, ನಮ್ಮ ಭಾಗದ ಸಮಸ್ಯೆಗಳನ್ನು ಅರಿತುಕೊಳ್ಳುವ ಅವುಗಳ ಪರಿಹಾರಕ್ಕೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವ ಸಣ್ಣ ಪ್ರಯತ್ನವಿದು.

ಸಾಮಾಜಿಕ ಕ್ರಾಂತಿಯ ಮೂಲಕ ಸಮಾನತೆಗಾಗಿ ಮೊಟ್ಟ ಮೊದಲು ಕಹಳೆ ಊದಿದ, ವಿಚಾರ ಕ್ರಾಂತಿ ಹಚ್ಚಿದ ನಾಡಿದು. ಈ ನಾಡಿನಲ್ಲಿ ಏನಿದೆ?. ಏನಿಲ್ಲ ? ನೂರಾರು ವರ್ಷ ಬ್ರೀಟಿಷರಿಂದ, ನಿಜಾಮರಿಂದ ಆಳಿಸಿಕೊಂಡು ದಾಸ್ಯ ಮನೋಭಾವ ಅಂತರಜಲವಾಗಿ ಪ್ರವಹಿಸಿದ್ದಕ್ಕೆ ತಡೆ ಒಡ್ಡ ಬೇಕಾಗಿದೆ. ಸ್ವಾಭಿಮಾನದ ಕಿಚ್ಚು ಹಚ್ಚಬೇಕಾಗಿದೆ.

ನಮ್ಮ ಪ್ರದೇಶದ ಮಣ್ಣು, ಅದರ ಫಲವತ್ತತೆ ಅರಿಯದೆ ಅನ್ಯರಿಗೆ ಮಾರಿಕೊಂಡು ನಮ್ಮ ಹೊಲದಲ್ಲಿ ನಾವು ಕೂಲಿ ಆಳುಗಳು ಆಗಿದ್ದೇವೆ. ಅನ್ನ ಹಾಕುವ ರೈತನನ್ನು ಕಡೆಗಣಿಸಿ ಚಾಕರಿ ಮಾಡುವ ನೌಕರನನ್ನು ಆದರ್ಶ ಮಾಡಿಕೊಂಡಿದ್ದೇವೆ. ನೂರಾರು ವರ್ಷ ವ್ಯಾಪಾರ ಮಾಡುತ್ತಿದ್ದವರು ಅಜ್ಞಾನದಿಂದ ವಲಸೆ ಬಂದವರ ಅಂಗಡಿಗಳಲ್ಲಿ ಕೆಲಸ ಮಾಡುವ ದುಸ್ಥಿತಿ ತಂದುಕೊಂಡಿದ್ದೇವೆ.
ಕೃಷಿಯನ್ನು ತಾತ್ಸರ ಮಾಡಿ, ನೌಕರಿ ಆಸೆಗಾಗಿ ಹಪಾಹಪಿಸುತ್ತಿದ್ದೇವೆ. ರೈತ ಬೆಳೆದರೆ ಮಾತ್ರ ಹೊಟ್ಟೆಗೆ ಇಡಿ ಹಿಟ್ಟು. ಬರೀ ಹಣ ಸಂಪಾದನೆಯಿಂದ ಅಕ್ಕಿ ಖರೀದಿಸಬಹುದೇ ಹೊರತು ಹಣದಿಂದ ಅಕ್ಕಿಯನ್ನು ಬೆಳೆಯಲಾಗದು.

 


ಸುಂದರ ಬದುಕಿಗೆ ಕೃಷಿ, ಆರೋಗ್ಯ, ಶಿಕ್ಷಣ, ಉದ್ಯೋಗ, ಪರಿಸರ ಉಳಿವು, ಸಹಕಾರದ ಸಹ ಬಾಳ್ವೆ ಅತ್ಯಂತ ಅವಶ್ಯಕವಾಗಿದೆ. ಸ್ವಾರ್ಥ ರಹಿತ ಕೂಡು ಕುಟುಂಬ ಜೀವನ ಬೇಕಾಗಿದೆ. ವ್ಯಕ್ತಿ ನಿಷ್ಠೆ ಬದುಕಿಗಿಂತ ಸಮಷ್ಟಿ ಸಮಾಜ ರೂಪಗೊಳ್ಳಬೇಕಾಗಿದೆ. ಇಂತಹ ಹತ್ತಾರು ವಿಚಾರಗಳನ್ನು ಚರ್ಚೆ ಮಾಡಲು, ಪರಿಹಾರ ಕಂಡುಕೊಳ್ಳಲು ಇದೊಂದು ಉತ್ತಮ ಮಾರ್ಗ ಎಂದು e-ಸುದ್ದಿ ಅಂತರಜಾಲ ಪತ್ರಿಕೆ ಪ್ರಾರಂಭಿಸಿದ್ದೇವೆ.
e-ಸುದ್ದಿ ಅಂತರಜಾಲದ ಪತ್ರಿಕೆಗೆ ಓದುಗರು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದೀರಿ. ಸಲಹೆ ಸೂಚನೆ ನೀಡಿದ್ದೀರಿ.
ಅನೇಕ ಹಿರಿಯರು ಉತ್ತಮ ಲೇಖನ ಕಳಿಸಿ ಸಹಕರಿಸಿದ್ದೀರಿ. ನೂರಾರು ಸುದ್ದಿಗಳು ಪ್ರಕಟವಾಗಿ ಜನರು ಮೆಚ್ಚುವಂತೆ ಮಾಡಿದೆ. ಪ್ರಾಯೋಗಿಕವಾಗಿ ನಡೆದ ಒಂದು ತಿಂಗಳ ಪಯಣ ದೂರದ ಹಾದಿ ಸಾಗಲು ಭರವಸೆ ಮೂಡಿಸಿದೆ.
ಮತ್ತೊಮ್ಮೆ ನಿಮ್ಮಗೆಲ್ಲ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಸಂಪಾದಕ
ವೀರೇಶ ಸೌದ್ರಿ, ಮಸ್ಕಿ 🙏

Don`t copy text!