ಮೌನ ಮನದ ಮಾತುಗಳು ಕವನಗಳಾದಾಗ

ಮೌನ ಮನದ ಮಾತುಗಳು ಕವನಗಳಾದಾಗ

ಪುಸ್ತಕದ ಹೆಸರು- ಮೌನ ಮನದ ಮಾತುಗಳು
ಲೇಖಕಿ – ಫರ್ಹನಾಜ್ ಮಸ್ಕಿ
ಪುಟಗಳು 68+4
ಬೆಲೆ-120
ಪ್ರಸ್ತುತ ಹುಳಿಯಾರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಷಯದ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ನಿರ್ವಹಿಸುತ್ತಿರುವ ಗೆಳತಿ ಫರ್ಹಾನಾಜ಼್ ಮಸ್ಕಿ (ತಂದೆ ಖ್ವಾಜಾ ಗೇಸುದರಾಜ್ ಹುಸೇನ್( ಕಿರನ್ ಬ್ಯಾಟರೀಸ್) ತಾಯಿ ಅನೀಸ್ ಫಾತಿಮಾ) ಯವರು ನಮ್ಮ ಪಕ್ಕದ ಊರಿನ ಮಸ್ಕಿಯಲ್ಲಿ ಹುಟ್ಟಿದ ಅದ್ಭುತ ಲೇಖಕಿ ಎನ್ನುವುದೇ ನಮ್ಮ ಜಿಲ್ಲೆಗೆ ಹೆಮ್ಮೆಯ ಗರಿ.
ಎರಡು ವರ್ಷಗಳಿಂದ ಕೊರೋನಾ ಎನ್ನುವ ಮಹಾಮಾರಿ ಎಲ್ಲರನ್ನೂ ಕಾಡಿಸಿ ನೋಯಿಸಿ ಎಷ್ಟೋ ಜನರ ಜೀವ ಹೊತ್ತುಕೊಂಡು ಹೋಗಿ ಸಾಕಷ್ಟು ನೋವುಗಳನ್ನು ಕೊಟ್ಟಿದೆ ಎಂದು ಕೇಳಿದ್ದೇವೆ, ನೋಡಿದ್ದೇವೆ , ಆದರೆ ಅಂತಹಾ ಪಿಡುಗು ಲೇಖಕಿ ಫರ್ಹಾನಾಜ಼್ ಮಸ್ಕಿಯವರ ಕುಟುಂಬವನ್ನು ಕಾಡಿ, ಇಡೀ ಜೀವನದ್ದೂದ್ದಕ್ಕು ತುಂಬಲಾರದ ನಷ್ಟ ಮತ್ತು ನೋವು ಕೊಟ್ಟಿದೆ. ಕೊರೋನದ ಕರಾಳ ಛಾಯೆ ಅವರ ತಂದೆಯನ್ನು ಬಲಿತೆಗೆದುಕೊಂಡಿತು. ನಂತರ ಅಷ್ಟಕ್ಕೇ ಬಿಡದೆ ಅವರ ತಾಯಿಗೆ ಮತ್ತು ಫರ್ಹಾನಾಜ್ ರವರಿಗೆ ಕೊರೊನಾ ಪಾಸಿಟಿವ್ ಬಂದು ಆಸ್ಪತ್ರೆಯಲ್ಲಿ ತಾಯಿ ಮಗಳು ಸಾವು ಬದುಕಿನ ಜೊತೆ ಹೋರಾಟ ನಡೆಸಿದರು. ಅದರಲ್ಲಿ ಅವರು ತಮ್ಮ ತಾಯಿಯನ್ನೂ ಕಳೆದುಕೊಂಡರು. ಐ.ಸಿ.ಯು ನಲ್ಲಿ ಸುಮಾರು 15-20 ದಿನಗಳು ಕೊರೊನಾ ವಿರುದ್ಧ ಹೋರಾಡಿ, ಪವಾಡ ಎನ್ನುವಂತೆ ಬದುಕಿಬಂದಿದ್ದಾರೆ.ಆಸ್ಪತ್ರೆಯಿಂದ ಹೊರ ಬಂದ ನಂತರ ಈ ಪರಿಸ್ಥಿತಿಯಲ್ಲಿ ‘ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಚೊಚ್ಚಲ ಕೃತಿ ಯೋಜನೆ ಅಡಿಯಲ್ಲಿ’ ಅವರ ಕೃತಿ ಆಯ್ಕೆಯಾದದ್ದು ಫರ್ಹಾನಾಜ್ ರವರಿಗೆ ಮತ್ತೊಮ್ಮೆ ಜೀವನದ ಹುಮ್ಮಸ್ಸು ನೀಡಿದಂತಾಗಿದೆ.

(ಕವಯತ್ರಿ  – ಫರ್ಹಾನಾಜ್ ಮಸ್ಕಿ)

ಇವರ ಚೊಚ್ಚಲ ಕವನ ಸಂಕಲನ ಕೃತಿ “ಮೌನ ಮನದ ಮಾತುಗಳು” ಇದರಲ್ಲಿ 44 ಕವಿತೆಗಳು ಇದ್ದು ಒಂದೊಂದು ಕವಿತೆಗಳು ಪುರುಷ ಪ್ರಧಾನ ಸಮಾಜ, ಶೋಷಣೆ , ಸ್ತ್ರೀ ಸಬಲೀಕರಣ, ಪ್ರಕೃತಿಯ ಸವಿ, ಮನುಜ ಸ್ವಭಾವಗಳು ಹೀಗೆ ತಾವು ಕಂಡದ್ದನ್ನು ಉಂಡದ್ದನ್ನು ನೇರವಾಗಿ ತಮ್ಮ ಕವಿತೆಗಳಲ್ಲಿ ಪ್ರಶ್ನಿಸಿದ್ದಾರೆ .

“ಚಹಾ ಅವಳು” ಕವಿತೆಯಲ್ಲಿ
ಚಹಾವೆಂದರೆ ಸುಮ್ಮನೆಯೇ?
ಅವಳ ಸಹಜ ಸ್ವಾದಕೆ,
ಏನೇನು ಬೇಕು ನಿಮಗೆ?
ಸಕ್ಕರೆಯೊಂದಿದ್ದೆರೆ ಸಾಕೇ?

ಕುಟ್ಟಿ ಜಜ್ಜಿ ಅಂಗ ಅಂಗ
ಬೆರೆಸಿ ಏಲಕ್ಕಿ, ಶುಂಠಿ, ಲವಂಗ,
ಒಂದಿಷ್ಟು ಕಹಿ ಒಂದಿಷ್ಟು ಸಿಹಿ
ಅವಳಿಂದಲೇ ಬೇಕು
ನಿಮಗೆ, ಯಾವ ಯಾವ ಸವಿ?
ಎಂದು ಬರೆದ ಸಾಲುಗಳು
ತಮಗೆ ಚಹಾದ ಮೇಲೆ ಎಷ್ಟು ಒಲವಿದೆ ಎಂಬುದರ ಜೊತೆಗೆ ಹೆಣ್ಣಿನ ಸ್ಥಾನಮಾನ, ಸಮಾಜ ಅವಳನ್ನು ನೋಡುವ ಪರಿ ಎಲ್ಲವನ್ನೂ ಕೇವಲ ಚಹಾದಿಂದ ಬಣ್ಣಿಸಿದ್ದು ಕವಿತೆ ಹೆಣೆಯುವ ಚಾತುರ್ಯವನ್ನು ತೋರಿಸುತ್ತದೆ.
“ಡೋರ್ ಬೆಲ್ಲು ಅವಳು” , ಈ ಕವಿತೆ ಓದುಗರಿಗೆ ಒಂದು ನವಿನ ಅನುಭವ ನೀಡುತ್ತದೆ.
‘ಹೊಸದಾಗಿ ತಂದಿದ್ದ ಡೋರ್ ಬೆಲ್ಲು
ಅದೇ ಎತ್ತರ ಅದೇ ಕಾಯ
ಬಣ್ಣದೊಂದಿಗೆ ಯಾವ ರಾಜಿಯೂ ಇಲ್ಲ
ಅತ್ತ ಇತ್ತ ಸುತ್ತ ಮುತ್ತ ತಿರುಗಾಡಿ
ತಂದಿದ್ದರು ಡೋರ್ ಬೆಲ್ಲು….

ಮರೆತು ತಮ್ಮೊಳಗಿನ ಕರ್ಕಶ
ಎಲ್ಲೆಡೆ ಡೋರ್ ಬೆಲ್ಲಿನದೇ ಚರ್ಚಾ!
ಗುಣ ವರ್ಣ ಸ್ವರ ಸಾಮರ್ಥ್ಯ
ತುಲನೆ ಮಾಡುವ ಹರಸಾಹಸ!!!
ಈ ಕವಿತೆಯಲ್ಲಿ ಮದುವೆ ಮಾಡಿಕೊಂಡು ಬಂದ ಹೆಣ್ಣಿನ ಪರಿಸ್ಥಿತಿಯನ್ನೆ ತಿಳಿಸುವಂತೆ ಡೋರ್‌ ಬೆಲ್‌ ಅನ್ನೇ ರೂಪಕವಾಗಿ ಹೊಸ ಶೈಲಿಯೊಂದಿಗೆ ಹೊಸ ಪ್ರಯೋಗದಂತೆ ಬರೆದ ಈ ಕವಿತೆ ತುಂಬಾ ಸೊಗಸಾಗಿ ಮೂಡಿ ಬಂದಿದೆ.
ಅವರ ಮತ್ತೊಂದು ಕವಿತೆ ” ಹೆಣ್ಣು ಹುಟ್ಟಿದಾಗ”
“ಅಜ್ಜಿಯ ಮುಖವಾಗಿತ್ತು ಕುಂಬಳಕಾಯಿ
ಅಜ್ಜನ ಕೈಯಿಂದ ಬಿತ್ತು ಮಿಠಾಯಿ
ಅಪ್ಪನ ಕೋಪ ಮುಗಿಲೇರಿತ್ತು
ಅಕ್ಕ ನನ್ನ ನೋಡಿ ನಗುತಿತ್ತು
ನಾನೊಂದು ಹೆಣ್ಣೆಂದು..
ಉಸಿರಾಡಲು ಗಾಳಿ ತೊಂದರೆ ಕೊಟ್ಟಿಲ್ಲ
ಹೊಟ್ಟೆ ತುಂಬಿಸಲು ಹಾಲು ನಿರಾಕರಿಸಿಲಿಲ್ಲ
ಹೊಂದಿಕೊಳ್ಳಲು ಈ ಪರಿಸರ ತಿರಸ್ಕರಿಸಲಿಲ್ಲ
ಆದರೆ ಸಂತಸ ಮಾತ್ರ ನಾ ಕಾಣಲೇ ಇಲ್ಲ”

ನಮ್ಮ ಸಮಾಜದಲ್ಲಿ ಗಂಡು ಮಗುವಿಗಿರುವ ವ್ಯಾಮೋಹ ಮತ್ತು ಹೆಣ್ಣು ಮಗುವಿನ ಬಗೆಗೆ ನೀರಸ ಭಾವನೆಗಳನ್ನು ತಮ್ಮ ಕವಿತೆಯಲ್ಲಿ ಅನಾವರಣ ಮಾಡಿದ್ದಾರೆ. ಹೆಣ್ಣು ಮಗುವಿನ ಹುಟ್ಟಿನಿಂದ ಪ್ರಕೃತಿಗಿಲ್ಲದ ನೋವು ಭೇದಭಾವ ಸಮಾಜದಲ್ಲಿ ಏಕೆ? ಎಂದು ಬಹಳ ಚೆಂದವಾಗಿ ಪ್ರಶ್ನಿಸಿದ್ದಾರೆ.
“ಅಸಲಿ ಬಣ್ಣ ಯಾವುದು” ಈ ಕವಿತೆಯಲ್ಲಿ ಕ್ಷಣ ಕ್ಷಣಕ್ಕೂ ಬದಲಾಗುವ ಜನರ ಕುರಿತು ಸುಂದರವಾಗಿ ವರ್ಣಿಸಿದ್ದಾರೆ. ಸಮಾಜದಲ್ಲಿ ಮೊಸ ಲೋಭದ ಸ್ವಾರ್ಥ ಮನೋಭಾವದ ಜನರ ಬಣ್ಣ ಬಯಲು ಮಾಡುವಂಥ ಕವಿತೆ ಇದಾಗಿದೆ.
“ಹಾಯಾಗಿರುವುದನ್ನು ಕಲಿತು ಬಿಡು” ಈ ಕವಿತೆ ನನ್ನ ಮಸ್ಸಿಗೆ ತುಂಬಾ ಇಷ್ಟವಾಯಿತು.
“ಯಾರಿಗೂ ಹೇಳದಿರು
ನೋವನುಂಗಿ ಬದುಕು
ಹೀಗೋ ಹಾಗೋ

ಕಣ್ಣೆತ್ತಿ ನೋಡಬೇಡ
ಮಾತಿಗೆ ಮಾತು ಬೆಳೆಸಬೇಡ
ದಮ್ಮಯ್ಯ ಎಂದು
ಕ್ಷಮೆ ಕೇಳುತಿರು
ಎಲ್ಲವೂ ಸಹಿಸಿಬಿಡು” ಈ ಕವಿತೆ ಹೆಣ್ಣನ್ನು ಹೆಣ್ಣಿನ ಸಮಸ್ಯೆಗಳನ್ನು ನಮ್ಮ ಕುಟುಂಬಗಳು ಸಮಾಜಗಳು, ನೀನು ಮೌನವಾಗಿ ಇದ್ದುಬಿಡು ಎಂಬುದನ್ನು ಸೊಗಸಾಗಿ ತಿಳಿಸುತ್ತದೆ. ನೀನು ಹೆಣ್ಣು ಎಲ್ಲವನ್ನು ಎದೆಯಲ್ಲಿ ಮುಚ್ಚಿಟ್ಟುಕೊಂಡು ಬಂದಂತೆ ಸಾಗಿಬಿಡು ಎಂದು ನಮ್ಮ ಸಮಾಜದಲ್ಲಿ ಹೆಣ್ಣಿನ ಶೋಷಣೆ ಎಷ್ಟಿದೆ ಅವಳ ನೋವನ್ನು ಕೇಳುವವರೂ ಇಲ್ಲ. ಅವಳನ್ನು ಅವಳು ಹೆಣ್ಣೆಂಬ ಮಾತ್ರಕ್ಕೆ ಸಹಿಸುವ‌ ಕಷ್ಟ, ತರತಮ, ತೊಂದರೆಗಳ ಮೇಲೆ ಈ ಕವಿತೆ ಬೆಳಕು ಚೆಲ್ಲುತ್ತದೆ.
ಅಪ್ಪನ ಕುರಿತು ಒಂದು ಕವಿತೆ ಇದೆ ನನ್ನೆಲ್ಲಾ ಬೇಕು ಬೇಡಗಳ ಅರಿತುಕೊಂಡು ಕೇಳಿದ್ದನು ಕೊಡಿಸಿ ಕಾಲಚಕ್ರವನ್ನರಿತ ಅಪ್ಪ ಮಕ್ಕಳೊಂದಿಗೆ ತನ್ನ ಪಾತ್ರವನ್ನು ಬದಲಾಯಿಸಿದ ಅಪ್ಪ ಬರೀ ಗುರುವಲ್ಲ ಗೆಳೆಯನೂ ಆದ, ಅಪ್ಪನದ್ದೂ ತಾಯಿ ಹೃದಯ ಎಂದು ತಿಳಿಸುವ ಅಪ್ಪನ ಬಗೆಗಿನ ಕವಿತೆ ನಿಜಕ್ಕೂ ಮನಮುಟ್ಟುವಂತೆ ಬರೆದಿದ್ದಾರೆ.
ಅನುಮತಿ ನೀಡುವಿರಾ ಎಂಬ ಕವಿತೆಯಲ್ಲಿ
ಹೇಳಿಕೊಂಡರೆ
ಅವಳೇ ಈ ಜಗತ್ತು
ಅವಳಿಲ್ಲದೇ ಉಳಿವಿಲ್ಲ ನಿಮಗೂ
ಅವಳು ಯಾರು? ಹೊಟ್ಟೆಯಲ್ಲೂ
ಬ್ರಹ್ಮಾಂಡ ಹೊತ್ತ ಹೆಣ್ಣು ಅವಳು!!
ಎಂಬ ಸಾಲುಗಳು ಹೆಣ್ಣನ್ನು ಶೋಷಿಸುವ ಈ ಸಮಾಜದಲ್ಲಿ ಹೆಣ್ಣಿನ ಮಹತ್ವವನ್ನು ಅದ್ಭುತವಾಗಿ ಹೇಳುತ್ತಿದೆ. ಹೀಗೊಂದು ಬಾಳು ಸಾಗುತಿದೆ, ಸ್ತ್ರೀ ಭ್ರೂಣ ಹತ್ಯೆ, ಆಧುನಿಕ ಮಹಿಳೆ ನಾನು, ಹೀಗೊಂದು ಭರವಸೆ,ಅದೇ ಸಿಗ್ನಲ್ ಬಳಿ, ನೀ ಬರುವೆ ಯಾವಾಗ? ನನ್ನ ನಿನ್ನ ಅನುಬಂಧ, ಪ್ರಕೃತಿಯ ಸವಿ, ನೀ ಬರುವುದಾದರೆ, ಒಟ್ಟಿಗೆ ಬಾಳಲು ಒಳ್ಳೆಯವರು ಬೇಕಾಗಿದ್ದಾರೆ, ಗಾಂಧಿಜೀ ಗೊಂದು ಪತ್ರ ಹೀಗೆ ಒಂದೊಂದು ಕವಿತೆಯೂ ವಿಭಿನ್ನ ವಿಷಯಾಧಾರಿತವಾಗಿದ್ದು ಒಂದೊಂದು ಆಸೆ, ನಿರೀಕ್ಷೆ, ಭರವಸೆ, ಸಮಾಜದ ಅನಿಷ್ಟತೆಗಳ ವಿರುದ್ಧ ಪ್ರಶ್ನೆಗಳಿಂದ ಕೂಡಿದ್ದು ಓದುಗರಿಗೆ ಒಂದು ಹೊಸತನಕ್ಕೆ ಕರೆದೊಯ್ಯುವುದಲ್ಲದೇ ಚಿಂತಿಸುವಂತೆ ಮಾಡುತ್ತವೆ. ಜೊತೆಗೆ ಬೇಸರವಾಗದಂತೆ ಸರಳ ಪದಗಳಿಂದ ಉತ್ತಮ ಕವಿತೆಗಳನ್ನು ಹೊಂದಿದ ಕೃತಿಯನ್ನು ನೀಡುವಲ್ಲಿ ಫರ್ಹಾನಾಜ್ ರವರ ಶ್ರಮ ನಿಜಕ್ಕೂ ಫಲಪಡೆದಂತೆ ಕೃತಿ ಮೂಡಿಬಂದಿದೆ.
ಮಗಳನ್ನು ಈ ಮಟ್ಟಕ್ಕೆ ಬೆಳೆಸಿದ ಅಪ್ಪ, ಅಮ್ಮ ಮಗಳ ಬೆಳವಣಿಗೆ ನೋಡಲು ಈ ಸಮಯದಲ್ಲಿ ಇರಬೇಕಿತ್ತು. ಇಲ್ಲ ಎನ್ನುವುದು ನನಗೆ ಬೇಸರ ತಂದಿದೆ. ಅವರ ಆಶೀರ್ವಾದ ನಿಮ್ಮ ಜೊತೆ ಯಾವಾಗಲೂ ಇರಲಿ ಇನ್ನಷ್ಟು ಮತ್ತಷ್ಟು ಕೃತಿಗಳು ಲೇಖಕಿ ಫರ್ಹಾನಾಜ಼್ ರವರಿಂದ ಹೊರಬರಲಿ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಕೊಡುಗೆಗಳನ್ನ ಕನ್ನಡಮ್ಮನ ಪಾದಗಳಿಗೆ ಅರ್ಪಿಸಲಿ ಎಂದು ಹಾರೈಸುತ್ತೇನೆ.

✍️ ಶ್ರೀಮತಿ ಕವಿತಾ ಹಿರೇಮಠ
ಕವಿತಾಳ

One thought on “ಮೌನ ಮನದ ಮಾತುಗಳು ಕವನಗಳಾದಾಗ

  1. ಕವನ ಸಂಕಲನವನ್ನು ಉತ್ತಮವಾಗಿ ಅವಲೋಕಿಸಿದ್ದೀರಿ… ಹೆಣ್ಮನದ ಮೌನ ಮಾತಾಗುವುದೇ ಒಂದು ತಪ್ಪು ಎನ್ನುವ ‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ದುಸ್ಥಿತಿಯನ್ನು ಸಮಾಜದಲ್ಲಿ ಕಾಣುತ್ತೇವೆ. ಇಂತಹ ವಿಷಮ ಸ್ಥಿತಿಯಲ್ಲಿ ಕವಯಿತ್ರಿಯವರು ಪರೋಕ್ಷವಾಗಿ ಕವನಗಳ ಮೂಲಕ ಸಮಾಜದ ಕಣ್ತೆರೆಸುವ ತಮ್ಮ ಪಾಲಿನ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆಂಬುದು ತಮ್ಮ ಲೇಖನದಿಂದ ತಿಳಿಯುತ್ತದೆ. ಚೆನ್ನಾಗಿ ಕವಿತೆಯೊಳಗೆ ಹೊಕ್ಕು ಅನುಭಾವಿಸಿದ್ದೀರಿ… ಅಭಿನಂದನೆಗಳು ರಿ…

Comments are closed.

Don`t copy text!