ಸುಮನಾ ಕ್ರಾಸ್ತಾ ಮಾಡಿದ ಆರೋಗ್ಯ ಕ್ರಾಂತಿ

ಸುಮನಾ ಕ್ರಾಸ್ತಾ ಮಾಡಿದ ಆರೋಗ್ಯ ಕ್ರಾಂತಿ

 

ಆರೋಗ್ಯ ಸಹಾಯಕಿಯೊಬ್ಬಳು ಶ್ರದ್ಧೆಯಿಂದ ಕೆಲಸ ಮಾಡಿದರೆ ಗ್ರಾಮೀಣ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಬಲ್ಲಳು ಎಂಬುದಕ್ಕೆ ಪ್ರಸ್ತುತ ಸುಮನಾ ಕ್ರಾಸ್ತಳ ಕೆಲಸವೇ ಪ್ರತ್ಯಕ್ಷ ನಿದರ್ಶನ. ಅದೊಂದು ಜಿಂದಾ ಮಿಸಾಲ್ ಕಹಾನಿ. ಹೌದು ಗ್ರಾಮೀಣ ಜನಾರೋಗ್ಯ ಸೇವೆಯ ಜೀವಂತ ಕಥನ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾರ್ನಬೈಲು ವ್ಯಾಪ್ತಿಯ ಸಜೀಪಮುನ್ನೂರು ಎಂಬ ಆರೋಗ್ಯ ಉಪಕೇಂದ್ರವೇ ಕಥಾನಾಯಕಿ ಸುಮನಳ ಜೀವಂತ ಕಹಾನಿಯ ಕಾರ್ಯಕ್ಷೇತ್ರ.

ಬರೋಬ್ಬರಿ ಮೂರೂವರೆ ವರ್ಷಗಳ ಹಿಂದೆ ಸುಮನ ಕ್ರಾಸ್ತಾ ಆರೋಗ್ಯ ಸಹಾಯಕಿಯಾಗಿ ಸಜೀಪ ಮುನ್ನೂರು ಆರೋಗ್ಯ ಉಪಕೇಂದ್ರಕ್ಕೆ ವರ್ಗವಾಗಿ ಬಂದಾಗ ಹಾಳಾಗಿ ಹುಲ್ಲು ಪೊದೆಗಳು ಬೆಳೆದಿದ್ದ, ಖಾಲಿಬಿದ್ದ ಎರಡು ಕೊಳಕು ಕೋಣೆಗಳು. ಗಬ್ಬುನಾತ ಬೀರುವ ಅನಾರೋಗ್ಯದ ಉಪಕೇಂದ್ರ ಅದಾಗಿತ್ತು. ಹಾಗೆ ನೋಡಿದರೆ ಸರಕಾರದ ಬಹುಪಾಲು ಆರೋಗ್ಯ ಉಪಕೇಂದ್ರಗಳ ಅವಸ್ಥೆಯೇ ಅದಾಗಿರುವುದು ಸುಳ್ಳಲ್ಲ.

ಅಷ್ಟಕ್ಕೂ ಸರಕಾರ ಆರೋಗ್ಯ ಸಹಾಯಕಿಯರ ವಾಸಕ್ಕೆಂದು ಉಪಕೇಂದ್ರಗಳನ್ನು ಉಚಿತವಾಗಿ ಒದಗಿಸುತ್ತಿಲ್ಲ. ಮಾಹೆಯಾನ ಅವರ ಮೂಲವೇತನದ ಶೇಕಡಾ ಹತ್ತರಷ್ಟು ಹಣವನ್ನು ಅವರ ಪಗಾರದಿಂದ ಸರಕಾರ ಪಡೆಯುತ್ತದೆ. ಕನಿಷ್ಠವೆಂದರೂ ₹ ನಾಕೈದು ಸಾವಿರದಿಂದ ಹತತ್ರ ಹತ್ತು ಸಹಸ್ರದವರೆಗೂ ಪ್ರತಿಯೊಬ್ಬ ಆರೋಗ್ಯ ಸಹಾಯಕಿ ಪ್ರತಿ ತಿಂಗಳು ಉಪಕೇಂದ್ರದ ಬಾಡಿಗೆ ಹಣವೆಂದು ಸರಕಾರಕ್ಕೆ ನೀಡುತ್ತಾಳೆ. ಹೀಗಿರುವಾಗ ಆರೋಗ್ಯ ಸಹಾಯಕಿಯರೇ ಉಪಕೇಂದ್ರಗಳ ದುರಸ್ತಿಗಾಗಿ ತೀವ್ರ ಆಸಕ್ತಿ ತೋರುತ್ತಾರೆ.

ಅಂತೆಯೇ ಉಪಕೇಂದ್ರದ ಪೂರ್ಣ ದುರಸ್ತಿಗಾಗಿ ಸರ್ಕಾರ, ಇಲಾಖೆಗಳನ್ನೇ ನಂಬಿ ಕುಂತರೆ ಬೇಗ ನೀಗದೆಂಬ ಅರಿವು ಅವಳಿಗಿತ್ತು. ಹಾಗಂತ ಇಲಾಖೆಯ ನೆರವು ಮತ್ತು ಸಹಕಾರ ನಿರಾಕರಿಸಲಿಲ್ಲ. ಅದರೊಂದಿಗೆ ಅತ್ಯಗತ್ಯವೆಂಬಂತೆ ಜನರ ಸಹಭಾಗಿತ್ವ ಪಡೆಯುವ ಸತ್ಸಂಕಲ್ಪ ಮಾಡುತ್ತಾಳೆ. ಜನಪ್ರತಿನಿಧಿಗಳ ಅನುದಾನವು ಸೇರಿದಂತೆ ದಾನಿಗಳ ನೆರವಿನ ಮೂಲಕ ಆರೋಗ್ಯ ಉಪಕೇಂದ್ರದ ಪೂರ್ಣ ಚಿತ್ರವನ್ನೇ ಪವಾಡ ಸದೃಶದಂತೆ ಕಳೆದ ಲಾಕ್ಡೌನ್ ಅವಧಿಯಲ್ಲಿ ಬದಲಿಸಿದ್ದಾಳೆ.

ಆ ದಿಕ್ಕಿನಲ್ಲಿ ಕಾರ್ಯಪ್ರವರ್ತಳಾಗಿ ಜನರ ನೆರವು, ಸಹಕಾರದೊಂದಿಗೆ ಗ್ರಾಮೀಣ ಆರೋಗ್ಯ ಉಪಕೇಂದ್ರವನ್ನು ಮಾದರಿಯಾಗಿಸಿದ್ದಾಳೆ. ಆರೋಗ್ಯ ಸಹಾಯಕಿ ಸುಮನ ಕ್ರಾಸ್ತಾ ತಾನು ಕೆಲಸ ಮಾಡುವ ಗ್ರಾಮೀಣ ಜನರ ನಾಡಿಮಿಡಿತ ನಿತ್ಯವೂ ಪರೀಕ್ಷೆ ಮಾಡಿ, ಮಾಡಿ ಜನರನ್ನು ಅರ್ಥಮಾಡಿ ಕೊಂಡವರು. ಹೀಗೆ ಜನಾರೋಗ್ಯ ಸೇವೆಯ ಮೂಲಕವೇ ಜನಾನುರಾಗಿಯಾಗಿದ್ದಾರೆ.

ಚಿಕಿತ್ಸಾಲಯ ವಿಭಾಗ ಸೇರಿದಂತೆ ವಾಸದ ಕೋಣೆ, ಅಡುಗೆಕೋಣೆ, ನೀರು, ವಿದ್ಯುತ್, ಬಚ್ಚಲು, ಶೌಚಾಲಯ ಇತ್ಯಾದಿ ಯಾವುದೇ ಕನಿಷ್ಠ ಸೌಕರ್ಯಗಳಿರಲಿಲ್ಲ. ಹೀಗೆ ಹತ್ತು ಹಲವು ಮೂಲ ಸೌಲಭ್ಯಗಳ ವಂಚಿತ ಸಜೀಪ ಮುನ್ನೂರು ಉಪಕೇಂದ್ರದ ಸ್ವರೂಪವೇ ಇಂದು ಸಂಪೂರ್ಣ ಬದಲಾವಣೆಗೊಂಡಿದೆ. ಅದೊಂದು ಸಕಾರಾತ್ಮಕ ಸ್ಥಿತ್ಯಂತರ. ಆರೋಗ್ಯಪೂರ್ಣ ಬೆಳವಣಿಗೆ. ಅದೀಗ ಪರಿಪೂರ್ಣ ಮತ್ತು ಮಾದರಿ ಆರೋಗ್ಯ ಉಪಕೇಂದ್ರವಾಗಿದೆ.

ಸುಮನಾ ಸಿಸ್ಟರ್ ಅವರ ಕಾಯಕನಿಷ್ಠೆಗೆ ದಕ್ಕಿದ ಜನಸ್ಪಂದನ ಅಮೋಘವಾದುದು. ಅದು ಸಮುದಾಯ ಕೈಂಕರ್ಯಕ್ಕೆ ದೊರೆತ ದಿವಿನಾದ ಫಲ. ಈ ಮಾತುಗಳನ್ನು ಸ್ಥಳೀಯರೇ ಹೇಳುತ್ತಾರೆ. ಆದರೆ ಸಾರ್ವಜನಿಕರು ತೋರಿದ ಸಹೃದಯ ಸಹಕಾರ ಅದಕ್ಕೆಲ್ಲ ಕಾರಣ ಎಂಬ ಸಜ್ಜನಿಕೆ ಸುಮನ ಕ್ರಾಸ್ತಾ ಅವರದು.

ಜೀರ್ಣಾವಸ್ಥೆಯ ವಾಸದ ಕೋಣೆ, ಅಡುಗೆ ಕೋಣೆ, ಕ್ಲಿನಿಕ್ ವಿಭಾಗ ದುರಸ್ತಿಗೊಂಡಿವೆ. ಉಪಕೇಂದ್ರ ಕಟ್ಟಡಕ್ಕೆ ಲಗತ್ತಾಗಿ ಚೆಂದದ ಮುಂಚಾವಣಿ ವಿಸ್ತರಣೆಗೊಂಡಿದೆ. ಸುತ್ತಲೂ ಕಂಪೌಂಡ್ ಗೋಡೆ, ಸುರಕ್ಷಿತ ಗೇಟ್ ನಿರ್ಮಾಣ. ವಿಶಾಲವಾದ ಗೋಡೆಗೆ ವರ್ಲಿ ಶೈಲಿಯ ಸುಂದರ ಕಲಾತ್ಮಕ ವರ್ಣಚಿತ್ರಗಳು. ವರ್ಣಚಿತ್ರಗಳ ಉಚಿತ ಕೊಡುಗೆ, ಮಂಚಿಕೊಡ್ನಾಡು ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕರಾದ ತಾರಾನಾಥ ಕೈರಂಗಳ ಮತ್ತು ಅವರ ತಂಡದ್ದು. ತರಹೇವಾರಿ ಹೂ ಗಿಡಗಳು, ತೆಂಗು, ಹಲಸೆ, ಬಾಳೆ, ಮಾವು ಮುಂತಾದ ಗಿಡ ಮರಗಳ ಕಣ್ತಣಿಸುವ ಹಸಿರು.

ಅಜಮಾಸು ಹದಿನೈದು ಲಕ್ಷಗಳಷ್ಟು ಹಣದ ನೆರವಿನಿಂದ ಉಪಕೇಂದ್ರ ಸಂಪೂರ್ಣ ಸದೃಢಗೊಂಡಿದೆ. ಗ್ರಾಮ ಪಂಚಾಯತ್, ತಾ.ಪಂ. ಮತ್ತು ಜಿ.ಪಂ. ಸದಸ್ಯರ ಅನುದಾನ ಸೇರಿದಂತೆ ಸ್ಥಳೀಯ ಕೊಡುಗೈ ದಾನಿ ಡಾ. ಗೋಪಾಲಕೃಷ್ಣ ಆಚಾರ್ಯ ಅವರು ಆರುಲಕ್ಷದಷ್ಟು ಹಣ ನೀಡಿದ್ದಾರೆ. ಆರೋಗ್ಯ ಸೇವೆಯ ಫಲಾನುಭವಿಗಳಿಗೆ ಈಗ ಸಜೀಪಮುನ್ನೂರು ಉಪಕೇಂದ್ರ ಸುಸ್ಥಿರ ಸ್ವಾಸ್ಥ್ಯತಾಣ ಮಾತ್ರವಲ್ಲ ಅದೊಂದು ನೆಮ್ಮದಿಯ ಮಿನಿ ಆರೋಗ್ಯಧಾಮ.

ಕಟ್ಟಡದ ಭೌತಿಕ ದುರಸ್ತಿ ಮಾತ್ರವಾಗಿದ್ದರೆ ಇಲ್ಲಿ ಉಲ್ಲೇಖಿಸುವ ಹರಕತ್ತು ಇರುತ್ತಿರಲಿಲ್ಲ. ಅಲ್ಲಿನ ಸಮಸ್ತ ಸಮುದಾಯಕ್ಕೆ ನಿರಂತರ ದೊರಕುತ್ತಿರುವ ಮೂಲಭೂತ ಆರೋಗ್ಯ ಸೇವೆಗಳು ನಿಜಕ್ಕೂ ಶ್ಲಾಘನೀಯ. ಪುಟ್ಟದಾದ ಆರೋಗ್ಯ ಉಪಕೇಂದ್ರದಲ್ಲಿ ಇ.ಸಿ.ಜಿ. ಟೆಲಿ ಕನ್ಸಲ್ಟೇಷನ್ ಯಂತ್ರ, ಹಿಮೊಗ್ಲೊಬಿನ್ ಪರೀಕ್ಷೆ ಉಪಕರಣ, ಮಧುಮೇಹ ಪರೀಕ್ಷೆ ಉಪಕರಣ, ರಕ್ತದೊತ್ತಡ ಪರೀಕ್ಷೆ ಉಪಕರಣಗಳು ಹೀಗೆ ಮೂಲಭೂತ ಮತ್ತು ಅಗತ್ಯ ಆರೋಗ್ಯ ಸೇವೆಗಳು ಅಲ್ಲಿ ದೊರಕುತ್ತವೆ. ಅಂತೆಯೇ ಅಲ್ಲಿ ಆರೋಗ್ಯಗಂಗೆ, ತುಂಬಿ ಹರಿಯುತ್ತಲಿದ್ದಾಳೆ. ಇದೆಲ್ಲವನ್ನೂ ಸೆರೆ ಹಿಡಿಯಲು ಸೀಸಿಟೀವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅದು ಸಹಿತ ಸ್ಥಳೀಯ ದಾನಿಗಳೊಬ್ಬರ ಉಡುಗೊರೆ. ಓರ್ವ ಆರೋಗ್ಯ ಸಹಾಯಕಿ ತನ್ನ ಸೇವಾಸಂಕಲ್ಪದಿಂದ ಸಾರ್ವಜನಿಕರ ಸಹಕಾರದೊಂದಿಗೆ ಹಳ್ಳಿಯೊಂದರ ಆರೋಗ್ಯ ಉಪಕೇಂದ್ರವೊಂದನ್ನು ಗರಿಷ್ಠ ಮಟ್ಟದಲ್ಲಿ ಮಾದರಿಯಾಗಿಸಬಲ್ಲಳು ಎಂಬುದಕ್ಕೆ ಸುಮನಾ ಸಾಕ್ಷಿಪ್ರಜ್ಞೆಯಾಗಿದ್ದಾಳೆ.

ಸುಮನಳ ಸೇವೆ ಅಲ್ಲಿಗೆ ನಿಲ್ಲುವುದಿಲ್ಲ. ಉಪಕೇಂದ್ರ ವ್ತಾಪ್ತಿ ಪ್ರದೇಶಗಳಾದ ನಂದಾವರ, ಮಾರ್ನಬೈಲು, ಆಲಾಡಿ, ಮಲಯಬೆಟ್ಟು ಸ್ಥಳಗಳ ಹದಿನಾರುನೂರಕ್ಕು ಅಧಿಕ ಸಂಖ್ಯೆಯ ಪ್ರತಿಯೊಂದು ಮನೆ ಮನೆಭೇಟಿ, ಕುಟುಂಬದ ಸಮಗ್ರ ಸ್ವಾಸ್ಥ್ಯ ಸಂರಕ್ಷಣೆ. ಇಲ್ಲಿ ಮುಸ್ಲಿಮರೇ ಬಹುಸಂಖ್ಯಾತರು. ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರ ಆರೋಗ್ಯ, ಹದಿಹರೆಯದ ಮಕ್ಕಳ ಶಾಲಾ ಆರೋಗ್ಯ ಶಿಕ್ಷಣ ಸೇರಿದಂತೆ ನಲವತ್ತಕ್ಕು ಅಧಿಕ ಸಂಖ್ಯೆಯ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಸೇವೆಗಳನ್ನು ಹಳ್ಳಿಯ ಮನೆಬಾಗಿಲಿಗೆ ಮುಟ್ಟಿಸುವ ಮಹಾಮಣಿಹ ಸುಮನ ಅವರದು. ತನ್ನಿಂದ ನೀಗದ ಅದೆಷ್ಟೋ ಪ್ರಕರಣಗಳನ್ನು ಸನಿಹದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಜಾಗ್ರತೆಯಿಂದ ಕಳಿಸಿ ಜನಾರೋಗ್ಯ ಕಾಪಾಡುವಲ್ಲಿ ಅಪಾರ ಶ್ರದ್ಧೆ ಅವರದು.

ಹೌದು ಗ್ರಾಮೀಣ ಜನರಿಗೆ ಸಿಸ್ಟರ್ ಸುಮನಾ ನೀಡುವ ಆರೋಗ್ಯ ಶಿಕ್ಷಣ ಭೌತಿಕ ಚಿಕಿತ್ಸೆಯಷ್ಟೇ ಭರವಸೆದಾಯಕ. ಅದು ಅಂಗಾಲಲಿ‌ ಅಳುಕುತ್ತಿರುವ ನೆಟ್ಟ ನೆಗ್ಗಿಮುಳ್ಳು ಅನಾಮತ್ತಾಗಿ ತೆಗೆದಷ್ಟು ಸಂತಸ. ಅದೇನೋ ಹೇಳಲಾಗದ ಹಳಾರ. ಕನ್ನಡ, ತುಳು, ಬ್ಯಾರಿ, ಮಲೆಯಾಳ, ಕೊಂಕಣಿ, ಇಂಗ್ಲಿಷ್ ಈ ಎಲ್ಲಾ ಭಾಷೆಗಳು ಸಿಸ್ಟರ್ ಸುಮನಗೆ ಜುಳು ಜುಳು ಹರಿಯುವ ತಿಳಿನೀರಿನಷ್ಟೇ ಸರಳ. ಅಲ್ಲಲ‌್ಲಿ ಜದುರಿ ಹೋಗಿರುವ ಮನೆ, ಆಯಾ ಕುಟುಂಬದ ಬಳಕೆ ಭಾಷೆ ಕನ್ನಡದ ಜತೆ ತುಳು, ಬ್ಯಾರಿ,‌ ಮಲೆಯಾಳದ ಸಾಂಗತ್ಯ.

ಹೀಗೆ ಸಮುದಾಯದ ಈ ಎಲ್ಲಾ ಭಾಷೆ ಮಾತನಾಡುವವರ ಜತೆ ಸುಲಲಿತವಾಗಿ ಮಾತಾಡುವ ಮೂಲಕ ಜನಾರೋಗ್ಯ ಸೇವೆ ತಲುಪಿಸುವ ವಾತ್ಸಲ್ಯಮಯಿ ಸುಮನಾ ಕ್ರಾಸ್ತಾ. ಅವರೊಬ್ಬ ನುರಿತ ಆರೋಗ್ಯ ಶಿಕ್ಷಕಿ. ಆರೋಗ್ಯ ಸೇವೆಗಳ ಸಂದಾಯ ಮಾತ್ರವಲ್ಲ, ಸಮುದಾಯದ ಸಮಸ್ತರಿಗೆ ಮನವರಿಕೆಯಾಗುವಂತೆ ನಿಖರ ಆರೋಗ್ಯ ಮಾಹಿತಿ ನೀಡುವಲ್ಲಿ ಅವರು ಅಕ್ಷರಶಃ ನಿಪುಣೆ. *ತನ್ನ ಉಪಕೇಂದ್ರ ವ್ಯಾಪ್ತಿಯ ಆರು ಸಾವಿರಕ್ಕೂ ಅಧಿಕ ಮಂದಿಗೆ ಕೊವಿಡ್ ಪ್ರತಿರೋಧಕ ವ್ಯಾಕ್ಸಿನೇಷನ್ ನೀಡಿದ ಹೆಗ್ಗಳಿಕೆ ಸುಮನಾ ಕ್ರಾಸ್ತಾ ಅವರದು.* ನೂರಾರು ಮಂದಿ ಕೊರೊನಾ ಪೀಡಿತರಿಗೆ ಆಪ್ತ ಸಮಾಲೋಚಕಿಯಾಗಿ ಆಕೆ ನೀಡುತ್ತಿರುವ ಆರೋಗ್ಯ ಶಿಕ್ಷಣಕ್ಕೆ ಮಾರು ಹೋಗದವರಿಲ್ಲ.

*ಇಷ್ಟೆಲ್ಲಾ ಕಷ್ಟಪಟ್ಟು ಕಟ್ಟಿದ ಆರೋಗ್ಯ ಉಪಕೇಂದ್ರವನ್ನು ಇದೀಗ ಅನನುಭವಿ ಸ್ಟಾಫ್ ನರ್ಸಗಳ ಕೈಗೆ ಕೊಡಬೇಕಾದ ಸ್ಥಿತಿಯುಂಟಾಗಿದೆ.* ಪಬ್ಲಿಕ್ ಹೆಲ್ತ್ ಎಂಬುದರ ಸೂಕ್ಷ್ಮ ಮತ್ತು ಸೂಕ್ತ ಅರಿವಿರದ ಸರ್ಕಾರದ ಹೊಣೆಗೇಡಿ MLHP ಯೋಜನೆಯಿಂದಾಗಿ ಸುಮನ ಕ್ರಾಸ್ತಳ ಜನಾರೋಗ್ಯ ಸೇವೆಗೆ ತೊಡಕಾಗಿದೆ. ಅಷ್ಟುಮಾತ್ರವಲ್ಲ ಸುಮನ ಕ್ರಾಸ್ತಾ ಅವರಂತಹ ಸಹಸ್ರಾರು ಮಂದಿ ಆರೋಗ್ಯ ಸಹಾಯಕಿಯರು ಸರಕಾರದ ಕುರುಡು ನೀತಿಯಿಂದಾಗಿ ಅನನುಭವಿ ಸ್ಟಾಫ್ ನರ್ಸುಗಳ ಕೈಗೆ ರಾಜ್ಯ ಸರ್ಕಾರ ಉಪಕೇಂದ್ರಗಳ ಕೀಲಿಕೈ ಕೊಟ್ಟು ಸುಮನಾ ಕ್ರಾಸ್ತಾ ಅವರಂಥವರನ್ನು ಅಸಹಾಯಕರನ್ನಾಗಿಸುತ್ತಿದೆ. ಆಸ್ಪತ್ರೆಗಳೆಂಬ ನಾಲ್ಕುಗೋಡೆಗಳ ನಡುವಿನ ಉಪಚಾರಕ್ಕು ಸಮುದಾಯ ಪ್ರಜ್ಞೆಯುಳ್ಳ ನಿಖರ ಆರೋಗ್ಯ ಸೇವೆಗಳ ಜನಾರೋಗ್ಯ ಸೇವೆಗಳನ್ನು ಇಲಾಖೆ ಮತ್ತು ಸರಕಾರ ಅರ್ಥ ಮಾಡಿಕೊಳ್ಳಬೇಕಿದೆ.

ಸುಮನಾ ಕ್ರಾಸ್ತಾ ತಾನು ದುಡಿಯುವ ವೃಂದ ಸಂಘದ ರಾಜ್ಯದ ಉಪಾಧ್ಯಕ್ಷೆಯಾಗಿಯೂ ಕೆಲವು ಕಾಲ ಕ್ರಿಯಾಶೀಲೆಯಾಗಿದ್ದರು. ಅದೇಕೋ ಅದು ಶಿಲುಬೆಯ ಮೇಲೆ ಮುಳ್ಳುಗಳ ಜೀಕಾಟವೆನಿಸಿ ಸಧ್ಯಕ್ಕೆ ತಟಸ್ಥ ಗೊಂಡಿದ್ದಾರೆ.

ಮಲ್ಲಿಕಾರ್ಜುನ ಕಡಕೋಳ
9341010712

Don`t copy text!