ದೇವರು ಕೊಟ್ಟ ಫಲ…!

ದೇವರು ಕೊಟ್ಟ ಫಲ….!

(ಕತೆ)

ಬಸವರಾಜ ಎಲ್ಲರಿಗಿಂತ ಭಿನ್ನ ವ್ಯಕ್ತಿ . ಮುಂಜಾನೆ ಹಾಸಿಗೆಯಿಂದ ಏಳಲು ಒಲ್ಲೆ ಅನಿಸಿ ಮುಸುಕು ಹಾಕಿಕೊಂಡು ಮಲಗಿರುತಿದ್ದ. ವೃತ್ತಿಯಲ್ಲಿ ಇವನೊಬ್ಬ ಸರಕಾರಿ ನೌಕರ. ಅನೇಕ ಸಲ ಡ್ಯೂಟೀಗಿ ಹೋಗಲು ತಡವಾಗುತಿತ್ತು . ಒತ್ತಾಯ ಮಾಡಿ ಹೆಂಡತಿ ನಾಗವೇಣಿ ಎಬ್ಬಿಸುತಿದ್ದಳು. ಅನೇಕ ಸಲ ಏಳದೇ ಹಾಗೇ ಮಲಗಿದಾಗ ಇನ್ನೂ ಮಲಗರಿ ಯಾರು ಬ್ಯಾಡ ಅಂತಾರೆ ನಿಮ್ಮ ಡ್ಯೂಟಿ ನಿಮಗೇ ಗೊತ್ತಿಲ್ಲ ಅಂದರೆ ನಾನೇನು ಮಾಡಲಿ ಅಂತ ಸಿಡುಕಿ ಗೊಣಗುತಿದ್ದಳು. ಇವನೊಬ್ಬ ನಿದ್ದೆ ಪ್ರೀಯ ಆದರೆ ಒಳ್ಳೆಯ ನಡೆ ನುಡಿ ಆಚಾರ ವಿಚಾರ ಬೆಳೆಸಿಕೊಂಡವನು. ಸದಾ ಕಾಲ ದೇವರು ದಿಂಡಿರು ಪುರಾಣ ಪ್ರವಚನದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದವನು ಎಲ್ಲಿಯಾದರು ಧಾರ್ಮಿಕ ಕಾರ್ಯಕ್ರಮ ಇದ್ದರೆ ಸಾಕು ತಪ್ಪದೆ ಹಾಜರಾಗಿ ತನ್ನ ಕೈಲಾದ ಸಹಾಯ ಮಾಡುತಿದ್ದ. ಅಂದು ಮನೆಯ ಸಮೀಪದ ಮಠದಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯುತಿತ್ತು . ಒಂದು ವಾರ ನಡೆದು ಮುಕ್ತಾಯಕ್ಕೆ ಬಂದಿತ್ತು. ಹೆಚ್ಚಿನ ಸಂಖ್ಯೆಯ ಜನ ಸೇರುತಿದ್ದರು. ಉಸ್ತುವಾರಿ ಸರಿಯಾಗಿ ನಿರ್ವಹಿಸುವಂತೆ ಮಠದ ಮುಖ್ಯಸ್ಥರು ಇವನಿಗೆ ಕರೆದು ಸೂಚಿಸಿದ್ದರು. ಸಮಾರಂಭದ ಕೊನೆಯ ದಿನ ತನಗೆ ಕೊಟ್ಟ ಜವಾಬ್ದಾರಿ ಬಸವರಾಜ ಸಮರ್ಥವಾಗಿ ನಿರ್ವಹಿಸಿ ಮನೆಗೆ ಬಂದಾಗ ಮಧ್ಯೆ ರಾತ್ರಿಯಾಗಿತ್ತು . ನಿದ್ದೆಗೆಟ್ಟವನಿಗೆ ಮುಂಜಾನೆ ಬೇಗ ಏಳಲು ಆಗದೇ ಹಾಗೇ ಮಲಗಿಕೊಂಡ. ಗಂಡನ ಕುಂಬಕರ್ಣನ ನಿದ್ದೆ ನೋಡಿ ನಾಗವೇಣಿಗೆ ಕೋಪ ಬಂದು ಟೈಮ ಎಷ್ಟಾಗ್ಯಾದ ನೋಡ್ರಿ ಇನ್ನೂ ಗೊರಕೆ ಹೊಡೆಯುತ್ತಾ ಮಲಗಿದರ ಹ್ಯಾಂಗ ಡ್ಯೂಟಿಗಿ ತಡಾ ಆಗೋದಿಲ್ಲವೇ? ಅಂತ ಗೋಡೆಯ ಗಡಿಯಾರ ನೋಡುತ್ತಾ ವಟಗುಟ್ಟಿದಳು. ತನ್ನ ಪ್ರಿಯವಾದ ನಿದ್ದೆ ಕೆಡಿಸಿದ್ದಕ್ಕಾಗಿ ಇವನಿಗೆ ಕೋಪ ಬಂದಿತು. ಅದೇ ಕೋಪದಲ್ಲಿ ಹೆಂಡತಿಗೆ ಬೈದು ಬಿಟ್ಟ. ಗಂಡನ ವರ್ತನೆ ನಾಗವೇಣಿಗೆ ಬೇಸರ ತರಿಸಿ ಎದ್ದರೆ ಏಳ್ರಿ ಇಲ್ಲ ಅಂದರೆ ಬಿಡ್ರಿ ನನಗೇನು ಇನ್ಮುಂದೆ ಎಬ್ಬಿಸಲು ಹೋಗೋದಿಲ್ಲ ಅಂತ ಮುಖ ಸಪ್ಪಗೆ ಮಾಡಿ ಹೊರಟು ಹೋದಳು. ದಿನವೂ ಏಳಲು ತಡಾ ಆಗತೊಡಗಿತು ತನ್ನ ತಪ್ಪಿನ ಅರಿವಾಗಿ ಕ್ಛಮಾಪಣೆಯೂ ಕೇಳಿದ. ಡ್ಯೂಟೀಗಿ ತಡವಾದಾಗ ಮೇಲಾಧಿಕಾರಿಯ ಭಯ ಒಳಗೊಳಗೆ ಕಾಡುತಿತ್ತು. ಮುಂಜಾನೆ ಬಸ್ ಸ್ಟಾಪಿಗೆ ಬಂದರೆ ಎಂಟರ ಸುಮಾರಿಗೆ ಬರುವ ಬಸ್ಸುಗಳೆಲ್ಲ ಸಾಮಾನ್ಯವಾಗಿ ಬಹಳ ರಶ್ ಆಗಿ ಬರುತಿದ್ದವು. ಅವು ಎರ್ಡ್ಮೂರು ಕಡೆ ನಿಂತು ಪ್ರಯಾಣಿಕರಿಗೆ ಹತ್ತಿಸಿಕೊಂಡು ಬರುವದರಿಂದ ಇಲ್ಲಿಂದ ಹತ್ತುವವರಿಗೆ ಜಾಗಾ ಸಿಗುತಿರಲಿಲ್ಲ. ವ್ಯಾಪಾರ ಉದ್ಯೋಗ ಸರಕಾರಿ, ಖಾಸಗಿ ಕೆಲಸ ಅಂತ ಜನ ಮುಂಜಾನೆ ಬಸ್ಸಿನಲ್ಲೆ ಪ್ರಯಾಣಿಸುತಿದ್ದರು. ಇವನು ದಿನಾಲೂ ಹೊಸ ಹಳೆ ಮುಖಗಳು ನೋಡುತಿದ್ದ. ಅನೇಕರು ಪರಿಚಿತರೂ ಆಗಿದ್ದರು. ಬಸವೇಶ್ವರ ಸರ್ಕಲಿನ ಆ ನಾಲ್ಕೂ ರಸ್ತೆಗಳು ವಾಹನ ಹಾಗು ಜನ ಸಂಚಾರದಿಂದ ಸದಾ ತುಂಬಿ ತುಳುಕಿರುತಿದ್ದವು . ಒಂದು ಕಡೆಯಿಂದ ಇನ್ನೊಂದು ಕಡೆ ದಾಟಬೇಕಾದರೆ ಬಹಳ ಪ್ರಯಾಸ ಪಡಬೇಕಾಗುತಿತ್ತು. ಫುಟಪಾತಿನ ಬೀದಿ ವ್ಯಾಪಾರ ಗದ್ದಲ ಗೊಂದಲ ಜೋರಾಗಿರುತಿತ್ತು. ಎಲ್ಲಿ ನೋಡಿದರಲ್ಲಿ ಮಾರುವವರ ಕೊಳ್ಳುವವರ ಮಧ್ಯೆ ಚರ್ಚೆ ಚೌಕಾಶಿಯೇ ಕಂಡು ಬರುತಿತ್ತು. ಸರ್ಕಲಿಗೆ ಯಾವುದೇ ಒಂದು ಬಸ್ಸು ಬಂದರೆ ಸಾಕು ಪ್ರಯಾಣಿಕರು ತಾವು ನಿಂತ ಜಾಗದಿಂದ ಒಂದೆರಡು ಹೆಜ್ಜೆ ಮುಂದೆ ಬಂದು ಬಸ್ಸು ಎಲ್ಲಿಗೆ ಹೋಗುತ್ತದೆ? ಎಕ್ಸಪ್ರೇಸ್ಸೊ? ಆರ್ಡಿನರಿಯೋ? ಅಂತ ತಿಳಿದುಕೊಳ್ಳಲು ಮುಗಿ ಬೀಳುತಿದ್ದರು ಕೆಲವರು ಹತ್ತಿದರೆ ಇನ್ನೂ ಕೆಲವರು ಮತ್ತೊಂದು ಬಸ್ಸಿಗಾಗಿ ಕಾಯುತ್ತಿದ್ದರು . ಬಸ್ ಬರಲು ಸ್ವಲ್ಪ ತಡವಾದರೆ ಸಾಕು ಎಲ್ಲರ ಮುಖದ ಮೇಲೂ ಆತಂಕ ಮನೆಮಾಡುತಿತ್ತು ಯಾವಾಗ ಹೋಗಿ ಮುಟ್ಟುತ್ತೇವೊ ಏನೊ ಅನ್ನುವ ಆತಂಕ ಮನೆಮಾಡಿರುತಿತ್ತು. ಬಸ್ ಹತ್ತಿದ ಮೇಲು ಅವರು ಸೀಟು ಹಿಡಿಯುವ ಆತುರರಾಗುತಿದ್ದರು ಖಾಲಿ ಸೀಟಿಗಾಗಿ ಕೆಲವೊಮ್ಮೆ ವಾಗ್ವಾದ ಜಗಳಕ್ಕೂ ಕಾರಣವಾಗುತಿತ್ತು. ಕರ್ಚೀಪೋ ಬ್ಯಾಗೋ ಹಾಕಿ ಕೆಲವರು ಜಾಗಾ ಖಾತ್ರಿ ಮಾಡಿಕೊಂಡು ನಿಟ್ಟುಸಿರು ಬಿಡುತಿದ್ದರು . ಬಸವರಾಜ ಅಂದು ಬಸ್ ಸ್ಟಾಪಿಗೆ ಬಂದಾಗ ದಿನದಕ್ಕಿಂತಲೂ ಹೆಚ್ಚಿನ ಪ್ರಯಾಣಿಕರು ಕಂಡು ಗಾಬರಿಯಾದ. ಯಾವ ಬಸ್ಸಲ್ಲಿಯೂ ಜಾಗಾ ಸಿಗೋದಿಲ್ಲ ಅಂತ ಖಾತ್ರಿಯಾಯಿತು. ಕೆಲ ಬಸ್ಸುಗಳು ನಿಲ್ಲಿಸದೆ ಹಾಗೇ ಹೋದವು . ಏನು ಮಾಡೋದು ಅಂತ ಯೋಚಿಸುವಾಗ ಇವನ ಜೊತ ನಿತ್ಯ ಬಸ್ ಪ್ರಯಾಣ ಮಾಡುತಿದ್ದ ಗೆಳಯ ಶಾಂತಕುಮಾರ ಅದೇ ಸಮಯಕ್ಕೆ ಹಾಜರಾಗಿ ಪಕ್ಕದಲ್ಲಿ ಬಂದು ನಿಂತುಕೊಂಡ. ಅವನೂ ಒಬ್ಬ ಸರಕಾರಿ ನೌಕರ , ಆದರೂ ಇಬ್ಬರ ಇಲಾಖೆಗಳು ಬೇರೆ ಬೇರೆಯಾಗಿದ್ದವು. ಒಂದು ಸೀಟಿ ಸಿಕ್ಕರೆ ಸಾಕು ಅದರಲ್ಲೇ ಅಡ್ಜಸ್ಟ್ ಮಾಡಿಕೊಂಡು ಹೋಗುವ ಪರಿಪಾಠ ಬೆಳೆಸಿಕೊಂಡಿದ್ದರು. ಸೀಟು ಸಿಗದಿದ್ದರೆ ಒಂದು ಕಡೆ ನಿಂತು ಇಳಿಯುವ ತನಕ ಪರಸ್ಪರ ಮಾತುಕತೆಯಲ್ಲಿ ತೊಡಗಿರುತಿದ್ದರು. ಬಸ್ ಬಂದಿಲ್ಲವೇ? ಅಂತ ಶಾಂತಕುಮಾರ ಪ್ರಶ್ನಿಸಿದ. ಸಾಕಷ್ಟು ಬಸ್ ಬಂದಿವೆ ಆದರೆ ಯಾವುದೂ ನಿಲ್ಲದೇ ಹಾಗೇ ಹೊರಟು ಹೋದವು ಅಂತ ನಿರಾಸೆಯಿಂದ ನುಡಿದ. ದಿನಾ ಇದೇ ಕಥೆ ಆಯಿತು ಯಾವಾಗ ನಮಗೆ ಸೀಟು ಸಿಗ್ತಾವೋ ಏನೋ ಅಂತ ಶಾಂತಕುಮಾರ ಗೊಣಗಿದ. ನಂತರ ಅನೇಕ ಬಸ್ ಇವರ ಕಣ್ಣ ಮುಂದಿಂದಲೇ ಹಾದು ಹೋದವು ಒಬ್ಬಿಬ್ಬರು ಮಾತ್ರ ಅದರಲ್ಲಿ ಹತ್ತಿ ಹೋಗುತಿದ್ದರು ಉಳಿದವರು ಹಾಗೇ ನಿಂತುಕೊಂಡರು. ಹೊಸ ಹೊಸ ಪ್ರಯಾಣಿಕರು ಬಂದು ಸೇರುತ್ತಲೇ ಇದ್ದರು. ಇವತ್ತು ಡ್ಯೂಟೀಗಿ ಕರೆಕ್ಟ ಟೈಮಿಗಿ ಹೋಗಿ ಮುಟ್ಟೋದೇ ಡೌಟು ಅಂತ ಶಾಂತಕುಮಾರ ಅನುಮಾನ ವ್ಯಕ್ತಪಡಿಸಿದ. ಏನು ಮಾಡೋದು ಎಷ್ಟು ಬಸ್ಸಾದರೂ ಪ್ರಯಾಣಿಕರಿಗೆ ಸಾಕಾಗ್ತಿಲ್ಲ ಅಂತ ಬಸವರಾಜ ಪ್ರತಿಕ್ರಿಯಿಸಿದ. ಅಷ್ಟರಲ್ಲಿ ಶಾಂತಕುಮಾರನ ಮೊಬೈಲ್ ರಿಂಗಾಯಿತು ಜೇಬಿನಿಂದ ಹೊರತೆಗೆದು ಸ್ವಲ್ಪ ಹೊತ್ತು ಮಾತಾಡಿದ ಅದು ಆತ ನಿತ್ಯ ಬಳಸುವ ಮೊಬೈಲ್ ಆಗಿರದೆ ಹೊಚ್ಚ ಹೊಸ ಮೊಬೈಲಾಗಿತ್ತು. ಮೊಬೈಲ್ ನೋಡಿ ಬಸವರಾಜನಿಗೆ ಆಶ್ಚರ್ಯವಾಯಿತು. ಯಾವಾಗ ತೊಗೊಂಡೆ? ಅಂತ ಆಶ್ಚರ್ಯದಿಂದ ಪ್ರಶ್ನಿಸಿದ. ನಿನ್ನೆ ತೊಗೊಂಡೆ ಅಂತ ಇವನ ಕೈಗೆ ಮೊಬೈಲ್ ಕೊಟ್ಟ. ಎಷ್ಟು ಕೊಟ್ಟೆ ಬಹಳ ಛೊಲೊ ಇದೆ ಅಂತ ಪ್ರಶ್ನಿಸಿದ ಇಪ್ಪತ್ತು ಸಾವಿರ ರುಪಾಯಿ ಅಂತ ಥಟ್ಟನೆ ಉತ್ತರ ಬಂತು. ಅಬ್ಬಾ ಅಷ್ಟೊಂದು ಹಣವೇ ? ಅಂತ ಉದ್ಗಾರ ತೆಗೆದ. ಸ್ವಲ್ಪ ಹೊತ್ತು ಮೊಬೈಲ್ ಸ್ಕ್ರೀನ್ ಮೇಲೆ ಬೆರಳಾಡಿಸಿ ಮೆಮೊರಿ, ಸ್ಟೋರೇಜ್ ಎಲ್ಲವೂ ಪರೀಕ್ಷಿಸಿ ನಂತರ ಬಸವರಾಜ ವಾಪಸ್ ಕೊಟ್ಟ. ಅನಿರೀಕ್ಷಿತವೆಂಬಂತೆ ಒಂದು ಬಸ್ ಆ ಕಡೆಯಿಂದ ಬರುವದು ಕಂಡು ಬಂದಿತು ಅದು ಸಂಪೂರ್ಣ ಖಾಲಿ ಕೂಡ ಆಗಿತ್ತು . ಬಸ್ ನೋಡಿ ಆಶ್ಚರ್ಯದ ಜೊತೆಗೆ ಸಂತಸವೊ ಆಯಿತು ಎಲ್ಲರೂ ನಾಮುಂದು ತಾಮುಂದು ಅಂತ ಹತ್ತಲು ಶುರು ಮಾಡಿದರು. ಶಾಂತಕುಮಾರ ಆಗಲೇ ತನ್ನ ಕರ್ಚೀಪು ಕಿಟಕಿಯಿಂದ ಹಾಕಿ ಒಂದು ಸೀಟು ಪಕ್ಕಾ ಮಾಡಿಕೊಂಡಿದ್ದ . ನೂಕು ನುಗ್ಗಲಿನಲ್ಲಿ ಬಸ್ಸು ಹತ್ತಿ ಸೀಟಿಗೆ ಕುಳಿತುಕೊಳ್ಳುವದರಲ್ಲಿ ಇಬ್ಬರ ಮೈ ಸಂಪೂರ್ಣ ಬೆವರಿ ಹೋಗಿತ್ತು. ಅಬ್ಬ ಇಷ್ಟು ಹೊತ್ತು ಕಾದಿದ್ದಕ್ಕೂ ಸೀಟಾದರೂ ಸಿಕ್ಕಿತು ಅಂತ ಇಬ್ಬರೂ ನಿಟ್ಟುಸಿರು ಬಿಟ್ಟರು. ಯಾಕೋ ಈ ಬಸ್ ಖಾಲಿ ಬಂತಲ್ಲ ಅಂತ ಬಸವರಾಜ ಪ್ರಶ್ನಿಸಿದ ಯಾಕೇನೊ ಗೊತ್ತಿಲ್ಲ ಇಲ್ಲದಿದ್ದರೆ ನಿಂತೆ ಹೋಗಬೇಕಾಗಿತ್ತು ಅಂತ ಶಾಂತಕುಮಾರ ಹೇಳಿದ ಬಸ್ ಖಾಲಿ ಬರ್ತಿರಲಿಲ್ಲ ಸ್ವಲ್ಪ ರಿಪೇರಿ ಇತ್ತು ಅದನ್ನು ಸರಿ ಮಾಡಿಸಿಕೊಂಡು ಸೀದಾ ಈ ಕಡೆಗೆ ಬಂದವಿ ಅಂತ ಕಂಡಕ್ಟರ್ ಇವರ ಮಾತು ಕೇಳಿಸಿಕೊಂಡು ಹೇಳಿದಾಗ ಇವರ ಪ್ರಶ್ನೆಗೆ ಉತ್ತರ ಸಿಕ್ಕಿತು. ಇಡೀ ಬಸ್ಸು ಜನರಿಂದ ತುಂಬಿ ತುಳುಕುತಿತ್ತು. ಕೆಲವರಿಗೆ ಕುಳಿತು ಕೊಳ್ಳಲು ಸೀಟು ಸಿಗದೆ ಹಾಗೇ ನಿಂತುಕೊಂಡರು ಬಸ್ಸು ರಸ್ತೆ ಸೀಳಿಕೊಂಡು ವೇಗವಾಗಿ ಚಲಿಸತೊಡಗಿತು. ಕಿಟಕಿಯಿಂದ ಪ್ರಕೃತಿ ಸೌಂದರ್ಯ ಸವಿಯಲು ಬಸವರಾಜ ಮುಖ ಅತ್ತ ಇತ್ತ ಹೊರಳಿಸಿದ. ಗಾಳಿ ಸುಂಯ್ ಅಂತ ಬೀಸಿ ಬೆವರಿದ ಮುಖಕ್ಕೆ ಹಿತವೆನಿಸಿತು . ಅರ್ಧ ದಾರಿ ಕ್ರಮಿಸಿದಾಗ ಶಾಂತಕುಮಾರ ಮೊಬೈಲ್ ನೋಡಬೇಕು ಅಂತ ತನ್ನ ಜೇಬಿಗೆ ಕೈ ಹಾಕಿಕೊಂಡು ಆಗ ಮೊಬೈಲ್ ಕಾಣದೇ ಹೋದಾಗ ಆಕಾಶವೇ ತಲೆಯ ಮೇಲೆ ಬಿದ್ದಂತಾಯಿತು. ನನ್ನ ಹೊಸ ಮೊಬೈಲ್ ಎಲ್ಲಿ ಹೋಯ್ತು ಅಂತ ಗಾಬರಿಯಾಗಿ ಬಸವರಾಜನ ಮುಖ ನೋಡತೊಡಗಿದ . ಬಸ್ ಹತ್ತುವಾಗಲೇ ಇತ್ತಲ್ಲ? ಈಗ ಹ್ಯಾಂಗ ಕಾಣಸ್ತಿಲ್ಲ ? ಅಂತ ಬಸವರಾಜ ಕೂಡ ಆತಂಕ ಹೊರ ಹಾಕಿದ. ಅಲ್ಲೇ ಎಲ್ಲಿಯಾದರೂ ಇರಬೇಕು ಒಂದು ಸಲ ಬೇರೆ ಮೊಬೈಲಿನಿಂದ ರಿಂಗ ಮಾಡಿ ನೋಡ್ರಿ ಅಂತ ಪಕ್ಕದ ಸೀಟಿನವರು ಸಲಹೆ ಕೊಟ್ಟರು. ಬಸವರಾಜ ತನ್ನ ಮೊಬೈಲ್ ಹೊರ ತೆಗೆದು ಕಾಲ್ ಮಾಡಿದ ಆಗ ಆ ಮೊಬೈಲ್ ರಿಂಗಾಯಿತು ಆದರೆ ಅದು ಎಲ್ಲಿದೆ ? ಅಂತ ಗೊತ್ತಾಗಲಿಲ್ಲ ಹ್ಯಾಂಗ ಕಳೀತು? ಯಾವಾಗ ಕಳೀತು ? ಯಾವ ಕಂಪನೀದು? ಅಂತ ಅನೇಕರು ಪ್ರಶ್ನೆ ಮಾಡತೊಡಗಿದರು. ಮೊಬೈಲ್ ಕಳೆದುಕೊಂಡ ಚಿಂತೆಯಲ್ಲಿ ಶಾಂತಕುಮಾರ ಮುಳುಗಿದ. ಬಸ್ಸಿನ ಸಪ್ಪಳದಲ್ಲಿ ರಿಂಗಾಗಿದ್ದು ಕೇಳಿಸ್ತಿಲ್ಲ ಸ್ವಲ್ಪ ಹೊತ್ತು ಬಸ್ ನಿಲ್ಲಿಸಿ ಅಂತ ಒಬ್ಬಿಬ್ಬರು ಸಲಹೆ ನೀಡಿದರು. ಡ್ರೈವರ ತಕ್ಷಣ ಬ್ರೇಕ್ ಹಾಕಿ ಬಸ್ ನಿಲ್ಲಿಸಿದಾಗ ಸಮರೋಪಾದಿಯಲ್ಲಿ ಮೊಬೈಲ್ ಹುಡುಕಾಟ ಶುರುವಾಯಿತು. ಕಂಡಕ್ಟರ್ ತನ್ನ ಮೊಬೈಲಿನಿಂದ ಒಂದೆರಡು ಬಾರಿ ಡಯಲ್ ಮಾಡಿದ ಅದು ಬಸ್ ಜಾಲರಿ ಮೇಲಿಟ್ಟ ಬ್ಯಾಗೊಂದರಲ್ಲಿ ರಿಂಗಾಗುತ್ತಿರುವದು ಕೇಳಿ ಬಂತು . ಇಲ್ಲೇ ಇದೆಯಲ್ಲ ಅಂತ ಕಂಡಕ್ಟರ್ ಆ ಬ್ಯಾಗಿನಿಂದ ಮೊಬೈಲ್ ಹೊರ ತೆಗೆದ. ಈ ಬ್ಯಾಗ ಯಾರದು ಅಂತ ಪ್ರಶ್ನಿಸಿದ. ಪ್ರಯಾಣಿಕರು ಪರಸ್ಪರ ಒಬ್ಬರ ಮುಖ ಒಬ್ಬರು ಪ್ರಶ್ನಾರ್ಥಕವಾಗಿ ನೋಡತೊಡಗಿದರು. ಇದು ನನ್ನ ಬ್ಯಾಗ್ ಅಂತ ಬಸವರಾಜ ಎದ್ದು ನಿಂತು ಹೇಳಿದ . ಏನ್ರೀ ನಿಮ್ಮ ಬ್ಯಾಗಿನ್ಯಾಗೇ ಮೊಬೈಲ್ ಸಿಕ್ಕಿತು ಏನಿದು? ಅಂತ ಕಂಡಕ್ಟರ್ ಖಾರವಾಗಿ ಪ್ರಶ್ನಿಸಿದ. ಕಂಡಕ್ಟರ್ ಮಾತಿಗೆ ಸಹ ಪ್ರಯಾಣಿಕರು ಕೂಡ ದನಿಗೂಡಿಸಿ ಚೋರ್ ಕಂಹಾ ಹೈ ಎಂದರೆ ಬಗಲ್ ಮೇ ಹೈ ಎನ್ನುವಂತಾಯಿತಲ್ಲ ? ಅಂತ ಪರಸ್ಪರ ಮಾತಾಡಿಕೊಂಡರು . ಮೊಬೈಲ್ ನನ್ನ ಬ್ಯಾಗಿನ್ಯಾಗ ಹ್ಯಾಂಗ ಬಂತು? ಅಂತ ಬಸವರಾಜ ಯೋಚನೆಯಲ್ಲಿ ಮುಳುಗಿದ. ಏನಪ್ಪಾ ನೋಡಲು ಒಳ್ಳೆಯ ಮನುಷ್ಯನ ತರಹ ಕಾಣಸ್ತಿ ಮೊಬೈಲ್ ಕದಿಯುವ ಕೆಲಸಾ ಬೇರೆ ಮಾಡ್ತಿಯೇನು? ಅಂತ ಒಬ್ಬಾತ ನೇರವಾಗಿ ಪ್ರಶ್ನಿಸಿದ. ಬಸವರಾಜ ತನ್ನನ್ನು ತಾನು ಸಮರ್ಥಿಸಿಕೊಳ್ಳಲಾಗದೇ ಮೌನವಾಗಿ ನಿಂತುಕೊಂಡ. ಇವನು ಯಾರೇ ಇರಲಿ ಮೊದಲು ಪೋಲೀಸರಿಗಿ ಕಂಪ್ಲೇಂಟ್ ಕೊಡಬೇಕು ಆಗಲೇ ಬುದ್ಧಿ ಬರೋದು ಇನ್ನೊಮ್ಮೆ ಕಳ್ಳತನ ಮಾಡುವ ಕೆಲಸಕ್ಕೆ ಕೈ ಹಾಕೊದಿಲ್ಲ ಅಂತ ಮತ್ತೊಬ್ಬ ಗಡಸು ಧ್ವನಿಯಲ್ಲಿ ಹೇಳಿದ. ಬಸವರಾಜನ ಬ್ಯಾಗಿನಲ್ಲಿ ನನ್ನ ಮೊಬೈಲ್? ಏನಿದು ವಿಚಿತ್ರ? ನನ್ನ ಗೆಳೆಯನ ಮೇಲೆ ಅನುಮಾನ ಪಡುವಂತಾಯಿತಲ್ಲ ಅಂತ ಶಾಂತಕುಮಾರ ಯೋಚಿಸಿದ. ಯಾವುದು ಸತ್ಯ ಯಾವುದು ಸುಳ್ಳು ಅಂತ ಗೊತ್ತಾಗದೆ ಗೊಂದಲದಲ್ಲಿ ಮುಳುಗಿದ. ಸಧ್ಯ ತನ್ನ ಮಾನ ಹರಾಜ ಆಗುತ್ತಿರುವದು ಬಸವರಾಜನಿಗೆ ನೋವು ತರಿಸಿತು ಪಿಳಿ ಪಿಳಿ ಕಣ್ಣು ಬಿಡುತೊಡಗಿದ. ಸೂಕ್ಷ್ಮವಾಗಿ ಗಮನಿಸುತ್ತಾ ಕುಳಿತ ಹಿಂದಿನ ಸೀಟಿನ ಪ್ರಯಾಣಿಕನೊಬ್ಬ ತನ್ನ ಸೀಟಿನಿಂದ ಎದ್ದು ಬಂದು ಪಾಪ ಇವನ ಮ್ಯಾಲ ಯಾಕೆ ಕಳ್ಳತನ ಹೊರಸ್ತೀರಿ ಮೊಬೈಲ್ ಕಳ್ಳತನ ಮಾಡಿದವನೇ ಬೇರೆ ! ಆತ ಇಷ್ಟು ಹೊತ್ತು ನನ್ನ ಪಕ್ಕದ ಸೀಟಿನಲ್ಲೇ ಕೂತಿದ್ದ ಈ ಮೊಬೈಲ್ ಅವನ ಹತ್ರಾನೇ ಇತ್ತು ಮೊದಲನೇ ಸಲ ರಿಂಗ ಆದಾಗ ಸ್ವಿಚ್ ಆಫ್ ಮಾಡಲು ಯತ್ನಿಸಿದ ಆದರೆ ಅದು ಬಂದ್ ಆಗಲಿಲ್ಲ ಎಲ್ಲಿ ತಾನು ಸಿಕ್ಕಿ ಬೀಳ್ತೀನಿ ಅಂತ ಭಯ ಶುರುವಾಗಿ ಕಣ್ಣಿಗೆ ಕಂಡ ಆ ಬ್ಯಾಗಿಗೆ ಹಾಕಿ ಇಳಿದು ಹೋದ. ದುರದೃಷ್ಟಕ್ಕೆ ಆ ಬ್ಯಾಗ ಇವನದೇ ಆಗಿದೆ. ತಪ್ಪು ಮಾಡದಿದ್ದರೂ ಸಧ್ಯ ಇವನೇ ಅಪರಾಧಿಯಾಗಿದ್ದಾನೆ ಅಂತ ಹೇಳಿದ . ಆಗ ಬಸವರಾಜನಿಗೆ ಸ್ವಲ್ಪ ಧೈರ್ಯ ಬಂದಂತಾಯಿತು . ಏನೇ ಆಗಲಿ ಸಧ್ಯ ನನ್ನ ಮಾನ ಉಳಿಯಿತು . ನಾನು ದೇವರು ದಿಂಡಿರು ಪೂಜೆ ಪುನಸ್ಕಾರ ಅಂತ ಪಾಲಿಸಿಕೊಂಡು ಬಂದಿದ್ದಕ್ಕೂ ಸಾರ್ಥಕವಾಯಿತು ಅಂತ ಅನಿಸಿತು. ಸಮಯಕ್ಕೆ ಸರಿಯಾಗಿ ಬಂದು ಸಾಕ್ಷಿ ನುಡಿದ ಆ ವ್ಯಕ್ತಿಗೆ ಮನಪೂರ್ವಕ ಕೃತಜ್ಞತೆ ಸಲ್ಲಿಸಲು ಮರೆಯಲಿಲ್ಲ. !!!

ಶರಣಗೌಡ ಬಿ ಪಾಟೀಲ ತಿಳಗೂಳ
ತಾ ಜಿ ಕಲಬುರಗಿ
ಮೋ: 9945459175

Don`t copy text!