ಸಂಗನಬಸವಣ್ಣನ ಮೊರೆಹೊಕ್ಕು ಬದುಕಿದೆನು.

*ಸಂಗನಬಸವಣ್ಣನ ಮೊರೆಹೊಕ್ಕು ಬದುಕಿದೆನು.*

ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಥಲ
ಬಸವಣ್ಣನ ಕರಸ್ಥಲದೊಳಗೆ ಅಡಗಿತ್ತಲ್ಲ !
ಇನ್ನಾರಿಗೆ ಭಕ್ತಿಸ್ಥಲ, ಇನ್ನಾರಿಗೆ ಸಾರುವುದೀ ಲಿಂಗಸ್ಥಲ ?
ಗುಹೇಶ್ವರಾ ಸಂಗನಬಸವಣ್ಣನ ಮೊರೆಹೊಕ್ಕು ಬದುಕಿದೆನು.

                                               -ಅಲ್ಲಮಪ್ರಭುದೇವರು.

ಹನ್ನೆರಡನೆಯ ಶತಮಾನದಲ್ಲಿ ವರ್ಗ ಮತ್ತು ವರ್ಣ ಅಸಮಾನತೆ ತೊರೆದು ಮುಕ್ತ ಸಮಾಜ ಕಟ್ಟಿದ ಶರಣರು ಜಗತ್ತಿಗೆ ಆದರ್ಶ ಪ್ರಾಯವಾದರು.
ಷಟಸ್ಥಲ ಶರಣರ ಅಧ್ಯಾತ್ಮಿಕ ವೈಚಾರಿಕ ಧಾರ್ಮಿಕ ಸಾಮಾಜಿಕ ಬದುಕಿಗೆ ಕೊಟ್ಟ ಶ್ರೇಷ್ಟ ಕೊಡುಗೆ. ಮನುಷ್ಯನ ಅಧ್ಯಾತ್ಮಿಕ ತಾತ್ವಿಕ ಗಟ್ಟಿತನ ಅವನು ಅನುಸರಿಸುವ ಸೈದ್ಧಾಂತಿಕ ನಿಲುವುಗಳ ಮೇಲೆ ಅವಲಂಬಿತ. ಬಸವಣ್ಣ ಷಟಸ್ಥಲ ಎಂಬ ಅತ್ಯಂತ ವಿನೂತನ ಪ್ರಯೋಗ ಮಾಡಿ ವ್ಯಕ್ತಿ ತನ್ನೊಳಗೆ ಸರಳ ನೈಜ ದೈವತ್ವವನ್ನು ಕಂಡರು.
ತನ್ನ ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ.
ಎಲ್ಲಾ ಸ್ಥಾಪಿತ ಸಿದ್ದಾಂತಗಳನ್ನು ಅಲ್ಲಗಳೆದು ತನ್ನೊಳಗಿನ ಅಗಾಧ ಜ್ಞಾನ ಮತ್ತು ಚಲನಶೀಲತೆ ಪ್ರಚುರಪಡಿಸಿ ಅಂತಹ ದಿವ್ಯ ಜಂಗಮ ಶಕ್ತಿಯನ್ನು ಸಂಚಯಿಸುವ ವಿಶಿಷ್ಟ ವಿಧಾನಗಳ ಕ್ರಮ ಷಟಸ್ಥಲ.

ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಥಲ
ಬಸವಣ್ಣನ ಕರಸ್ಥಲದೊಳಗೆ ಅಡಗಿತ್ತಲ್ಲ

ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಥಲ ಮುಂತಾದ ಬೇರೆ ಕಸರತ್ತುಗಳು ಬಸವ ಪೂರ್ವಯುಗದಲ್ಲಿ ಕಾಣುವ ನಾವು ಗುರು ಸ್ಥಲ ಲಿಂಗ ಸ್ಥಲ ಮತ್ತು ಜಂಗಮ ಸ್ಥಲ ಎಂಬ ಸ್ಥಳಗಳಿಗೆ ಅತ್ಯಂತ ವಿಭಿನ್ನ ಮತ್ತು ವೈಚಾರಿಕ ವ್ಯಾಖ್ಯಾನ ಬರೆದನು. ವ್ಯಕ್ತಿ ಪೂಜೆಗೆ ಗುಲಾಮಗಿರಿಗೆ ಒಳಪಟ್ಟ ಗುರು ಶಿಷ್ಯರೊಳಗೆ ಅಸಮಾನತೆ ನಿರ್ಮಾಣ ಮಾಡುವ ಸಂಪ್ರದಾಯ ತೆಗೆದು ಹಾಕುವ ಮೂಲಕ ಭಕ್ತನ ತನ್ನ ಅರಿವೇ ತನಗೆ ಗುರು ಅವುಗಳನ್ನು ಪಾಲಿಸುವ ಅಂತರಂಗದ ಮನಸ್ಸು ಶಿಷ್ಯ ಅದನ್ನು ಅನುಭವಿಸಿ ಆನಂದಿಸಿ ಇತರರಿಗೂ ಹಂಚಿಕೊಳ್ಳುವುದು
ಜಂಗಮ ಸ್ಥಿತಿ. ಇನ್ನು ಲಿಂಗ ಸ್ಥಲ ಸ್ಥಾವರಕ್ಕೂಳಪಟ್ಟ ಜಡತ್ವ.ಅದನ್ನು ಸಮಷ್ಟಿಯ ಸಮಗ್ರ ಅಭಿವೃದ್ಧಿಗೆ ಒಳಪಡಿಸಿ ಜ್ಞಾನ ಮತ್ತು ಕ್ರಿಯೆ ಸಮನ್ವಯಿಸುವ ಶ್ರೇಷ್ಟ ಸಾಧನ ಲಿಂಗ ಸ್ಥಲ. ಇದು ಸ್ಥಾವರವಲ್ಲ.
ಜಂಗಮ ಸ್ಥಲ ಎನ್ನುವುದು ಜಗತ್ತಿನ ಚರ ಜೀವಿಗಳ ವಿಕಾಸದ ಬಯಕೆ. ಸಮ ರತಿ ಸಮಕಳೆ ಸಮ ಸುಖದ ಭಾವಕ್ಕೆ ತುಡಿತ ಹೊಂದಿದ ಪ್ರಜ್ಞೆಯನ್ನು ಶರಣರು ಜಂಗಮವೆಂದರು. ಅರಿವು ಆಚಾರ ಮತ್ತು ಅನುಭಾವ ಇವುಗಳಿಂದ ಉಂಟಾಗುವ ಪ್ರಸನ್ನತೆ ಪ್ರಸಾದ ಸ್ಥಲ. ಇಂತಹ ಗುರು ಲಿಂಗ ಜಂಗಮ ಮತ್ತು ಪ್ರಸಾದ ಸ್ಥಲ ಎಂಬ ಸ್ಥಲಗಳು
ಬಸವಣ್ಣನ ಕರಸ್ಥಲದೊಳಗೆ ಅಡಗಿತ್ತಲ್ಲ ಅಂದರೆ ಅರಿವಿನ ಅನು ಸಂಧಾನಕ್ಕೆ ಬೇಕಾದ ಕುರುಹು ಇಷ್ಟಲಿಂಗ ಇದರ ಸ್ಥಾಪಕ ಬಸವಣ್ಣ ಇವನ ಕೈಯೊಳಗೆ ಇರುವ ಕರಸ್ಥಳದಲ್ಲಿ
ವಿರಾಜ ಮಾನವಾಗಿ ಮೌಲಿಕ ಚಿಂತನೆಯ ಪ್ರತೀಕವಾಗಿದೆ ಇಷ್ಟ ಲಿಂಗ. ಇಂತಹ ಇಷ್ಟ ಲಿಂಗದಲ್ಲಿ ಗುರು ಲಿಂಗ ಜಂಗಮ ಪ್ರಸಾದ ಸ್ಥಲ ಅಡಕವಾಗಿವೆ ಎಂದು ಅಲ್ಲಮರು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನಾರಿಗೆ ಭಕ್ತಿಸ್ಥಲ, ಇನ್ನಾರಿಗೆ ಸಾರುವುದೀ ಲಿಂಗಸ್ಥಲ ?
ಗುಹೇಶ್ವರಾ ಸಂಗನಬಸವಣ್ಣನ ಮೊರೆಹೊಕ್ಕು ಬದುಕಿದೆನು.
ಗುರು ಲಿಂಗ ಜಂಗಮ ಪ್ರಸಾದ ಸ್ಥಲಗಳ ಅರ್ಥವನ್ನು ವ್ಯಕ್ತಿ ಕೇಂದ್ರಿತ ಅರಿವು ಆಚಾರ ಅನುಭಾವ ಮತ್ತು ಇವುಗಳ ಪ್ರಸನ್ನತೆಯ ಭಾವ ತಾತ್ವಿಕ ಗಟ್ಟಿತನದಿಂದ ಕೂಡಿದಾಗ
ಇನ್ನಾರಿಗೆ ಭಕ್ತಿಸ್ಥಲ, ಇನ್ನಾರಿಗೆ ಸಾರುವುದೀ ಲಿಂಗಸ್ಥಲ ? ಎಂದು ಪ್ರಶ್ನಿಸುವ ಮೂಲಕ
ಅಲ್ಲಮರು ಪರಿಪೂರ್ಣ ಸಾಧಕ ಭಕ್ತ ಜಂಗಮ ಪ್ರೇಮಿ ಅರಿವಿನ ಶ್ರೇಷ್ಟ ಚಿಂತಕ ಸಂಗನ ಬಸವಣ್ಣನ ಮೊರೆ ಹೊಕ್ಕು ಬದುಕುವೆನು ಗುಹೇಶ್ವರ ಎಂದು ತಮ್ಮ ಲಿಂಗ ತತ್ವ ನಿಷ್ಟೆ ಮತ್ತು ಬಸವಣ್ಣವರ ನಾಯಕತ್ವದಿ ನಡೆವ ಅಭೂತಪೂರ್ವ ಚಳುವಳಿಯಲ್ಲಿ ಪಾಲ್ಗೊಂಡು ಬದುಕಿದೆ ಎಂದು ಅಭಿಮಾನವನ್ನು ವ್ಯಕ್ತ ಪಡಿಸುವ ನಿಟ್ಟಿನಲ್ಲಿ ಅಲ್ಲಮರು ಮೇಲಿನ ವಚನದಲ್ಲಿ ತಮ್ಮ ಭಕ್ತಿ
ನಂಬಿಕೆ ಬಸವಣ್ಣನ ಕೈಯೊಳಗಿರುವ ಲಿಂಗವೆಂದು ಪ್ರತಿಪಾದಿಸಿದ್ದಾರೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!