ನಮ್ಮ ಕನಸು

ನಮ್ಮ ಕನಸು

ನಾವು ಎಳೆಯರು ನಾವು ಗೆಳೆಯರು
ಹೃದಯ ಹೂವಿನ ಹಂದರ
ನಾಳೆ ನಾವೇ ನಾಡ ಹಿರಿಯರು
ನಮ್ಮ ಕನಸದು ಸುಂದರ ||

ಹಿಂದೂ ಮುಸ್ಲಿಂ ಕ್ರೈಸ್ತರೆಲ್ಲರಿ
ಗೊಂದೆ ಭಾರತ ಮಂದಿರ
ಶಾಂತಿದಾತನು ಗಾಂಧಿತಾತನು
ಎದೆಯ ಬಾನಿನ ಚಂದಿರ ||

ಜಾತಿರೋಗದ ಭೀತಿ ಕಳೆಯುವ
ನೀತಿ ಮಾರ್ಗದಿ ನಡೆವೆವು
ಒಂದೇ ಮಾನವ ಕುಲವು ಎನ್ನುತ
ವಿಶ್ವಧರ್ಮವ ಪಡೆವೆವು ||

ವೈರ ಮತ್ಸರ ಸ್ವಾರ್ಥ ವಂಚನೆ
ಕ್ರಿಮಿಗಳೆಲ್ಲವ ತೊಡೆವೆವು
ದೇಶಸೇವೆಗೆ ದೇಹ ಸವೆಸುವ
ದೀಕ್ಷೆ ಇಂದೇ ತೊಡುವೆವು ||

ನಮ್ಮ ಸುತ್ತಲು ಹೆಣೆದುಕೊಳ್ಳಲು
ಸ್ನೇಹಪಾಶದ ಬಂಧನ
ಬೆಳಕು ಬೀರಲಿ, ಗಂಧ ಹರಡಲಿ
ಉರಿದು ಪ್ರೇಮ ಚಂದನ ||

ನಮ್ಮ ಶಕ್ತಿಗೆ ದಿವ್ಯ ಭಕ್ತಿಗೆ
ದೇಶವಾಗಲಿ ನಂದನ
ಅಂದು ಪ್ರೇಮದಿ ಎತ್ತಿ ಕೊಳ್ಳಲು
ಭೂಮಿ ತನ್ನ ಕಂದನ ||

ನಾವೆಲ್ಲರೂ ಆ ದಿನ ಶಾಲೆಯಲ್ಲಿ ಗುಂಪಾಗಿ ಕೂಡಿ ಲಯಬದ್ಧವಾಗಿ ಪದ್ಯಗಳು ಹಾಡುತ್ತಿದ್ದೇವು. ಅದರಲ್ಲಿ ಆರನೇ ತರಗತಿಗತಿಗೆ ‘ನಮ್ಮ ಕನಸು’ ಎಂಬ ಕವಿತೆ ಒಂದಿತ್ತು. ನಾಡಿನ ಖ್ಯಾತ ಮಕ್ಕಳ ಸಾಹಿತಿಗಳು, ವಿದ್ವಾಂಸರಾಗಿದ್ದ ಶಂ. ಗು. ಬಿರಾದಾರ ಅವರು ರಚಿಸಿದ “ನಾವು ಎಳೆಯರು ನಾವು ಗೆಳೆಯರು” ಗೀತೆ ಹಾಡುವಾಗ ಅದೆಷ್ಟು ಖುಷಿ, ಹುಮ್ಮಸ್ಸು, ಉಲ್ಲಾಸ ಉಕ್ಕಿಬರುತ್ತಿತ್ತು.

ಅಂದು ನಮಗೆಲ್ಲ ಈ ಹಿಜಾಬ್, ಶಾಲು, ಟೋಪಿ, ಬುರ್ಖಾ, ಪಗಡಿ ಸೇರಿದಂತೆ ವಸ್ತ್ರ, ಬಣ್ಣ, ಆಹಾರದ ಬಗ್ಗೆ ಯಾವ ಮಾಹಿತಿಯೂ ಗೊತ್ತೆ ಇರಲಿಲ್ಲ. ಅದನ್ನು ತಿಳಿದುಕೊಳ್ಳುವ ಅಗತ್ಯವೂ ನಮಗಿರಲಿಲ್ಲ. ಯಾಕೆಂದ್ರೆ “ನಾವೆಲ್ಲರೂ ಗೆಳೆಯರು” ಮಾತ್ರ ಅಷ್ಟೇ ಆಗಿರಲಿಲ್ಲ, ನಮಗೆ ರಕ್ತ ಸಂಬಂಧವೂ ಮೀರಿದ ಗಾಢವಾದ ಅನುಬಂಧ ಒಂದು ನಮ್ಮನು ಗಟ್ಟಿಯಾಗಿ ಹೊಸೆದಿತ್ತು.

ನಮಗೆ ಕನ್ನಡ, ಹಿಂದಿ, ತೆಲುಗು ಭಾಷೆಗಳು ಅರಿವಿನ ಭಾಷೆಗಳಾಗಿ ಮಾರ್ಪಟ್ಟು, ವಿವಿಧ ಭಾಷೆಯ ಸ್ನೇಹಿತರ ಸಂಸ್ಕೃತಿಯು ನಮ್ಮನ್ನು ಅಪಾರವಾದ ಪ್ರಜ್ಞೆ, ಅರಿವು ಕಲಿಸಿಕೊಟ್ಪಿತು. ಈ ಕಾರಣದಿಂದಲೇ ಸುರುಕುಂಬಾ, ಚೊಂಗಿ ಜೊತೆಗೆ ಹೋಳಿಗೆ ತುಪ್ಪ ಒಬ್ಬರೊಬ್ಬರು ಹಂಚಿಕೊಂಡು ತಿಂದು ಹೆಗಲಮೇಲೆ ಕೈಹಾಕಿ ಭಾಯಿಗಳಾಗಿ ಓಡಾಡಿದ್ದೇವೆ.

ಇಂದಿನ ಈ ಒಂದು ಸುಂದರ ಪಟವೇ ಇಷ್ಟೆಲ್ಲ ನೆನಪಿಸಿತು. ಮತ್ತೆ “ನಮ್ಮೂರ ಸರ್ಕಾರಿ ಶಾಲೆಯ” ಅಂಗಳಕ್ಕೆ ಕರೆದುಕೊಂಡೊಯ್ತು. ನಾವು ಮುಸ್ಲಿಂರ ಮನೆಯಲ್ಲಿ ಹೋಗಿ ಕನ್ನಡ ಮಾತಾಡಿ, ಅವರು ನಮ್ಮನೆಗೆ ಬಂದಾಗ ಹಿಂದಿ ಮಾತಾಡುವುದು ಎಂದರೆ ಅದೆಷ್ಟು ಖುಷಿ, ಅಷ್ಟೇ ಭಾವೈಕ್ಯತೆ, ಪ್ರೀತಿ ಬೆಸೆಯುತ್ತಿತ್ತು, ಎರಡು ಧರ್ಮಗಳ ಸಂಸ್ಕೃತಿ ಒಟ್ಟೊಟ್ಟಾಗಿ ಆಚರಿಸುವಂತೆ ಮಾಡಿತ್ತು.

ಇಂಥ ಕಾರಣದಿಂದಲೇ ಏನೋ ಇಂದಿಗೂ ಹಿಂದೂ-ಮುಸ್ಲಿಂ ಎಂಬ ಭೇದ-ಭಾವ ಇಲ್ಲ, ಧರ್ಮದ ಕಟ್ಪಪಾಡು ಅಡ್ಡಬರಲಿಲ್ಲ. ಒಬ್ಬರಿಗೊಬ್ಬರು ಅವ್ವ, ಆಯಿ, ಕಾಕಾ, ಮುತ್ಯಾ ಅಂತ ಕರೆದುಕೊಳ್ಳುತ್ತಾರೆ. ಹೀಗೆಲ್ಲ ಕರೆದುಕೊಳ್ಳಲು ರಕ್ತ ಸಂಬಂಧವೇ ಬೇಕಾಗಿಲ್ಲ. ಭಕ್ತಿ ಸಂಬಂಧ ಒಂದಿದ್ದರೆ ಸಾಕು, ಎಲ್ಲಕಿಂತ ಮುಖ್ಯವಾಗಿ ಮನುಷ್ಯತ್ವ ಒಂದಿದ್ದರೆ ಸಾಕಲ್ಲವೇ? ಎಂದು ಆಗಾಗ್ಗೆ ಅನ್ಸುತ್ತೆ. ಇದುವೇ ನನ್ನ ಬಹುತ್ವದ ಭಾರತದ ಸೌಂದರ್ಯ ಎಂದೆನಿಸುತ್ತದೆ.

ನೆಚ್ಚಿನ ಮಕ್ಕಳ‌ ಕವಿ – ಶಂ.ಗು.ಬಿರಾದರ ಅವರ “ನಮ್ಮ‌ ಕನಸು” ಪದ್ಯವೊಂದು ಮತ್ತೊಮ್ಮೆ ತರಗತಿ ಕೋಣೆಯ ಕಪ್ಪು ಬೋರ್ಡ್ ಮುಂದೆ ಗುಂಪಾಗಿ ನಿಂತ್ಕೊಂಡು ಜೋರಾಗಿ ಹಾಡಬೇಕೆನಿಸುತ್ತಿದೆ..!
ಎಲ್ಲರೂ ಒಗ್ಗೂಡಿ ನಲಿಯಬೇಕೆನಿಸುತ್ತಿದೆ.

ಬಾಲಾಜಿ ಕುಂಬಾರ

Don`t copy text!